-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 134

ನಿಷ್ಪಾಪಿ ಸಸ್ಯಗಳು : ಸಂಚಿಕೆ - 134

ನಿಷ್ಪಾಪಿ ಸಸ್ಯಗಳು : ಸಂಚಿಕೆ - 134
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
     

ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಪ್ರವಾಸ, ವಾರ್ಷಿಕೋತ್ಸವ ಇತ್ಯಾದಿಗಳು ಮನಸಿಗೆ ಹರ್ಷ ತುಂಬಿ ಮತ್ತೆ ನಿಮ್ಮನ್ನು ಕಲಿಕೆಯತ್ತ ಕಳಿಸಿವೆಯಲ್ಲವೇ? ಹ್ಹಾಂ... ನಾವು ಮತ್ತೆ ವಾರದಲ್ಲೊಂದು ದಿನವಾದರೂ ಪರಿಸರ ಸುತ್ತಿ ಬರೋಣ, ಏನಂತೀರಾ?

ಇಂದು ನಾವು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತೆಂಗಿನ ಸರ ಊರಿನ ಕೃಷಿಕರಾದ ಶಿವರಾಜ್ ಸಿರಿಮನೆಯವರನ್ನು ಭೇಟಿಯಾಗಿ ವಿಶೇಷವಾದ ಯಾವುದಾದರೂ ಸಸ್ಯದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಬನ್ನಿ...

ಗಿರೀಶ: ಟೀಚರ್, ಇಲ್ಲೆಲ್ಲ ಸುತ್ತಲೂ ಕಾಡಿನ ಹಾಗೆ ಕಾಣಿಸ್ತಾ ಇದೆಯಲ್ಲ..

ರಶ್ಮಿ: ಹೌದು ಟೀಚರ್, ಕತ್ತಲೆ.. ಕತ್ತಲೆ!

ಟೀಚರ್: ಮಕ್ಕಳೇ, ಇದು ಪಶ್ಚಿಮ ಘಟ್ಟದ ಪಾದಗಳು ಹರಡಿಕೊಂಡ ಜಾಗ. ಇದು ವೈಶಿಷ್ಟ್ಯ ಪೂರ್ಣ ಭೂಪ್ರದೇಶ. ಇಲ್ಲಿಯ ಸಸ್ಯವರ್ಗ, ಖಗಮೃಗಗಳೂ ವಿಶೇಷವಾದುವು.

ರಶ್ಮಿ: ಈ ಕಾಡು ಭಾಗದಲ್ಲೂ ಅಡಿಕೆ ತೋಟಗಳಿವೆ!

ಗಿರೀಶ: ಹೌದು ಹೌದು... ಎಷ್ಟೊಂದು ಸುಂದರವಾದ ವಾತಾವರಣವಿದೆ!

ಟೀಚರ್: ಹ್ಹಾಂ ಮಕ್ಕಳೇ.. ಇಲ್ಲೂ ಕೃಷಿ ಇದೆ. ಅಡಿಕೆ ತೋಟಗಳೂ ಇವೆ. ನೀವೀಗ ನೋಡುತ್ತಿರುವುದೇ ಶಿವರಾಜ್ ಸಿರಿಮನೆಯವರ ತೋಟ... ನೋಡಿ.. ಎದುರಲ್ಲಿ ಕಾಣಿಸ್ತಿರೋದೇ ಶಿವರಾಜ್ ಸರ್... ತೋಟದಲ್ಲೇನೋ ಕೆಲಸದಲ್ಲಿದ್ದಾರೆ..

ರಶ್ಮಿ: ಸರ್, ನಮಸ್ತೆ

ಗಿರೀಶ: ನಮಸ್ತೆ ಸರ್..

ಶಿವರಾಜ್: ಮಕ್ಳೇ ನಮಸ್ತೆ, ಟೀಚರ್ಗೂ ನಮಸ್ತೇ.

ಟೀಚರ್: ನಮಸ್ತೆ ಸರ್.. ನಿಮ್ಮ ತೋಟ ನೋಡ್ತಾ ಮಕ್ಕಳು ತುಂಬಾ ಖುಷಿಪಟ್ರು.

