ಸ್ಫೂರ್ತಿಯ ಮಾತುಗಳು : ಸಂಚಿಕೆ - 198
Monday, January 5, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 198
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಇದು ಶ್ರೀಮಂತನೊಬ್ಬನ ಕತೆ. ಆತ ಒಂದು ಶಹರದಲ್ಲಿ ವಾಸವಾಗಿದ್ದ. ಶ್ರೀಮಂತನೆಂದ ಮೇಲೆ ಹಣಕ್ಕೆಲ್ಲಿಯ ಕೊರತೆ? ಇದೇ ವಿಷಯ ಆತನಿಗೆ ಅಹಂಕಾರ ಬರುವಂತೆ ಮಾಡಿತ್ತು. ತಾನು ಏನು ಬೇಕಾದರೂ ಮಾಡಬಲ್ಲೆನೆಂಬ ಅಹಂಕಾರ ಆತನಲ್ಲಿ ಮನೆಮಾಡಿತ್ತು.
ಒಂದು ಬಾರಿ ಆತನ ಕಣ್ಣಿನಲ್ಲಿ ಇನ್‌ಫೆಕ್ಷನ್ ಆಯಿತು. ಬಹಳ ಕಣ್ಣುರಿಯಿಂದ ಬಳಲತೊಡಗಿದ. ವೈದ್ಯರ ಬಳಿ ಹೋದ. ಆದರೆ ಯಾವ ವೈದ್ಯರಿಗೂ ಅದನ್ನು ಗುಣಪಡಿಸಲಾಗಲಿಲ್ಲ. ಆತನ ಬಳಿ ಬಹಳಷ್ಟು ಹಣವಿತ್ತು. ಆತ ದೇಶವಿದೇಶಗಳಿಂದ ಅನೇಕ ವೈದ್ಯರನ್ನು ಕರೆಸಿಕೊಂಡ. ಕೊನೆಗೆ ಒಬ್ಬ ಹಿರಿಯ ವೈದ್ಯರು ಅವನ ರೋಗದ ಲಕ್ಷಣ ಕಂಡುಹಿಡಿದರು. "ನಿಮ್ಮ ಕಣ್ಣಿಗೆ ಅಲರ್ಜಿ ಇದೆ. ನೀವು ಕೆಲವು ದಿನಗಳವರೆಗೆ ಹಸಿರು ಬಣ್ಣವನ್ನು ಮಾತ್ರ ನೋಡುತ್ತಿರಬೇಕು. ಬೇರೆ ಯಾವುದೇ ಬಣ್ಣವನ್ನು ನೋಡಿದರೂ ಕಣ್ಣಿಗೆ ತೊಂದರೆಯಾಗುತ್ತದೆ" ಎಂದು ಎಚ್ಚರಿಕೆ ನೀಡಿದರು. ಇಷ್ಟಾದ ನಂತರ ಏನು ಮಾಡುವುದೆಂದು ಶ್ರೀಮಂತ ಯೋಚಿಸಿದ. ತಕ್ಷಣವೇ ಊರಲ್ಲಿರುವ ದೊಡ್ಡ ದೊಡ್ಡ ಪೇಂಟರ್ ಗಳಿಗೆ ಕರೆ ಕಳುಹಿಸಿದ. ತನ್ನ ಇಡೀ ಬಂಗಲೆಗೆ ಹಸಿರು ಬಣ್ಣ ಬಳಿಯುವಂತೆ ಸೂಚಿಸಿದ. "ನನಗೆ ಹಸಿರು ಬಣ್ಣದ ಹೊರತಾಗಿ ಬೇರೇನೂ ಕಾಣಬಾರದು. ನಾನು ತಿರುಗಾಡುವ ಜಾಗದಲ್ಲೆಲ್ಲ ಇದೇ ಬಣ್ಣ ಹಚ್ಚಿ" ಎಂದು ಹೇಳಿದ. ಈ ಕಾರ್ಯಕ್ಕೆ ಬಹಳಷ್ಟು ಹಣ ಖರ್ಚಾಗತೊಡಗಿತು. ಇಷ್ಟಾದರೂ ಶ್ರೀಮಂತನ ಕಣ್ಣಿಗೆ ಬೇರೆ ಬಣ್ಣ ಕಂಡೇ ಕಾಣುತ್ತಿತ್ತು. ಇಡೀ ಊರಿಗೆ ಬಣ್ಣ ಹಚ್ಚಿಸುವುದು ಸಾಧ್ಯವಿಲ್ಲವಲ್ಲ?
ಒಮ್ಮೆ ಆ ಊರಿನಿಂದ ಒಬ್ಬ ಸಾಧು ಹಾದುಹೋಗುತ್ತಿದ್ದರು. ಅವರು ಸುತ್ತಲೂ ಹಸಿರು ಬಣ್ಣದ ಕಟ್ಟಡಗಳನ್ನು ನೋಡಿದರು. "ಏಕೆ ಈ ರೀತಿ?" ಎಂದು ಊರವರನ್ನು ಕೇಳಿದರು. ವಿಷಯವನ್ನೆಲ್ಲ ತಿಳಿದುಕೊಂಡ ಮೇಲೆ ಅವರು ನೇರವಾಗಿ ಶ್ರೀಮಂತನ ಬಳಿ ತೆರಳಿದರು. "ಅಯ್ಯಾ, ನೀವು ಇಷ್ಟು ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ. ನಿಮ್ಮ ಸಮಸ್ಯೆಗೆ ನನ್ನ ಬಳಿ ಪರಿಹಾರವಿದೆ. ನೀವು ಒಂದು ಹಸಿರು ಕನ್ನಡಕ ಖರೀದಿಸಿ ಧರಿಸಿಕೊಂಡರೆ ಸಾಕು, ನಿಮಗೆ ಎಲ್ಲವೂ ಹಸಿರಾಗಿ ಕಾಣುತ್ತದೆ" ಎಂದು ಹೇಳಿದರು. ಶ್ರೀಮಂತ ಬಿಟ್ಟ ಕಣ್ಣು ಬಿಟ್ಟಂತೆ ನೋಡತೊಡಗಿದ. ಅವನ ತಲೆಯಲ್ಲಿ ಈ ವಿಚಾರ ಬಂದಿರಲೇ ಇಲ್ಲ. ಆತ ಸುಖಾಸುಮ್ಮನೆ ಹಣ ಖರ್ಚು ಮಾಡುತ್ತಲೇ ಇದ್ದ. ನಮ್ಮ ಆಲೋಚನೆ ಮತ್ತು ನೋಡುವ ದೃಷ್ಟಿಕೋನಗಳು ಬಹಳಷ್ಟು ವಿಚಾರಗಳ ಮೇಲೆ ಪ್ರಭಾವ ಬೀರುತ್ತವೆ. ಅನೇಕ ಬಾರಿ ಸಮಸ್ಯೆಗಳಿಗೆ ಪರಿಹಾರ ಬಹು ಸುಲಭವಾಗಿರುತ್ತದೆ. ಆದರೆ ನಾವು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ.
ಶ್ರೀ ರಾಜಾರಾಮ ಮಹಾರಾಜರು, 'ಸದ್ಗುರು ವಾಚೋನಿ ದುಃಖ ತೋಡವಿತಾ, ನ ದಿಸೇ ಪಾಹತಾ ತ್ರಿಭುವನಿ' ಎಂದಿದ್ದಾರೆ. ಅಂದರೆ, ನಮ್ಮೆಲ್ಲ ಸಮಸ್ಯೆಗಳಿಗೆ ಗುರು ಮಾತ್ರ ಸರಳ ಪರಿಹಾರ ಸೂಚಿಸಬಲ್ಲರು ಎಂದು ಬಣ್ಣಿಸಿದ್ದಾರೆ. ನಮಗೆ ಸಮಸ್ಯೆಗಳಿರದ ದಿನಗಳು, ಸಮಸ್ಯೆಯಾಗದ ವಿಚಾರಗಳು ಇರದು. ಎಲ್ಲರದರೊಳಗೂ ಸಮಸ್ಯೆಯನ್ನು ಹುಡುಕುವ ಸೂಕ್ಷ್ಮ ( ಕುರೂಪಿ) ಮನಸ್ಸು ನಮ್ಮದು. ಸಮಸ್ಯೆಯನ್ನು ನುಂಗುತ್ತೇವೆ; ಯಾರೊಡನೆಯೂ ಹಂಚಿಕೊಳ್ಳುವುದಿಲ್ಲ. ಮನದೊಳಗೆ ಕುದಿಯುವ ಸಮಸ್ಯೆಗಳ ಸಂಖ್ಯೆ ಏರುತ್ತಿರುತ್ತವೆಯೇ ಹೊರತು ಪರಿಹಾರ ಎತ್ತಿನ ಕೋಡಿನಲ್ಲೇ ಇರುತ್ತದೆ. ಮನಸ್ಸಿನೊಳಗೆ ಬೆಳೆಯುವ ಸಮಸ್ಯೆಗಳು ನಮ್ಮ ಹೃದಯ ಸ್ಥಂಬನಕ್ಕೆ ಕಾರಣವಾದರೂ ವಿಶೇಷವಲ್ಲ. ಸಮಸ್ಯೆಗಳಿಗೆ ಆಯಾ ದಿನವೇ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ನಮ್ಮ ಸಮಸ್ಯೆಗಳನ್ನು ಇತರರಿಗೆ ಉಣ ಬಡಿಸಬೇಕು, ಅವರು ಗುರುಗಳಿರಬಹುದು, ಗೆಳೆಯರಿರಬಹುದು, ಹೆತ್ತವರು, ಸೋದರ ಸೋದರಿಯರು, ಒಡಹುಟ್ಟಿದವರು... ಹೀಗೆ ಇವರ ಮುಂದೆ ಸಮಸ್ಯೆಯನ್ನು ಮುಕ್ತವಾಗಿಟ್ಟಾಗ ಯಾರಾದರು ಒಬ್ಬರು ಸೂಕ್ತವಾದ ಪರಿಹಾರ ನೀಡಿಯೇ ನೀಡುವರು.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************