ಪಯಣ : ಸಂಚಿಕೆ - 78 (ಬನ್ನಿ ಪ್ರವಾಸ ಹೋಗೋಣ)
Friday, January 23, 2026
Edit
ಪಯಣ : ಸಂಚಿಕೆ - 78 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ''ಬೈಲಕುಪ್ಪೆ 'ಗೆ (ಭಾಗ : 1) ಪಯಣ ಮಾಡೋಣ ಬನ್ನಿ....
ನಿರಾಶ್ರಿತ ಟಿಬೆಟ್ಟಿಯನ್ನರ ಆಶ್ರಯ ತಾಣವಾಗಿರುವ ಬೈಲಕುಪ್ಪೆ ಇಲ್ಲಿರುವ ಸ್ವರ್ಣಮಂದಿರದಿಂದ ಪ್ರಖ್ಯಾತಿ ಪಡೆದಿದೆ. ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಟಿಬೆಟಿಯನ್ನರ ಪುನರ್ವಸತಿ ಕೇಂದ್ರವಾಗಿ ನಿರ್ಮಿತವಾಗಿರುವ ಬೈಲಕುಪ್ಪೆಯಲ್ಲಿ 'ಲುಗ್ಗಮ್ ಸ್ಯಾಮ್‌ಡಪ್ಲಿಂಗ್' 1961ರಲ್ಲೂ ಸ್ಥಾಪಿಸಲಾಗಿದೆ. ಇಲ್ಲಿಗೆ ಅತೀ ಹತ್ತಿರವಿರುವ ಸ್ಥಳವೆಂದರೆ ಕೊಡಗಿನ ಕುಶಾಲನಗರ.
ಇಲ್ಲಿರುವ ಸ್ವರ್ಣಮಂದಿರ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದ್ದು, ದೇಶಭ್ರಷ್ಟರಾದ ಸಾವಿರಾರು ಟಿಬೆಟಿಯನ್ನರಿಗೆ ಪ್ರಮುಖ ಕೇಂದ್ರಸ್ಥಳವಾಗಿದೆ. ಈಗ ಇವರ ಸಂಖ್ಯೆ ಹತ್ತು ಸಾವಿರ ಗಡಿ ದಾಟಿದೆ. ಬೈಲಕುಪ್ಪೆಯಲ್ಲಿ ಟಿಬೆಟಿಯನ್ನರ ಸಣ್ಣ ಸಣ್ಣ ಶಿಬಿರಗಳೂ, ಕೃಷಿ ಪ್ರದೇಶಗಳೂ ಸೇರಿದಂತೆ ಕ್ರೈಸ್ತ ಪ್ರದೇಶಗಳೂ ಸೇರಿದಂತೆ ಕ್ರೈಸ್ತ ಸನ್ಯಾಸಿ, ಸನ್ಯಾಸಿನಿಯರ ಮತ್ತು ಬೌದ್ಧ ಭಿಕ್ಷುಗಳ ವಿರಕ್ತ ಗೃಹಗಳು (ಧಾರ್ಮಿಕವಿಧಿ ಕೈಗೊಂಡ ಸನ್ಯಾಸಿಗಳು ಏಕಾಂತವಾಗಿ ವಾಸಿಸುವ ಒಂದು ಸಮುದಾಯ ಗೃಹ) ಮತ್ತು ಬೌದ್ಧ ಸಂಪ್ರದಾಯ ಪ್ರತಿಬಿಂಬಿಸುವ ಮಂದಿರಗಳೂ ಇವೆ. ಈ ಪೈಕಿ ಸೆರಾ ಶೈಕ್ಷಣಿಕ ಸಂಸ್ಥೆ, ತಾಷಿಲುನ್ನೋ ಮತ್ತು ನಾಮಡೋಲಿಂಗ್ ವಿರಕ್ತಗೃಹಗಳು ಹೆಚ್ಚು ಪ್ರಾಮುಖ್ಯತೆ ಪಡೆದಿದ್ದರೆ, ಇಲ್ಲಿರುವ ನಯನಮನೋಹರ ಸ್ವರ್ಣಮಂದಿರ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಿದೆ.
