-->
ಪಯಣ : ಸಂಚಿಕೆ - 76 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 76 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 76 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಮೈಸೂರಿನ ತಲಕಾಡಿ' ಗೆ (ಭಾಗ - 2) ಪಯಣ ಮಾಡೋಣ ಬನ್ನಿ....

                    
                 (ಮುಂದುವರಿದ ಭಾಗ-2)
     
ತಲಕಾಡಿನಲ್ಲಿ ಕೀರ್ತಿ ನಾರಾಯಣಸ್ವಾಮಿ ದೇವಾಲಯವಿದೆ. ಗೋಕರ್ಣೇಶ್ವರ, ವೀರಭದ್ರೇಶ್ವರ, ಚೌಡೇಶ್ವರಿ, ಬಂಡರಸಮ್ಮ, ವೈಕುಂಠ ನಾರಾಯಣ ದೇವಾಲಯಗಳಿವೆ. ಜತೆಗೆ ಜೈನ, ಬೌದ್ಧ ದೇವಾಲಯಗಳಿವೆ. ಹೀಗೆ ಈ ಕ್ಷೇತ್ರ ಹಲವು ಧರ್ಮೀಯರಿಗೆ ಪವಿತ್ರವಾಗಿದೆ.

ಪಂಚಲಿಂಗ ದರ್ಶನಕ್ಕೆ ಆಂಧ್ರ, ಕೇರಳ, ತಮಿಳುನಾಡುಗಳಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಸುಮಾರು ಮೂರು ಲಕ್ಷ ಜನರು ಪಂಚಲಿಂಗ ದರ್ಶನಕ್ಕೆ ಬರುವ ನಿರೀಕ್ಷೆ ಇದೆ. ಈ ವರ್ಷ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿನ ನೆರೆ ಬಂದ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳಷ್ಟೇ ನಡೆಯುತ್ತದೆ.

ಪ್ರಾತಃ ಕಾಲದಲ್ಲಿ ಸ್ನಾನ ಸಂಧ್ಯಾದಿ ನಿತ್ಯ ಕರ್ಮ ಮುಗಿಸಿ, ಗೋಕರ್ಣ ಕೊಳದಲ್ಲಿ ಸ್ನಾನ ಮಾಡಿ ಸಮೀಪದ ಚೌಡೇಶ್ವರಿಯನ್ನು ಪೂಜಿಸಿ, ನಂತರ ಕ್ಷೇತ್ರ ಮಧ್ಯದಲ್ಲಿರುವ ವೈದ್ಯನಾಥೇಶ್ವರನಿಗೆ ವಿಜ್ಞಾಪಿಸಿ 'ಪಂಚಲಿಂಗ ದರ್ಶನ' ಕ್ಕೆ ಅನುಮತಿ ಪಡೆಯಬೇಕು. ನಂತರ ವಿಜಯಪುರದಲ್ಲಿರುವ ಉತ್ತರವಾಹಿನಿಯಲ್ಲಿ ಸ್ನಾನ ಮಾಡಿ ಅಲ್ಲಿರುವ ವಿವಿಧ ಪತ್ರ, ಪುಷ್ಪ, ಫಲ ಸಮರ್ಪಣೆಯೊಂದಿಗೆ ಅರ್ಕೇಶ್ವರನ ದರ್ಶನ ಮಾಡಿ ಬಂದು ಪುನಃ ವೈದ್ಯನಾಥೇಶ್ವರನಿಗೆ ವರದಿ ಒಪ್ಪಿಸಬೇಕು. ನಂತರ ಪೂರ್ವವಾಹಿನಿಯಲ್ಲಿ ಸ್ನಾನ ಮಾಡಿ ಪಾತಾಳೇಶ್ವರ ದೇವಾಲಯದಲ್ಲಿರುವ ವಾಸುಕೀಶ್ವರನ ದರ್ಶನ ಮಾಡಬೇಕು. ಅನಂತರ ದಕ್ಷಿಣವಾಹಿನಿಯಲ್ಲಿ ಸ್ನಾನ ಮಾಡಿ ಮರಳೇಶ್ವರನನ್ನು ಪೂಜಿಸಬೇಕು.

ಪ್ರತಿಯೊಂದು ಬಾರಿಯೂ ವೈದ್ಯನಾಥೇಶ್ವರನಿಗೆ ವರದಿ ಒಪ್ಪಿಸಬೇಕು. ಕೊನೆಯಲ್ಲಿ ವೈದ್ಯೇಶ್ವರ ಸ್ವಾಮಿಯ ಸನ್ನಿಧಿಗೆ ಬಂದು ಪಂಚಲಿಂಗ ದರ್ಶನ ಯಾತ್ರಾ ಫಲವನ್ನು ಈಶ್ವರಾರ್ಪಣ ಮಾಡಬೇಕು ಇದು ಕ್ರಮ.

ಬೆಂಗಳೂರಿನಿಂದ ತಲಕಾಡಿಗೆ ಬರಲು ಎರಡು ಮಾರ್ಗಗಳಿವೆ. ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಹಲಗೂರು, ಮಳವಳ್ಳಿ ಕಡೆಯಿಂದ ಸರಗೂರು ಹ್ಯಾಂಡ್‌ಪೋಸ್ಟ್‌ನಿಂದ ತಲಕಾಡು ತಲುಪುವುದು ಒಂದು ಮಾರ್ಗ. ಇನ್ನೊಂದು ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಚನ್ನಪಟ್ಟಣ, ಮದ್ದೂರು ಹಾಗೂ ಮಳವಳ್ಳಿ ಕಡೆಯಿಂದ ಸರಗೂರು ಹ್ಯಾಂಡ್‌ಪೋಸ್ಟ್‌ಗೆ ಬಂದು ತಲಕಾಡಿಗೆ ಹೋಗಬಹುದು.

ತಲಕಾಡಿನಿಂದ ಬೆಂಗಳೂರಿಗೆ ವಾಪಸಾಗುವವರು ತಿ. ನರಸೀಪುರಕ್ಕೆ ಬಂದು ನಂತರ ಸೋಮನಾಥಪುರ, ಬನ್ನೂರು, ಶ್ರೀರಂಗಪಟ್ಟಣ, ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ತಲುಪಬಹುದು. ಮೈಸೂರಿನಿಂದ ಬರುವವರು ತಿ.ನರಸೀಪುರ, ತಲಕಾಡು ಮಾರ್ಗದಲ್ಲಿ ಬರಬೇಕು.

ಎಲ್ಲಿ ನೋಡಿದರೂ ಮರಳು ಗುಡ್ಡೆ ಹಾಕಿದಂತೆ ಕಾಣುತ್ತದೆ. ಹಾಗಂತ ಇದೇನು ಮರುಭೂಮಿಯಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿಯ ಹರಿವಿನೊಂದಿಗೆ ಮರಳು ಹರಿದು ಬರುತ್ತದೆ. ಇಲ್ಲೆಲ್ಲಾ ಮರಳು ತುಂಬಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಇಲ್ಲಿರುವ ಪಾತಾಳೇಶ್ವರ ದೇವಸ್ಥಾನ ಮಳೆಗಾಲದಲ್ಲಿ ಮರಳಿನಿಂದ ದೇವಸ್ಥಾನದ ಕುರುಹು ಇಲ್ಲದಂತೆ ಪೂರ್ತಿ ಮುಚ್ಚಿಹೋಗುತ್ತದೆ. ಮರಳನ್ನು ತೆಗೆದಾಗ ಮಾತ್ರವೇ ದೇವಸ್ಥಾನ ಗೋಚರಿಸುತ್ತದೆ. ಇಲ್ಲಿರುವ ಎಲ್ಲಾ ದೇವಸ್ಥಾನದ ಸುತ್ತಲೂ ಮರಳು. ತಲಕಾಡು ದೇವಸ್ಥಾನದಿಂದ ಕಾವೇರಿ ನದಿ ತೀರಕ್ಕೆ ಬರಬೇಕು. ಅಂದರೂ ಮರಳಿನ ಹಾದಿಯಲ್ಲಿಯೇ ನಡೆದು ಬರಬೇಕು.

