-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 114

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 114

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 114
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
          

ಪ್ರೀತಿಯ ಮಕ್ಕಳೇ.... ಮನುಷ್ಯನಿಗೆ ನಿದ್ದೆ ಮರಣವಲ್ಲ ಬದಲಾಗಿ ವ್ಯವಸ್ಥೆಯ ರಿಪೇರಿಯ ಅವಧಿ ಎಂಬುದನ್ನು ನೋಡಿದೆವು. ನನ್ನ ಚಿಕ್ಕಂದಿನಿಂದಲೂ ಅಮ್ಮನ ಒಂದು ಮಾತನ್ನು ತುಂಬಾ ಚೆನ್ನಾಗಿ ನೆನಪಿಟ್ಟಿದ್ದೇನೆ. ಮಕ್ಕಳು ಬೆಳೆಯುವುದು ನಿದ್ದೆ ಮತ್ತು ಎಣ್ಣೆ ಸ್ನಾನದಿಂದ ಎಂದು. ಆದ್ದರಿಂದ ನಾನು ಇದನ್ನು ಎಷ್ಟು ಅನುಷ್ಠಾನಕ್ಕೆ ತಂದಿದ್ದೇನೋ ನನಗೆ ಗೊತ್ತಿಲ್ಲ ಆದರೆ ನನ್ನ ಮಕ್ಕಳ ಬೆಳವಣಿಗೆಯ ವಿಷಯ ಬಂದಾಗ ನಾನು ಇದನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೆ. ಮಕ್ಕಳ ಮೆದುಳಿನ ಬೆಳವಣಿಗೆಗೆ ನಿದ್ದೆ ಅತ್ಯಂತ ಮಹತ್ವದ್ದು. ಆದರೆ ಅನೇಕ ಪಾಲಕರು ತಮ್ಮ ತಡರಾತ್ರಿಯ ಪರದೆ ವೀಕ್ಷಣೆಯಿಂದಾಗಿ ಇದನ್ನು ನಿರ್ಲಕ್ಷಿಸುವುದು ಮಾತ್ರವಲ್ಲ ಅದಕ್ಕಾಗಿ ಅವರನ್ನು ಉತ್ತೇಜಿಸುವುದನ್ನೂ ನಾನು ನೋಡಿದ್ದೇನೆ. ಇದು ಅಪಾಯಕಾರಿ ವಿದ್ಯಮಾನ. ಮಕ್ಕಳೇ ಈ ನಿದ್ದೆ ನಿಮಗೆ ಮಾತ್ರವಲ್ಲ ನಿಮ್ಮ ತಮ್ಮ ತಂಗಿಯರಿಗೂ ಅತ್ಯಂತ ಮುಖ್ಯವಾದುದು. ನೀವು ಬೋರಾಗುತ್ತದೆಂದು ಹೇಳಿ ಮಲಗಿರುವ ತಮ್ಮ ತಂಗಿಯರನ್ನು ಎಬ್ಬಿಸಿ ಆಟಕ್ಕೆ ಕರೆಯುವ ಕೆಲಸ ಮಾಡುತ್ತಿದ್ದೀರಾ? ಅದನ್ನು ತಕ್ಷಣ ನಿಲ್ಲಿಸಿ. ಏಕೆ ಎಂದು ಕೇಳಬೇಡಿ. ಮುಂದೆ ಓದಿ.

ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ನಿದ್ದೆ ತುಂಬಾ ನಿರ್ಣಾಯಕವಾದುದು. ಸಮಗ್ರ ಎಂದರೇನು ಎಂಬುದು ಪ್ರಶ್ನೆಯೇ. ಈಗಿನ ಶಿಕ್ಷಣವೇತ್ತರು ಖಾಸಗಿ ಶಾಲೆಗಳವರು ಬಳಸುವ ಪೊಳ್ಳು ಪದವಲ್ಲವೇ ಅದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ ಎನ್ನಬೇಡಿ. ಮಗುವಿನ ಸಮಗ್ರ ಅಥವಾ ಸರ್ವಾಂಗೀಣ ಬೆಳವಣಿಗೆ ಎಂದರೆ ದೈಹಿಕ (physical development), ಬೌದ್ಧಿಕ (cognitive development) ಮತ್ತು ಭಾವನಾತ್ಮಕ ಕ್ಷೇತ್ರಗಳು ಅಥವಾ ಬೆಳವಣಿಗೆಗಳು ಎಂದರ್ಥ. (emotional development).

