ಜೀವನ ಸಂಭ್ರಮ : ಸಂಚಿಕೆ - 223
Sunday, January 4, 2026
Edit
ಜೀವನ ಸಂಭ್ರಮ : ಸಂಚಿಕೆ - 223
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ಈ ಕಥೆ ಓದಿ. ನಾಲ್ಕು ಮಂದಿ ಗೆಳೆಯರು ವ್ಯಾಪಾರ ಮಾಡಲು ತೀರ್ಮಾನಿಸಿದರು. ಆಗಿನ ಕಾಲದಲ್ಲಿ ವ್ಯಾಪಾರ ಮಾಡಲು ಹಳ್ಳಿಹಳ್ಳಿಗೆ ಹೋಗಬೇಕಾಗಿತ್ತು. ನಾಲ್ಕು ಮಂದಿ ಸ್ನೇಹಿತರು ಸಮನಾಗಿ ಬಂಡವಾಳ ಹಾಕಿ, ಬಟ್ಟೆ ಖರೀದಿಸುವುದು. ಬಂದ ಲಾಭ ಸಮನಾಗಿ ಹಂಚಿಕೊಳ್ಳುವುದು ಎಂದು ತೀರ್ಮಾನಿಸಿದರು. ವ್ಯಾಪಾರ ಜೊತೆಯಾಗಿ ಮಾಡೋಣ ಎಂದು ತೀರ್ಮಾನಿಸಿ, ಹಳ್ಳಿ ಹಳ್ಳಿಗೆ ಹೋದರು. ಸಾಕಷ್ಟು ಹಳ್ಳಿಗಳಲ್ಲಿ ಸುತ್ತಾಡಿ, ಬಟ್ಟೆ ವ್ಯಾಪಾರ ಮಾಡಿಕೊಂಡು ಊರಿಗೆ ವಾಪಸ್ ಆಗಲು ತೀರ್ಮಾನಿಸಿದರು. ಹಾಕಿದ ಬಂಡವಾಳ ಲಾಭ ತಂದಿತ್ತು. ಆ ದಿನ ಸಂಜೆಯಾಯಿತು. ಮಲಗಲು ಜಾಗ ಹುಡುಕುತ್ತಿದ್ದರು. ಆಗ ಸಮೀಪದಲ್ಲಿ ಒಂದು ಗುಡಿಸಲು ಕಂಡಿತು. ಅಲ್ಲೇ ಹೋಗಿ ಮಲಗೋಣ ಎಂದು ತೀರ್ಮಾನಿಸಿದರು. ಆ ಗುಡಿಸಲ ಬಲಿ ಹೋಗಿ ಬಾಗಿಲು ತಟ್ಟಿದರು. ಒಳಗಿನಿಂದ ಒಬ್ಬಳು ಮುದುಕಿ ಬಂದು ಬಾಗಿಲು ತೆರೆದಳು. ಆ ಮುದುಕಿ ಮುಂದೆ ಈ ದಿನ ಮಲಗಲು ಅವಕಾಶ ಮಾಡಿಕೊಡಿ ಎಂದು ನಾಲ್ಕು ಮಂದಿ ಸ್ನೇಹಿತರು ಕೇಳಿದರು. ಅದಕ್ಕೆ ಮುದುಕಿ ಆಗಲಿ, ನಾನೊಬ್ಬಳೇ ಇರುವುದು, ಬನ್ನಿ ಎಂದು ನಾಲ್ಕು ಮಂದಿಗೂ ಊಟ ಮಾಡಿ ಬಡಿಸಿದಳು. ಮಲಗಲು ಹಾಸಿಗೆ ಹೊದಿಕೆ ನೀಡಿದಳು. ಆಗ ಈ ನಾಲ್ಕು ಮಂದಿ ಗಳಿಸಿದ್ದ ಹಣವನ್ನು ಒಂದು ಚೀಲದಲ್ಲಿ ಹಾಕಿ ಮುದುಕಿಯ ಕೈಗೆ ನೀಡುತ್ತಾ ಹೇಳಿದರು, "ಅಜ್ಜಿ, ನಾವು ನಾಲ್ಕು ಮಂದಿ ಒಟ್ಟಾಗಿ ಬಂದು ಕೇಳಿದಾಗ ಕೊಡಬೇಕು" ಎಂದರು. ಆಗಲಿ ಎಂದು ಮುದುಕಿ ಆ ಹಣದ ಚೀಲ ಪಡೆದು ಜೋಪಾನವಾಗಿ ಇಟ್ಟಳು.