ಶಿವರಾಜ್: ಹ್ಹಾಂ ಹೌದೇ! ನೀವೆಲ್ಲಾ ಬಂದುದು ನನಗೂ ತುಂಬಾನೆ ಸಂತೋಷವಾಯ್ತು. ಮಲೆನಾಡು ಯಾರಿಗೂ ಬೇಸರ ಉಂಟುಮಾಡಲ್ಲ. ಇಲ್ಲಿಯ ವಾತಾವರಣ, ಕಾಡು, ಗಿಡ ಮರಗಳು ಎಲ್ಲವೂ ವಿಶೇಷವಾದುವು.

ರಶ್ಮಿ: ಹೌದಲ್ವಾ ಸರ್.. ನಮ್ಗೆ ಪರಿಸರ ಅಧ್ಯಯನ ದಲ್ಲಿ ಇವನ್ನೆಲ್ಲ ಟೀಚರ್ ಹೇಳಿದ್ದಾರೆ. ಈಗ ನೋಡಿದ ಹಾಗಾಯ್ತು. 

ಶಿವರಾಜ್: ಬನ್ನಿ ಮಕ್ಕಳೇ, ಮನೆಯೊಳಗೆ ಬನ್ನಿ. ಕೂತು ಮಾತ್ನಾಡೋಣ.

ಟೀಚರ್: ಸರಿ ಸರ್, ಹೋಗೋಣ ಮಕ್ಕಳೇ ಬನ್ನಿ...

ಗಿರೀಶ: ಸರ್, ಅಲ್ಲೊಂದು ತೇಗದ ಗಿಡವಿದೆ ನೋಡಿ. ಅದು ನಮ್ಮೂರಲ್ಲೂ ಇದೆಯಲ್ವ ರಶ್ಮಿ?

ರಶ್ಮಿ: ಹೇ...ಗಿರೀಶ.. ಇದು ಅದಲ್ಲವೋ. ತೇಗದ ಎಲೆ ಅಗಲಗಲವಾಗಿರ್ತದೆ.. ಹೀಗಲ್ಲ.

ಗಿರೀಶ: ಚಿಗುರು ನೋಡು.. ಎಷ್ಟೊಂದು ಮೃದುವಾಗಿದೆ.. ಸ್ಪಂಜು ಮುಟ್ಟಿದಂತೆ!

ರಶ್ಮಿ: ಹೌದಲ್ಲ! ಚಿಗುರು ಉಣ್ಣೆಯ ಬಟ್ಟೆಯಂತಿದೆ! ಆದ್ರೆ ತೇಗ ಅಲ್ವೇ ಅಲ್ಲ.. ಅಲ್ವಾ ಟೀಚರ್?

ಟೀಚರ್: ರಶ್ಮಿ.. ನನಗೂ ಹಾಗೇ ಅನ್ನಿಸ್ತಿದೆ. ಇದು ತೇಗವಲ್ಲ. ಹಾಗಾದರೆ ಯಾವ ಸಸ್ಯ? 

ಗಿರೀಶ: ಶಿವರಾಜ್ ಸರ್.. ಸ್ವಲ್ಪ ನಿಲ್ಲಿ.. ಈ ಗಿಡದ ಹತ್ರಕ್ಕೊಮ್ಮೆ ಪ್ಲೀಸ್ ಬನ್ನಿ. ಇದ್ಯಾವ ಗಿಡ? ತೇಗದ ಗಿಡ ಅಲ್ವಾ?

ಶಿವರಾಜ್: ಅಲ್ಲಲ್ಲ ಮಕ್ಳೇ.. ಇದು ತೇಗದ ಗಿಡವಲ್ಲ. ತೇಗದ ಜಾತಿಗೆ ಸೇರಿದ ಪ್ರಭೇದವೆನ್ನುತ್ತಾರೆ. ಆದರೆ ಈ ಗಿಡಕ್ಕಿಲ್ಲಿ 'ಪಾಂಡವರ ಬತ್ತಿ' ಅಂತಾರೆ.

ರಶ್ಮಿ: ಹ್ಹ ಹ್ಹ.. ಹೊಸಾ ಹೆಸರು.,.!
ಗಿರೀಶ: ಪಾಂಡವರ ಬತ್ತಿ....ಯಾ!!

ಟೀಚರ್: ಹೆಸರೇ ಕುತೂಹಲ ಹುಟ್ಟಿಸ್ತಿದೆಯಲ್ವಾ ಮಕ್ಕಳೇ? 

ರಶ್ಮಿ: ಹೌದು ಟೀಚರ್..

ಗಿರೀಶ: ಸರ್.. ಅದ್ಯಾಕೆ ಆ ಹೆಸ್ರು? ಕಾರಣವೇನಾದ್ರೂ ಗೊತ್ತಾ ಸರ್?

ಶಿವರಾಜ್: ಈ ಗಿಡ ಪಾಂಡವರ ಹೆಸರಿನ ಜೊತೆ ಥಳಕು ಹಾಕಿಕೊಂಡಿರೋದಕ್ಕೆ ನಮ್ ಹಿರಿಯರು ಒಂದ್ ಕಥೆ ಹೇಳ್ತಾರೆ ಮಕ್ಳೇ. ಅದ್ಯೇನಂದ್ರೆ ಮಹಾಭಾರತ ಕಥೆ ಪ್ರಕಾರ ವನವಾಸದಲ್ಲಿ ಪಾಂಡವರಿದ್ರಲ್ವಾ? ಈ ವನವಾಸದಲ್ಲಿ ಅವ್ರಿಗೆ ಹಸ್ತಿನಾವತಿಯಿಂದ ಬರುವಾಗ ತಂದ ಎಣ್ಣೆ ಮತ್ತು ಬತ್ತಿಗಳು ಮುಗಿದುವಂತೆ. ಆಗ ದ್ರೌಪದಿಯು ಅಲ್ಲಿನ ಬುಡಕಟ್ಟು ಮಹಿಳೆಯರಿಂದ‌ ಈ ಗಿಡದ ಬಗ್ಗೆ ತಿಳಿದುಕೊಂಡು ಭೀಮನಲ್ಲಿ ಹೇಳಿ ತರಿಸಿಕೊಂಡಳಂತೆ.

ರಶ್ಮಿ: ಆಮೇಲೆ?

ಶಿವರಾಜ್: ಆಮೇಲೆ ಈ ಗಿಡದ ಚಿಗುರುಗಳಿಗೆ ಎಣ್ಣೆ ಹಚ್ಚಿ ಬೆಂಕಿ ಕೊಟ್ಟು ಮರವನ್ನೇ ಬೆಳಗಿಸಿದರಂತೆ. ಇದು ಈ ಸಸ್ಯದ ಬಗ್ಗೆ ಇರುವ ಒಂದು ದಂತಕಥೆ!

ಟೀಚರ್: ಸರ್... ಇದು ಉರಿಯೋದು ಸತ್ಯಾನಾ?

ಶಿವರಾಜ್: ಹೌದು ಹೌದು.. ಸತ್ಯ

ರಶ್ಮಿ: ಆಂ...

ಗಿರೀಶ: ಪ್ಲೀಸ್ ನಮ್ಗೂ ತೋರಿಸ್ಬಹುದಾ?

ಶಿವರಾಜ್: ಬನ್ನಿ ಮಕ್ಕಳೇ, ಇದರ ತುಪ್ಪಳದಂತಿರುವ ಚಿಗುರುಗಳನ್ನು ನೋಡಿ. ಸರಳವಾದ, ಒಂದಕ್ಕೊಂದು ವಿರುದ್ಧವಾದ ಎಲೆಗಳನ್ನು ಗಮನಿಸಿ.

ರಶ್ಮಿ: ಎಲೆಗಳು ಅಂಡಾಕಾರವಾಗಿವೆ, ತುದಿ ಮೊನಚಾಗಿದೆ.. ಅಲ್ವಾ ಗಿರೀಶ?

ಗಿರೀಶ: ಹೌದು ರಶ್ಮಿ. ನೇರಳೆ ಬಣ್ಣದ ಹೂಗಳನ್ನು ನೋಡಂತೆ... ಎಷ್ಟು ಮುದ್ದಾಗಿ ಕಾಣ್ತಿದೆಯಲ್ವಾ?

ಶಿವರಾಜ್ : ಮಕ್ಕಳೇ, ಇಲ್ಲಿ ನೋಡಿ, ಅಕ್ಷಾ ಕಂಕುಳಲ್ಲಿ ಗೊಂಚಲು ಗೊಂಚಲಾಗಿ ಶಂಕುವಿನಾಕಾರದ ಸುಂದರವಾದ ಹೂಗಳು, ಮೊಗ್ಗುಗಳೂ ಇವೆ. ಈ ಹೂವಿನ ಗುಂಪಿನ ಕಾಂಡ ಕೂಡ ನಯವಾಗಿ ಮೃದುವಾಗಿದೆ. ತಮಿಳುನಾಡಿನ ಕೆಲವು ದೇವಾಲಯಗಳಲ್ಲಿ ಇದನ್ನು ವಿಶೇಷವಾಗಿ ಬಳಸುವ ಪದ್ಧತಿಯೂ ಇದೆಯಂತೆ. ಇದರಲ್ಲಿ ಮೂರ್ನಾಲ್ಕು ಬೀಜಗಳಿರುವ ಗೋಳಾಕಾರದ ಹಣ್ಣುಗಳಾಗುತ್ತವೆ. ಇವು ಆವೃತ ಬೀಜಗಳು.

ಗಿರೀಶ: ಸರ್... ಇದರ ಬೇರೆ ಹೆಸರುಗಳು ಗೊತ್ತಾ? ನಮ್ಮೂರಲ್ಲೂ ಇರಬಹುದೇನೊ..

ಶಿವರಾಜ್: ಇರಲೂ ಬಹುದು. ಪಶ್ಚಿಮ ಘಟ್ಟ ಹಾಗೂ ಶ್ರೀಲಂಕಾ ದಲ್ಲಿ ಇದೊಂದು ಸಾಮಾನ್ಯ ಸಸ್ಯವಾಗಿ ಹರಡಿಕೊಂಡಿದೆ. ಪಾಂಡವರ ಬತ್ತಿ , ದೀಪದ ಬತ್ತಿ, ಕರಿಕಲು ಮರ, ಆರತಿ ಗಿಡ, ಇಬನ್ನೆ ಗಿಡ, ಋಷಿಪತ್ರ, ಕೈಕರಕಲು ಮರವೆಂದೂ ಕರೀತಾರೆ. ನೀವು ನೋಡ್ತಿರೋ ಈ ಗಿಡ ಸ್ವಲ್ಪ ಸಣ್ಣದು.. ಪಾಂಡವರ ಬತ್ತಿ ಗಿಡ ಸುಮಾರು ನಾಲ್ಕೈದು ಮೀಟರ್ ನಷ್ಟೆತ್ತರ ಬೆಳೀತದೆ. 

ಟೀಚರ್: ಇದು ಉರಿಯಲು ಏನು ಮಾಡಬೇಕು ಸರ್? ವಿವರಿಸ್ತೀರಾ..

ಶಿವರಾಜ್ : ಹ್ಹಾಂ.. ಹೇಳ್ತೇನೆ ಅದ್ಕೇನಂತೆ.... ಇಲ್ನೊಡಿ.... ಈ ಚಿಗುರೆಲೆಗೆ ಸ್ವಲ್ಪ ಎಣ್ಣೆ ಅಂದ್ರೆ ಯಾವ್ದೇ ಎಣ್ಣೆ ಸವರಿ... ಆ ಎಲೆಯ ತುದಿಗೆ ಬೆಂಕಿ ಹಚ್ಚಿದ್ರೆ... ಹತ್ತಿಯ ಬತ್ತಿ ಉರ್ದಂತೆ ಉರೀತದೆ! 

ಗಿರೀಶ : ನಿಷ್ಪಾಪಿ ಸಸ್ಯ!

ರಶ್ಮಿ : ಹೌದಲ್ವಾ... ಸರ್.. ಎಲೆ ಉರಿಸಿ ತೋರಿಸ್ತೀರಾ?

ಶಿವರಾಜ್ : ಖಂಡಿತ. ಬನ್ನಿ ಒಂದೊಂದು ಚಿಗುರನ್ನು ಚಿವುಟಿ ತನ್ನಿ.. ಮನೆಯೊಳಗೆ ಹೋಗೋಣ.

ಟೀಚರ್ : ಬನ್ನಿ , ಕೂತ್ಕೊಳ್ಳಿ ಮಕ್ಕಳೇ, ಪಾಂಡವರ ಬತ್ತಿ ಉರಿಯೋದನ್ನ ನೋಡೋಣ... ಸಸ್ಯಗಳಲ್ಲಿ ಎಷ್ಟೊಂದು ವಿಶೇಷತೆಗಳು ಹುದುಗಿವೆಯಲ್ವಾ?

ಗಿರೀಶ : ಹೌದು ಟೀಚರ್.. ಎಂಥ ವಿಸ್ಮಯ ಅಲ್ವಾ?

