-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 131

ನಿಷ್ಪಾಪಿ ಸಸ್ಯಗಳು : ಸಂಚಿಕೆ - 131

ನಿಷ್ಪಾಪಿ ಸಸ್ಯಗಳು : ಸಂಚಿಕೆ - 131
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
      

ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಈ ದಿನಗಳಲ್ಲಿ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿರುವಿರಾ? ಮುಂಜಾವಿನಲಿ ಸವಿಸವಿಯಾದ ಛಳಿ! ಇನ್ನೂ ಹೊದ್ದು ಮಲಗುವ ಆಸೆ! ಹೊರಗಿನ ಗಿಡಮರಗಳಾದರೂ ಅಷ್ಟೆ... ಏನೋ ಒಂದು ಹೊಸತನ! ಹಲಸು, ಮಾವು, ಗೇರು ಹೀಗೆ ಹಣ್ಣುಗಳನ್ನು ನೀಡುವ ನಿಷ್ಪಾಪಿ ಸಸ್ಯಗಳು ಹೂಗಳನ್ನು, ಮಿಡಿಗಳನ್ನು ಸೃಷ್ಟಿಸುವ ಕಾಲವಿದು.

ಇದೇ ಕಾಲದಲ್ಲಿ ಮಾನವನ ಜೀವನಾವರ್ತ ಹಾಗೂ ಸಾಂಸ್ಕೃತಿಕ ಹಬ್ಬಗಳ ಕೊಡುಗೆಯೂ ಬಹಳವಿದೆ. ಬದುಕಿನ ರಸನಿಮಿಷಗಳನ್ನು ತುಂಬಲು ಅದೆಷ್ಟು ಹೂಗಳ ಬಳಕೆಯಿದೆಯಲ್ಲವೇ? ಆಯುಧ ಪೂಜೆ ಬಂದರೆ ಸಾಕು.. ವಾಹನಗಳು ಗೊಂಡೆ ಹೂಗಳ ದೊಡ್ಡ ದೊಡ್ಡ ಹಾರಗಳನ್ನು ಧರಿಸಿಕೊಂಡು ಓಡಾಡುವುದನ್ನು ನೋಡುವುದೇ ಸೊಗಸು. ಜಾತ್ರೆ ಉತ್ಸವಗಳಲ್ಲಿ ಮಾತ್ರವಲ್ಲದೆ ಆಳ್ವಾಸ್ ನುಡಿಸಿರಿಯಂತಹ ಅಕ್ಷರ ಜಾತ್ರೆಯಲ್ಲೂ ನಾನಾ ಬಣ್ಣಗಳ ಗೊಂಡೆಹೂಗಳದ್ದೇ ಕಾರುಬಾರು. ಈ ಗೊಂಡೆ ಹೂಗಳ ಪರಿಚಯವಿಲ್ಲದವರು ವಿರಳ. ಕನ್ನಡದಲ್ಲಿ ಚೆಂಡು ಹೂವೆಂದೇ ಖ್ಯಾತಿ!. 

ನಮ್ಮ ಹಿರಿಯರಿಗೆ ಉದ್ಯಾನವನ, ಅಲಂಕಾರಗಳ ಬಗ್ಗೆ ತಿಳಿಯುವ ಹೆಚ್ಚು ಅಗತ್ಯವಿರಲಿಲ್ಲ. ಅವರ ದುಡಿಮೆಯೇ ಅವರಿಗೆ ದೇವರು. ಅಲ್ಲಿನ ಪರಿಸರವೇ ಅವರ ಅಲಂಕಾರ. ಆದರೂ ಅವರು ಈ ಚೆಂಡುಹೂಗಳ ನಂಟು ಹೊಂದಿದ್ದರು, ಏಕೆ ಬಲ್ಲಿರಾ? ಅವರು ನೆಡುವ ಮೆಣಸು, ಸೌತೆ ಇತ್ಯಾದಿಗಳ ಸಾಲಿನ ನಡುವೆ ಉಪಯೋಗವೇ ಇರದ ಚೆಂಡುಹೂ, ಕಾಮಕಸ್ತೂರಿಯಂತಹ ಗಿಡಗಳನ್ನು ನೆಡುತ್ತಿದ್ದರು!. ಏಕೆಂದರೆ ಅವುಗಳ ಮೂಲಕ ತಮ್ಮ ಕೃಷಿಗೆ ಹಾನಿ ಮಾಡುವ ಕೀಟಗಳು, ಮೊಲದಂತಹ ಸಣ್ಣಪುಟ್ಟ ಸಸ್ತನಿಗಳು ದೂರವಾಗುವ ಬಗ್ಗೆ ತಿಳಿದಿದ್ದರು !. ನಾವು ಈ ನೈಸರ್ಗಿಕ ವಿಧಾನವನ್ನು ಬಿಟ್ಟು ಕೀಟನಾಶಕಗಳನ್ನು, ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ವಿಷಾಹಾರದ ಸೇವನೆ ಮಾಡುತ್ತಾ 'ನಾಗರೀಕರು' ಎಂದುಕೊಂಡಿದ್ದೇವೆ.

