ಪಯಣ : ಸಂಚಿಕೆ - 73 (ಬನ್ನಿ ಪ್ರವಾಸ ಹೋಗೋಣ)
Friday, December 12, 2025
Edit
ಪಯಣ : ಸಂಚಿಕೆ - 73 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ "ಸುತ್ತೂರು ಶ್ರೀ ಕ್ಷೇತ್ರ" ಕ್ಕೆ ಪಯಣ ಮಾಡೋಣ.
ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಕಂಚಿಯ ರಾಜೇಂದ್ರ ಚೋಳನಿಗೂ, ತಲಕಾಡಿನ ಗಂಗರಾಜ ರಾಚಮಲ್ಲನಿಗೂ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ರಾಜೇಂದ್ರ ಚೋಳನ ಕುದುರೆ ನಿಯಂತ್ರಣಕ್ಕೆ ಸಿಗದೆ ಶರವೇಗದಲ್ಲಿ ಓಡುತ್ತದೆ. ಹಾಗೆ ಓಡಿ ಬಂದ ಕುದುರೆ ಕಪಿಲಾ ನದಿ ತೀರದಲ್ಲಿ ತಪಸ್ಸಿಗೆ ಕುಳಿತಿದ್ದ ಶಿವರಾತ್ರೀಶ್ವರ ಶಿವಯೋಗಿಗಳ ಸುತ್ತ ಭಕ್ತಿಯಿಂದ ಪ್ರದಕ್ಷಿಣೆ ಹಾಕಿ ನಿಲ್ಲುತ್ತದೆ. ಶಿವರಾತ್ರೀಶ್ವರ ಮುನಿಗಳು ಅಲ್ಲೆ ನೆಲೆಸುತ್ತಾರೆ. ಆ ಸ್ಥಳವೇ ಸುತ್ತೂರು ಶ್ರೀ ಕ್ಷೇತ್ರ.
ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸವಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರ ಮತ್ತು ಇಲ್ಲಿನ ಗುರು ಪರಂಪರೆ ಹಾಗೂ ಶ್ರೀಮಠದ ವಿಶಿಷ್ಟ. ಅದರಲ್ಲೂ ಇಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಜರುಗುವ ಸುತ್ತೂರು ಜಾತ್ರೆ ಎಂದೇ ಖ್ಯಾತಿ ಹೊಂದಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಬಹುವಿಶಿಷ್ಟ. ಎಲ್ಲಾ ರೀತಿಯ ಪಾರಂಪರಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಮಹಾಸಂಗಮವಿದು.
ಒಟ್ಟು ಆರು ದಿನಗಳು ಬಹು ವೈವಿಧ್ಯಮಯವಾಗಿ ನಡೆಯುವ ಸುತ್ತೂರು ಜಾತ್ರೆಯಲ್ಲಿ ಮೊದಲ ದಿನ ಶ್ರೀ ಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಕರ್ತೃಗದ್ದುಗೆಗೆ ಬಿಜಯಂಗೈಸಿ ಕೊಳ್ಳಲಾಗುವುದು. ಎರಡನೆ ದಿನ ಸಹಸ್ರ ಕುಂಬೋತ್ಸವ. ಮೂರನೇ ದಿನ ಬೆಳಿಗ್ಗೆ ರಥೋತ್ಸವ. ನಾಲ್ಕನೇ ದಿನ ಸಂಜೆ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ. ಐದನೇ ದಿನ ರಾತ್ರಿ ದೀಪೋತ್ಸವದ ಮಹಾ ಬೆಳಕಿನಲ್ಲಿ ತೆಪ್ಪೋತ್ಸವ.
ಆರನೇ ದಿನ ಅನ್ನ ಬ್ರಹ್ಮೋತ್ಸವ ಹಾಗೂ ವೀರಭದ್ರೇಶ್ವರ ಕೊಂಡೋತ್ಸವಗಳು ಜರುಗುತ್ತವೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆ ಮತ್ತು ಪುರಾಣ ಪ್ರಸಿದ್ಧ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ಶಂಕರ ನಾರಾಯಣ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣ ಸ್ವಾಮಿ ದೇವಾಲಯಗಳಲ್ಲಿ ಪೂಜೆ ನಡೆಯುತ್ತವೆ.
ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ಕಪಿಲಾ ನದಿಯ ದಡದಲ್ಲಿ ಮಠವನ್ನು ಸ್ಥಾಪಿಸಿ, ಸಮಾಜ ಸೇವೆ, ಅನ್ನದಾಸೋಹ, ಶಿಕ್ಷಣ, ಆರೋಗ್ಯ, ಧಾರ್ಮಿಕ ವೈಭವ ಸಾರುವ ಸುತ್ತೂರು ಶ್ರೀ ಕ್ಷೇತ್ರಕ್ಕೆ....
ಬನ್ನಿ ಒಮ್ಮೆ ಪ್ರವಾಸಕ್ಕೆ
[ ಮುಂದುವರಿಯುವುದು.... ]
ಬನ್ನಿ ಒಮ್ಮೆ... ಮೈಸೂರಿಗೆ....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************