-->
ಪಯಣ : ಸಂಚಿಕೆ - 74 (ಬನ್ನಿ ಪ್ರವಾಸ ಹೋಗೋಣ) tourist places payana Ramesh Naik uppunda

ಪಯಣ : ಸಂಚಿಕೆ - 74 (ಬನ್ನಿ ಪ್ರವಾಸ ಹೋಗೋಣ) tourist places payana Ramesh Naik uppunda

ಪಯಣ : ಸಂಚಿಕೆ - 74 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ "ಕಬಿನಿ ಉದ್ಯಾನವನ" ಕ್ಕೆ ಪಯಣ ಮಾಡೋಣ.

                          
ಕಬಿನಿ, ಕಪಿಲಾ ಎಂದು ಕರೆಸಿಕೊಳ್ಳುವ ಈ ನದಿ ಕೇರಳದ ವಯನಾಡ್ ಜಿಲ್ಲೆಯ ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿಕೊಂಡಿದೆ. ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಕಬಿನಿ ನದಿಯ ಪಕ್ಕದಲ್ಲಿರುವುರಿಂದ ಉದ್ಯಾನಕ್ಕೂ ಇದೇ ಹೆಸರು. ಕರ್ನಾಟಕದ ಪ್ರಸಿದ್ಧ ಅಭಯಾರಣ್ಯಗಳಲ್ಲಿ ಇದೂ ಒಂದು.

ಕಬಿನಿ ರಾಷ್ಟ್ರೀಯ ಉದ್ಯಾನವು ವನ್ಯಜೀವಿಗಳ ಸಂಗಮದಂತಿದೆ. ಮೈಸೂರಿನಿಂದ 80 ಕಿ.ಮೀ. ಮತ್ತು ಬೆಂಗಳೂರಿನಿಂದ 208 ಕಿ.ಮೀ. ದೂರ. ನೀರಾವರಿಗಾಗಿ 1974ರಲ್ಲಿ ನದಿಗೆ ಇಲ್ಲಿ ಅಣೆಕಟ್ಟು ಕಟ್ಟಲಾಗಿದೆ. ಬೃಹತ್ ಸರೋವರ ನಿರ್ಮಾಣವಾಗಿ, ಮಸ್ತಿಗುಡಿ ಹಳ್ಳಿ ಮುಳುಗಿತು. ಇದಕ್ಕೆ ಮಸ್ತಿಗುಡಿ ಸರೋವರ ಎಂದೇ ಕರೆಯಲಾಗುತ್ತದೆ. ಇದು ಪ್ರವಾಸಿಗರ ಇನ್ನೊಂದು ಆಕರ್ಷಣೀಯ ಕೇಂದ್ರ. ಬೇಸಿಗೆಯಲ್ಲಿ ಜಲಾಶಯ ಬತ್ತುವುದರಿಂದ ಹಾಗೂ ನೀರಿನಲ್ಲಿ ಮುಳುಗಿದ್ದ ಮಸ್ತಿಗುಡಿ ದೇವಸ್ಥಾನ ನೋಡಬಹುದು. ಕಬಿನಿ ನದಿಯು ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ಪ್ರತ್ಯೇಕಿಸುತ್ತದೆ. ಕಬಿನಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದರೆ ಬಂಡೀಪುರ, ನಾಗರಹೊಳೆ ಅಭಯಾರಣ್ಯಕ್ಕೂ ಹೋಗಿ ಬರಬಹುದು. ಮೈಸೂರು ರಾಜರ ಬೇಟೆಯ ತಾಣವಾಗಿತ್ತು ಇದು. ಬ್ರಿಟಿಷ್ ವೈಸ್‌ರಾಯ್‌ಗಳು ಕೂಡ ಇದನ್ನು ಬೇಟೆಯ ತಾಣವನ್ನಾಗಿ ಮಾಡಿಕೊಂಡಿದ್ದರು. ಈಗ ಇಲ್ಲಿ ಭೇಟಿ ನಿಷಿದ್ಧ.

ಮಾರ್ಚ್‌ನಿಂದ ಮೇ ವರೆಗೆ ಹಗಲಿನ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೂ, ರಾತ್ರಿ ಹೊತ್ತು 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಮಳೆಗಾಲದಲ್ಲಿ ಭಾರೀ ಮಳೆ. ತೇವ, ಉಷ್ಣವಲಯ ಮತ್ತು ಒಣ ಎಲೆ ಉದುರಿಸುವ ಜಾತಿಯ ಮರಗಳಿವೆ. ಫ್ಲೋರಾ ಮತ್ತು ಘಾನಾ ಜಾತಿಗೆ ಸೇರಿದ ಸಸ್ಯಗಳಿವೆ. ಅಲ್ಲಲ್ಲಿ ಬಿದಿರು ಹಿಂಡುಗಳಿವೆ. ಸಂರಕ್ಷಿತ ಅರಣ್ಯದ ವಿಸ್ತೀರ್ಣ 644 ಚದರ ಎಕರೆ. ಕಡಿದಾದ ಕಣಿವೆಗಳು, ನೀರಿನ ತೊರೆಗಳನ್ನು ಕಾಣಬಹುದು. ಬೂದು ತಲೆಯ ಮೀನು ಹದ್ದುಗಳು, ಕಡಲ ಹಕ್ಕಿಗಳು, ಹಾರ್ನ್‌ ಬಿಲ್, ನವಿಲು, ಬಾತುಕೋಳಿ ಹೀಗೆ 250ಕ್ಕೂ ಹೆಚ್ಚು ಜಾತಿಯ ಪಕ್ಷಿ ಸಂಕುಲಗಳಿವೆ. ಅವನತಿಯಲ್ಲಿರುವ ಪ್ರಾಣಿ - ಪಕ್ಷಿಗಳನ್ನು ರಕ್ಷಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ.