ವರ್ಜಿನ್ ಮೇರಿಯ ಗೌರವಾರ್ಥ ಮಾರಿಗೋಲ್ಡ್ (Marigold) ಎಂಬ ಹೆಸರಿನಿಂದ ವಿಶ್ವದಾದ್ಯಂತ ಚಿರಪರಿಚಿತವಾದ ಚೆಂಡು ಹೂವು ಒಂದು ಸರಳವಾದ ಸಸ್ಯ. ಸಂಯುಕ್ತ ಪತ್ರಗಳಾದ ವಿರುದ್ಧ ದಿಕ್ಕಿನ ಹಸಿರಾದ ಎಲೆಗಳು ಸುವಾಸನೆಯಿಂದ ಕೂಡಿವೆ. ಎಲೆಗಳ ರಚನೆ ಬಹಳ ನಾಜೂಕಾಗಿರುತ್ತದೆ. ನೇರವಾದ ಗಿಡಗಳು ಅಡ್ಡ ಬಿದ್ದರೆ ಸಾಕು ಕಾಂಡದ ತುದಿಯವರೆಗೂ ಬೇರುಗಳು ಮೂಡಿ ಎಲೆಗಳ ಕಂಕುಳಿಂದ ಚಿಗುರುಗಳು ಮೂಡಿ ಮೇಲೇರುತ್ತವೆ. ಕಾಂಡ ಮರದಂತೆ ಕಂಡರೂ ಒಳಗೆ ಸ್ಪಂಜಿನಂತೆ ಟೊಳ್ಳು ಭಾಗವೇ ಹೆಚ್ಚು. ಇದರ ಶಾಖೆಗಳನ್ನು ನೆಡುವ ಮೂಲಕ ಬೇಗನೆ ಹೂಗಳನ್ನು ಪಡೆಯಬಹುದು. ಹೂದಳಗಳ ಕೆಳಬಾಗವೇ ತೆಳ್ಳಗೆ ಕಡ್ಡಿಯಂತಹ ರಚನೆಯೆ ಬೀಜವಾಗಿರುತ್ತದೆ. ಬೀಜದ ಮೂಲಕವೇ ಹೆಚ್ಚು ಬೆಳೆಯಲಾಗುತ್ತದೆ. ವಿಶ್ವದಲ್ಲಿ ಹೆಚ್ಚು ಆಫ್ರಿಕನ್ ಮಾರಿಗೋಲ್ಡ್ ನ್ನು ಬೆಳೆಸಲಾಗುತ್ತದೆ. ಆಫ್ರಿಕನ್ ಮಾರಿಗೋಲ್ಡ್, ಫ್ರೆಂಚ್ ಮಾರಿ ಗೋಲ್ಡ್, ಸಿಗ್ನೆಟ್ ಮಾರಿಗೋಲ್ಡ್ ಮೊದಲಾದ ಹಲವು ಮಿಶ್ರತಳಿಗಳು ಎಲ್ಲೆಡೆ ಇದ್ದರೂ ನಮ್ಮಲ್ಲಿ ಕೆಂಪು, ಹಳದಿ, ಬಿಳಿ, ಕೇಸರಿ, ಕಿತ್ತಳೆ ಬಣ್ಣದ ಚೆಂಡು ಹೂವುಗಳಿವೆ. ಅದರಲ್ಲೂ ಹೂವಿನ ದಳಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಉಮಿ ಗೊಂಡೆ ಹೂವು ಅಂದರೆ ಪುಷ್ಪಪಾತ್ರೆಯಲ್ಲಿ ಅಗಲವಾದ ದೊಡ್ಡ ಎಸಳುಗಳಿರದೆ ಕೇವಲ ಎಸಳಿನ ಸಂಕೇತವಷ್ಟೇ ಇದ್ದು ಕೇಸರಗಳಿಂದ ತುಂಬಿರುತ್ತದೆ. ಇವನ್ನು ಗಂಡು ಹೂಗಳೆನ್ನುತ್ತಾರೆ. ಕೆಲವು ಜಾತಿಯಲ್ಲಿ ಈ ಕೇಸರಗಳ ಸುತ್ತಲೂ ನಕ್ಷತ್ರದಂತೆ ಒಂದು ಸುತ್ತಿನ ಎಸಳು ಇರುತ್ತದೆ. ಕೆಲವು ತಳಿಯಲ್ಲಿ ಎರಡು ಮೂರು ಸುತ್ತಿನಲ್ಲೂ ದಳಗಳಿದ್ದು ಮಧ್ಯೆ ಕೇಸರಗಳ ಗುಚ್ಛವಿರುತ್ತದೆ. ಪ್ರತಿ ತಳಿಯಲ್ಲೂ ಗಿಡದ ತುದಿ ಭಾಗ ಹೂವು ಮೊಗ್ಗುಗಳಿಂದ ತುಂಬಿರುತ್ತದೆ. ಮತ್ತೆ ಮತ್ತೆ ಚಿಗುರುವ ಶಾಖೆಗಳಿಂದ ಹೂವು ಹೆಚ್ಚಾಗುತ್ತದೆಯಾದರೂ ಗಾತ್ರದಲ್ಲಿ ಮೂಲ ಗಿಡದಷ್ಟು ದೊಡ್ಡದಾಗಿರುವುದಿಲ್ಲ.

