ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 112
Tuesday, January 6, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 112
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ನನ್ನ ವಿದ್ಯಾರ್ಥಿಗಳಿಗೆ ನನ್ನ ಮೇಲೆ ಅದೇಕೋ ವಿಶೇಷವಾದ ಪ್ರೀತಿ. ಆದರೆ ನಾನು 1997 ರಲ್ಲಿಯೇ ತರಗತಿಗಳಿಂದ ಹೊರ ಬಂದೆ. ಆದರೆ ಹಿಂದಿನ ವಿದ್ಯಾರ್ಥಿಗಳು ನನಗೆ ಈಗಲೂ ಅಂಟಿಕೊಂಡಿದ್ದಾರೆ. ಒಮ್ಮೆ ನಾನು ಕಲಬುರ್ಗಿಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಅಲ್ಲಿ ನನಗೆ ಪೂರ್ತಿ ಸ್ವಾತಂತ್ರ್ಯ ಅಂದುಕೊಂಡಿದ್ದೆ. ಆದರೆ ಯಾರೋ ನನ್ನನ್ನು ಕರೆಯುತ್ತಾ ಓಡಿ ಬರುತ್ತಿದ್ದರು. ನನ್ನನ್ನು ಹಿಂದೆ ಹಾಕಿ ಮುಂದೆ ನಿಂತು ಪರಿಚಯಿಸಿಕೊಂಡರು. 1992 ರಲ್ಲಿ ನನ್ನ ವಿದ್ಯಾರ್ಥಿಯಾಗಿದ್ದವ. ನನಗೆ ಅಚ್ಚರಿಯಾಯಿತು. 2007 ರಲ್ಲಿ ಕಲಬುರಗಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ 6 ತಿಂಗಳ ಕಾಲ ಬಿಎಡ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೆ. ಅವರೆಲ್ಲಾ ಸೇರಿ 2016 ರಲ್ಲಿ ವಾಟ್ಸ್ಯಾಪ್ ಗುಂಪು ಪ್ರಾರಂಭಿಸುವಾಗ ನನ್ನ ಹೆಸರು ಸೇರಿಸಲು ಅನುಮತಿ ಕೇಳಿದ್ದರು. ಅವರ ಗುಂಪಿನಲ್ಲಿರುವ ಅವರ ಶಿಕ್ಷಕ ಎಂದರೆ ನಾನೊಬ್ಬನೇ.
ನಾನು ಮಕ್ಕಳ ಜಗಲಿಯಲ್ಲಿ ಬರೆಯುವ ಲೇಖನಗಳನ್ನು ಅನೇಕರು ಅವರ ಗುಂಪಿನಲ್ಲಿ ಹಂಚಿಕೊಳ್ಳುತ್ತಾರೆ. ಅಂತಹವರಲ್ಲಿ ಶ್ರೀಮತಿ ಮಿಥುನ ಒಬ್ಬಳು. ಆಕೆ ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ಮಾಡುವಾಗ ನನ್ನ ವಿದ್ಯಾರ್ಥಿ. ಅವಳು ಹಳೆ ವಿದ್ಯಾರ್ಥಿಗಳ ಗುಂಪಿನಲ್ಲಿ ಪ್ರತಿ ವಾರ ನನ್ನ ಲೇಖನಗಳನ್ನು ಹಂಚಿಕೊಳ್ಳುತ್ತಾಳೆ. ಅವಳು ಮತ್ತು ಅವಳ ಗಂಡ ಇಬ್ಬರೂ ನನ್ನ ಲೇಖನಗಳನ್ನು ತಪ್ಪದೇ ಓದುತ್ತಾರಂತೆ. ಮಿಥುನ ಮೊನ್ನೆ ಒಂದು