ತಲಕಾಡು ಚಾಮರಾಜನಗರ ಜಿಲ್ಲೆಯಲ್ಲಿದೆ. ತಲಕಾಡಿನಲ್ಲಿ 16ನೇ ಶತಮಾನದಲ್ಲಿ ನಿರ್ಮಾಣವಾದ 30ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಗಂಗ ಮತ್ತು ಚೋಳರ ಕಾಲದಲ್ಲಿ ಈ ದೇವಸ್ಥಾನಗಳ ನಿರ್ಮಾಣವಾಯಿತು ಎಂಬುದಾಗಿ ಚರಿತ್ರೆಯಿಂದ ತಿಳಿದುಬರುತ್ತದೆ. ದೇವಸ್ಥಾನಗಳು ಮರಳಿನಿಂದ ಮುಚ್ಚಿಹೋಗಿವೆ. ಪಾತಾಳೇಶ್ವರ, ಮರಳೇಶ್ವರ, ಆರ್ಕೇಶ್ವರ, ಪ್ರನಾಥೇಶ್ವರ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಇದೆ. ಈ ಐದರ ನಡುವೆ ಕೀರ್ತಿನಾಥೇಶ್ವರ ದೇವಸ್ಥಾನ ಇದೆ. ಇದನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಈ ಐದು ಶಿವ ದೇವಾಲಯಗಳಲ್ಲಿ 12 ವರ್ಷಗಳಿಗೊಮ್ಮೆ 
ಪಂಚಲಿಂಗ ದರ್ಶನವನ್ನು ಹಮ್ಮಿಕೊಳ್ಳಲಾಗುತ್ತದೆ. 2009ರಲ್ಲಿ ಪಂಚಲಿಂಗ ದರ್ಶನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿತ್ತು. ದೇವಸ್ಥಾನದ ಹತ್ತಿರದಲ್ಲೇ ಜೀವನದಿ ಕಾವೇರಿ ಮೈ ತುಂಬಿ ಹರಿಯುತ್ತಿದೆ. ಇದು ಕೇವಲ ಧಾರ್ಮಿಕ ಕ್ಷೇತ್ರ ಆಗಿರದೆ ಇಲ್ಲಿನ ದೇವಸ್ಥಾನಗಳನ್ನು ಚಾರಿತ್ರಿಕ ದೃಷ್ಟಿಯಿಂದಲೂ ನೋಡಬಹುದು. ಬಂದ ಅಲಮೇಲಮ್ಮ ತನ್ನಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ಹಬ್ಬದ ಸಂದರ್ಭಗಳಲ್ಲಿ ದೇವರ ಅಲಂಕಾರಕ್ಕೆ ನೀಡಿ, ವಾಪಸ್ಸು ಪಡೆಯುತ್ತಿದ್ದಳು. ಒಂದು ದಿನ ವಿಜಯನಗರದ ಪ್ರತಿನಿಧಿ ಶ್ರೀರಂಗ ರಾಯ ಕಾಯಿಲೆ ವಾಸಿಯಾಗದೆ ಮರಣ ಹೊಂದುತ್ತಾನೆ. ಅವನ ಮರಣದ ನಂತರ ಅಲಮೇಲಮ್ಮನಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ತಮ್ಮದಾಗಿಸಿಕೊಳ್ಳಲು ಮೈಸೂರು ಒಡೆಯರ ಕುಟುಂಬ ಸಂಚು ಹೂಡುತ್ತದೆ. ಸೈನ್ಯ ಸಮೇತ ಬಂದು ಆಭರಣಗಳನ್ನು ಕೊಡುವಂತೆ ಆಜ್ಞೆ ಮಾಡುತ್ತಾರೆ. ಆಭರಣಗಳನ್ನು ಒಪ್ಪಿಸಲೊಪ್ಪದ ಅಲಮೇಲಮ್ಮ ಬೆಲೆಬಾಳುವ ಮೂಗುತಿಯನ್ನು ಎಸೆದು 'ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ. ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ' ಎಂದು ಶಪಿಸಿ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಶಾಪ ನೀಡಿದ ಪರಿಣಾಮ ತಲಕಾಡಿನ ಒಂದು ಭಾಗ ಮರಳಿನಿಂದ ಕೂಡಿದೆ. ಮೈಸೂರು ಒಡೆಯರಿಗೆ ಮಕ್ಕಳಾಗಿಲ್ಲ. ಇಲ್ಲಿನ ಜನರ ಬಲವಾದ ನಂಬಿಕೆ. ಇದೇ ಕಾರಣಕ್ಕೆ ಮೈಸೂರಿನ ಶ್ರೀಕಂಠದತ್ತ ಒಡೆಯರ್ ತಲಕಾಡಿನ ಸಮೀಪ ಆಲಮೇಲಮ್ಮಳಿಗಾಗಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ದಸರಾ ಸಂದರ್ಭದಲ್ಲಿ ನವಮಿಯಂದು ಅಲಮೇಲಮ್ಮನ ಮೂರ್ತಿಯನ್ನು ಆಭರಣದಿಂದ ಅಲಂಕರಿಸಿ ಪೂಜಿಸಲಾಗುತ್ತದೆ.