ಸುಮಾರು ಎರಡು ಮೀಟರ್ ಎತ್ತರ ಬೆಳೆಯುವ ಚೆಂಡುಹೂವು ಪ್ರಯೋಜನವೇ ಇರದ ಮಣ್ಣಲ್ಲೂ ಸೊಂಪಾಗಿ ಬೆಳೆಯಬಲ್ಲದು. ತುಂಬಾ ಹೂಗಳ ಆಸೆಯಿಂದ ಗೊಬ್ಬರ ಹಾಕಿ ಬೆಳೆಸಿದರೆ ಗಿಡವೇ ಸೊಕ್ಕಿ ಹರಡೀತು! ಇದರ ಹೂಗಳಿಗೆ ಮಾರುಹೋಗದವರಿಲ್ಲ. ಬಣ್ಣ, ಗಾತ್ರ, ಸುವಾಸನೆಗೆ ಬೇರೆ ಯಾವ ಹೂವೂ ಸಾಟಿಯಿಲ್ಲ. ಇದೇ ಇದರ ವಿಶೇಷತೆ. ಇದು ವಾರ್ಷಿಕವಾಗಿಯೂ, ದೀರ್ಘಕಾಲಿಕವೂ ಆಗಿರಬಲ್ಲದು. 

ಟಾಗೆಟ್ಸ್ ಕುಲದ ಟ್ಯಾಗೆಸ್ಟ್ ಎರೆಕ್ಟಾ ಎಂಬ ಸಸ್ಯ ಶಾಸ್ತ್ರೀಯ ಹೆಸರುಳ್ಳ ಚೆಂಡುಹೂವು ಮೆಕ್ಸಿಕೊ ಹಾಗೂ ಹಲವಾರು ಲ್ಯಾಟಿನ್ ಅಮೇರಿಕಾದ ದೇಶಗಳಿಗೆ ಸ್ಥಳೀಯವಾಗಿದೆ. ಕೆಲವು ಪ್ರಭೇದಗಳು ಪ್ರಪಂಚದಾದ್ಯಂತ ನೈಸರ್ಗಿಕವಾಗಿವೆ. ಟ್ಯಾಗೆಟ್ಸ್ ಮಿನುಟಾ ಎಂಬ ಪ್ರಭೇದವನ್ನಂತೂ ಕೆಲವೆಡೆ ಆಕ್ರಮಣಕಾರಿ ಎಂದು ಪರಿಗಣಿಸಲಾಗಿದೆ. ಕಿತ್ತಳೆ ಹಳದಿ ಬಣ್ಣದ ಚೆಂಡು ಹೂವು ಹೆಚ್ಚಿನ ಬರ ಸಹಿಷ್ಣುತೆ ಹೊಂದಿದೆ. ಜಾತಿ ಅವಲಂಬಿಸಿ ಎಲೆಗಳು ಕಸ್ತೂರಿ ಹಾಗೂ ಕಟುವಾದ ಪರಿಮಳ ಹೊಂದಿರುತ್ತದೆ. ಕೆಲವು ಪ್ರಭೇದಗಳು ವಾಸನೆಯಿಲ್ಲದೆಯೂ ಇವೆ. ದಕ್ಷಿಣ ಆಫ್ರಿಕಾದಲ್ಲಿ ಸಾರಹೀನ ಭೂಮಿಯನ್ನು ಫಲವತ್ತಾಗಿಸಲು ನಿಷ್ಪಾಪಿ ಸಸ್ಯವಾದ ಚೆಂಡು ಹೂವನ್ನು ಬೆಳೆಸುವರು. 

