-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 201

ಸ್ಫೂರ್ತಿಯ ಮಾತುಗಳು : ಸಂಚಿಕೆ - 201

ಸ್ಫೂರ್ತಿಯ ಮಾತುಗಳು : ಸಂಚಿಕೆ - 201
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
  
                                
ಯಾವುದೇ ಕೆಲಸವನ್ನು ಪ್ರೀತಿಯಿಂದ ಕಾಳಜಿಯಿಂದ ನಿಸ್ವಾರ್ಥ ಭಾವನೆಯಿಂದ ನಿರಂತರವಾಗಿ ಮಾಡುವ ಬದ್ದತೆಯೇ ತಪಸ್ಸು.

ಮತ್ತೆ ಇದನ್ನು ನಮಗೆ ವಿದೇಶದಲ್ಲಿ ಮಾನ್ಯತೆ ಸ್ವದೇಶದಲ್ಲಿ ಧನ್ಯತೆ ಕೂಡಿ ಬರಲು ನಮ್ಮ ತಪಸ್ಸು ಕಾರಣವಾಗುತ್ತದೆ. ತಪಸ್ಸು ಎಂದರೆ ಶ್ರದ್ಧೆ ಸಹಿತವಾದ ಕರ್ಮ. ಪ್ರತಿಯೊಬ್ಬರಿಗೂ ನಿರ್ದಿಷ್ಟ ಕರ್ಮಗಳಿವೆ. ಎಲ್ಲ ಕರ್ಮಗಳು ಸ್ವಯಂ ಆಯ್ಕೆಯೇ ಹೊರತು ಯಾರಿಂದಲೂ ಹೇರಿತವಾದುದಲ್ಲ. ಹೇರಿತ ಕರ್ಮದ ಫಲ ನಗಣ್ಯವಾಗುತ್ತದೆ. ಯಾಕೆಂದರೆ ಅದರಲ್ಲಿ ಅಸಕ್ತಿ ಮತ್ತು ತೊಡಗಿಸುವಿಕೆಗಳು ಅಲ್ಪವೇ ಇರುತ್ತದೆ. ಕೆಲವೊಮ್ಮೆ ಪ್ರೇರಿತ ಕರ್ಮಗಳನ್ನೂ ಆಯ್ಕೆಮಾಡುವುದಿದೆ. 

ರೈತನು ಮಾಡಬಹುದಾದ ತಪಸ್ಸು, ಕಾರ್ಖಾನೆಯ ಮಾಲಿಕ ಮಾಡಬಹುದಾದ ತಪಸ್ಸು ಬೇರೆ ಬೇರೆಯೇ ಆಗಿರುತ್ತದೆ. ಆದರೆ ಅವುಗಳಿಂದ ಒದಗುವ ಫಲಗಳು ಮಾನವನಿಗೆ ಉಪಯುಕ್ತವಾದುವುಗಳಾಗಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಿಮಾಲಯದಲ್ಲಿ ದೇವರನ್ನು ಕುರಿತು ಋಷಿಗಳು ತಪಸ್ಸು ಮಾಡುತ್ತಿದ್ದರು. ತಪಸ್ಸಿನಲ್ಲೂ ಸರಳ, ಕಠಿಣ ಎಂದು ವಿಧಗಳಿವೆ. ತಪಸ್ಸಿನ ಕಠಿಣತೆ ಫಲವನ್ನು ಬಹು ಬೇಗನೆ ಕೊಡುತ್ತದೆ. ಸರಳ ತಪಸ್ಸಿನಿಂದ ಇಚ್ಛಿತ ಸಿದ್ಧಿಯು ನಿಧಾನವಾಗಿ ಒದಗುತ್ತದೆ. ಅದೇ ರೀತಿ ಬೇಸಾಯವನ್ನು ಶ್ರದ್ಧೆಯಿಂದ ಮಾಡುವುದೂ ಹಿಮಾಲಯದಲ್ಲಿ ಮಾಡುವ ತಪಸ್ಸಿಗೆ ಸಮಾನ. ರೈತನು ಕಠಿಣ ಪ್ರಯತ್ನದ ಮೂಲಕ ಬೇಸಾಯ ಅಥವಾ ಕೃಷಿ ಕಾಯಕ ನಡೆಸಿದರೆ ಫಲವೂ ಶೀಘ್ರ ಮತ್ತು ಅಧಿಕ. ಬೇಸಾಯಗಾರನ ಶ್ರಮ ಕಡಿಮೆಯಾದಂತೆ ಗಿಡಗಳ ಚೇತರಿಕೆಯೂ ನಿಧಾನಗೊಳ್ಳುತ್ತದೆ. ಪರಿಣಾಮ ಬೆಳೆಯೂ ನಿಧಾನವಾಗುವುದಲ್ಲದೆ ಪ್ರಮಾಣ ಮತ್ತು ಗಾತ್ರವೂ ಇಳಿಮುಖವೇ ಆಗುತ್ತದೆ. ಅದಕ್ಕಾಗಿಯೇ ತಪಸ್ಸು ಎಂಬುದರ ವ್ಯಾಪ್ತಿ ವಿಶಾಲ. ಋಷಿಮುನಿಗಳ ತಪಸ್ಸಿಗೆ ಪರ್ಯಾಯವಾಗಿರುವ ಬೇಸಾಯದಂತಹ ಇತರ ಅಸಂಖ್ಯ ತಪಸ್ಸುಗಳಿವೆ.