ಪ್ರಶ್ನೆ ಕೇಳಿದ್ದರು. ಸರ್ ನಾವೆಲ್ಲರೂ ಕನಸು ಕಾಣುತ್ತೇವೆ ಆದರೆ ಕೆಲವರಿಗೆ ಕನಸುಗಳೇ ಬೀಳುವುದಿಲ್ಲ ಏಕೆ ಸರ್ ಎಂದು ಕೇಳಿದ್ದಾರೆ. ನಿದ್ರೆಯಲ್ಲಿ ಕನಸುಗಳು ಬೀಳದೇ ಇರುವುದು ಸಾಧ್ಯವಿಲ್ಲ. ಒಬ್ಬ ಕನಸು ಕಾಣುತ್ತಿದ್ದಾನೆಯೇ ಇಲ್ಲವೇ ಎನ್ನುವುದನ್ನು ನಾವೂ ತಿಳಿದುಕೊಳ್ಳಬಹುದು. ನಿದ್ದೆ ಮಾಡುತ್ತಿರುವ ಪ್ರತಿಯೊಬ್ಬರೂ ಕನಸು ಕಾಣಲೇಬೇಕು. ನಮ್ಮ ನಿದ್ದೆ ಅರೆ ನಿದ್ದೆ ಮತ್ತು ಗಾಢ ನಿದ್ದೆಯ ಆವರ್ತಗಳನ್ನೊಳಗೊಂಡಿರುತ್ತದೆ (cycles). ಒಬ್ಬ ವ್ಯಕ್ತಿ ಅರೆ ನಿದ್ದೆಯಲ್ಲಿದ್ದಾನೆಯೇ ಅಥವಾ ಗಾಢ ನಿದ್ದೆಯೇ ಎಂದು ನಾವು ಸುಲಭವಾಗಿ ಹೇಳಬಹುದು. ಅದು ಹೇಗೆಂದರೆ ನಿದ್ದೆ ಮಾಡುವವರ ಕಣ್ರೆಪ್ಪೆಗಳ ಚಲನೆ ಈ ನಿದ್ದೆಯ ಆವರ್ತಗಳಲ್ಲಿ ಬೇರೆ ಬೇರೆ ಆಗಿರುತ್ತದೆ. ಅರೆ ನಿದ್ರಾವಸ್ಥೆಯಲ್ಲಿ ಕಣ್ರೆಪ್ಪೆಗಳ ಚಲನೆ ಇಲ್ಲದೇ ಇರುವುದರಿಂದ ಇದು ಕಣ್ರೆಪ್ಪೆ ಚಲನೆ ಇಲ್ಲದ ಹಂತ (Non Rapid Eye Movement NREM). ಗಾಢ ನಿದ್ರಾವಸ್ಥೆಯಲ್ಲಿ ವೇಗವಾದ ಕಣ್ರೆಪ್ಪೆಯ ಚಲನೆ ಇರುತ್ತದೆ. ಇದು ವೇಗದ ಕಣ್ರೆಪ್ಪೆ ಚಲನೆಯ ಹಂತ (Rapid Eye Movement REM). ನಮ್ಮ ನಿದ್ದೆ NREM ಮತ್ತು REM ಗಳ ನಡುವೆ ಹೊಯ್ದಾಡುತ್ತಿರುತ್ತದೆ. ಈ REM ಹಂತದಲ್ಲಿಯೇ ಗಾಢವಾದ ಕನಸುಗಳು ಬೀಳುವುದು. ಅದೇ NREM ಹಂತದಲ್ಲಿಯೂ ಕನಸುಗಳು ಬೀಳದೇ ಬಾರದೆಂದೇನೂ ಇಲ್ಲ ಆದರೆ ಅವುಗಳ ಪರಿಣಾಮ ಕಡಿಮೆ. ಆದ್ದರಿಂದ ನಾನು ಕನಸು ಕಾಣುತ್ತಿದ್ದರೆ ನನ್ನ ಪಕ್ಕದಲ್ಲಿ ಗಮನಿಸುತ್ತಿರುವವರು ನನ್ನ ಕಣ್ರೆಪ್ಪೆಗಳ ಚಲನೆಯ ಆಧಾರದ ಮೇಲೆ ಅದನ್ನು ಹೇಳಬಹುದು. ಅಥವಾ ನನ್ನ ಮೆದುಳಿನ ಚಟುವಟಿಕೆಗಳನ್ನು ದಾಖಲಿಸಿದರೂ ಕೂಡಾ ನಾನು ಕನಸು ಕಾಣುತ್ತಿರುವುದನ್ನು ತಿಳಿಯಬಹುದು.
ಮುಂದಿನ ವಾರ ಕನಸು ಮತ್ತು ನಿದ್ದೆಯ ಸಂಕೀರ್ಣತೆಯ ಬಗ್ಗೆ ತಿಳಿಯೋಣ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************