ಪೆರಿಕಾನ್ ಎಂಬ ಚೆಂಡುಹೂವಿನ ಜಾತಿಯಿಂದ ಮೆಕ್ಸಿಕೋದಲ್ಲಿ ಸಿಹಿಯಾದ ಸೋಂಪು ರುಚಿಯ ಔಷಧೀಯ ಚಹಾ ತಯಾರಿಸುವರು. ಪೆರು, ಈಕ್ವೆಡಾರ್ ಚಿಲಿ ಮೊದಲಾದೆಡೆ ಓಕೋಡಾ ಎಂಬ ಆಲೂಗಡ್ಡೆ ಖಾದ್ಯ ತಯಾರಿಗೆ ಬಳಸುತ್ತಾರೆ. ಇಂಕಾ ಆರೆಂಜ್ ತಳಿ ರಾಯನ್ ಹಾರ್ಟಿಕಲ್ಚರಲ್ ಸೊಸೈಟಿಯ ಗಾರ್ಡನ್ ಮೆರಿಟ್ ಪ್ರಶಸ್ತಿಯನ್ನು ಗಳಿಸಿದೆ. ಮೆಕ್ಸಕೋದಲ್ಲಿ ಸತ್ತವರ ದಿನದ ಆಚರಣೆಯಲ್ಲಿ ಬಲಿಪೀಠಗಳನ್ನು, ಸಮಾಧಿಗಳನ್ನು ಅಲಂಕರಿಸಲು ಬಳಕೆ ಮಾಡುತ್ತಾರೆ. ಆದ್ದರಿಂದ ಸತ್ತವರ ಹೂವು ಎಂಬ ಅಡ್ಡ ಹೆಸರೂ ಇದೆ. ಸ್ಪೇನ್ ದೇಶದವರು ಇದನ್ನು ಭಾರತೀಯ ಕಾರ್ನೇಶನ್ ಎನ್ನುತ್ತಾರೆ. ಹಿಸ್ಪಾನಿಕ್ ಪೂರ್ವದ ನಾಗರಿಕತೆಗಳಲ್ಲಿ ಟಾಗೆಟ್ಸ್ ಎರೆಕ್ಟಾದ ಬಳಕೆಯ ಪುರಾತತ್ವ ದಾಖಲೆಗಳು ದಾಖಲಾಗಿವೆ. ಕೊಯೊಲ್ಕ್ಸೌಹ್ಕಿ ಏಕಶಿಲೆಯಲ್ಲಿ ಕಂಡು ಬರುವ ಆಜ್ಟೆಕ್ ಕಲೆಯಲ್ಲಿ ಪ್ರತಿನಿಧಿಸುವ ಹೂವುಗಳಾಗಿ ಚೆಂಡುಹೂವುಗಳನ್ನು ಕಾಣಬಹುದಂತೆ. ಟೆಂಪ್ಲೊ ಮೇಯರ್ ನಲ್ಲಿ ಕಂಡು ಬರುವ ಹೂದಾನಿಯಲ್ಲಿ ಸಸ್ಯ ದೇವತೆ ಧರಿಸುವ ಹಾರದ ಭಾಗವಾಗಿದೆ. ಆಜ್ಟೆಕ್ ಗಳು 20 ಸಂಖ್ಯೆ ಯು ಪೂರ್ಣಗೊಳ್ಳುವ ಸಂಕೇತವಾಗಿ ಈ ಹೂವಿನ ಹೆಸರನ್ನೇ ಬಳಸುತ್ತಾರೆ. ಇದರ ದಳಗಳ ಜೋಡಣೆಗೆ ಥಾಯ್ ಭಾಷೆಯಲ್ಲಿ ಮಿನುಗುವ ನಕ್ಷತ್ರವೆಂದು ಅರ್ಥ ಬರುವಂತೆ ಹೇಳುತ್ತಾರೆ. ಚೆಂಡುಹೂವಿನ ಸಾರಭೂತ ತೈಲದಿಂದ ತುಂಬಿದ ನೀರನ್ನು ಹೊಂಡುರಾಸ್ ನಲ್ಲಿ ಶವ ತೊಳೆಯಲು ಬಳಸುವರು. ಇದರ ಗಿಡಗಳನ್ನು ಸಾಮಾನ್ಯವಾಗಿ ಸ್ಮಶಾನದಲ್ಲಿ ನೆಡುತ್ತಾರೆ. ಕೋಳಿ, ಕೋಳಿ ಮೊಟ್ಟೆ, ಬಿಳಿ ಸಿಗಡಿಯಂತಹ ಕಠಿಣಚರ್ಮಿಗಳಲ್ಲಿ ಬಣ್ಣವನ್ನು ಹೆಚ್ಚಿಸಲು ಚೆಂಡುಹೂವಿನ ಸಾರ ಬಳಸಿದ ಆಹಾರವನ್ನು ನೀಡುವರಂತೆ. ಸುಗಂಧ ದ್ರವ್ಯಕ್ಕೆ ಸೇಬಿನ ಪರಿಮಳ ತುಂಬಲು, ಜವಳಿಯ ಮೇಲೆ ನೈಸರ್ಗಿಕ ಬಣ್ಣ ನೀಡಲು, ಚರ್ಮ ತೊಳೆಯಲು, ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆ ತಡೆಗಟ್ಡಲು ಬಳಸುವರು. ಇದರ ಸುಗಂಧ ದ್ರವ್ಯವನ್ನು ಆಹಾರ, ತಂಬಾಕು ಉದ್ಯಮಗಳಲ್ಲಿ ಸುವಾಸನೆಗಾಗಿ ಬಳಸುವರು. ವಿದೇಶಗಳಲ್ಲಿ ಸಸ್ಯಜನ್ಯ ಎಣ್ಣೆ, ಸಲಾಡ್, ಬೇಯಿಸಿದ ಸರಕು, ಮಿಠಾಯಿ, ಡೈರಿ ಉತ್ಪನ್ನ, ಐಸ್ ಕ್ರೀಮ್, ಮೊಸರು ಇತ್ಯಾದಿ ಆಹಾರೋತ್ಪನ್ನಗಳಿಗೆ ಬಣ್ಣವಾಗಿ ಬಳಸುವರು. ಕೆಲವೆಡೆ ಮಾತ್ರ ಪುಡಿ ಹಾಗೂ ಸಾರಗಳನ್ನು ಪಶು ಆಹಾರವಾಗಿ ಬಳಸಲು ಅನುಮತಿಸಲಾಗಿದೆ.