ಅಧ್ಯಯನವೂ ಒಂದು ತಪಸ್ಸು. ಅಧ್ಯಯನವೆಂಬ ತಪಸ್ಸಿನ ಕಾಠಿಣ್ಯತೆ ಮತ್ತು ಮೃದುತ್ವವನ್ನಾಧರಿಸಿಯೇ ಲಭಿಸುವ ಜ್ಞಾನವೂ ಏರುಗತಿ ಅಥವಾ ಇಳಿಗತಿಗಳನ್ನು ಹೊಂದುತ್ತದೆ. ಸಾಧಕನಿಗೆ ಜ್ಞಾನವು ವೇಗವಾಗಿ ಪ್ರಭುತ್ವ ಮಟ್ಟದಲ್ಲಿ ದೊರೆತರೆ, ಆಲಸಿಗೆ ಅಷ್ಟೇ ಸಮಯದಲ್ಲಿ ಬಹಳ ಮಂದಗತಿಯಿಂದ ಅಲ್ಪ ಜ್ಞಾನವನ್ನಷ್ಟೇ ಗಳಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ತಪಸ್ಸೆನ್ನುವುದು ಕಠಿಣವಾಗಿರಬೇಕು. ವಿದ್ಯಾರ್ಥಿಯು ಕಲಿಕೆಯನ್ನು ಕಠಿಣ ತಪಸ್ಸನ್ನಾಗಿ ಸ್ವೀಕರಿಸಬೇಕು ಎಂಬ ಮಾತಿನಲ್ಲಿಯೂ ಹೂಡುವ ಶ್ರಮದ ಪ್ರ,ಮಾಣವೇ ಗಣನೆಯಾಗುತ್ತದೆ. 

ಅತಿಯಾಗಿ ತಪಸ್ಸನ್ನಾಚರಿಸಿ ಗುರಿ ಸಾಧಸಿದವನು ಯೋಗಿಯೆನಿಸಿಕೊಳ್ಳುವನು. ಯೋಗಿಯು ಮಾಡುವ ತಪಸ್ಸು ಸಮಾಜಕ್ಕೆ ಉಪಯೋಗಿಯಾಗಿರಬೇಕು. ಮಾಡಿದ ತಪಸ್ಸು ಅಥವಾ ತನ್ನ ಕರ್ಮದಲ್ಲಿ ಹೂಡಿದ ಶ್ರಮದ ಪ್ರತಿಫಲ ಸಮಾಜೋಪಯೋಗಿಯಾದಾಗ ಅದಕ್ಕೆ ಕಾರಣನಾದ ವ್ಯಕ್ತಿಯು ಪೂಜನೀಯನಾಗುತ್ತಾನೆ. ಅವನು ಕಾಷಾಯ ಧರಿಸದೇ ಇದ್ದರೂ ಋಷಿಯೆಂಬ ಗೌರವದೊಂದಿಗೆ ಸಮಾಜದಲ್ಲಿ ಆದರಿಸಲ್ಪಡುತ್ತಾನೆ.

ನಾವು ಮಾಲತಿ ಹೊಳ್ಳರನ್ನು ಬಲ್ಲೆವು. ಯಾಕೆ ಬಲ್ಲೆವು ಅಥವಾ ಹೇಗೆ ಬಲ್ಲೆವು ಎಂಬುದರ ಹಿಂದೆ ಅವರ ತಪಸ್ಸಿದೆ. ಅಂಗ ನ್ಯೂನರಾದರೂ ಕಂಗೆಡದೆ ಹಠದಿಂದ ತನ್ನ ಕಾಯಕದಲ್ಲಿ ಶ್ರದ್ದೇ ಹೂಡಿರುವುದರಿಂದ ಮೂರು ನೂರಕ್ಕೂ ಹೆಚ್ಚಿನ ಓಲಿಂಪಿಕ್‌ ಪದಕಗಳು ಅವರಿಗೆ ಲಭಿಸಿದುವು. ಅವರು ಭಾರತ ಸರಕಾರದ ಉನ್ನತ ಪ್ರಶಸ್ತಿ ಪದ್ಮಶ್ರೀಯನ್ನೂ ಪಡೆದರು. ಮಾಲತಿ ಹೊಳ್ಳರು ಮಾಡಿರುವುದೂ ಒಂದು ತಪಸ್ಸು. ಇಂತಹ ತಪಸ್ವಿಗಳನೇಕರನ್ನು ನಾವು ಕಾಣಬಹುದು. 
ನಾವೂ ತಪಸ್ವಿಗಳಾಗೋಣ. ಪ್ರಬುದ್ಧ ಕಾಯಕಕ್ಕೆ ಬದ್ಧರಾಗಿ ಸಮೃದ್ಧರಾಗೋಣ. ಯೋಗಿಗಳಾಗೋಣ, ಉಪಯೋಗಿಗಳಾಗೋಣ. ನಮ್ಮ ಜೀವನವು ನಾವು ಕೈಗೊಳ್ಳುವ ತಪಸ್ಸಿನಿಂದ ಮಾತ್ರವೇ ಸಾರ್ಥಕವಾಗಲು ಸಾಧ್ಯ ಎಂಬುದನ್ನು ಮರೆಯದಿರೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************

Ads on article

Advertise in articles 1

advertising articles 2

Advertise under the article