ನಿಷ್ಪಾಪಿ ಸಸ್ಯಗಳು : ಸಂಚಿಕೆ - 132
Thursday, December 18, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 132
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸಗಳ ಸಂಭ್ರಮದಲ್ಲಿ ಇದ್ದೀರಲ್ಲವೇ? ಹೌದು.. ವರ್ಷಾಂತ್ಯ ಎಂದಿಗೂ ಬಣ್ಣ ಕಳೆದುಕೊಳ್ಳದು. ನೀವೆಲ್ಲರೂ ಈ ಸಮಯದಲ್ಲಿ ಶಿಕ್ಷಕರ ನೆರಳಿನಂತಿರುತ್ತೀರಿ. ಏನ್ ಹೇಳಿದ್ರೂ ಎಸ್ ಎಸ್ ಅಂತಿರ್ತೀರಿ.. ನಿಜತಾನೇ?
ದೇವರಿಗೂ ಮಕ್ಕಳು ಕೇಳಿದ್ದನ್ನೆಲ್ಲ ಕೊಡಬೇಕೆಂಬಾಸೆ. ಅದಕ್ಕಾಗಿಯೇ ತಾಯಿಯನ್ನು, ಶಿಕ್ಷಕರನ್ನು ಸೃಷ್ಟಿಸಿದನಂತೆ! ಹಾಗೆಯೇ ಭೂಮಿತಾಯಿಯ ರಕ್ಷಣೆಗೂ ಬೇಕಾದುದನ್ನು ಈ ಸೃಷ್ಟಿ ನೀಡಿದೆ ಎಂಬುದಕ್ಕೊಂದು ಉದಾಹರಣೆ ಪುಟಾಣಿ ಗಾತ್ರದ ಹುಳಿಸೊಪ್ಪು!
ಭೂಮಿಯ ಮೇಲ್ಪದರ ರಭಸದ ಮಳೆಗೆ ಕೊಚ್ಚಿ ಹೋಗಬಾರದು, ಬಿರುಸಾದ ಬಿಸಿಲಿಗೆ ಗಡಸಾಗದಿರಲೆಂದೇ ಈ ನಿಷ್ಪಾಪಿ ಸಸ್ಯ ಹುಟ್ಟಿದಂತಿದೆ. ಹೃದಯದಾಕಾರದ, ಇಸ್ಪೀಟ್ ಎಲೆಯಂತೆ ರಚನೆಯ ಮೂರು ಮೂರು ಎಲೆಗಳ ಸಂಯುಕ್ತ ಪತ್ರ ಹೊಂದಿದ ಈ ಲಾಸ್ಯವಾಡುತ್ತ ನಲಿವ ಈ ಸಸ್ಯ ಬುವಿಯ ಮೇಲೆ ಪ್ರೀತಿಯಿಂದ ಅಂಬೆಗಾಲಿಕ್ಕಿ ತೆವಳುತ್ತವೆ.
ವೈಜ್ಞಾನಿಕವಾಗಿ ಆಕ್ಸಾಲಿಸ್ ಕಾರ್ನಿಕ್ಯುಲಾಟಾ (Oxalis corniculata) ಎಂದು ಕರೆಸಿಕೊಳ್ಳುವ ಕನ್ನಡದ ಹುಳಿಸೊಪ್ಪು ಆಕ್ಸಲಿಡೇಸಿ (Oxalidaceae) ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ. ಇದು ನೆಲದ ಮೇಲೆ ಹರಡಿಕೊಳ್ಳುವ ಬಹುವಾರ್ಷಿಕ ಸಸ್ಯ. ನೀರುಗೋಳಿ, ಪುಲ್ಲಮೂರಡಿ, ಸಿವರ್ಗಿ, ಅಂಬುಶಿ ಎಂದೆಲ್ಲ ಸಾಮಾನ್ಯವಾಗಿ ಕರೆಸಿಕೊಳ್ಳುವ ಈ ಹುಳಿಸೊಪ್ಪು ಹೆಸರೇ ಹೇಳುವಂತೆ ಹುಳಿಯಾಗಿದೆ! ಅದಕ್ಕಾಗೇ ವಿಟಮಿನ್ ಸಿ ಸಮೃದ್ಧವಾಗಿದೆ. ರಸ್ತೆ ಬದಿ, ತೇವಾಂಶದ ಭೂಮಿ, ಬಯಲು ಪ್ರದೇಶ, ಕ್ಷೀಣಿಸಿದ ಕಾಡು, ನೆರಳಿನ ಆವಾಸ ಸ್ಥಾನಗಳನ್ನು ಇಷ್ಟಪಡುವ ಹುಳಿಸೊಪ್ಪು ಹುಣಸೆ ಹುಳಿಗೆ ಬದಲಿಗಾಗಿ ಬಳಸಲ್ಪಡಬಹುದಾದ ಸಸ್ಯವಾಗಿದೆ. ತೋಟ, ಕೃಷಿ ಭೂಮಿ, ಹೊಲ ಗದ್ದೆಗಳಲ್ಲಿ 'ಕಳೆ' ಎಂದೇ ಪರಿಗಣಿಸಲ್ಪಟ್ಟಿದೆ. 1753 ರಲ್ಲಿ ಕಾರ್ಲ್ ಲಿನ್ನಿಯಸ್ ಎಂಬ ಸಸ್ಯ ವಿಜ್ಞಾನಿ ಇಟಲಿಯ ಮಾದರಿ ಬಳಸಿ ವಿವರಿಸಿ ವೈಜ್ಞಾನಿಕ ಹೆಸರು ನೀಡಿದರು. ಇದು ಬಹುಶಃ ಆಗ್ನೇಯ ಏಷ್ಯಾದಿಂದ ಬಂದಿದೆ ಎಂಬ ಮಾತಿದ್ದರೂ ಇಂದು ವಿಶ್ವವ್ಯಾಪಿ ವಿತರಣೆಯಾಗಿದೆ ಮಾತ್ರವಲ್ಲದೆ ನೈಸರ್ಗಿಕ ಗೊಳಿಸಲಾಗಿದೆ.