ಈ ಸ್ವರ್ಣಮಂದಿರದೊಳಗೆ ಪ್ರವೇಶಿಸಿದೊಡನೆ ಬೇರೊಂದು ಲೋಕ ಪ್ರವೇಶಿಸಿದಂತೆ ಭಾಸವಾಗುತ್ತದೆ. ಪೂಜಾ ವೇದಿಕೆ ಮೇಲೆ ಪ್ರತಿಷ್ಠಾಪಿಸಲಾದ 40 ಅಡಿ ಉದ್ದದ ಪದ್ಮಸಂಬವ, ಬುದ್ದ ಮತ್ತು ಅಮಿತಾಯಸ್ ಹೆಸರಿನ ಮೂರು ಬುದ್ಧನ ಪ್ರತಿಮೆಗಳು ವೀಕ್ಷಕರನ್ನು ಸೆರೆ ಹಿಡಿದುಬಿಡುತ್ತವೆ. ಟಿಬೆಟಿಯನ್ ಬೌದ್ಧಮತೀಯ ಪುರಾಣವನ್ನು ಪ್ರತಿಬಿಂಬಿಸುವ ವರ್ಣಮಯ ಚಿತ್ರರಚನೆಯಿಂದ ತುಂಬಿರುವ ಗೋಡೆಗಳು, ಹೂವು, ಗಂಧ, ಧೂಪ, ಮೇಣದಬತ್ತಿಯಿಂದ ಅಲಂಕರಿಸಲ್ಪಟ್ಟ ಪೂಜಾವೇದಿಕೆ ಮತ್ತು ಶಾಂತ ವಾತಾವರಣ ಮನಸ್ಸಿಗೆ ಮುದ ಮೂಡಿಸುತ್ತದೆ.
ಉತ್ಸವಗಳ ಸಂದರ್ಭದಲ್ಲಿ ಇಲ್ಲಿ ನರ್ತಕಿಯರು ಸುಂದರ ವೇಷ ಭೂಷಣಗಳೊಂದಿಗೆ ಗೆಜ್ಜೆ ನಾದಕ್ಕೆ ಹೆಜ್ಜೆ ಹಾಕುತ್ತಾರೆ. ಎಲ್ಲಕ್ಕಿಂತ ವಿಶೇಷವೆಂದರೆ ಇಲ್ಲಿನ ದೇವಾಲಯಗಳೊಳಗೂ ಪ್ರವಾಸಿಗರು ಭಾವಚಿತ್ರಗಳನ್ನು ಸೆರೆಹಿಡಿಯಲು ಅನುಮತಿ ನೀಡಲಾಗುತ್ತದೆ.
ಟಿಬೆಟ್‌ನಲ್ಲಿರುವ ಮೂಲ ಸೆರಾ ವಿಶ್ವವಿದ್ಯಾಲಯದ ಮಾದರಿಯಲ್ಲಿ ನಿರ್ಮಿಸಲಾಗಿರುವ ಸೆರಾ ಜೆ. ವಿರಕ್ತಗೃಹ ಟಿಬೆಟಿಯನ್ ಬೌದ್ಧಮತದ ಸಂಸ್ಕೃತಿಯನ್ನು ಬೈಲಕುಪ್ಪೆಯಲ್ಲಿ ಜೀವಂತವಾಗಿರಿಸಿದೆ. ಇಲ್ಲಿ ಐದು ಸಾವಿರ ಬೌದ್ಧ ಭಿಕ್ಷುಗಳು ವಿದ್ಯೆ ಕಲಿಯುತ್ತಿದ್ದಾರೆ. ಮಂದಿರದ ಸುತ್ತಮುತ್ತಲೂ ಹಲವಾರು ಮಳಿಗೆಗಳು. ಅಂಗಡಿಗಳು ಇದ್ದು, ಇಲ್ಲಿ ಟಿಬೆಟ್‌ನ ಆಭರಣಗಳು, ಕರಕುಶಲ ಸಾಮಗ್ರಿಗಳು, ಧೂಪಗಳು ಮತ್ತು ಸ್ಮರಣ ಸಂಚಿಕೆಗಳನ್ನು ಮಾರಾಟ ಮಾಡಲಾಗುತದೆ.
