ನಿಷ್ಪಾಪಿ ಸಸ್ಯಗಳು : ಸಂಚಿಕೆ - 135
Thursday, January 15, 2026
Edit
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹಬ್ಬಗಳೆಂದಾಗ ವಿಶೇಷ ಅಡುಗೆಗಳ ಸಂಭ್ರಮ! ಮನಸ್ಸು ಬೇಡ.. ಬೇಡವೆಂದರೂ, ಸಾಕು ಸಾಕೆಂದರೂ ನಾಲಿಗೆಯ ಚಪಲಕ್ಕೆ ಸೋತು ಹೊಟ್ಟೆಯುಬ್ಬರಿಸುವಂತೆ ತಿಂದು ಮತ್ತೆ ಅಜೀರ್ಣೆಯ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ನೆರವಾಗುವ ವಿಶೇಷ ಮೂಲಿಕೆಯೇ ಶುಂಠಿ. ಶುಂಠಿ. ಕೆಮ್ಮು, ನೆಗಡಿ, ಕಫದ ಸಮಸ್ಯೆಗಳೂ ಒಂದಿಷ್ಟು ಶುಂಠಿರಸದ ಜೊತೆ ತುಳಸಿ, ಜೇನು ಸೇರಿಸಿದರೆ ಥಟ್ಟನೆ ಕಡಿಮೆಯಾಗುತ್ತದೆ... ಇದು ನಿಜ ತಾನೇ?
ನಮ್ಮ ಅಜ್ಜಿ, ಅಮ್ಮ ಯಾವ ವೈದ್ಯರಿಗೂ ಕಡಿಮೆಯಿಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನು ಅಡುಗೆ ಮಾಡಲು ಬಳಸುವ ಮೂಲಿಕೆಗಳಿಂದಲೇ ತಕ್ಕ ಮಟ್ಟಿಗೆ ಸುಧಾರಿಸಬಲ್ಲರು. ಶುಂಠಿ ಒಂದು ಸಾಮಾನ್ಯ ಸಸ್ಯ. ಕೇವಲ ಒಂದು ಮೀಟರಿನಷ್ಟೇರಿದರೆ ಅದೇ ಹೆಚ್ಚು.15ರಿಂದ 30 ಸೆಂ.ಮೀ. ನಷ್ಟುದ್ದದ ಎಲೆಗಳು. ಎಲೆಗಳ ವಿಶೇಷತೆಯೆಂದರೆ ಎರಡು ಲಂಬ ಸಾಲುಗಳಲ್ಲಿ ಪರ್ಯಾಯವಾಗಿದ್ದು ಕಾಂಡವನ್ನು ಸುತ್ತುವರಿದ ಪೊರೆಗಳಿಂದ ಮೂಡಿರುತ್ತವೆ. ಶಂಖುವಿನಾಕಾರದ ಹಸಿರು ತೊಟ್ಟಿನಲ್ಲಿ ಹಳದಿ, ಹಸಿರು ನೇರಳೆ ಬಣ್ಣಗಳನ್ನು ಹರಡಿದ ಸುಂದರ ಹೂವುಗಳಾಗುತ್ತವೆ.
