ನಿಷ್ಪಾಪಿ ಸಸ್ಯಗಳು : ಸಂಚಿಕೆ - 136
Wednesday, January 21, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 136
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ..? ಚೆನ್ನಾಗಿರುವಿರಿ ತಾನೇ..? ನಾನು ಇತ್ತೀಚೆಗೆ ಗಣತಿ ಕಾರ್ಯದ ನಿಮಿತ್ತ ಸುತ್ತಾಟದಲ್ಲಿದ್ದಾಗ ಹಲವಾರು ಕಡೆ ಅಲಂಕಾರಕ್ಕಾಗಿ ನೆಟ್ಟ ಗಿಡವೊಂದು ನನ್ನನ್ನು ಆಕರ್ಷಿಸಿತು. ಹೂಗಳ ಆಕರ್ಷಣೆಯ ಜೊತೆ ಈ ನಿಷ್ಪಾಪಿ ಸಸ್ಯದ ಎಲೆಗಳೂ ಅತ್ಯಾಕರ್ಷಕವಾಗಿದ್ದವು..!
ಅಂಡಾಕಾರದ ತಾಮ್ರ ವರ್ಣದ ಚರ್ಮದಂತಹ ಎಲೆಯು ಗರಗಸದ ಹಲ್ಲುಗಳಂತಹ ಅಂಚನ್ನು ಹೊಂದಿತ್ತು. ಎಲೆಗಳ ಅಡಿಭಾಗ ನೇರಳೆ ಬಣ್ಣದಲ್ಲಿ ಮಿಂಚುತ್ತಿತ್ತು. ಒಟ್ಟಿನಲ್ಲಿ ಇದೊಂದು ಕ್ರೋಟನ್ ಸಸ್ಯವೇನೋ ಎಂಬಂತಿದ್ದರೆ ಮೃದುವಾದ ಎಲೆಗಳು ನೇರವಾದ ಕಾಂಡಕ್ಕೆ ಅಂಟಿಕೊಂಡಿದ್ದು, ಈ ಕಾಂಡ ಸಂಧಿಸುವ ಎಲೆಗಳ ಬುಡಗಳಲ್ಲಿದ್ದ ತೊಟ್ಟಿನ ಶಿಖರದಲ್ಲಿ ಗುಂಪಾಗಿ ಹೊಳೆಯುವ ಹಳದಿ ವರ್ಣದ ಗಂಟೆಯಾಕಾರದ ಹೂವುಗಳು ಮೂಡಿದ್ದವು. ಈ ಹೂಗಳ ಒಳಭಾಗದಲ್ಲಿ ಗಾಢ ಕೆಂಪು ಬಣ್ಣದ ಪಟ್ಟೆ, ಚುಕ್ಕಿಗಳಿದ್ದವು. ಈ ಮನೋಹರವಾದ ಹೂಗಳಿಗೆ ಅದಕ್ಕಿಂತಲೂ ಸುಂದರವಾದ ಪುಷ್ಪ ಪಾತ್ರೆಗಳಿದ್ದುವು. ಅವುಗಳ ಬಣ್ಣವೋ ಗಾಢ ಕಿತ್ತಳೆ ಕೆಂಪು!. ಪುಷ್ಪಪಾತ್ರೆಯ ಎರಡು ಪಟ್ಟು ಉದ್ದನೆಯ ಹೂವಿದ್ದರೂ ಹೂವು ಎರಡೇ ದಿನದಲ್ಲಿ ಉದುರುತ್ತದೆ. ಆದರೆ ಈ ಆಕರ್ಷಕ ಪುಷ್ಪಪಾತ್ರೆ ಹಲವಾರು ದಿನಗಳವರೆಗಿದ್ದು ವಿಧಾನಕ್ಕೆ ಒಣಗಿ ಉದುರುತ್ತದೆ. ಆದ್ದರಿಂದ ಗಿಡವು ಹೂಗಳಿಲ್ಲವಾದರೂ ಪುಷ್ಪಪಾತ್ರೆಗಳಿಂದ ಹಾಗೂ ತಾಮ್ರ ವರ್ಣದ ಎಲೆಗಳಿಂದ ಕಣ್ಸೆಳೆಯುತ್ತದೆ.
ದಪ್ಪನೆಯ ರಸ ಭರಿತ ಕಾಂಡವು ಸಾಮಾನ್ಯ ಗಾತ್ರದ ಗಡ್ಡೆಗಳನ್ನು ಹೊಂದಿದ್ದು ಸದಾ ಅರೆ ನೆರಳನ್ನು, ನೀರು ಬಸಿದು ಹೋಗುವ ತೇವಾಂಶದ ಮಣ್ಣನ್ನು ಬಯಸುತ್ತದೆ. ತಾಮ್ರವರ್ಣದ ಎಲೆಗಳ ನಡುವೆ ಹಳದಿ, ಕಿತ್ತಳೆಯಂತಹ ಗಾಢ ಬಣ್ಣಗಳ ಪುಷ್ಪಪಾತ್ರೆ, ಹೂವುಗಳನ್ನು ಅರಳಿಸುತ್ತಾ ಭೂದೃಶ್ಯದ ಸೊಬಗಿಗೆ ರಂಗೇರಿಸುವುದನ್ನು ನೋಡಿಯೇ ಅರಿಯಬೇಕು..!