ಜೂನ್ ತಿಂಗಳಲ್ಲಿ ಇಲ್ಲಿ ಬುದ್ಧಜಯಂತಿಯನ್ನು ವೈಭವದಿಂದ ಆಚರಿಸಲಾಗುತ್ತದೆ. ಜುಲೈ 6ರಂದು ದಲಾಯಿಲಾಮಾ ಅವರ ಹುಟ್ಟುಹಬ್ಬವನ್ನೂ ಅಷ್ಟೇ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಟಿಬೆಟಿಯನ್ನರು ಇಲ್ಲಿ ಸಗಾದಾವಾ ಎಂಬ ಉತ್ಸವವನ್ನು ಆಚರಿಸುತ್ತಾರೆ. ಪ್ರವಾಸಿಗರು ಸೆಪ್ಟೆಂಬರ್‌ನಿಂದ ಮೇ ತಿಂಗಳಿನಲ್ಲಿ ಇಲ್ಲಿಗೆ ಭೇಟಿ ನೀಡಿ ಈ ಎಲ್ಲ ಉತ್ಸವಗಳ ಮನೋರಂಜನೆಯನ್ನೂ ಪಡೆಯಬಹುದಾಗಿದೆ.
ಬೈಲಕುಪ್ಪೆಯು ಮೈಸೂರಿನಿಂದ 95 ಕಿ.ಮೀ. ದೂರದಲ್ಲಿದೆ. ಅಲ್ಲಿರುವ ಟಿಬೆಟ್ ಜನಾಂಗ, ಅವರ ಸಂಸ್ಕೃತಿ, ವೇಷಭೂಷಣ, ಧರ್ಮಶಾಲೆ, ಶಿಸ್ತು ನೋಡಬಹುದು. ವಿದೇಶ ನೋಡಿದ ಅನುಭವ ನಿಮ್ಮದಾಗುತ್ತದೆ. ನೀವೇ ಕಣ್ಣಾರೆ ನೋಡಿ, ಅದು ಫಾರಿನ್ ಹೌದೋ ಅಲ್ಲವೋ ಎಂಬುದನ್ನು ತೀರ್ಮಾನಿಸಿ.
ಭಾರತದಲ್ಲೇ ಹುಟ್ಟಿ ವಿಶ್ವಾದ್ಯಂತ ಪಸರಿಸಿದ ಬೌದ್ಧಧರ್ಮವನ್ನು ಟಿಬೆಟ್ ಜನಾಂಗ ಅಪ್ಪಿಕೊಂಡಿದೆ. ಅಲ್ಲಿಗೆ ಬೌದ್ಧ ಧರ್ಮ ಕೊಂಡು ಹೋದವರು ಭಾರತೀಯರಾದ ಗುರು ಪದ್ಮಸಾಂಭವ.1949ರಲ್ಲಿ ಚೀನಾವು ಟಿಬೆಟನ್ನು ಆಕ್ರಮಿಸಿಕೊಂಡಾಗ ಪ್ರಪಂಚದಾದ್ಯಂತ ವಲಸೆ ಹೋದ ಟಿಬೆಟಿಯನ್ನರಲ್ಲಿ ಹೆಚ್ಚಿನವರು ಭಾರತಕ್ಕೆ ಬಂದರು. ಕೇಂದ್ರ ಸರ್ಕಾರ ಟಿಬೆಟಿಯನ್ನರಿಗೆ ಎಂದು ರಾಜ್ಯದ ಕೊಳ್ಳೇಗಾಲ ತಾಲೂಕಿನ ಒಡೆಯರ ಪಾಳ್ಯ. ಹುಣಸೂರು ತಾಲೂಕಿನ ಗುರುಪುರ, ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಮುಂತಾದ ಕಡೆ ಭೂಮಿ ನೀಡಿ ನೆಲೆ ಒದಗಿಸಿತು.
ಟಿಬೆಟಿಯನ್ನರಲ್ಲಿ ಬೌದ್ಧಧರ್ಮ, ಆರಾದಿಸುವ 4 ತರಹದ ವರ್ಗವಿದೆ. ಅವು ಗೆಲುಪಾ, ಸಕ್ಯಪಾ, ಕಜೋಪಾ ಮತ್ತು ನಿಂಗ್‌ಮಾಪ. ಟಿಬೆಟ್‌ನ ಆರಾಧನಾ ಗುರು ದಲೈಲಾಮಾ ಕೂಡ ಗೆಲುಪಾ ಪಂಕ್ತಿಯವರು.
