ಜೀವನ ಸಂಭ್ರಮ : ಸಂಚಿಕೆ - 224
Tuesday, January 13, 2026
Edit
ಜೀವನ ಸಂಭ್ರಮ : ಸಂಚಿಕೆ - 224
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ನಿರ್ಮಮದ ಬಗ್ಗೆ ತಿಳಿದುಕೊಳ್ಳೋಣ. ನಿರ್ಮಮ ಎಂದರೆ, ಯಾವುದೇ ವಸ್ತು, ವ್ಯಕ್ತಿ, ಸಂಗತಿ ಮತ್ತು ವಿಚಾರಗಳಿಗೆ ಅತಿಯಾಗಿ ಅಂಟಿಕೊಳ್ಳದೆ ಇರುವುದು. ಏಕೆ ಅತಿಯಾಗಿ ಅಂಟಿಕೊಳ್ಳಬಾರದು?. ಅತಿಯಾಗಿ ಅಂಟಿಕೊಂಡರೆ ಮೋಹ ಹೆಚ್ಚಾಗುತ್ತದೆ. ಕಡೆಗೆ ದುಃಖವಾಗುತ್ತದೆ. ಮತ್ತೆ ಸಮಾಧಾನ ಕಳೆದುಕೊಳ್ಳುತ್ತೇವೆ. ಹೇಗೆ ಅಂತ ನೋಡೋಣ?.
ಈ ಜಗತ್ತಿನಲ್ಲಿ ಏನೇನು ಇದೆ, ಅದು ಕಾಯಂ ಆಗಿ ನನ್ನದು ಅಂತ ಇರೋದಿಲ್ಲ. ಯಾವುದೇ ವಸ್ತು ಕೆಲವು ಕಾಲದವರೆಗೆ ನನ್ನದಾಗಿ ಇರುತ್ತದೆ. ಆ ಕಾಲ ಹೋಯ್ತು ಅಂದರೆ ಆ ವಸ್ತುವಿನ ಮಾಲೀಕತ್ವ ಕಳೆದುಕೊಳ್ಳುತ್ತೇವೆ. ಭಾರತ ದೇಶವಾಗಲಿ, ಬೇರೆ ಯಾವ ದೇಶವಾಗಲಿ, ಇತಿಹಾಸ ನೋಡಿದರೆ ರಾಜರು, ಮಹಾರಾಜರು, ಸಂಸ್ಥಾಪಕರು ಇದ್ದರು. ಆ ಪ್ರದೇಶ ಕೆಲವೊಮ್ಮೆ ಇವರದಾದರೆ ಮತ್ತೊಮ್ಮೆ ಬೇರೆಯವರಾದಾಗಿರುತ್ತಿತ್ತು. ಕೇವಲ ಲೆತ್ತ ಆಟ ಆಡಿ ಸೋತಿದ್ದರಿಂದ ಪಾಂಡವರ ರಾಜ್ಯ ಕೌರವರದಾಗಿತ್ತು. ಪಾಂಡವರ ಹೆಂಡತಿ ಕೌರವರ ಸ್ವತ್ತಾಗಿದ್ದಳು. ಕೇವಲ ಲೆತ್ತದಿಂದ ಮಾಲೀಕತ್ವ ಬದಲಾಗಿತ್ತು. ಅಂದರೆ ಮಾಲೀಕತ್ವ ಅನ್ನುವುದು ಅಸ್ಥಿರವಾದದ್ದು. ಆಶಾಶ್ವತ. ಯಾವುದೋ ಒಂದು ಸಣ್ಣ ಪುಟ್ಟ ಕಾರಣಕ್ಕೆ ಮಾಲೀಕತ್ವ ಕಳೆದುಕೊಳ್ಳುತ್ತೇವೆ. ಭಯಂಕರ ಯುದ್ಧ ಮಾಡಿ ಒಂದು ದೇಶ ಗೆಲ್ಲುತ್ತೇವೆ. ಸಾಮ್ರಾಜ್ಯ ವಿಸ್ತಾರ ಮಾಡುತ್ತೇವೆ. ಇನ್ನೇನು ಈ ಸಾಮ್ರಾಜ್ಯ ನನ್ನದು ಎಂದು ಭಾವಿಸುತ್ತೇವೆ. ಲಕ್ಷಾಂತರ ಪ್ರಜೆ, ತುಂಬಿದ ಭಂಡಾರ, ಲಕ್ಷಾಂತರ ಸೈನಿಕರು ಇಂತಹ ಚಕ್ರಾಧಿಪತಿ ಆಗಿದ್ದರು. ಈಗ ಉಳಿದಿಲ್ಲ. ನೆಪೋಲಿಯನ್ ಬೋನಾಪಾರ್ಟ್, ಫ್ರಾನ್ಸ್ ದೇಶದಲ್ಲಿ ತುಂಬಾ ಹೆಸರುವಾಸಿ. ಸಾಮಾನ್ಯ ಬಡ ಹುಡುಗ ಸಾಮ್ರಾಟನಾದ. ಬಾಲ್ಯದಲ್ಲಿ ಒಂದು ಹಣ್ಣು ಕೊಂಡುಕೊಳ್ಳಲು ಅವನ ಬಳಿ ಹಣವಿರಲಿಲ್ಲ. ಇಂತಹ ಹುಡುಗ ಒಂದು ಕಾಲದಲ್ಲಿ ಯುರೋಪ್ ದೇಶ ಆಳುತ್ತಾ ಇದ್ದನು. ಒಂದು ಕಾಲದಲ್ಲಿ ಒಂದು ಹಣ್ಣು ಖರೀದಿಸಲು ಹಣವಿರಲಿಲ್ಲ. ಇಲ್ಲದ ಸಂಪತ್ತು ಈಗ ಸಂಪತ್ತಿನ ಒಡೆಯನಾಗಿದ್ದನು. ಆದರೆ ಅದು ಹಾಗೆ ಉಳಿಯಲಿಲ್ಲ. ಮುಂದೆ ಸ್ವಲ್ಪ ವರ್ಷದಲ್ಲಿ ಮತ್ತೆ ಯುದ್ಧ ಆಯ್ತು, ನೆಪೋಲಿಯನ್ ಬೋನಾಪಾರ್ಟ್ ಸೋತನು. ಆತನನ್ನು ಕೈದಿಯನ್ನಾಗಿ ಮಾಡಿ ಸೆಂಟ್ ಹೆಲೆನ್ ದ್ವೀಪದಲ್ಲಿ ಬಂದಿಖಾನೆಯಲ್ಲಿಟ್ಟಿದ್ದರು. ಇದರ ಅರ್ಥ ಸಂಪತ್ತು ಓಮ್ಮೆ ಅವರದಾದರೆ ಮತ್ತೊಮ್ಮೆ ಇವರದಾಗುತ್ತದೆ. ಅಂದರೆ ಯಾರದಾಗುತ್ತೋ ಹೇಳೋದಿಕ್ಕೆ ಬರುವುದಿಲ್ಲ.
