ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 113
Wednesday, January 14, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 113
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ರಾತ್ರಿ ಎಂತಹ ದೊಡ್ಡ ಶಬ್ಧ ಆಗಿದೆ ಅಲ್ವಾ? ಹೌದಾ ನನಗೆ ನಿದ್ದೆ ಬಂದಿತ್ತು. ರೈಲಿನಲ್ಲಿ ಹೋಗುವಾಗ ನಿದ್ದೆ ಬಂದು ಬಿಟ್ಟಿತ್ತು. ಆದ್ದರಿಂದ ಎರಡು ಸ್ಟೇಷನ್ ನಂತರ ಇಳಿದೆ. ಈ ಎರಡು ಘಟನೆಗಳಿಂದ ನಿದ್ದೆ ಎಂಬುದು ಒಂದು ಏನೂ ಅರಿವಾಗದ ನಿಷ್ಕ್ರಿಯ ಅವಧಿ ಅನ್ನಿಸುತ್ತದೆ ಅಲ್ಲವೇ? ದ ರಾ ಬೇಂದ್ರೆಯವರಂತೂ ಇನ್ನು ಒಂದು ಹೆಜ್ಜೆ ನಿದ್ದೆಯನ್ನು ಮರಣ ಎಂದು ಭಾವಿಸಿ "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಗದೇಕೆ ಬಾರದೋ" ಎಂದು ಬೇಡಿದ್ದಾರೆ. ನಮಗೆಲ್ಲ ಚಲನೆಯಿಲ್ಲದ ನಿಶ್ಚಲ ನಿದ್ದೆ ಜೀವಶಾಸ್ತ್ರೀಯವಾಗಿ ಏನು ಎಂದು ನೋಡೋಣ.
ಜೀವ ಶಾಸ್ತ್ರೀಯವಾಗಿ ನಿದ್ದೆ ಎನ್ನುವುದು ಮೆದುಳು ಮತ್ತು ದೇಹ ಪುನಶ್ಚೇತನಗೊಳ್ಳುವ ಒಂದು ಸಂಕೀರ್ಣ ಹಾಗೂ ಸಕ್ರಿಯ ಅವಧಿ. ಇಷ್ಟೊಂದು ಸಕ್ರಿಯವಾಗಿದ್ದರೂ ಇದು ಹೊರಗಿನ ಪರಿಸರದೊಂದಿಗೆ ವ್ಯವಹಾರ ಮಿತಗೊಳಿಸಿ ನಿರಂತರವಾಗಿ NREM ಮತ್ತು REM ಗಳ ನಡುವೆ ಹೊರಳುತ್ತಾ ಪೂರ್ಣಗೊಳ್ಳುತ್ತದೆ. ಜೀವಮಾನವಿಡೀ ಸಕ್ರಿಯವಾಗಿರುವುದರಿಂದ ವಿಮುಖಗೊಳಿಸುವ ಈ ನಿದ್ದೆ ಈ ಚಕ್ರ ಯಾಕಾದರೂ ಬೇಕಪ್ಪ ಅಂದುಕೊಂಡಿದ್ದೀರಾ..
ನಿದ್ದೆ ಎಂಬುದು ಪ್ರಮುಖ ಘಟನೆಗಳ ಸರಮಾಲೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ರಿಪೇರಿ ಮತ್ತು ಬೆಳವಣಿಗೆಯ ಹಂತ. ಇದು ಕಲಿಕೆಗೆ (learning), ಸ್ಮರಣ ಶಕ್ತಿಯ (memory), ರೋಗ ನಿರೋಧಕ ಶಕ್ತಿಗಳ ಮರುಕಳಿಕೆಗೆ ನಿದ್ದೆಯೇ ಮದ್ದು. ಒಟ್ಟಾರೆಯಾಗಿ ಹೇಳಬೇಕೆಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಪುನಶ್ಚೇತನದ ಅವಧಿಯೇ ನಿದ್ದೆ. ಪಂಜೆ ಮಂಗೇಶರಾಯರು ನಾಗರಹಾವು ಪದ್ಯದಲ್ಲಿ ಹೇಳಿದ ಹಾಗೆ "ಬರಿಮೈ ತಣ್ಣಗೆ ಮನದಲಿ ಬಿಸಿಹಗೆ" ಎಂಬಂತಹ ಸ್ಥಿತಿ ಈ ನಿದ್ದೆಯದ್ದು. ನಿದ್ದೆಯೆಂದರೆ ಸುಳಿಗಳಿರುವ ಕೆರೆಯಲ್ಲಿಳಿದಂತೆ. ಮೇಲ್ಗಡೆ ಶಾಂತವಾಗಿದ್ದರೂ ಒಳಗೆ ಒಳಸುಳಿಗಳೇ. ಮೆದುಳು ಬಹಳ ಚಟುವಟಿಕೆಯಿಂದ ಮೆದುಳು ತನ್ನ ಮನೆ ನಿರ್ವಹಣೆ (housekeeping) ಮಾಡುತ್ತಾ ದೇಹದಲ್ಲಿರುವ ವಿಷ ವಸ್ತುಗಳನ್ನು (toxins) ಹೊರಹಾಕುತ್ತಾ ನರ ಸಂಪರ್ಕಗಳನ್ನು +neural connections) ಬಲಗೊಳಿಸುವ ಕೆಲಸ ತ್ವರಿತವಾಗಿ ನಡೆಯುತ್ತಲೇ ಇರುತ್ತದೆ. ಅಂದರೆ ನಿದ್ದೆ ಎಂಬುದು ಆಹಾರ ಮತ್ತು ನೀರಿನಷ್ಟೇ ಮುಖ್ಯವಾದುದು.
ಒಂದು ಸ್ವಸ್ಥ ನಿದ್ದೆ ಪ್ರತಿಯೊಂದು ಅಂಗಾಂಶಗಳನ್ನು (tissues), ಶರೀರದ ವಿವಿಧ ವ್ಯೂಹಗಳನ್ನು (systems) ಮಾರ್ಪಡಿಸುತ್ತದೆ. ಉದಾಹರಣೆಗೆ ಮೆದುಳು ಹೃದಯ, ಶ್ವಾಸಕೋಶ, ರೋಗ ನಿರೋಧಕ ವ್ಯವಸ್ಥೆ, ಚಯಾಪಚಯ ಕ್ರಿಯೆ, ಮಾನಸಿಕ ಸ್ಥಿತಿ ಪ್ರತಿಯೊಂದೂ ಪ್ರಭಾವಿಸಲ್ಪಡುತ್ತದೆ. ಈ ನಿದ್ದೆಯಲ್ಲಿ ವ್ಯತ್ಯಯವಾದರೆ ರಕ್ತದ ಒತ್ತಡ, ಮಧು ಮೇಹ, ಹೃದಯ ಸಂಬಂಧಿ (cardiovascular) ರೋಗಗಳು ಮುಂಗೋಪ, ಖಿನ್ನತೆ, ಬೊಜ್ಜು ಇತ್ಯಾದಿ ಕಾಡುತ್ತವೆ. ಆದ್ದರಿಂದ ನಿದ್ದೆ ಒಂದು ದಿವ್ಯೌಷಧ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************