ತಲಕಾಡಿಗೆ ಹೋಗುವುದಾದರೆ ಅದರ ಸುತ್ತಮುತ್ತ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ನೋಡಬಹುದು. ತಲಕಾಡಿಗೆ ಬಂದು ಅಲ್ಲಿನ ಮರಳ ರಾಶಿ, ದೇವಸ್ಥಾನಗಳನ್ನು ವೀಕ್ಷಿಸುವುದರ ಜತೆಗೆ, ಅಲ್ಲಿಗೆ ಸಮೀಪವಿರುವ ಸೋಮನಾಥಪುರ, ಶಿವನಸಮುದ್ರ, ಮೈಸೂರು ಅರಮನೆ, ರಂಗನತಿಟ್ಟು, ಬಂಡೀಪುರಕ್ಕೆ ಭೇಟಿ ನೀಡಬಹುದು. ಶಿವನ ಸಮುದ್ರದಲ್ಲಿ ಕಾವೇರಿ ನದಿ ಎರಡು ಕವಲುಗಳಾಗಿ ಹರಿಯುತ್ತದೆ. ಬಂಡೆಯ ಕಲ್ಲಿನ ಮೇಲೆ ಬಿದ್ದು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳಾಗಿ ಹರಿಯುತ್ತದೆ. ತುಂಬಾ ಎತ್ತರದಿಂದ ಬೀಳುವ ಜಲಪಾತವಾಗಿರುವುದರಿಂದ 'ಗಗನಚುಕ್ಕಿ' ಮತ್ತು ರಭಸದಿಂದ ಧುಮ್ಮಿಕ್ಕುವುದರಿಂದಾಗಿ 'ಭರಚುಕ್ಕಿ' ಎಂಬ ಹೆಸರು ಪಡೆದಿದೆ. ಮಳೆಗಾಲದಲ್ಲಿ ಪ್ರವಾಸ ಕೈಗೊಂಡರೆ ಜಲಪಾತದ ಸೊಬಗನ್ನು ಕಣ್ಣುಂಬಿಕೊಂಡ ಬರಬಹುದು.

"ಕರ್ನಾಟಕ ಗತವೈಭವದ ಕುರುಹು, ನಿತ್ಯ ನೂತನವಾಗಿರುವ ಐತಿಹ್ಯ, ಮರಳಿನಲ್ಲಿ ಮುಚ್ಚಿಹೋಗಿದ್ದ ದೇವಸ್ಥಾನಗಳ ಊರು. ಚೋಳ, ಹೊಯ್ಸಳ, ಗಂಗ ಕಾಲ,
ವೈದ್ಯನಾಥೇಶ್ವರ, ಮರಳೇಶ್ವರ, ಪಟ್ಟಾಭಿರಾಮ, ಅರ್ಕೇಶ್ವರ ಮುಂತಾದ ಶಿವಾಲಯಗಳ ತವರೂರು" ಈ ತಲಕಾಡು.. 
ಬನ್ನಿ ಒಮ್ಮೆ ಪ್ರವಾಸಕ್ಕೆ
  [ಮುಂದುವರಿಯುವುದು....]

ಬನ್ನಿ ಒಮ್ಮೆ.... ಮೈಸೂರಿಗೆ....

 ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article