ಸ್ಫೂರ್ತಿಯ ಮಾತುಗಳು : ಸಂಚಿಕೆ - 199
Wednesday, January 14, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 199
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಹತ್ತಿಯೇ ಮುತ್ತು? ಹಾಗೆನ್ನುವಿರಾ? ಹತ್ತಿಗಷ್ಟೊಂದು ಪ್ರಾಧಾನ್ಯತೆ ಇದೆಯೆ? ಹತ್ತಿಗೂ ವಿಶ್ವ ದಿನಾಚರಣೆಯ ಸಂಭ್ರಮದ ಒಸಗೆ ಲಭಿಸಿರುವುದಾದರೂ ಯಾಕೆ? ಎಲ್ಲ ಪ್ರಶ್ನೆಗಳಿಗೆ ಈ ಲೇಖನವೇ ಉತ್ತರ...
ಶ್ವೇತ ಬಂಗಾರ ಎಂದೇ ಹತ್ತಿಗೆ ಪ್ರತೀತಿ. ಹತ್ತಿಗೆ ಅರೇಬಿಕ್‌ನಲ್ಲಿ ಖುಟುನ್ ಎಂದು ಕರೆಯಲಾಗುತ್ತಿತ್ತು. ಅದು ಆಂಗ್ಲರಿಗೆ ಕಾಟನ್ ಆಗಿದೆ. ಜನಜೀವನದ ಅಗತ್ಯಗಳಾದ ಅಶನ ವಸನ ವಸತಿಗಳಲ್ಲಿ ವಸನಕ್ಕೆ ಹತ್ತಿಯೇ ಮೂಲ. ಆದುದರಿಂದ ಹತ್ತಿಯ ಬಗ್ಗೆ ಹೆಚ್ಚು ಒತ್ತಿ ಮಾತನಾಡುವ ಅಗತ್ಯವಿದೆ. ಜನನದಿಂದ ಮರಣದ ತನಕ ಮನುಷ್ಯ ಹತ್ತಿಗೆ ಗುಲಾಮ. ಹತ್ತಿಯಂತಹ ಮನಸ್ಸು ಎಂಬ ಉಪಮೆಗೆ ಪರ್ಯಾಯವೇ ಇಲ್ಲ. ಹತ್ತಿಗಿಂತ ಮಿಗಿಲಾದ ಮೃದುತ್ವವೇ ಇಲ್ಲ.
ಹತ್ತಿಗೆ ಸಂಬಂಧಿಸಿದ ಚಟುವಟಿಕೆಗಳು, ಹತ್ತಿಯ ವಿವಿಧ ಉತ್ಪನ್ನಗಳು, ಹತ್ತಿ ಬೆಳೆಗೆ ಪೂರಕವಾದ ತಂತ್ರಜ್ಞಾನ ಇತ್ಯಾದಿಯನ್ನು ಪರಿಚಯಿಸಲು ವಿಶ್ವ ಹತ್ತಿ ದಿನವನ್ನು ಬಳಸಿಕೊಳ್ಳಬಹುದು. ವಿಶ್ವಸಂಸ್ಥೆಯಿಂದ ಈ ದಿನಕ್ಕೆ ಮಾನ್ಯತೆ ಸಿಕ್ಕಿರುವುದರಿಂದ ಹತ್ತಿ ಉತ್ಪನ್ನಗಳ ಬಗ್ಗೆ ಜಗಜ್ಜಾಹೀರಾಗುವ ರೀತಿಯಲ್ಲಿ ಅರಿವು ಮೂಡಿಸುವುದು ಸುಲಭವಾಗುತ್ತದೆ. ಅಭಿವೃದ್ಧಿಶೀಲ ದೇಶಗಳ ಹತ್ತಿಗೆ ಜಾಗತಿಕ ಮಾರುಕಟ್ಟೆ ಅತ್ಯಂತ ಸುಲಭವಾಗಿ ತೆರೆದುಕೊಳ್ಳುವಂತೆ ಪ್ರಯತ್ನಿಸಬಹುದು.
ಆಹಾ ಮಗು ಎಷ್ಟು ಚೆನ್ನಾಗಿ ಮಲಗಿದೆ! ಈ ಉದ್ಗಾರದ ಹಿಂದೆ ಮಗು ಮಲಗಿದ ಹತ್ತಿಯ ಹಾಸಿಗೆಯ ಪವಾಡವಿದೆ. ವಿಶ್ರಾಂತಿ ಎಂದರೆ ಸುಖ ನಿದ್ದೆ. ದಣಿವು ನೀಗಿ ಸುಖ ಪ್ರಾಪ್ತಿಯಾಗಲು ಹತ್ತಿಯ ಹಾಸಿಗೆ ಮತ್ತು ದಿಂಬು ಬೇಕಲ್ಲವೆ? ಮನುಷ್ಯ ಚಿರನಿದ್ದೆಗೆ ಜಾರಿದಾಗಲೂ, ಎಂದರೆ ಹೆಣದ ಮೇಲೂ ಹೊದೆಸುವುದೂ ಬಿಳಿ ಬಂಗಾರದ ವಸ್ತ್ರ. ಹತ್ತಿಗಿರುವ ಡಿಮಾಂಡ್ ಅಷ್ಟಿಷ್ಟಲ್ಲ.
ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಗಳಿಗೆ ಹತ್ತಿಯೇ ಮೂಲ. ಈಗ ರೇಷ್ಮೆ ಇತ್ಯಾದಿ ಬಂದಿದ್ದಿರಬಹುದಾದರೂ ಬಹಳ ಕಾಲದಿಂದ ಭಾರತದ ವಸ್ತ್ರ ತಯಾರಿಕೆಗೆ ಆಧಾರವಾಗಿರುವುದು ಹತ್ತಿಯೇ. ಪುರಾತನ ಕಾಲದಿಂದಲೂ ಹತ್ತಿಯ ಬಗ್ಗೆ ಮಾನವರಿಗೆ ಅರಿವು ಇದೆ. ಸಾಕ್ಷ್ಯಾಧಾರಗಳ ಪ್ರಕಾರ, ಹತ್ತಿಯಿಂದ ಮಾಡಿದ ಉಡುಪುಗಳನ್ನು ಕ್ರಿಸ್ತಪೂರ್ವ ಆರು ಸಾವಿರ ವರ್ಷಗಳ ಹಿಂದೆಯೇ ಮನುಷ್ಯರು ಧರಿಸುತ್ತಿದ್ದರು. ಸಿಂಧೂ ನದಿ ನಾಗರಿಕತೆ (ಇಂಡಸ್ ವ್ಯಾಲಿ ಸಿವಿಲೈಸೇಶನ್) ಅವಧಿಯಲ್ಲೂ ಹತ್ತಿ ಬಳಕೆ ಮಾಡಲಾಗುತ್ತಿದ್ದುದು ಕಂಡು ಬಂದಿದೆ. ಹತ್ತಿಯಿಂದ ತಯಾರಿಸಲಾದ ಉಡುಪುಗಳು ನೋಡಲು ಅಂದ, ತೊಡಲು ಚಂದ.
ವಿಶ್ವ ಹತ್ತಿ ದಿನದ ಇತಿಹಾಸ: ಬೆನಿನ್, ಬುರ್ಕಿನಾ, ಫಾಸೊ, ಚಾಡ್ ಮತ್ತು ಮಾಲಿ ಈ ನಾಲ್ಕು ದೇಶಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ವಿಶ್ವ ವ್ಯಾಪಾರ ಸಂಸ್ಥೆ ಸಚಿವಾಲಯವು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ , ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ, ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ ಕಾರ್ಯದರ್ಶಿಗಳ ಸಹಯೋಗದೊಂದಿಗೆ ವಿಶ್ವ ಹತ್ತಿ ದಿನದ ಆಚರಣೆಯೊಂದು ಆರಂಭವಾಯಿತು. ಹೀಗಾಗಿ ಹತ್ತಿ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 07, 2019 ರಂದು ಆಚರಿಸಲಾಯಿತು. ವಿಶ್ವಸಂಸ್ಥೆಯು ಹತ್ತಿಯ ದಿನಾಚರಣೆಗೆ ನೀಡಿದ ಆಹ್ವಾನವು ಪರಿಭವ ಪಥದಿಂದ ವೈಭವ ಪಥದೆಡೆಗೆ ಸಾಗಲು ಹತ್ತಿಗೆ ಜತೆಯಾಗುವ ಹೊಸ ಆಖ್ಯಾನಕ್ಕೆ ಮುನ್ನುಡಿಯಾಯಿತು. ಅಂದಿನಿಂದ ಪ್ರತಿವರ್ಷ ಹತ್ತಿಬೆಳೆಯನ್ನು ಉತ್ತೇಜಿಸುವ ಹಾಗೂ ಹತ್ತಿ ಬೆಳೆಗಾರರಿಗೆ ಪ್ರೋತ್ಸಾಹಿಸುವ ಸದುದ್ದೇಶದಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭೂಮಿಯ ಮೇಲೆ ಮಾತ್ರವಲ್ಲ, ಬಾಹ್ಯಾಕಾಶದಲ್ಲಿಯೂ ಹತ್ತಿ ಬೆಳೆಯಯುವ ಸಾಹಸಕ್ಕೆ ಚೀನ ಕೈ ಹಾಕಿತ್ತು. ಚೀನೀ ಬಾಹ್ಯಾಕಾಶ ನೌಕೆ, ʼಚಾಂಗ್ಇ 4ʼ ಮೂಲಕ ಹತ್ತಿ ಬೀಜಗಳನ್ನು ಚಂದ್ರನ ದೂರದ ಭಾಗಕ್ಕೆ ಕಳುಹಿಸಲಾಗಿತ್ತು. 2019 ರಲ್ಲಿ ವಾನ್ ಆಕಾಶನೌಕೆಯೊಳಗೆ ಹತ್ತಿ ಬೀಜಗಳು ಕಾರ್ಮನ್ ಕ್ರೇಟರ್‌ನಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸಿದವು. ಆದರೆ ಆ ಸಸ್ಯಗಳು ಶೀಘ್ರದಲ್ಲೇ ಚಂದ್ರನ ಶೀತ ತಾಪಮಾನಕ್ಕೆ ನಾಶವಾದವು ಎನ್ನಲಾಗಿದೆ. ಪ್ರಯತ್ನ ಮತ್ತೆ ಮುಂದುವರಿಯಲಿದೆ.
ಐಟಿಗಿಂತ ಮೇಟಿಯೇ ಮೇಲು ಎಂಬ ಹೊಚ್ಚ ಹೊಸ ಹೇಳಿಕೆಯಿದೆ. ಕೃಷಿತೋ ನಾಸ್ತಿ ದುರ್ಭಿಕ್ಷಂ ಇದು ಅನುಭವಿಗಳ ಸಾರಭೂತವಾದ ಮಾತು. ಉಷ್ಣವಲಯದ ಕೃಷಿಕ್ಷೇತ್ರದಲ್ಲಿ ಹತ್ತಿಗೆ ಹಿರಿಮೆ ಗರಿಮೆಯಿದೆ. ಆದರೆ ಹವಾಮಾನದ ವೈಪರೀತ್ಯಗಳು ಹತ್ತಿಕೃಷಿಗೆ ಸವಾಲಾಗಿದೆ. ಹೊಸ ತಂತ್ರಜ್ಞಾನದತ್ತ ಹತ್ತಿಯ ಕೃಷಿಕರು ವಾಲುವ ಅಗತ್ಯವಿದೆ. ವಿಶ್ವವು ತನ್ನ ಉತ್ಪಾದನೆಯ ಹತ್ತಿಯ ಶೇಕಡಾ ಎಪ್ಪತ್ತೈದರಷ್ಟನ್ನು ಜವಳಿ ಉದ್ಯಮದಲ್ಲಿ ಬಳಸುತ್ತಿದೆ. ನಮ್ಮ ಮಾನ ರಕ್ಷಣೆಯಲ್ಲಿ ಹತ್ತಿಯ ಸ್ಥಾನ ಹಿರಿದು. ಹಗಲಿರಲಿ ಇರುಳಿರಲಿ ದೇಹದ ಉಷ್ಣತೆಯನ್ನು ಸರಿದೂಗಿಸಿ ಆರೋಗ್ಯರಕ್ಷಣೆಯ ಮೇಲ್ಮೆ ಮೆರೆಯಲು ಹತ್ತಿಯುಡುಗೆಗಳೇ ಬೇಕು. ದೇವರ ಪೂಜೆಯಲ್ಲೂ ಹತ್ತಿಗೆ ಅಗ್ರಸ್ಥಾನ. ದೀಪ ಮತ್ತು ಆರತಿಗಳಲ್ಲಿ ಹತ್ತಿಗೆ ಅಗ್ರಸ್ಥಾನ. ದೇರಿಗೆ ತೊಡಿಸುವ ಹಾರದಲ್ಲೂ ಹತ್ತಿಯ ದಾರವಿರುತ್ತದೆ. ಪೂಜಾ ಕೋಣೆ, ಪೂಜಾ ಪಾತ್ರೆಗಳು, ಪೂಜಾ ಮೂರ್ತಿಗಳ ಶುಚಿತ್ವದಲ್ಲಿ ಹತ್ತಿಯ ಬಟ್ಟೆಗಷ್ಟೇ ಆದ್ಯತೆ. ನಿತ್ಯ ನಮ್ಮೊಡನೆ ಇರುವ ಕರವಸ್ತ್ರ ಹತ್ತಿಯಾಧಾರಿತ. ಸ್ನಾನದ ಪರಿಪೂರ್ಣತೆಗೆ ಹತ್ತಿಯ ಅಂಗವಸ್ತ್ರವೇ ಬೇಕು.
(ಮುಂದುವರಿಯುತ್ತದೆ...)
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************