ಈಗ ಅಂಗಡಿಯಿಂದ ಯಾವುದೇ ವಸ್ತು ಖರೀದಿಸಿದರು, ಆ ವಸ್ತುವಿಗೆ ಅಂಗಡಿಯವನು ವಾರಂಟಿ ಹೇಳುತ್ತಾನೆ. ಅಂದರೆ ಇಷ್ಟು ದಿನ ಬಾಳಿಕೆ ಬರುತ್ತದೆ ಅಂತ. ಆದರೆ ಅರ್ಥ ಆ ವಸ್ತುವಿಗೆ ನಾನು ಅಷ್ಟೇ ದಿನ ಮಾಲೀಕ. ಗ್ರಾಮೀಣ ಗಾದೆ ಅತ್ತೆಗೊಂದು ಕಾಲ, ಸೊಸೆಗೆ ಒಂದು ಕಾಲ. ಕಾಲಸರಿದಂತೆ ಮಾಲೀಕತ್ವ ಬದಲಾಗುತ್ತದೆ. ಅತ್ತೆ, ಸೊಸೆಯನ್ನು ಹುಡುಕಿ ತಂದು ಮಗನಿಗೆ ಮದುವೆ ಮಾಡುತ್ತಾಳೆ. ಆಕೆಯೇ ಮುಂದಿನ ಮಾಲೀಕಳು ಅನ್ನುತ್ತಾಳೆ. ಆದರೆ ಮಾಲೀಕತ್ವ ನೀಡಬೇಕು. ಆದರೆ ನೀಡಬೇಕೆನಿಸಿದಾಗ ಅಸಮಾಧಾನ ಉಂಟಾಗುತ್ತದೆ. ಪ್ರಸಂಗ ಬಂದಾಗ ಅದು ಉಳಿಯುವುದಿಲ್ಲ, ಅಂತ ತಲೆಯಲ್ಲಿ ಹಾಕಿಕೊಂಡಿದ್ದರೆ ಅಸಮಾಧಾನವಾಗುವುದಿಲ್ಲ.
ಯಾವುದೇ ಮಾಲೀಕತ್ವ ಇರಲಿ, ಈಗ ಸೌಂದರ್ಯ ಇದೆ. ಸೌಂದರ್ಯದ ಮಾಲೀಕ ನಾನು. ಆದರೆ ಎಷ್ಟು ದಿನ?. ಶಕ್ತಿಯ ಮಾಲೀಕ ನಾನು, ಎಷ್ಟು ದಿನ?. ಜನರ ಪ್ರೀತಿ ಗಳಿಸಿದ ಮಾಲೀಕ ನಾನು, ಎಷ್ಟು ದಿನ?. ಇದೆಲ್ಲಾ ಹೊಯ್ದಾಡೋ ಎಲೆಗಳು. ಗಾಳಿ ಬೀಸದಿದ್ದರೆ ನಿಂತಂಗೆ ಇರುತ್ತದೆ. ಒಂದೇ ಕಡೆ ಇರುತ್ತದೆ. ಗಾಳಿ ಬೀಸಿತು ಅಂದರೆ ಎಲೆಗಳ ಹೊಯ್ದಾಟ ಶುರುವಾಗುತ್ತದೆ. ಹಾಗೆ ಕಾಲದ ಗಾಳಿ ಬೀಸಿತು ಅಂದರೆ ನಮ್ಮ ವಸ್ತುಗಳು ಹೊಯ್ದಾಟ ಶುರುಮಾಡುತ್ತದೆ. ರಾಮಾಯಣದಲ್ಲಿ ಒಬ್ಬರಲ್ಲಿ ಇದ್ದ ವಸ್ತು ಬೇರೊಬ್ಬರಲ್ಲಿ ಹೊಯ್ದಾಡಿತ್ತು. ಯಾವುದೆ ಆಗಿರಲಿ ಎಲ್ಲಾ ಕಾಲಕ್ಕೂ ಒಬ್ಬರದಾಗಿ ಇರುವುದಿಲ್ಲ. ಇದೇ ಜಗತ್ತಿನ ವಿಸ್ಮಯ. ಇದನ್ನು ಸ್ಪಷ್ಟವಾಗಿ ತಿಳಿದಿದ್ದರೆ ತಲೆ ಸಮಾಧಾನದಿಂದ ಇರುತ್ತದೆ. ಯಾರು ಸರಿಯಾಗಿ ತಿಳಿದಿರುತ್ತಾನೋ ಆತ ಸಂಸಾರ ಸಾಗರದಲ್ಲಿ ತೇಲುತ್ತಾನೆ.