ಚೆಂಡುಹೂಗಳನ್ನು ಬಯಸುವ ಸಾಕಷ್ಟು ಕ್ರಿಮಿ ಕೀಟಗಳೂ ಇವೆ. ಡಾಟ್ ಪತಂಗ, ಕೆಲವು ಚಿಟ್ಟೆ ಮರಿಗಳಿಗೆ, ಬಂಬಲ್ ಬೀ ಗಳಿಗೆ ಆಹಾರದ ಸಸ್ಯವಾಗಿ, ಮಕರಂದದ ಮೂಲವಾಗಿದೆ. ಚಿಟ್ಟೆ ಪಾರ್ಕ್ ತೋಟಗಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾಡಿನಲ್ಲಿ ಜೀರುಂಡೆಗಳಿಂದಲೂ ಪರಾಗಸ್ಪರ್ಶ ನಡೆಯುತ್ತದೆ. 

1753 ರಲ್ಲಿ ಕಾರ್ಲ್ ಲಿನ್ನಿಯಸ್ ನಿಂದ ವಿವರಿಸಲ್ಪಟ್ಟ ಈ ಚೆಂಡು ಹೂ ನಾನಾ ಕಾರಣಗಳಿಂದ ಹೆಚ್ಚಿನ ಭೂಭಾಗದಲ್ಲಿ ಹರಡಿ ವಿವಿಧ ಕಾರಣಗಳಿಗಾಗಿ ಮಾನವನ ಸಹವಾಸದಲ್ಲಿರುವುದು ಸಾಮಾನ್ಯದ ಮಾತೇ! ಸೊಗಸಾದ ಭೂದೃಶ್ಯ ನೀಡಲು ಚೆಂಡು ಹೂವಿನ ಸಹಕಾರ ವಿಶೇಷವಾಗಿದೆಯಲ್ಲವೇ?

     ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************


Ads on article

Advertise in articles 1

advertising articles 2

Advertise under the article