ಆನೆ, ಹುಲಿ, ಚಿರತೆ, ಮೊಸಳೆ, ಜಿಂಕೆ, ಚುಕ್ಕಿ ಜಿಂಕೆ, ಕಾಡುಕೋಣ, ನಾಗರಹಾವು ಮೊದಲಾದ ವನ್ಯಜೀವಿಗಳನ್ನೂ ಇಲ್ಲಿ ನೋಡಬಹುದು. ವರ್ಷದ ಎಲ್ಲ ಕಾಲಗಳಲ್ಲೂ ಭೇಟಿ ನೀಡಿ ಇಲ್ಲಿನ ವನ್ಯಜೀವಿಗಳನ್ನು ಪಕ್ಷಿ ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಆದರೂ ದಟ್ಟ ಅರಣ್ಯ ಪ್ರದೇಶ ಆಗಿರುವುದರಿಂದ ಮಳೆಗಾಲದಲ್ಲಿ ಬರುವುದು ಸ್ವಲ್ಪ ಕಷ್ಟವೇ. ಹಾವು, ವಿಷಜಂತುಗಳು ಕಾಣಿಸಿಕೊಳ್ಳುವುದರಿಂದ ಮತ್ತು ಭಾರೀಫೋಟೋ ಮಳೆಯಾಗುವುದರಿಂದ ಅರಣ್ಯ ಪ್ರದೇಶದಲ್ಲಿ ನಡೆದಾಡುವುದೂ ಸುಲಭವಲ್ಲ.

ಕಬಿನಿ ನದಿಯಲ್ಲಿ ಬೋಟಿಂಗ್ ಮಾಡಬಹುದು. ಬಿದಿರಿನಿಂದ ತಯಾರಿಸಿದ ದೋಣಿ, ಮೋಟಾರ್ ಬೋಟನ್ನು ಬಳಸಿಕೊಳ್ಳಬಹುದು. ಸೈಕ್ಲಿಂಗ್ ಮಾಡಬಹುದು. ಆದಿವಾಸಿ ಗ್ರಾಮಗಳಿಗೆ ಭೇಟಿ ನೀಡಬಹುದು. ಇಲ್ಲಿ ಕಾಣಸಿಗುವ ನಾನಾ ಬಗೆಯ ಪ್ರಾಣಿ-ಪಕ್ಷಿಗಳನ್ನು ನೋಡಿ ಆನಂದಿಸಬಹುದು. ಅವುಗಳ ಆಟ - ತುಂಟಾಟಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದು.

ತೆರೆದ ಜೀಪ್‌ನಲ್ಲಿ ಸಫಾರಿ ನಡೆಸುವ ಮೂಲಕ ಇಲ್ಲಿನ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವುದು ಸಾಧ್ಯ. ಸಂಜೆ ಹೊತ್ತು ಕಬಿನಿ ಹೊಳೆಯಲ್ಲಿ ಬೋಟ್ ರೈಡ್ ಹೋದರೆ ನದಿ ತಟಕ್ಕೆ ಬರುವ ಆನೆಗಳನ್ನು ಕಾಣಬಹುದು. ಇಲ್ಲಿ 150ಕ್ಕೂ ಹೆಚ್ಚು ಆನೆಗಳಿವೆ. ಪರಿಸರ ಪ್ರೇಮಿ ಪ್ರವಾಸೋದ್ಯಮಕ್ಕೆ ಕಬಿನಿ ರಾಷ್ಟ್ರೀಯ ಉದ್ಯಾನವನ ಪ್ರೇರಣೆ ನೀಡುತ್ತದೆ.

"ಸುಂದರ ಉದ್ಯಾನವನ, ಪ್ರಾಣಿ ಸಂಕುಲಗಳ ಪಯಣ, ಹಸಿರಿನ ತೋರಣ, ಜಲಧಾರೆಗಳ ಮನಮೋಹಕ ಹರಿಯುವಿಕೆ, ತಂಪಾದ ಆಹ್ಲಾದಕರ ವಾತಾವರಣ ಈ ಕಬಿನಿ ಉದ್ಯಾನವನ.." 
ಬನ್ನಿ ಒಮ್ಮೆ ಪ್ರವಾಸಕ್ಕೆ
  [ಮುಂದುವರಿಯುವುದು..]
ಬನ್ನಿ ಒಮ್ಮೆ... ಮೈಸೂರಿಗೆ....

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article