ಶುಂಠಿ ಮಾನವನಿಗೆ ಆಪ್ತವಾಗಿರುವುದು ಈ ಎಲೆಗಳಿಂದಾಗಲೀ, ಹೂಗಳಿಂದಾಗಲೀ ಅಲ್ಲ!. ಹಿತೋಷ್ಣ ತಂಪು ಹವಾಮಾನದಲ್ಲಿ ಹಿಗ್ಗಿನಿಂದ ಬೆಳೆದು ನಿಂತ ಶುಂಠಿ ಯ ಗುಪ್ತಕಾಂಡ ಮೌಲ್ಯ ತುಂಬಿದ್ದಾಗಿದೆ. ಮಣ್ಣೊಳಗೆ ಘಮ ತುಂಬಿದ ಈ ಸುವಾಸನೆಯ ಗಡ್ಡೆಗಳು ಅರಶಿನದ ಜಾತಿಗೆ ಸೇರುವಂತೆ ಮಾಡಿದೆ. ಇದರ ಆರೋಗ್ಯ ಪೂರ್ಣ ಗಡ್ಡೆಗಳ ಮರಿಗಳು ಅಂದರೆ 25_30 ಗ್ರಾಮ್ ತೂಕದ 4_5 ಸೆಂ.ಮೀ. ಉದ್ದದ ತುಂಡುಗಳನ್ನು ತಾಯಿ ರೈಜೋಮ್ ನಿಂದ ಬೇರ್ಪಡಿಸಿ ಮಣ್ಣನ್ನು ಉಬ್ಬಿಸಿ ಮಾಡಿದ ಸಾಲುಗಳಲ್ಲಿ 4_5 ಸೆಂ.ಮೀ. ಆಳದಲ್ಲಿ ನೆಡಲಾಗುತ್ತದೆ. ಬಿಳಿ ಅಥವಾ ಗುಲಾಬಿ ವರ್ಣದ ಮೊಗ್ಗುಗಳು ಈ ಪುಟಾಣಿ ಗಡ್ಡೆಗಳಲ್ಲಿ ಚಿಗುರಲು ಕಾಯುತ್ತಿರುತ್ತವೆ. ಮಣ್ಣಲ್ಲಿ ಹದವಾದ ತೇವಾಂಶ, ವಾತಾವರಣದಲ್ಲಿ ಆರ್ದ್ರತೆ ಕಂಡ ಕೂಡಲೇ ಲಗುಬಗೆಯಿಂದ ನೆಟ್ಟ ಗಡ್ಡೆಗಳಲ್ಲಿ ಬೇರುಗಳು ಮೂಡತೊಡಗಿ ಮಣ್ಣನ್ನು ಸಡಿಲಗೊಳಿಸಿ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ. ಚಿಗುರುಗಳು ಆಗಸದತ್ತ ನೇರವಾಗಿ ಚಿಮ್ಮಿ ಅತ್ತಿತ್ತ ಎಲೆಗಳನ್ನು ಹರಡಿಸುವ ಕಾಯಕ ಮಾಡುತ್ತವೆ!. 210 ರಿಂದ 240 ದಿನಗಳ ಬೆಳವಣಿಗೆಯಲ್ಲಿ ಗಡ್ಡೆಗಳು ಬಲಿತು ಪ್ರಭುತ್ವತೆ ಪಡೆಯುತ್ತವೆ. 180 ದಿನಗಳು ತುಂಬಿದಾಗಲೇ ಕೆಲವು ತಳಿಗಳಲ್ಲಿ ಅಗೆತ ಆರಂಭವಾಗುತ್ತದೆ. ಬೆಳೆ ಅಗೆಯುವ ಒಂದು ತಿಂಗಳ ಮೊದಲೇ ನೀರು ಹಾಯಿಸುವುದನ್ನು ನಿಲ್ಲಿಸಲಾಗುತ್ತದೆ. ಕ್ವಿಂಟಾಲ್ ಗೆ ಸಮಾರು 5500 ರ ವರೆಗೆ ಬೆಲೆ ತಂದು ಕೊಡುವ ಶುಂಠಿ ಎಕರೆಗೆ ಸರಾಸರಿ 6_10 ಟನ್ ಇಳುವರಿ ನೀಡುತ್ತದೆ. ಒಣಶುಂಠಿಗೆ ಕ್ವಿಂಟಲೊಂದಕ್ಕೆ 28000.00 ಬೆಲೆ ದೊರೆಯಬಹುದು.