ದೈಹಿಕ ಬೆಳವಣಿಗೆ ತೆಗೆದುಕೊಂಡಾಗ ಪ್ರಧಾನ ಎತ್ತರ ನಿಯಂತ್ರಕ, ಮೂಳೆಯ ಸಾಂದ್ರತೆ ಮತ್ತು ಅಂಗಾಂಶಗಳ ರಿಪೇರಿಗೆ ಸಂಬಂದಿಸಿದ ಪ್ರಮುಖ ಹಾರ್ಮೋನುಗಳು ಸ್ರವಿಸಲ್ಪಡುವುದು ನಿದ್ದೆಯಲ್ಲಿ. ರೋಗಗಳಿಗೆ ನಿರೋಧಕತೆ ಒದಗಿಸುವ ರೋಗ ನಿರೋಧಕ ವ್ಯವಸ್ಥೆ (immune syste) ಬಲಗೊಳ್ಳುವುದು ನಿದ್ದೆಯಲ್ಲಿ. ಸರಿಯಾದ ನಿದ್ದೆಯು ಹಸಿವನ್ನುಂಟು ಮಾಡುವ ಹಾರ್ಮೋನುಗಳನ್ನು ನಿಯಂತ್ರಿಸುವುದರಿಂದ ಬೊಜ್ಜನ್ನು (obesity) ತಡೆಯುತ್ತದೆ.

ಬೌದ್ಧಿಕ ಬೆಳವಣಿಗೆಯ ವಿಷಯ ಬಂದಾಗ ನಿದ್ದೆಯು ನೆನಪುಗಳನ್ನು ಕ್ರೋಢೀಕರಿಸುವುದು ಮಾತ್ರವಲ್ಲ ಹೊಸ ಅನುಭವಗಳನ್ನು ಸಂಕಲಿಸುತ್ತದೆ. ಸಾಕಷ್ಟು ನಿದ್ದೆ ಗಮನ ಕೇಂದ್ರೀಕರಿಸುವಿಕೆ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ (problem solving skills) ಮತ್ತು ಅವಧಾನತೆಯನ್ನು ಉತ್ತಮಪಡಿಸಿದರೆ ವರ್ತನೆಯ ಸಂಕೀರ್ಣತೆಗಳನ್ನು (behavioral issues) ತಿಳಿಯಾಗಿಸುತ್ತದೆ.

ಭಾವನಾತ್ಮಕ ವಲಯಕ್ಕೆ ಬಂದಾಗ ನಿದ್ದೆ ಭಾವನೆಗಳ ನಿಯಂತ್ರಣವನ್ನುಂಟು ಮಾಡುವುದಲ್ಲದೆ ಖಿನ್ನತೆ (meltdowns), ಘರ್ಷಣೆ (irritability) ಮತ್ತು ಸಿಟ್ಟುಗಳನ್ನು (aggression) ನಿಯಂತ್ರಣದಲ್ಲಿರಿಸುತ್ತದೆ. ಆದರೆ ಅನೇಕ ತಂದೆ ತಾಯಿಯರು ಮಕ್ಕಳೊಂದಿಗೆ ತಡ ರಾತ್ರಿಯ ವರೆಗೂ ಟಿ ವಿ ನೋಡುವುದನ್ನು ನಾನು ನೋಡಿದ್ದೇನೆ. ಅಂತಹ ಪಾಲಕರು ಮಗುವಿನ ಪರಮ ವೈರಿಗಳು ಎಂಬುದಕ್ಕೆ ಎರಡು ಮಾತಿಲ್ಲ. 

ಹೀಗೆ ವಾಹನಕ್ಕೆ ಇಂಧನ ಹೇಗೆ ಮುಖ್ಯವೋ ಮಕ್ಕಳಿಗೆ ನಿದ್ದೆ. ಮಕ್ಕಳ ಸರಿಯಾದ ನಿದ್ದೆಯ ಅಭ್ಯಾಸಗಳು ಮಕ್ಕಳ ಕಲಿಕೆಯನ್ನು ಬಲಗೊಳಿಸುವುದರೊಂದಿಗೆ ಜೀವಿತಾವಧಿಯ ದೃಢ ಆರೋಗ್ಯದ ಅಡಿಪಾಯ. ಆದ್ದರಿಂದಲೇ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ನಂತರದ ಅವಧಿಯಲ್ಲಿ ನಿದ್ದೆಯನ್ನು ಕಡ್ಡಾಯಗೊಳಿಸಲಾಗಿದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************




Ads on article

Advertise in articles 1

advertising articles 2

Advertise under the article