ಬೆಳಿಗ್ಗೆ ಎಲ್ಲರೂ ಎದ್ದು ನಿತ್ಯಕರ್ಮಕ್ಕಾಗಿ ಹೊರಗಡೆ ಹೋದರು. ಆಗಿನ ಕಾಲದಲ್ಲಿ ಈಗಿನಂತೆ ಶೌಚಾಲಯ ಇರಲಿಲ್ಲ. ಆಕೆ ತೋಟದೊಳಗೆ ಗುಡಿಸಲು ಹಾಕಿಕೊಂಡು ವಾಸವಾಗಿದ್ದಳು. ತೋಟದಲ್ಲಿ ಹೂ ಹಣ್ಣು ಬೆಳೆದಿದ್ದಳು. ಈ ನಾಲ್ಕು ಮಂದಿ ತೋಟದಲ್ಲಿ ನಿತ್ಯಕರ್ಮ ಮುಗಿಸಿದರು. ಅವರಲ್ಲಿ ಒಬ್ಬ ಹೇಳಿದ, "ಈ ಅಜ್ಜಿ ನಮ್ಮನ್ನು ರಾತ್ರಿ ಊಟ ಕೊಟ್ಟು ಚೆನ್ನಾಗಿ ನೋಡಿಕೊಂಡಿದ್ದಾಳೆ, ನಾವು ಸ್ವಲ್ಪ ಸಹಾಯ ಮಾಡಿ ಆನಂತರ ಹೊರಡೋಣ" ಎಂದನು. ಎಲ್ಲರೂ ಆಗಲಿ ಎಂದು ಹೂ ಹಣ್ಣು ಬಿಡಿಸುತ್ತಿದ್ದರು. ಆಗ ಒಬ್ಬ ಹೇಳಿದ "ನನಗೆ ದಾಹ ಆಗಿದೆ, ನೀರು ಕುಡಿದು ಬರುತ್ತೇನೆ, ನೀವು ಹೂವು ಹಣ್ಣು ಬಿಡಿಸುತ್ತಿರಿ" ಎಂದು ಹೇಳಿ ಅಜ್ಜಿ ಗುಡಿಸಲಿಗೆ ಹೊರಟನು. ಹಾಗೆ ನಡೆದು ಹೋಗುವಾಗ ಯೋಚಿಸಿದ, ಆ ಅಜ್ಜಿ ಮನ ಒಲಿಸಿ ಹಣ ಪಡೆದು, ಇವರು ಬರುವುದರೊಳಗೆ ಕಾಣದಂತೆ ಹೊರಟು ಹೋಗಬೇಕು ಎಂದು ತೀರ್ಮಾನಿಸಿ, ಗುಡಿಸಲಿಗೆ ಬಂದು ಅಜ್ಜಿಗೆ ಹೇಳಿದ. "ನನ್ನ ಗೆಳೆಯರು ನಿಮ್ಮ ಆತಿಥ್ಯಕ್ಕೆ ಮನಸ್ಸೋತು ನಿಮಗೆ ಸಹಾಯವಾಗಲೆಂದು ಹೂಹಣ್ಣು ಬಿಡಿಸುತ್ತಿದ್ದಾರೆ. ನನ್ನನ್ನು ಕಳುಹಿಸಿದರು. ಹಣದ ಚೀಲ ತೆಗೆದುಕೊಂಡು ಬಾ" ಎಂದನು. ಆ ಅಜ್ಜಿಯು ಹೊರಗೆ ಬಂದು ಗೆಳೆಯರಿಗೆ ಕೊಡಬಹುದೇ ಅಂತ ಕೈಯಲ್ಲಿ ಸನ್ನೆ ಮಾಡಿದಳು. ಕೂಗಿದರೆ ಕೇಳುತ್ತಿರಲಿಲ್ಲ ಅಷ್ಟು ದೂರ ಇತ್ತು. ಕೆಲಸ ಮಾಡುತ್ತಿದ್ದ ಗೆಳೆಯರಲ್ಲಿ ಒಬ್ಬ ನೋಡಿ, ನಮ್ಮನ್ನು ಅಜ್ಜಿ ಕರೆಯುತ್ತಿದ್ದಾಳೆ ಎಂದು ಭಾವಿಸಿ, ಆಯ್ತು ಬರುತ್ತೇವೆ ಎಂದು ಕೈ ಸನ್ನೆ ಮಾಡಿ, ಕೆಲಸದಲ್ಲಿ ತೊಡಗಿದ. ಈ ಅಜ್ಜಿ ಅವರು ಒಪ್ಪಿದ್ದಾರೆಂದು ಭಾವಿಸಿ, ಗುಡಿಸಲಿಗೆ ಬಂದವನಿಗೆ ಊಟ ಮಾಡಿಸಿ, ಹಣದ ಚೀಲವನ್ನು ನೀಡಿದಳು. ಆತ ಧನ್ಯವಾದ ಹೇಳಿ ಕಾಣದಂತೆ ತಪ್ಪಿಸಿಕೊಂಡು ಊರು ಬಿಟ್ಟನು. ಸ್ವಲ್ಪ ಸಮಯದ ನಂತರ ಉಳಿದ ಮೂರು ಜನ ಬಂದರು. ಆ ಮೂವರಿಗೆ ಅಜ್ಜಿ ಊಟ ನೀಡಿದಳು. ಅಜ್ಜಿಯ ಸತ್ಕಾರ ನೆನೆದು, ಹೊಗಳಿ, ತಾವು ಮಾಡಿದ ಕೆಲಸ ಹೇಳಿ, ಅಜ್ಜಿಗೆ ನಮಸ್ಕರಿಸಿ ಹೊರಟರು. ಆಗ ಅಜ್ಜಿಗೆ ಕೇಳಿದರು "ಅಜ್ಜಿ, ರಾತ್ರಿ ನೀಡಿದ ಹಣದ ಚೀಲ ಕೊಡಿ" ಎಂದರು. ಆಗ ಅಜ್ಜಿ ಹೇಳಿದಳು, "ನಿಮ್ಮ ಜೊತೆಗಿದ್ದವನು ಬಂದು ನಮ್ಮ ಗೆಳೆಯರು ಹಣದ ಚೀಲ ತರಲು ಹೇಳಿದ್ದಾರೆಂದು ಹೇಳಿದ, ನಾನು ಇದನ್ನು ಖಾತ್ರಿ ಮಾಡಿಕೊಳ್ಳಲು ನಿಮಗೆ ಸನ್ನೆ ಮಾಡಿದೆ. ನಿಮ್ಮಲ್ಲಿ ಒಬ್ಬ ಆಯ್ತು ಅಂತ ಸನ್ನೆ ಮಾಡಿದ. ನಾನು ಆತನ ಕೈಯಲ್ಲಿ ನೀಡಿದೆ". ಆಗ ಗೆಳೆಯರಿಗೆ ಅರಿವಾಯಿತು. ಗೆಳೆಯ ಮೋಸ ಮಾಡಿ ಹೋಗಿದ್ದಾನೆ ಎಂದು. ಆಗ ಈ ಮೂವರು ದಿಕ್ಕು ತೋಚದೆ ನ್ಯಾಯ ಪಡೆಯಬೇಕೆಂದು ಅಲ್ಲಿಯ ರಾಜನ ಬಳಿಗೆ ಹೋಗಿ ದೂರು ನೀಡಿದರು. ರಾಜ ಎಲ್ಲಾ ಕೇಳಿಸಿಕೊಂಡು ಅಜ್ಜಿಯನ್ನು ಅರಮನೆಗೆ ಕರೆಸಿದ. ವಿಚಾರಣೆ ನಡೆಸಿದ. ರಾತ್ರಿ ಇವರು ಹಣ ನೀಡುವಾಗ ಏನು ಹೇಳಿದರು?. ಎಂದು ಕೇಳಿದ ರಾಜ. ಅಜ್ಜಿ ಹೇಳಿದಳು "ನಾವು ಒಟ್ಟಿಗೆ ಇದ್ದಾಗ ಕೊಡಬೇಕೆಂದು". ಹಾಗಾದರೆ ನೀನು ಒಟ್ಟಿಗೆ ಇಲ್ಲದಾಗ ಒಬ್ಬನ ಕೈಗೆ ಹಣದ ಚೀಲ ಕೊಟ್ಟಿದ್ದು ತಪ್ಪು. ಈಗ ನೀನು ಮಾಡಿರುವ ತಪ್ಪಿಗೆ ಆ ಹಣ ನೀಡುವುದು ಎಂದು ತೀರ್ಮಾನಿಸಿದ. ಈ ಆಜ್ಞೆ ಕೇಳಿ ಅಜ್ಜಿಗೆ ದಿಕ್ಕೇ ತೋಚದಂತೆ ಆಯಿತು. ಆಕೆಯ ತೋಟ ಮಾರಿದರು ಅಷ್ಟು ಹಣ ಹೊಂದಿಸುವುದು ಕಷ್ಟವಾಗಿತ್ತು. ಕರೆದು ಸತ್ಕಾರ ಮಾಡಿದ ತಪ್ಪಿಗೆ ಈ ದಂಡವೇ ಎಂದು ದುಃಖಿಸುತ್ತಾ, ಗುಡಿಸಲ ಕಡೆಗೆ ಹೊರಟಳು. ಆ ದಾರಿಯಲ್ಲಿ ಒಬ್ಬ ಸಂತ ಬರುತ್ತಿದ್ದನು. ಅಳುತ್ತಾ ಹೋಗುತ್ತಿದ್ದ ಮುದುಕಿಯನ್ನು ತಡೆದು "ಏತಕ್ಕೆ ಅಳುತ್ತಿರುವೆ"? ಎಂದು ಕೇಳಿದ. ಅಜ್ಜಿ ನಡೆದ ಘಟನೆಯನ್ನು ಹೇಳಿದಳು. ಸ್ವಲ್ಪ ಹೊತ್ತು ಮೌನವಾಗಿ ಚಿಂತಿಸಿದ ಸಂತ ಹೇಳಿದ, ರಾಜನ ಆಜ್ಞೆ ತಪ್ಪಾಗಿದೆ. ಹೋಗಿ ರಾಜನಿಗೆ ಹೇಳಿ ಬಾ ಎಂದನು. ಅಜ್ಜಿ ರಾಜನ ಬಳಿ ಬಂದು, "ತಮ್ಮ ಆಜ್ಞೆ ತಪ್ಪಾಗಿದೆ ಎಂದು ಸಂತರು ಹೇಳಿದ್ದಾರೆ, ದಯಮಾಡಿ ನನ್ನದು ತಪ್ಪಿಲ್ಲ ನನಗೆ ನ್ಯಾಯ ಕೊಡಿ" ಎಂದಳು. ರಾಜನಿಗೆ ಕೋಪ ಬಂದಿತು. "ಯಾವ ಸಂತ ?. ನನ್ನ ಆಜ್ಞೆ ತಪ್ಪು ಎಂದು ಹೇಳಿದ್ದು, ಕರೆದುಕೊಂಡು ಬಾ. ನನ್ನ ಆಜ್ಞೆ ತಪ್ಪು ಅಂತ ಸಾಬೀತು ಮಾಡದಿದ್ದರೆ, ಆ ಸಂತನಿಗೆ ಕಠಿಣ ದಂಡನೆ ನೀಡುತ್ತೇನೆ" ಎಂದನು. ಆಗ ಅಜ್ಜಿ ಸಂತನನ್ನು ಕರೆದುಕೊಂಡು ಅರಮನೆಗೆ ಬಂದಳು. ರಾಜನು ಸಂತನಿಗೆ ಕುಳಿತುಕೊಳ್ಳಲು ಹೇಳಿದನು. ನಂತರ ಪ್ರಶ್ನಿಸಿದ "ಹೇಗೆ ನನ್ನ ಆಜ್ಞೆ ತಪ್ಪಾಗಿದೆ"?. ಎಂದನು. ಆಗ ಸಂತ, ಮುದುಕಿಯನ್ನು ಕೇಳಿದ "ರಾತ್ರಿ ನಿಮ್ಮ ಮನೆಗೆ ಬಂದವರೆಷ್ಟು"?. ಅಜ್ಜಿ ಹೇಳಿದಳು, "ನಾಲ್ಕು ಮಂದಿ". ಆಗ ಸಂತ ಕೇಳಿದ "ಅವರು ಹಣ ನೀಡುವಾಗ ಹಾಕಿದ ಷರತ್ತು