ಸ್ವರ್ಣಮಂದಿರ : ಅದು ಪದ್ಮಸಾಂಭವ ವಿಹಾರ. ವಿಹಾರದ ಮಧ್ಯದಲ್ಲಿ ಬುದ್ಧನ ನಗು ಮುಖದ ಮೂರ್ತಿ ಇದೆ. ಎಡಕ್ಕೆ ಪದ್ಮಸಾಂಭವನ ಮೂರ್ತಿ. ಬಲಕ್ಕೆ ಅಕ್ಷಯರ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಬಂಗಾರದಲ್ಲೇ ಮಾಡಲಾದ ವಿಗ್ರಹಗಳಿರುವ ಈ ಧರ್ಮಶಾಲೆಗೆ ಸ್ವರ್ಣ ಮಂದಿರ (ಗೋಲ್ಡನ್ ಟೆಂಪಲ್) ಎಂಬ ಹೆಸರು.
ಬೈಲಕುಪ್ಪೆಯಲ್ಲಿ ಲುಗ್‌ಸಂಗ್ ಸಮ್‌ಡುಮ್‌ಸ್ಲಿಂಗ್ ಮತ್ತು ಡಿಕ್ಕಿ ಲಾರ್‌ಸೋ ಎಂಬ 2 ಕ್ಯಾಂಪ್‌ಗಳಿವೆ. ಲುಗ್ ಸಂಗ್ ಸಮ್‌ಡುಮ್‌ಪ್ಲಿಂಗ್ ಕ್ಯಾಂಪ್ ಭಾರತದಲ್ಲೇ ಅತ್ಯಂತ ಹಳೆಯ ಟಿಬೆಟ್ ಕ್ಯಾಂಪ್ ಆಗಿದೆ. ಈ ಕ್ಯಾಂಪಿನಲ್ಲೇ 1961- 63ರಲ್ಲಿ ಪದ್ಮಸಾಂಭವ ವಿಹಾರ ನಿರ್ಮಿಸಲಾಗಿದೆ. ಇಲ್ಲಿನ ಬುದ್ಧನ ವಿಗ್ರಹವು 60 ಅಡಿ ಎತ್ತರವಿದೆ. ವಿಗ್ರಹದೊಳಗೆ ನಿಗೂಢವಾದ ಪವಿತ್ರವಾದ ಐತಿಹಾಸಿಕ ವಸ್ತುಗಳನ್ನು, ಬೌದ್ಧನಿಗೆ ಸಂಬಂಧಿಸಿದ ತಾಳೆಗರಿಯಂತಹ ಪುಸ್ತಕ, ಧರ್ಮಗ್ರಂಥ ಮುಂತಾದವನ್ನು ತುಂಬಲಾಗಿದೆ ಎಂಬ ಪ್ರತೀತಿ ಇದೆ. ಬುದ್ಧನ ಅಕ್ಕಪಕ್ಕ ಇರುವ ಗುರು ಪದ್ಮಸಾಂಭ ಮತ್ತು ಗುರು ಅಕ್ಷಯ (ಇದು ಆರೋಗ್ಯ ರಕ್ಷಕ ಗುರು) ಎಂಬ ಬೌದ್ಧ ಧರ್ಮ ಗುರುಗಳದ್ದು.
ಟಿಬೆಟಿಯನ್ನರು ತಮ್ಮ ಜೀವನದಲ್ಲಿ ಧರ್ಮಕ್ಕೆ ಪ್ರಥಮ ಪ್ರಾಧಾನ್ಯತೆ ಕೊಟ್ಟಿದ್ದು ಪ್ರತಿಯೊಬ್ಬರ ಮನೆಯಿಂದ ಒಬ್ಬರನ್ನು ಲಾಮಾ (ಸನ್ಯಾಸಿ) ದೀಕ್ಷೆ ಕೊಟ್ಟು ಧರ್ಮಶಾಲೆಗೆ ಕಳುಹಿಸುತ್ತಾರೆ.
"ಟಿಬೆಟಿಯನ್ ಸಂಸ್ಕೃತಿ, ಬೌದ್ಧ ಧರ್ಮ, ಮಠಗಳು ಹಾಗೂ ಶಿಕ್ಷಣ ಕೇಂದ್ರಗಳಿಗೆ ಹೆಸರುವಾಸಿ, ನಿರಾಶ್ರಿತರ ಸಮೂಹ, ಭರತ ಭೂಮಿ ಮತ್ತು ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಬೆರೆತ ಭವ್ಯವಾದ ಪ್ರದೇಶ ಈ ಬೈಲಕುಪ್ಪೆ" ಬನ್ನಿ ಒಮ್ಮೆ, ಪ್ರವಾಸಕ್ಕೆ...
(ಮುಂದುವರಿಯುವುದು..)
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************