ಸಸ್ಯ ಶಾಸ್ತ್ರೀಯವಾಗಿ ಕ್ರೈಸೊಥೆಮಿಸ್ ಪುಲ್ಚೆಲ್ಲಾ (ಸChrysothemis pulchella) ಎಂಬ ಲ್ಯಾಟಿನ್ ಭಾಷೆಯ, ಗ್ರೀಕ್ ಪುರಾಣದ ಹೆಸರಿನ ಮೂಲಕ ಗುರುತಿಸಲ್ಪಡುವ ಈ ಸಸ್ಯವು ಗ್ರೆಸ್ನೇರಿಯಾಸಿ (Grsneriaceac) ಕುಟುಂಬಕ್ಕೆ ಸೇರಿದೆ. ಪುಲ್ಚೆಲ್ಲಾ ಅಂದರೆ ಲ್ಯಾಟಿನ್ ಭಾಷೆಯಲ್ಲಿ 'ಸುಂದರ' ವೆಂದರ್ಥವಂತೆ.
ತನ್ನ ಬದುಕಿಗೆ ಸೂಕ್ತವೆನಿಸದ ಬೇಸಿಗೆ ಅಥವಾ ಬರಗಾಲದಲ್ಲಿ, ಸಹಿಸಲಾಗದ ಛಳಿಗೆ ಎಲೆಗಳನ್ನುದುರಿಸಿ, ಕಾಂಡಗಳು ಅಳಿದು ಭೂಮಿಯೊಳಗೆ ಗುಪ್ತವಾಗಿ ಉಳಿಯುವ ಪುಟಾಣಿ ಗಡ್ಡೆಗಳು ಸೂಕ್ತ ವಾತಾವರಣ ಕಂಡಾಕ್ಷಣ ಚಿಗುರುತ್ತದೆ!. ವಿಸ್ತಾರವಾದ ಬೇರಿನ ವ್ಯವಸ್ಥೆ ಇಲ್ಲವಾದರೂ ಕಾಡಿನಲ್ಲಿ ಪಾಚಿಯಿಂದ ಆವೃತವಾದ ಬಂಡೆಯ ಮೇಲೆ ಬೆಳೆಯುತ್ತದೆ! ತಾಮ್ರಪತ್ರ, ಕಪ್ಪು ಫ್ಲೆಮಿಂಗೊ, ಸನ್ ಸೆಟ್ ಬೆಲ್ಸ್ , ಆಫ್ರಿಕನ್ ವೈಲೆಟ್ ಇವೇ ಮೊದಲಾದ ಹೆಸರುಗಳಿಂದ ಖ್ಯಾತಿವೆತ್ತ ಈ ಸಸ್ಯವು ನರ್ಸರಿಯಲ್ಲಿ ಜನಪ್ರಿಯವಾಗಿದೆ. ಮನೆಯೊಳಗೆ, ಹೊರಗೆ, ಅಂಗಳ, ಉದ್ಯಾನವನಗಳಲ್ಲಿ ಬಣ್ಣದ ಚಿತ್ತಾರ ಬರೆವ ತಾಮ್ರಪತ್ರೆ ಪುಟ್ಟ ಚಟ್ಟಿಯಲ್ಲೂ ಆರಾಮವಿರಬಲ್ಲದು.
ಬಹುಶ : ನೀವೂ ಈ ಗಿಡವನ್ನು ಕಂಡಿರಬಹುದು ಅಥವಾ ನಿಮ್ಮ ಮನೆಯಲ್ಲೇ ಇರಲೂಬಹುದಲ್ಲವೆ..? ಇಲ್ಲದೆ ಇದ್ದರೆ ಎಲ್ಲಾದರೂ ಸಿಕ್ಕಾಗ ಎಲೆಗಳ ಬುಡದಲ್ಲಿ ಬರುವ ಚಿಗುರುಗಳಿಂದ ಹೊಸ ಸಸ್ಯವನ್ನೂ ಪಡೆದು ಬೆಳೆಸಬಹುದು. ತಾಯಿ ಗಿಡದಲ್ಲೇ ಮರಿ ಗಿಡವು ಗಡ್ಡೆಗಳನ್ನು ಬೆಳೆಸಿ ಹರಡುವಿಕೆಗೆ ಕಾಯುತ್ತಿರುತ್ತದೆ..
ಈ ತಾಮ್ರಪತ್ರೆಯ ಬಗ್ಗೆ ದಾಖಲೆ, ಪುಸ್ತಕ, ಲೇಖನ, ಆನ್ಲೈನ್ ಮಾಹಿತಿಗಳೇನೂ ನಿರ್ದಿಷ್ಟವಾಗಿ ದೊರಕುವಷ್ಟು ಸಂಶೋಧನೆಗಳಾಗಿಲ್ಲ. ತಾಮ್ರದಂಶ ಇದ್ದದ್ದಕ್ಕೇ ಈ ಬಣ್ಣ ಈ ಹೆಸರು ಬಂದಿದೆ ಎನ್ನುವವರೂ ಇದ್ದಾರೆ. ಆದರೆ ಇದು ಒಪ್ಪತಕ್ಕದ್ದಲ್ಲವಲ್ಲ. ನೀವೂ ಈ ಬಗ್ಗೆ ಮಾಹಿತಿಗಾಗಿ ಪ್ರಯತ್ನಿಸಿ.
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************