ಏನು? ಅಜ್ಜಿ ಹೇಳಿದಳು "ನಾವು ಒಟ್ಟಾಗಿ ಇದ್ದಾಗ ಈ ಹಣದ ಚೀಲ ನೀಡಬೇಕು" ಎಂದು. ಆಗ ಸಂತ, ರಾಜನನ್ನು ಕೇಳಿದನು. ನಿಮ್ಮ ಬಳಿ ಬಂದು ದೂರು ನೀಡಿದವರು ಎಷ್ಟು ಮಂದಿ?. ರಾಜ ಹೇಳಿದ ಮೂರು ಮಂದಿ. ಸಂತ ಮೂರು ಮಂದಿಗೆ ಹಣ ನೀಡಿದರೆ ತಪ್ಪಲ್ಲವೇ ಹೇಳಿ. ನಾಲ್ಕು ಮಂದಿ ಬಂದರೆ ನೀಡಬಹುದು. ರಾಜನಿಗೆ ತನ್ನ ತೀರ್ಮಾನದ ತಪ್ಪಿನ ಅರಿವಾಯಿತು.
ಆಗ ರಾಜ ಆ ಮೂವರಿಗೆ ಹೇಳಿದ. ಹೌದು ನೀವು ನಾಲ್ಕು ಮಂದಿ ಒಟ್ಟಾಗಿ ಬಂದರೆ ನಿಮಗೆ ಹಣ ಕೊಡಿಸುವುದಾಗಿ ಅಜ್ಞಾಪಿಸಿದ. ಆಗ ಸಂತ ರಾಜನಿಗೆ ಹೇಳಿದ. ಹಣ ಕದ್ದವನನ್ನು ಹಿಡಿದು ತಂದರೆ ಆತನಿಂದಲೇ ಕೊಡಿಸಬಹುದು. ಇಲ್ಲ ಅಜ್ಜಿ ಮೋಸ ಮಾಡಿದ್ದರೆ ಅಜ್ಜಿಯಿಂದಲೇ ಕೊಡಿಸಬಹುದು, ಸರಿ ತಾನೇ ಎಂದನು. ಹಣ ಕದ್ದವನನ್ನು ಹುಡುಕುವ ಕೆಲಸ ಈ ಮೂರು ಜನ ಸ್ನೇಹಿತರ ಹೆಗಲಿಗೆ ಬಿತ್ತು. ಆತನನ್ನು ಹಿಡಿದು ತಂದರೇ ಹಣ ಪಡೆದುಕೊಳ್ಳಬಹುದೆಂದು, ಮೂವರು ಸ್ನೇಹಿತರು ಕದ್ದು ತಪ್ಪಿಸಿಕೊಂಡು ಹೋದ ಸ್ನೇಹಿತನನ್ನು ಹುಡುಕಲು ಹೊರಟರು. ಅಜ್ಜಿಗೆ ಆನಂದವೋ ಆನಂದ. ರಾಜ ಸಂತನನ್ನು ಕೇಳಿದ "ಇದು ನನಗೆ ಹೊಳೆಯಲ್ಲೇ ಇಲ್ಲವಲ್ಲ, ಇಂಥ ಸಂದರ್ಭದಲ್ಲಿ ಹೇಗೆ ವಿಚಾರ ಮಾಡಬೇಕು?" ಎಂದನು. ಆಗ ಸಂತ ಹೇಳಿದ "ಅವಸರ ಮಾಡದೆ, ಸಮಸ್ಯೆಯ ಮೇಲೆ ತನ್ಮಯರಾಗಿ, ಗಮನ ಕೇಂದ್ರೀಕರಿಸಿದರೆ ಸತ್ಯ ತಿಳಿಯುತ್ತದೆ" ಎಂದನು. ಈಗ ಹೇಳಿ ಮಕ್ಕಳೆ ಯಾವುದು ಸರಿಯಾದ ನಿರ್ಧಾರ?.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************