ಶಿವರಾಜ್ : ಮಕ್ಕಳೇ, ಇಲ್ಲಿ ನೋಡಿ. ಇದೊಂದು ಹಣತೆ. ಇದಕ್ಕೆ ನಾನೀಗ ತೆಂಗಿನೆಣ್ಣೆ ಹಾಕಿದ್ದೇನೆ. ಇದು ಒಂದು ಚಿಗುರಿನ ಎರಡು ಪುಟಾಣಿ ಎಲೆಗಳಿಗೆ ಸ್ವಲ್ಪ ಎಣ್ಣೆ ಹಚ್ಚಿ ಈ ಹಣತೆಯಲ್ಲಿರುವ ಎಣ್ಣೆಯೊಳಗೆ ಅದರ ಕಾಂಡವನ್ನು ಸ್ವಲ್ಪ ಮುಳುಗಿಸಿಡೋಣ. ಎಲೆಗಳ ತುದಿಗೆ ಬೆಂಕಿ ಕಡ್ಡಿ ಗೀರಿ ಬೆಂಕಿ ಕೊಡ್ತೇನೆ.. ಗಮನಿಸಿ..

ರಶ್ಮಿ : (ಚಪ್ಪಾಳೆ ತಟ್ಟುತ್ತಾ) ಹೋ...ಬೆಂಕಿ ಉರೀತು.. ಬೆಂಕಿ ಉರೀತು !!

ಗಿರೀಶ : O MY GOD!

ಟೀಚರ್ : ವ್ಹಾ... ಎಂತಹ ವಿಚಿತ್ರ ಅಲ್ವಾ..!

ಶಿವರಾಜ್ : ಅದ್ಭುತ ಅಲ್ವಾ..! ತಾಸುಗಟ್ಟಲೆ ಇದು ಉರಿಯಬಲ್ಲದು. ಅದಕ್ಕೇ ಬತ್ತೀ ಮರ ಅಂತಲೂ ಕರಿಯೋದು. ತಂಪಾದ ಬೆಳಕು. ನಿಶ್ಚಲವಾಗಿ, ನಿಧಾನವಾಗಿ ಉರೀತಾ ಇದೆ ನೋಡಿ. ಹತ್ತಿಯ ಬತ್ತಿ ಎಣ್ಣೆಯನ್ನು ಹೀರಿದಂತೆ ಈ ಚಿಗುರಿನಲ್ಲಿರುವ ಹುರುಪೆಗಳಂತಹ ರಚನೆಯ ಮೂಲಕ ಎಣ್ಣೆ ಮೇಲ್ತುದಿಗೆ ಹೀರಲ್ಪಡುತ್ತದೆ.

ಟೀಚರ್: ಇದರ ವೈಜ್ಞಾನಿಕ ಹೆಸರೇನಾದರೂ ಗೊತ್ತಾ ಸರ್?..

ಶಿವರಾಜ್ : ಹ್ಹಾಂ.. ಗೊತ್ತು ಟೀಚರ್. ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ಯಾಲಿಕಾರ್ಪಾ

ಟೊಮೆಂಟೋಸಾ (Callicarpa tomentosa). ಕ್ಯಾಲಿಕಾರ್ಪಾ ಕುಲವಾದರೆ ಟೊಮೆಂಟೋಸಾ ಜಾತಿಯಾಗಿದೆ. 

ರಶ್ಮಿ : ಸರ್...ಇದರಿಂದ ಏನಾದರೂ ಔಷಧೀಯ ಪ್ರಯೋಜನಗಳಿವೆಯೆ?

ಗಿರೀಶ : ಇರಬಹುದು... ಇರಬಹುದು. ಇದು ಒಂದು ಮೂಲಿಕೆಯ ಹಾಗೆಯೇ ಇದೆ!

ಶಿವರಾಜ್ : ಹೌದೌದು... ತುಂಬಾ ಪ್ರಯೋಜನಗಳಿವೆ. ಇದರ ಹಣ್ಣು ವನ್ಯ ಜೀವಿಗಳಿಗೆ ಭೋಜನ ! ಮಕರಂದಕ್ಕೆ ಕೀಟಗಳ ಸಾಲು....!