ಯಾವುದೇ ಇರಲಿ ಶಾಶ್ವತವಾಗಿ ನನ್ನದಾಗಿರುವುದಿಲ್ಲ ಅಂತ ಖಚಿತವಾಗಿ ಹಾಕಿಕೊಂಡಿರುವುದು ನಿರ್ಮಮ. ಈ ಮಾತು ಮನಸ್ಸನ್ನು ಸ್ವಚ್ಛಗೊಳಿಸಿ ಸಮಾಧಾನ ಉಂಟುಮಾಡುತ್ತದೆ. ನಮ್ಮದಾಗೆ ಇರಬೇಕು. ಯಾವಾಗಲೂ ಇರಬೇಕು ಅನ್ನುವುದು ಈ ಜಗತ್ತಿನಲ್ಲಿ ಅಸಾಧ್ಯ. ಯಾವ ಸಾಮಾನು ? ಯಾವ ವ್ಯಕ್ತಿ?. ಯಾವಾಗ?. ನಮ್ಮದು ಯಾವಾಗ?. ನಮ್ಮದು ಯಾವಾಗ ಅಲ್ಲವೋ ಹೇಳಲಿಕ್ಕೆ ಬರದಂತಹ ಸ್ಥಿತಿ ಈ ಜಗತ್ತಿನೊಳಗೆ ಇದೆ. ವಸ್ತುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆಯೊ ಹಾಗೆ ಜಗತ್ತು ನಮ್ಮನ್ನು ಬಳಸಿಕೊಳ್ಳುತ್ತದೆ. ನಾವು ಯಾವಾಗ ಎಲ್ಲಿಗೆ ಹೋಗುತ್ತೇವೆ ಅಂತ ನಮಗೆ ಗೊತ್ತಿಲ್ಲ. ಆದರೆ ನಾವು ತಿಳಿದುಕೊಳ್ಳುವುದು ಮಾಲೀಕ. ನಾನೇ ಹೌದು. ಆದರೆ ಖಾಯಂ ಮಾಲಿಕ ನಾವಲ್ಲ. ಹೊರಗೆ ಹೇಳುವಾಗ ನಾನೇ ಮಾಲೀಕ ಅಂತ ಹೇಳು. ಒಳಗೆ ನಿನ್ನೊಳಗೆ ಹೇಳಿಕೋ ನಾನು ಖಾಯಂ ಮಾಲಿಕ ಅಲ್ಲ ಅಂತ. ಉದಾಹರಣೆಗೆ, ನಮಗೆ ಪಿತ್ರಾಜಿತ ಆಸ್ತಿ ಅಂತ ಹೇಳುತ್ತೇವೆ. ನಮ್ಮ ತಂದೆ ತಾತನ ಹೆಸರಿನಲ್ಲಿತ್ತು ಅನ್ನುತ್ತೇವೆ. ಆದರೆ ಅವರ ಹಿಂದಿನ ಹೆಸರು ನಮಗೆ ಗೊತ್ತಿಲ್ಲ. ಅವರು ಕಾಯಂ ನನ್ನದೇ ಅಂದುಕೊಂಡಿದ್ದರು. ಆದರೆ ಅವರು ಇಂದಿಲ್ಲ. ಆಸ್ತಿ ಇದೆ. ಮುಂದೆ ಬೇರೆಯವರು ಅದರ ಮಾಲೀಕರು ಆಗುತ್ತಾರೆ. ನಮ್ಮ ಹೆಸರು ಹೋಗುತ್ತದೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ ಗೊತ್ತಿರದಂತೆ ಬದುಕುತ್ತಿದ್ದೇವೆ ಇದಕ್ಕೆ ಮಾಯಾ ಎನ್ನುವರು. ಇದರಿಂದ ಅಸಮಾಧಾನ ಉಂಟಾಗುತ್ತದೆ ಅಲ್ಲವೆ ಮಕ್ಕಳೇ. ಆದುದರಿಂದ ನಾವು ಯಾವುದೇ ವಸ್ತು, ವ್ಯಕ್ತಿ, ಸಂಗತಿ ಮತ್ತು ವಿಚಾರಗಳಿಗೆ ಅತಿಯಾಗಿ ಅಂಟಿಕೊಳ್ಳಬಾರದು ಅಲ್ಲವೇ..?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************