ಶುಂಠಿ ಮೂಲತ: ಆಗ್ನೇಯ ಏಷ್ಯಾ ದ ಸಸ್ಯ. ಜಿಂಗಿಬೆರೇಸಿ (Zingiberaceae) ಕುಟುಂಬದ ಹೂ ಬಿಡುವ ಸಸ್ಯವಾಗಿದ್ದು Zingiber officinale ಸಸ್ಯಶಾಸ್ತ್ರೀಯ ಹೆಸರಾಗಿದೆ. ಜಿಂಗಿಬರ್ ಎಂಬುದು ಗ್ರೀಕ್ ಭಾಷೆಯ ಜಿಂಗಿಬೆರಿಸ್ ಎಂಬ ಪದದಿಂದ ಬಂದಿದೆಯಂತೆ. ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ, ಕೆರೆಬಿಯನ್ ಪ್ರದೇಶಗಳಲ್ಲಿ ಶುಂಠಿ ಕೃಷಿ ವ್ಯಾಪಕವಾಗಿದ್ದರೂ ಜಗತ್ತಿನ ಒಟ್ಟು ಶುಂಠಿ ಉತ್ಪಾದನೆಯ 30% ಪಾಲು ಭಾರತದ್ದೇ ಇದ್ದು ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ ಎನ್ನುವುದು ನಮಗೊಂದು ಹೆಮ್ಮೆಯಲ್ಲವೇ? ಭಾರತದಲ್ಲಿ ತಮಿಳುನಾಡು, ಕೇರಳ, ಕೊಡಗಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ನಿಷ್ಪಾಪಿ ಸಸ್ಯವಾದ ಶುಂಠಿ ತನ್ನ ಪರಿಮಳ ಹಾಗೂ ಔಷಧೀಯ ಗುಣಗಳಿಂದಾಗಿ ಎಲ್ಲರ ಅಪೇಕ್ಷೆಯ ವಸ್ತುವಾಗಿದೆ. ಒಂದನೇ ಶತಮಾನದ ವೇಳೆಗೆ ವ್ಯಾಪಾರಿಗಳು ಮೆಡಿಟರೇನಿಯನ್ ಪ್ರದೇಶಕ್ಕೆ ತಂದ ಶುಂಠಿ 11ನೇ ಶತಮಾನದಲ್ಲಿ ಇಂಗ್ಲೆಂಡ್ ಲ್ಲಿ ಪ್ರಸಿದ್ಧವಾಗಿತ್ತು.1547ರಲ್ಲಿ ಸ್ಯಾಂಟಿಯಾಗೋದಿಂದ ಸ್ಪೇನ್ ಗೆ ರಫ್ತಾಗಿತ್ತು. ಜಿಂಜೆರೋರ್, ಶೊಗಾಲ್, ಜಿಂಜಿರೋನ್ ಗಳೆಂಬ ಸಸ್ಯತೈಲ ಮಿಶ್ರಣವು ಶುಂಠಿಯಲ್ಲಿ 3% ದಷ್ಟಿದೆ. ಇದು ಆಹಾರ, ಸುಗಂಧ ದ್ರವ್ಯ, ಔಷಧಿ, ತಂಪು ಪಾನೀಯಗಳಿಗೆ ಬಳಸಲ್ಪಡುತ್ತದೆ. ಚಹಾ, ಸೂಪ್, ಮಸಾಲೆಯಾಗಿ, ತರಕಾರಿಯಾಗಿ , ಸಿಹಿತಿಂಡಿ, ಮಿಠಾಯಿ, ಬ್ರೆಡ್, ಸಾಸ್ ಇತ್ಯಾದಿಗಳಲ್ಲಿ ನಿತ್ಯ ಬಳಸಲಾಗುವ ಶುಂಠಿಯನ್ನು ಹೆಚ್ಚು ಬೇಯಿಸಿದರೆ, ಹೆಚ್ಚು ಹುರಿದರೆ ಅದರ ಪೋಷಕಾಂಶಗಳು ನಾಶವಾಗುವುವು. ಆಳವಾಗಿ ಸಿಪ್ಪೆ ತೆಗೆದು ಬಳಸಿದರೂ ಪ್ರಯೊಜನ ಕಡಿಮೆಯಾಗುವುದು. ಒಣಶುಂಠಿಯಲ್ಲೂ ರುಚಿ, ಪೋಷಕಾಂಶ ಕಡಿಮೆಯಾಗಿರುತ್ತದೆ.