ಐದು ಸೆಂ. ಮೀ. ವ್ಯಾಸದ ಐದು ಹಳದಿ ದಳಗಳ ಸುಂದರವಾದ ಪುಟ್ಟ ಪುಷ್ಪವು ಪುಷ್ಪ ಪತ್ರದ ಜೊತೆಗೆ ಹಳದಿ ಕೇಸರಗಳನ್ನೊಳಗೊಂಡಿದೆ. ವರ್ಷವಿಡೀ ಹೂ ಹಣ್ಣು ಬಿಡುವ ಹಸಿರು ಹುಳಿಸೊಪ್ಪಿನಲ್ಲಿ ನೇರಳೆ ಎಲೆ, ಕಿತ್ತಳೆ ಕೆಂಪು ಹೂಗಳ ತಳಿಗಳೂ ಇವೆ. ಸೂರ್ಯನ ನೇರ ಕಿರಣಗಳು ಬೀಳದಿದ್ದಾಗ ಹೂದಳಗಳು ಮುಚ್ಚಿಕೊಂಡು 'ಸ್ಲೀಪಿಂಗ್ ಬ್ಯೂಟಿ' ಎಂಬ ಹೆಸರು ಪಡೆಯಲು ಕಾರಣವಾಗಿದೆ. ಇದರ ಕಾಯಿಗಳು ಸಿಲಿಂಡರಾಕಾರವಾಗಿದ್ದು ಹಲವು ಪುಟ್ಟ ಕಂದು ಬೀಜಗಳಿರುತ್ತವೆ. ಒಣಗಿದಾಗ ಕಾಯಿ ಸಿಡಿದು ಅಡಿಗಳಷ್ಟು ದೂರ ಬೀಜಗಳು ಹಾರುತ್ತವೆ.
ತೆವಳುವ ಈ ಸಣ್ಣ ಸಸ್ಯದಿಂದೇನು ಪ್ರಯೋಜನವೆಂದು ನೀವು ಕಡೆಗಣಿಸಿದರೆ ತಪ್ಪಾಗಬಹುದು ಗೊತ್ತಾ? ಏಕೆಂದರೆ ಇದೊಂದು ಸಾಂಪ್ರದಾಯಿಕ ಔಷಧಿ ಸಸ್ಯ!. ಇದರ ಬೀಜಗಳು ಆರ್ಸೆನೆಕ್, ಪಾದರಸದ ವಿಷಕ್ಕೆ ಮಾತ್ರವಲ್ಲ, ವಿಷದ ಹಾವು, ಕ್ರಿಮಿಕೀಟಗಳ ಕಡಿತಕ್ಕೂ ಪ್ರತಿವಿಷವಂತೆ!. ದೇಹಕ್ಕೆ ತಂಪಾಗಿ, ನಿರ್ವಿಷಕಾರಿಯಾಗಿ, ಮೂತ್ರವರ್ಧಕವಾಗಿ, ಹೊಟ್ಟೆಯ ಕಾಯಿಲೆ, ಸುಟ್ಟಗಾಯ, ಜ್ವರ, ಅತಿಸಾರಕ್ಕೆ ಔಷಧಿಯಾಗಿ ಮಾತ್ರವಲ್ಲದೆ ಕಾರ್ನಿಯಾದ ಅಪಾರದರ್ಶಕತೆ ಹೋಗಲಾಡಿಸಲೂ ಬಳಸುತ್ತಾರೆ. ಮಕ್ಕಳಿಗೆ ಟಾನಿಕ್ ನಂತೆಯೂ ಬಳಸಲ್ಪಡುತ್ತದೆ.
ಮಕ್ಕಳೇ, 'ಅತಿಯಾದರೆ ಅಮೃತವೂ ವಿಷ' ಎಂಬ ಮಾತೊಂದಿದೆ ಬಲ್ಲಿರಾ? ಹ್ಹಾಂ.. ಹೌದಲ್ವಾ? ದೀರ್ಘಕಾಲ, ಹೆಚ್ಚಿನ ಪ್ರಮಾಣದಲ್ಲಿ ಈ ಸೊಪ್ಪಿನ ಸೇವನೆ ದೇಹದಲ್ಲಿ ಕ್ಯಾಲ್ಸಿಯಂ ಹೀರುವಿಕೆಯನ್ನು ತಡೆಗಟ್ಟಬಹುದೆಂಬ ಎಚ್ಚರಿಕೆಯ ಮಾತೂ ಉತ್ತಮ ಅಂಶಗಳ ಜೊತೆ ಸೇರಿಕೊಂಡಿದೆ ಎಂದು ನೆನಪಿಡಬೇಕು. ಸಸ್ಯಗಳ ಬಳಕೆಯ ಪ್ರಮಾಣವನ್ನೂ ನಾವು ಅರಿತು ಬಳಸುವುದು ಅಗತ್ಯವಾಗಿದೆ. ಆದರೆ ಸಸ್ಯ ಎಷ್ಟೇ ಸಣ್ಣದಿರಲಿ, ದೊಡ್ಡದಿರಲಿ.. ಮಾನವನಿಗೆ ಸಹಕಾರಿಯಾಗಿಯೇ ಇರುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. ನೀವು ಈ ಸಸ್ಯವನ್ನು ಗುರುತಿಸಿರಿ, ಸಾಧ್ಯವಾದರೆ ಫೋಟೋ ತೆಗೆದು ಕಳಿಸಿರಿ.
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************