ಜೀವನ ಸಂಭ್ರಮ : ಸಂಚಿಕೆ - 222
Sunday, December 28, 2025
Edit
ಜೀವನ ಸಂಭ್ರಮ : ಸಂಚಿಕೆ - 222
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಹೊಟ್ಟೆಕಿಚ್ಚು ಎಂದರೇನು? ನೋಡೋಣ. ಈ ಹೊಟ್ಟೆಕಿಚ್ಚು ಎಂದರೆ ಹೊಟ್ಟೆಯಲ್ಲಿ ಉರಿ. ಇದರ ಅರ್ಥ ಮತ್ಸರ, ಅಸೂಯೆ. ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ಹಾಗಂದರೆ ಏನು?. ಮತ್ತೊಬ್ಬರಲ್ಲಿ ಇರುವ ಒಳ್ಳೆಯ ಗುಣ, ವಸ್ತು, ನೋಡಿ ಸಹಿಸದೆ ಇರುವುದು ಹಾಗೂ ನನ್ನಲ್ಲಿ ಇಲ್ಲದ್ದು ಬೇರೊಬ್ಬರಲ್ಲಿ ಇದ್ದರೆ ಸಹಿಸದೆ ಇರುವುದೇ ಅಸೂಯೆ. ಇದಕ್ಕೆ ಮಹಾಭಾರತದಲ್ಲಿ ಬರುವ ಏಕಲವ್ಯನ ಕಥೆ ಉದಾಹರಣೆ. ಇದನ್ನು ಬರೆದವನು ವೇದವ್ಯಾಸ ಮಹರ್ಷಿ. ಇವರು ಭಾರತದ ಜ್ಞಾನ ಸಂಪತ್ತು ಹೆಚ್ಚಿಸಿದವರು. ಅಸೂಯೆ ಎಂದರೆ ಸಹಿಸದ ಗುಣ. ನೆರೆಹೊರೆಯವರು ಸಂತೋಷವಾಗಿದ್ದಿದ್ದು ನನಗೆ ಸಹಿಸದೆ ಇದ್ದರೆ, ಬೇರೆಯವರು ಕಷ್ಟಪಟ್ಟು ಮನೆ ಕಟ್ಟಿದ್ದರೆ, ಅದನ್ನು ನೋಡಿ ನನಗೆ ತಾಪ ಆಗುತ್ತಿದ್ದರೆ, ಅದನ್ನು ಹೊಟ್ಟೆ ಕಿಚ್ಚು ಎನ್ನುವರು. ಅದನ್ನು ಬಿಟ್ಟು ನೋಡಿ ಸಂತೋಷ ಪಟ್ಟರೆ, ಕೇಳಿ ಸಂತೋಷ ಪಟ್ಟರೆ, ಅದಕ್ಕೆ ಅನುಸೂಯ ಎನ್ನುವರು.
ಏಕಲವ್ಯ ಎನ್ನುವ ಹುಡುಗ ಅರಣ್ಯದಲ್ಲಿ ವಾಸ ಮಾಡುತ್ತಿದ್ದರು. ಆತನ ಜೊತೆ ತಾಯಿ ಇದ್ದಳು. ತಂದೆ ಕ್ರೂರ ಮೃಗದ ದಾಳಿಯಿಂದ ಮೃತಪಟ್ಟಿದ್ದನು. ಏಕಲವ್ಯನಿಗೆ ಸುಮಾರು ಎಂಟು, ಹತ್ತು ವಯಸ್ಸು. ಆತನಿಗೆ ಬಿಲ್ಲು ವಿದ್ಯೆ ಕಲಿಯಬೇಕಾಗಿತ್ತು. ಆತ ಅರಣ್ಯದಲ್ಲಿ ಇದ್ದುದ್ದರಿಂದ, ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಬೇಕಾಗಿತ್ತು. ಆತ ಬೇಡರ ಜಾತಿಗೆ ಸೇರಿದವನು. ಏಕಲವ್ಯನಿಗೆ ಒಂದು ಇಚ್ಛೆ, ಮಹಾ ಬಿಲ್ಲುಗಾರನಾಗಬೇಕೆಂದು. ಅದಕ್ಕಾಗಿ ಕಲಿಯಬೇಕೆಂಬ ಇಚ್ಛೆ ಇತ್ತು. ಆತನ ತಾಯಿ ಹೇಳುತ್ತಿದ್ದಳು ಅವಶ್ಯಕವಾಗಿ ಕಲಿ. ಆದರೆ ಪ್ರಾಣಿಗಳನ್ನು ಕೊಲ್ಲಲು ಅಲ್ಲ, ರಕ್ಷಣೆ ಮಾಡಲು ಕಲಿ ಎಂದು ಹೇಳುತ್ತಿದ್ದಳು. ವಿದ್ಯೆ ಇರುವುದು ರಕ್ಷಣೆಗಾಗಿ, ಪೋಷಣೆಗಾಗಿ. ನಾಶಕ್ಕಾಗಿ ಅಲ್ಲ. ಅಂತ ಆತನ ತಲೆಗೆ ತುಂಬಿದಳು. ನಮ್ಮಲ್ಲಿ ಶಕ್ತಿ ಇರಲಿ, ಸಾಮರ್ಥ್ಯವಿರಲಿ, ಬುದ್ದಿ ಇರಲಿ, ಮಾತುಗಾರಿಕೆ ಇರಲಿ, ಎಲ್ಲವನ್ನು ಯಾವುದಕ್ಕೆ ಬಳಸುವುದು?. ವಿದ್ಯೆ ವಿವಾದಕ್ಕೆ, ಹಣ ಗರ್ವಕ್ಕೆ, ಶಕ್ತಿ ಪರರಪೀಡನೆಗೆ ಬಳಸಬಾರದು. ಜ್ಞಾನ ಇದ್ದರೆ ಜ್ಞಾನ ಹಂಚಲು, ಧನ ಇದ್ದರೆ ಸೇವೆ ಮಾಡಲು, ಶಕ್ತಿ ಇದ್ದರೆ ಇನ್ನೊಬ್ಬರನ್ನು, ನಿಸರ್ಗವನ್ನು ರಕ್ಷಿಸುವುದಕ್ಕೆ ಬಳಸಬೇಕು. ಹಾಗೆ ಆ ತಾಯಿ ಮಗನಿಗೆ ಕಲಿಸಿದ್ದಳು. ಕೊಲ್ಲಲು ವಿದ್ಯೆ ಬೇಡ, ರಕ್ಷಣಗಾಗಿ ವಿದ್ಯೆ ಕಲಿ ಎಂದಿದ್ದಳು. ವಿದ್ಯೆ ಬಹಳ ಪವಿತ್ರ. ನಿನ್ನ ತಂದೆ ಇದ್ದರೆ ಎಷ್ಟು ಚೆನ್ನಾಗಿ ನಿನಗೆ ಬಿಲ್ಲು ವಿದ್ಯೆ ಕಲಿಸುತ್ತಿದ್ದ ಗೊತ್ತೇನು?. ನಾನು ತಿಳಿದಿರುವಷ್ಟು ನಿನಗೆ ಕಲಿಸುತ್ತೇನೆ ಎಂದು ಕಲಿಸುತ್ತಿದ್ದಳು. ನೀನು ಕಲಿಯುವ ಮುಂಚೆ ಇದನ್ನು ತಲೆಗೆ ಹಾಕಿಕೊ, ಇದು ಸಾಮಾನ್ಯ ವಿದ್ಯೆಯಲ್ಲ. ಜಗತ್ತನ್ನು, ನಿಸರ್ಗವನ್ನು, ಪ್ರಾಣಿಗಳನ್ನು ಮತ್ತು ಜನರನ್ನು ರಕ್ಷಿಸಬೇಕು. ನಾವು ಮಕ್ಕಳಿಗೆ ಕಲಿಸುತ್ತೇವೆ, ನೀನು ಡಾಕ್ಟರ್ ಆಗಿ, ಕೋಟಿಗಟ್ಟಲೆ ಹಣ ಗಳಿಸಬೇಕು. ನೀನು ವಿದೇಶಕ್ಕೆ ಹೋಗಬೇಕು. ಈ ದೇಶ ಹಿಂದುಳಿದಿದೆ. ಇಲ್ಲೇನಿದೆ?. ಏನು ಪ್ರಯೋಜನವಿಲ್ಲ, ಅಂತ ಹೇಳುತ್ತೇವೆ. ಆಕೆ ಹೇಳುತ್ತಿದ್ದಳು, ಈ ಕಾಡಿನಲ್ಲಿ ಇರಬೇಕು, ಇಲ್ಲಿಯ ಪ್ರಾಣಿ, ನಿಸರ್ಗ ಮತ್ತು ಜನ ರಕ್ಷಿಸಬೇಕು. ಇದು ಆ ತಾಯಿಗೂ ನಮಗೂ ಇರುವ ವ್ಯತ್ಯಾಸ. ಆ ಸಂದರ್ಭದಲ್ಲಿ ಗುರು ಬೇಕಾಗಿತ್ತು. ದ್ರೋಣಾಚಾರ್ಯರ ಹೆಸರು ಕೇಳಿದ್ದ. ಆಗ ಆಚಾರ್ಯ ದ್ರೋಣಾಚಾರ್ಯರ ಬಳಿ ಹೋದನು. ನನಗೂ ಬಿಲ್ಲು ವಿದ್ಯೆ ಕಲಿಸಿಕೊಡಿ ಎಂದು ಕೇಳಿದನು. ಅವಾಗ ದ್ರೋಣಾಚಾರ್ಯರು ಹೇಳಿದರು, "ಈಗ ನಾನು ರಾಜಗುರು, ನೀನು ರಾಜನಲ್ಲ, ಆದ್ದರಿಂದ ನಾನು ನಿನಗೆ ಕಲಿಸಲು ಆಗುವುದಿಲ್ಲ" ಎಂದನು. ಆ ಬಳಿಕ ಕಲಿಯುವ ಇಚ್ಛೆ ಬಲಿಷ್ಠವಾಗಿದ್ದರಿಂದ ದೂರದಲ್ಲಿ ನಿಂತು, ದ್ರೋಣಾಚಾರ್ಯರು ಕೌರವ ಮತ್ತು ಪಾಂಡವ ರಾಜಕುಮಾರರಿಗೆ ಕಲಿಸುತ್ತಿದ್ದುದ್ದನ್ನು ಸೂಕ್ಷ್ಮವಾಗಿ ನೋಡುತ್ತಿದ್ದನು. ಆ ಬಳಿಕ ಹೋಗಿ ತಾನು ಅಭ್ಯಾಸ ಮಾಡುತ್ತಿದ್ದನು. ದ್ರೋಣಾಚಾರ್ಯರ ಮಣ್ಣಿನ ಮೂರ್ತಿ ಮಾಡಿ, ಎದುರಿಗೆ ಇಟ್ಟುಕೊಂಡು, ತಾನೇ ಹೇಳಿಕೊಳ್ಳುತ್ತಿದ್ದನು. ಹೀಗೆ ಹೊಡೆಯಲೇನು? ಹಾಗೆ ಹೊಡೆಯಲೇನು? ಎಂದು ಹೇಳಿಕೊಂಡು, ಬಿಲ್ಲು ವಿದ್ಯೆ ಕಲಿಯುತ್ತಿದ್ದನು. ಕೆಲವೇ ವರ್ಷದಲ್ಲಿ ಅದ್ಭುತ ವಿದ್ಯೆ ಕಲಿತಿದ್ದನು. ಒಂದು ದಿನ ಕೆಲವು ನಾಯಿಗಳು ಬಂದವು. ಅವು ರಾಜರ ನಾಯಿಗಳು. ಈತ ಎಲ್ಲಿ ಅಭ್ಯಾಸ ಮಾಡುತ್ತಿದ್ದನೋ ಅಲ್ಲಿಗೆ ಬಂದವು. ಅವು ಬೊಗಳುತ್ತಿದ್ದವು. ಆ ನಾಯಿಗಳು ಏಕಲವ್ಯನ ಕಣ್ಣಿಗೆ ಕಾಣುತ್ತಿರಲಿಲ್ಲ. ಕೇವಲ ಬೊಗಳುವುದು ಮಾತ್ರ ಕೇಳುತ್ತಿತ್ತು. ಆ ಶಬ್ದ ಕೇಳಿ ಇಲ್ಲಿಂದ ಬಾಣ ಬಿಟ್ಟನು. ಆ ಬಾಣಗಳಿಂದ ನಾಯಿ ಸಾಯಬಾರದು, ಬೊಗಳುವುದು ನಿಲ್ಲಬೇಕು. ಹಾಗೆ ಬಾಣ ಬಿಟ್ಟನು. ಇದಕ್ಕೆ ಶಬ್ದವೇದಿ ಬಿಲ್ಲು ವಿದ್ಯೆ ಎನ್ನುವರು. ಆ ಬಾಣಗಳು ನಾಯಿಗಳ ಬಾಯೊಳಗೆ ಹೊಕ್ಕಿತ್ತು. ಆದರೆ ಒಂದು ತೊಟ್ಟು ರಕ್ತ ಬಂದಿರಲಿಲ್ಲ. ಅವುಗಳ ಜೀವಕ್ಕೆ ತೊಂದರೆಯಾಗಿರಲಿಲ್ಲ. ಬೊಗಳುವುದು ನಿಂತಿತ್ತು. ಅವುಗಳ ಕ್ರೂರತನ ನಿಂತಿತ್ತು. ಎಂತಹ ಅದ್ಭುತವಿದ್ಯೆ. ಏಕಲವ್ಯ ತನ್ನಷ್ಟಕ್ಕೆ ತಾನೇ ಕಲಿತಿದ್ದನು. ಆ ನಾಯಿಗಳು ವಾಪಸ್ಸು ಹೋದವು. ಇವುಗಳನ್ನು ಕೌರವ ಪಾಂಡವ ರಾಜಕುಮಾರರು ಮತ್ತು ದ್ರೋಣಾಚಾರ್ಯರು ನೋಡಿದರು.
ದ್ರೋಣಾಚಾರ್ಯರಿಗೆ ಆಶ್ಚರ್ಯವಾಗಿತ್ತು. ಇಂತಹ ಅಪ್ರತಿಮ ಅದ್ಭುತವಿದ್ಯೆ ಯಾರದು ಅಂದನು. ಇದು ಸಾಮಾನ್ಯ ವಿದ್ಯೆಯಲ್ಲ, ನನಗೂ ಸಹಿತ ಗೊತ್ತಿಲ್ಲ. ಇಲ್ಲಿ ಯಾರೋ ಒಬ್ಬ ಮನುಷ್ಯ ಕಾಯೋ ವಿದ್ಯೆ ಕಲಿತಿದ್ದಾನೆ. ಅವನ ಬಳಿ ಎಲ್ಲಾ ರಾಜಕುಮಾರರನ್ನು ಕರೆದುಕೊಂಡು ದ್ರೋಣಾಚಾರ್ಯರು, ಏಕಲವ್ಯನ ಬಳಿಗೆ ಬಂದರು. ಅರ್ಜುನನಿಗೆ ಹೊಟ್ಟೆಕಿಚ್ಚು ಶುರುವಾಯಿತು. ಏಕಲವ್ಯ ಯಾರು ಅಂತ ಗೊತ್ತಿಲ್ಲ. ಈತ ನನಗಿಂತ ಶ್ರೇಷ್ಠ ವಿದ್ಯೆ ಕಲಿತಿದ್ದನಲ್ಲ ಅಂತ. ಅರ್ಜುನ ವೀರ, ಶೂರ, ಸ್ಪುರದ್ರೂಪಿ ಎಲ್ಲ ಇತ್ತು. ಅಂದರೆ ವ್ಯಕ್ತಿ ಎತ್ತರಕ್ಕೆ ಬೆಳೆದ ಮಾತ್ರಕ್ಕೆ ಹೊಟ್ಟೆ ಕಿಚ್ಚು ಇರಬಾರದೆಂದೇನು ಇಲ್ಲ. ದ್ರೋಣಾಚಾರ್ಯರು ಎದುರಿಗೆ ಬಂದ ಕೂಡಲೇ ಏಕಲವ್ಯನಿಗೆ ಬಹಳ ಸಂತೋಷವಾಯಿತು. ಹೋಗಿ ನಮಸ್ಕಾರ ಮಾಡಿದ. ಏಕಲವ್ಯ ಹೇಳಿದ, "ಗುರುಗಳೇ, ನೀವೇ ನನಗೆ ಗುರುಗಳು. ನಾನು ಮೆಚ್ಚಿದ ಗುರು. ನೀವು ನನ್ನನ್ನು ಶಿಷ್ಯ ಅಂತ ಸ್ವೀಕರಿಸಲಿಲ್ಲ. ನಾನು ಮಾತ್ರ ಗುರು ಅಂತ ಭಾವಿಸಿ, ನಿಮ್ಮ ಮೂರ್ತಿ ಇಟ್ಟು, ಅಭ್ಯಾಸ ಮಾಡಿದೆ. ನೀವೇ ನನ್ನೊಳಗೆ ಪ್ರೇರಣೆ ನೀಡಿದ್ದು" ಎಂದನು. ನನ್ನ ತಾಯಿ ಹೇಳುತ್ತಿದ್ದಳು, "ರಕ್ಷಣೆಗಾಗಿ ವಿದ್ಯಾ" ಅಂತ. ಅದಕ್ಕಾಗಿ ನಾನು ಈ ವಿದ್ಯೆ ಕಲಿತಾ ಇದ್ದೀನಿ ಅಂದನು. ದ್ರೋಣಾಚಾರ್ಯರಿಗೆ ಒಳಗೊಳಗೆ ಸಂತೋಷವಾಗಿತ್ತು. ಎಲ್ಲರಿಗೂ ವಿದ್ಯೆ ಬಂದರೆ ಜಗತ್ತು ಸುರಕ್ಷಿತ. ಕೆಟ್ಟದ್ದನ್ನು ನಾಶ ಮಾಡಬೇಕೆ ವಿನಃ ಕೆಟ್ಟವರನ್ನು ನಾಶ ಮಾಡಬಾರದು. ಕೆಟ್ಟತನ ಹೋಗಬೇಕು, ಜನ ಉಳಿಯಬೇಕು. ಹಾಗೆ ವಿದ್ಯೆ ಸಾಧಿಸಿದ್ದನು.
ಅರ್ಜುನನಿಗೆ ತಾಪ ಆಯ್ತು. ಆಗ ಅರ್ಜುನ, ಗುರುಗಳಿಗೆ ಹೇಳಿದ, "ಗುರುಗಳೇ, ನೀವು ನನ್ನನ್ನು ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುತ್ತೇನೆ ಅಂತ ಮಾತು ಕೊಟ್ಟಿದ್ದೀರಿ. ನನಗಿಂತ ಈತನದು ಶ್ರೇಷ್ಠ ವಿದ್ಯೆ. ನಿಮ್ಮ ಶಿಷ್ಯ ಅಂತ ಹೇಳುತ್ತಾ ಇದ್ದಾನೆ. ಈತ ಗುಪ್ತ ಶಿಷ್ಯ. ನಿಮ್ಮ ಮಾತು ನೀವು ಪಾಲಿಸಬೇಕಲ್ಲ" ಅಂದನು. ನನಗಿಂತ ಶ್ರೇಷ್ಠ ಶಿಷ್ಯ ಇರಬಾರದು, ಹಾಗೆ ಆಗಬೇಕು ಅಂದನು. ಹೀಗೆ ಹೇಳಿ ದ್ರೋಣಾಚಾರ್ಯರಿಗೆ ಒತ್ತಡ ತಂದನು. ಮುಂದೆ ದ್ರೋಣಾಚಾರ್ಯರು, ಏಕಲವ್ಯನಿಗೆ ಹೇಳಿದರು, "ನೀನು ನನ್ನ ಶಿಷ್ಯ ಅಲ್ಲವೇ, ಗುರುದಕ್ಷಿಣೆ ನೀಡು" ಎಂದರು. ಆಗ ಏಕಲವ್ಯ ಆಗಬಹುದು ಹೇಳಿ ಅಂದ. ಆಗ ದ್ರೋಣಾಚಾರ್ಯರು "ನಿನ್ನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ನೀಡು" ಅಂದನು. ಆಗ ಏಕಲವ್ಯ ಕೊಟ್ಟ ಮಾತಿನಂತೆ ತನ್ನ ಬಾಣದಿಂದ ಹೆಬ್ಬೆರಳನ್ನೇ ಕತ್ತರಿಸಿ ಗುರುದಕ್ಷಿಣೆ ನೀಡಿದನು. ಮುಂದೆ ಬಿಲ್ಲು ಹೂಡದಂತೆ ಆಯಿತು. ಆ ಶ್ರೇಷ್ಠ ವಿದ್ಯೆ ಮರೆಯಾಯಿತು. ಮನಸು ಮಾಡಿದರೆ, ಮನಸ್ಸು ಕಲಿಸುತ್ತದೆ ಎನ್ನುವುದಕ್ಕೆ ಏಕಲವ್ಯ ಸಾಕ್ಷಿ. ಮನಸ್ಸು ಇದ್ದರೆ ನಿಸರ್ಗವೇ ಕಲಿಸುತ್ತದೆ. ನಿಸರ್ಗವೇ ಗುರು. ಏತಕ್ಕೆ ನಿಸರ್ಗ ಗುರು ಅಂದೆ ಅಂದರೆ ಅಸೂಯೆಗೆ ಅಜ್ಞಾನ ಕಾರಣ. ಸರಿಯಾದ ಜ್ಞಾನ ಮಾಡಿಕೊಂಡರೆ ಅಸೂಯೆ ಆಗುವುದಿಲ್ಲ. ನಿಸರ್ಗದಲ್ಲಿ ಎಷ್ಟು ಸಸ್ಯ, ಪ್ರಾಣಿ, ಪಕ್ಷಿಗಳು ಇವೆಯೋ ಅವೆಲ್ಲಾ ಭಿನ್ನ-ಭಿನ್ನ. ಒಂದು ಗಿಡವನ್ನೇ ನೋಡಿ. ಅದರ ಎಲೆಗಳು ಒಂದೇ ತರಹ ಕಂಡರೂ, ಹಸಿರು ಬಣ್ಣವನ್ನೇ ಹೊಂದಿದ್ದರೂ, ಪ್ರತಿಯೊಂದು ಎಲೆಯೂ ಭಿನ್ನ-ಭಿನ್ನ. ಸೂಕ್ಷ್ಮವಾಗಿ ನೋಡಿ. ಎಲ್ಲಾ ಗಿಡಗಳು ಹಸಿರೇ ಇದ್ದರೂ, ಪ್ರತಿಯೊಂದು ಗಿಡದ ಹಸಿರು ಬಣ್ಣದಲ್ಲಿ ವ್ಯತ್ಯಾಸ ಇದೆ. ಹಾಗೆ ನಾವೆಷ್ಟು ಜನ ಇದ್ದೀವಿಯೋ, ಅಷ್ಟು ಜನ ಬಿನ್ನ. ಅವಳಿಗಳು ಭಿನ್ನತೆ ಇದೆ. ಯಾಕೆ ಹೀಗೆ ಮಾಡಿದ್ದು?. ನಿಸರ್ಗ ಎಲ್ಲಾ ಒಂದೇ ರೀತಿ ಇದ್ದರೆ ಆಕರ್ಷಕವಾಗಿ ಇರೋದಿಲ್ಲ. ನಿಸರ್ಗ ವೈವಿಧ್ಯ ಇರುವುದರಿಂದ ಅಷ್ಟು ಆಕರ್ಷಣೆ. ಈಗ ನಾವು ಗುರುತಿಗೆ ಹೆಬ್ಬೆಟ್ಟಿನ ಸಹಿ ಮಾಡಿಸಿಕೊಳ್ಳುತ್ತೇವೆ. ಅದರಲ್ಲಿ ಇರುವ ರೇಖೆಗಳು ಭಿನ್ನ-ಭಿನ್ನ. ಒಬ್ಬರದಂತೆ ಇನ್ನೊಬ್ಬರದು ಇರುವುದಿಲ್ಲ. ಹಾಗೆ ನಿಸರ್ಗ ಒಬ್ಬೊಬ್ಬರಿಗೆ ಒಂದೊಂದು ಸಾಮರ್ಥ್ಯ ಇಟ್ಟಿದೆ. ಎಲ್ಲರಲ್ಲೂ ಎಲ್ಲಾ ಶಕ್ತಿ ಸಾಮರ್ಥ್ಯ ಇರುವುದಿಲ್ಲ. ಅವುಗಳನ್ನು ತಿಳಿದು ನಮ್ಮಲ್ಲಿ ಇಂದ್ರಿಯ, ಮನಸ್ಸನ್ನು ದೇಹದಲ್ಲಿ ಅಳವಡಿಸಿದೆ. ನಿಸರ್ಗ ನಮಗೆ ಏನು ಅಳವಡಿಸಿದಿಯೋ, ಅದನ್ನೇ ಬಳಸಿ, ಬದುಕು ಕಟ್ಟಿಕೊಳ್ಳಬೇಕು. ಯಾವ ಉದ್ದೇಶಕ್ಕೆ ಅಳವಡಿಸಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು. ನಿಸರ್ಗ, ಇಂದ್ರಿಯಗಳು ಮತ್ತು ಬುದ್ದಿಯನ್ನು ನೀಡಿದ್ದು ತಿಳಿದುಕೊಳ್ಳಲು. ಹಾಗೆಯೆ ಇಂದ್ರಿಯಗಳು ಮತ್ತು ಮನಸ್ಸನ್ನು ನೀಡಿದ್ದು ಅನುಭವಿಸಲು.