ವಿಟಮಿನ್ ಎ,ಬಿ,ಸಿ,ಇ ಗಳಿದ್ದು ಮೆಗ್ನೀಸಿಯಂ, ಫಾಸ್ಫರಸ್, ಸಿಲಿಕಾನ್, ಸೋಡಿಯಂ, ಕಬ್ಬಿಣ, ಸತು, ಕ್ಯಾಲ್ಸಿಯಂ, ಬೀಟಾ ಕ್ಯಾರೊಟಿನ್ ನಂತಹ ಖನಿಜಗಳಿಂದಲೂ ಸಮೃದ್ಧವಾಗಿದೆ. ನೋವು ನಿವಾರಕ, ಉದ್ವೇಗನಾಶಕ, ಬ್ಯಾಕ್ಟೀರಿಯಾ ವಿರೋಧಿ, ಅತಿಸಾರಕ್ಕೆ ಪರಿಣಾಮಕಾರಿ ಔಷಧಿಯಾಗಿದೆ. ಸಮುದ್ರಯಾನದಿಂದ ಉಂಟಾಗುವ ತಲೆತಿರುಗುವಿಕೆ, ಹೊಟ್ಟೆತೊಳೆಸುವಿಕೆಗೆ ಶಮನಕಾರಿ. ರಕ್ತದ ಕೆಟ್ಟ ಕೊಬ್ಬು ನಿವಾರಕ, ನರಮಂಡಲ ಕಾರ್ಯಕ್ಷಮತೆ ಉತ್ತಮಪಡಿಸುತ್ತದೆ.
ಶುಂಠಿ ವಾರ್ಷಿಕ ಸಸ್ಯವೂ ಹೌದು, ನೀವು ಅಗೆಯದೆ ಬಿಟ್ಟರೆ ಅದು ಬಹುವಾರ್ಷಿಕ ಸಸ್ಯವಾಗಿಯೂ ಉಳಿದುಕೊಳ್ಳಬಲ್ಲುದು. ನಿತ್ಯದ ಖರ್ಚಿಗೆಂದು ಒಂದಿಷ್ಟು ಅಗೆಯುತ್ತಿದ್ದರೂ ಮತ್ತೊಂದು ಬದಿಯಿಂದ ಬೆಳೆಯುತ್ತಿರುತ್ತದೆ. ರೈತರು ಶುಂಠಿಯನ್ನು ಕಾಫಿ, ಕಿತ್ತಳೆ, ಬಾಳೆಗಳ ನೆಡುವ ಮಿಶ್ರ ಬೆಳೆಯಾಗಿಯೂ ಬೆಳೆಯುತ್ತಾರೆ. ಒಟ್ಟಿನಲ್ಲಿ ಬಹುಪಯೋಗಿ ಶುಂಠಿ ನಮ್ಮ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ತುಂಬಾ ಉಪಯುಕ್ತವಾಗಿದೆಯಾದರೂ ಹದವರಿತು ಬಳಸಬೇಕು. ಉತ್ತಮವೆಂದು ಬಹು ಬಳಕೆ ಅಡ್ಡ ಪರಿಣಾಮ ನೀಡಬಹುದು. ನಾವೂ ನಮ್ಮ ನಿತ್ಯದ ಬಳಕೆಗೆ ಬೇಕಾದಷ್ಟು ಶುಂಠಿಯನ್ನೇಕೆ ಬೆಳೆಸಬಾರದು? ಈ ಬಗ್ಗೆ ಪ್ರಯತ್ನಿಸೋಣವೆ?
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************