ಇದರ ಹಣ್ಣಿನಿಂದ ವೈನ್, ಜೆಲ್ಲಿ ತಯಾರಿಸ್ತಾರೆ. ತಲೆನೋವು, ಒಸಡು ನೋವು, ಮೂಲವ್ಯಾಧಿಗಳಿಗೆ ತೊಗಟೆಯೇ ಔಷಧಿಯಾಗಿದೆ. 'ಮಲ' ದ ಹರಿವನ್ನು ಸುಗಮಗೊಳಿಸುತ್ತದೆ. ಮಹರ್ಷಿ ಚರಕ ಈ ಗಿಡವು 'ಮೂತ್ರ ಶುದ್ಧೀಕರಣಕ್ಕೆ ಉತ್ತಮ' ವೆಂದು ಬರೆದಿರುವರಂತೆ.‌

ಟೀಚರ್: ಇದೊಂದು ಜೈವಿಕ ಇಂಧನವೇ ಸರಿ.. ಸರಕಾರವು ಈ ಸಂಪತ್ತಿನ ಸಸ್ಯಶಾಸ್ತ್ರ ಸಮೀಕ್ಷೆ , ಪರಿಶೀಲನೆ ಮಾಡಿದರೆ ಚೆನ್ನಾಗಿತ್ತು ಅಲ್ವಾ...

ಶಿವರಾಜ್ : ಹೌದು ಟೀಚರ್.. ಇದರಲ್ಲಿ ಸಾವಯವ ಇಂಧನದ ಕುರುಹುಗಳಿರಬಹುದೇನೋ.. ನಮ್ಮ ಹಿರಿಯರು ಹೇಳುತ್ತಿದ್ದುದನ್ನು ನಾನೂ ನಿಮಗೆ ಹೇಳಿದೆನಷ್ಟೇ.

ಗಿರೀಶ : ಸರ್.. ನನ್ನದೊಂದು ರಿಕ್ವೆಸ್ಟ್ ತಮ್ಮಲ್ಲಿ. ನಾವು ವಾಪಸ್ ಹೋಗುವಾಗ ಇದರ ಗಿಡಗಳು ಬೇಕಿತ್ತು.

ರಶ್ಮಿ: ಸರ್.. ನನಗೂ ಬೇಕು... ಪ್ಲೀಸ್.

ಟೀಚರ್: ಸರ್.. ಇದರ ಬೀಜಗಳಿಂದಲೇ ಗಿಡಗಳನ್ನು ಬೆಳೆಸೋದಾ?

ಶಿವರಾಜ್ : ಅಲ್ಲಲ್ಲ... ಇದರ ಕೊಂಬೆಗಳನ್ನು ನೆಟ್ರೆ ಹೊಸ ಗಿಡ ಬೆಳೀತದೆ. ನಿಮ್ಗೆಲ್ಲರಿಗೂ ಕೊಂಬೆಗಳನ್ನು ಕತ್ತರಿಸಿ ಕೊಡ್ತೇನೆ.. ನೆಟ್ಟು ಬೆಳೆಸಿ... ಪರಿಸರ ರಕ್ಷಿಸಿರಿ..

ಟೀಚರ್ : ಖಂಡಿತ ನೆಡ್ತೇವೆ ಸರ್.. ಒಂದು ವಿಶೇಷ ಗಿಡದ ಸಂಪೂರ್ಣ ಮಾಹಿತಿ ನೀಡಿದ ತಮಗೆ ಎಲ್ಲರ ಪರವಾಗಿ ವಂದನೆಗಳು.

ರಶ್ಮಿ : ಗಿರೀಶ : ಥ್ಯಾಂಕ್ಯೂ ಸರ್.

ಶಿವರಾಜ್: ತಮಗೂ ಧನ್ಯವಾದಗಳು... ಯಾರಿಗಾದರೂ ಪಾಂಡವರ ಬತ್ತಿ ಗಿಡ ಬೇಕಿದ್ದರೆ ನನ್ನ 9481635154 ಸಂಖ್ಯೆಯನ್ನು ಸಂಪರ್ಕಿಸಿರಿ. ನೀವೆಲ್ಲರೂ ಇನ್ನೊಮ್ಮೆ ಬನ್ನಿ..

ಟೀಚರ್: ಸರಿ ಸರ್... ಮಕ್ಕಳೇ, ನಾವೂ ಹೊರಡೋಣ. 

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************



Ads on article

Advertise in articles 1

advertising articles 2

Advertise under the article