ಉದಾಹರಣೆಗೆ ನಿಸರ್ಗ ನಮ್ಮಲ್ಲಿ ಕಣ್ಣು ಅಳವಡಿಸಿದೆ. ನನ್ನಲ್ಲಿ ಏನಿಲ್ಲ ನೋಡಿ ಮತ್ಸರ ಪಡು ಅಂತ ಅಲ್ಲ. ನಮ್ಮ ಮುಂದೆ ಏನೇನು ಒಳ್ಳೆಯದು ಇದೆ ?. ನೋಡಲು, ಅದರ ಬಗ್ಗೆ ತಿಳಿದುಕೊಳ್ಳಲು ಬುದ್ಧಿ ಅಳವಡಿಸಿದೆ. ಅದರ ಸೌಂದರ್ಯ ಅನುಭವಿಸಲು ಮನಸ್ಸು ಇಟ್ಟಿದೆ. ಇದರ ಬಗ್ಗೆ ಸರಿಯಾದ ಜ್ಞಾನ ಇದ್ದರೆ, ನನ್ನಲ್ಲಿ ಎಲ್ಲಾ ಶಕ್ತಿ ಸಾಮರ್ಥ್ಯ ಇಲ್ಲ. ನನ್ನಲ್ಲಿ ಇರುವ ಶಕ್ತಿ, ಸಾಮರ್ಥ್ಯ ಜಗತ್ತನ್ನು ಶ್ರೀಮಂತ ಗೊಳಿಸಲು ಬಳಸುವುದು. ಉಳಿದಿದ್ದು ಯಾರಲ್ಲಿದಿಯೋ? ಎಲ್ಲಿದಿಯೋ? ಅಲ್ಲಿ ಹೋಗಿ ನೋಡಿ, ಕೇಳಿ, ಮುಟ್ಟಿ, ಮೂಸಿ, ರುಚಿಸಿ ಅದರ ಬಗ್ಗೆ ತಿಳಿದು, ಮನಸ್ಸಿನಲ್ಲಿ ಅದನ್ನು ತುಂಬಿಕೊಂಡು, ಮಗ್ನತೆಯಿಂದ ಅನುಭವಿಸಿ ಸಂತೋಷ ಪಟ್ಟರೆ ಅಸೂಯೆ ಇರುವುದಿಲ್ಲ. ಬದುಕು ಕಟ್ಟಿಕೊಳ್ಳುವುದು ಮನಸ್ಸು ವಿನಹ ಬೇರೆ ಯಾವುದು ಅಲ್ಲ. ಆ ಮನಸೇ ವಿಚಾರ ಮಾಡುವುದು, ಕಲ್ಪಿಸಿಕೊಳ್ಳುವುದು, ಭಾವಿಸುವುದು, ಸುಖ ದುಃಖ ಅನುಭವಿಸುವುದು, ಎಲ್ಲಾ ಮಾಡುವುದು ಮನಸ್ಸು. ಇದನ್ನು ಸರಿಯಾಗಿ ಬಳಸಿಕೊಂಡು, ಎಲ್ಲಿದಿಯೋ?. ಹೇಗಿದೆಯೋ? ಯಾರಲ್ಲಿದಿಯೋ?. ನೋಡಿ, ಕೇಳಿ, ತಿಳಿದು ತನ್ಮಯವಾಗಿ ಮನಸ್ಸು ತುಂಬಿಕೊಂಡು ಸಂತೋಷಪಡಬೇಕು. ಇದರಿಂದ ಅನುಸೂಯ ಗುಣ ಬೆಳೆಯುತ್ತದೆ, ಅಲ್ಲವೇ ಮಕ್ಕಳೇ?.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************