ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 110
Wednesday, December 24, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 110
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು ಅಲ್ಲವೇ. ವಿಕಿರಣ ಶೀಲ ಮೂಲವಸ್ತುಗಳು ಆಲ್ಫಾ ಅಥವಾ ಬೀಟಾ ಕೊಳೆಯುವಿಕೆಯಿಂದಾಗಿ (alpha or beta decay) ತಮ್ಮ ಪರಮಾಣುಗಳ ಸಂಖ್ಯೆಯಲ್ಲಿ ಅರ್ಧಕ್ಕಿಳಿಯುತ್ತದೆ. ಆದರೆ ಕೀಟನಾಶಕಗಳು, ಕಳೆನಾಶಕಗಳು ಇತ್ಯಾದಿ ರಾಸಾಯನಿಕಗಳ ವಿಷಯದಲ್ಲಿ ಅವುಗಳ ಅಣುಗಳು ವಿಘಟನೆಯಾಗುವುದಿಲ್ಲ. ಬದಲಾಗಿ ಅವುಗಳ ಪ್ರಬಲತೆ ಅರ್ಧಕ್ಕಿಳಿಯುತ್ತದೆ ಅಷ್ಟೇ. ಉದಾಹರಣೆಗೆ ಕೆಫಿನ್ ನೋಡಿ. ಅದು ರಕ್ತದಲ್ಲಿ ಉಳಿಯುವುದಿಲ್ಲ ಬದಲಾಗಿ ಮೂತ್ರಪಿಂಡಗಳು ಕೆಫಿನ್ ಅನ್ನು ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತವೆ. ಇಲ್ಲಿ ಅರ್ಧಾಯುಷ್ಯಕ್ಕೆ ಬೇರೆಯದೇ ಅರ್ಥ. ಕೀಟನಾಶಕಗಳನ್ನೋ ಕಳೆನಾಶಕಗಳನ್ನೋ ಬಳಸಿದಿರಿ ಎಂದಿಟ್ಟುಕೊಳ್ಳೋಣ. ಅವುಗಳು ನೀರಿನಲ್ಲಿ ತೊಳೆದು ಹೋಗಿ ಅವುಗಳ ಪ್ರಬಲತೆ ಕಡಿಮೆಯಾಗಿ ಬಿಡುತ್ತದೆ. ಮಳೆಗಾಲದಲ್ಲಿ ನಿಮ್ಮ ಅಡಿಕೆ ತೋಟಕ್ಕೆ ಬೋರ್ಡೋ ಮಿಶ್ರಣ ಸಿಂಪಡಿಸುತ್ತೀರಲ್ಲ. ಈ ತುತ್ತ ಮತ್ತು ಸುಣ್ಣದ ಮಿಶ್ರಣ ಒಂದು ಸ್ಪರ್ಶ ಶಿಲೀಂಧ್ರನಾಶಕ (contact fungicide). ಇದು ವಿಪರೀತ ಮಳೆಯಲ್ಲಿ ಸುಲಭವಾಗಿ ತೊಳೆದು ಹೋಗಿ ಅದರ ಪ್ರಬಲತೆ ಕಡಿಮೆಯಾಗಿ ಬಿಡುತ್ತದೆ. ಅದಕ್ಕಾಗಿ ಮಿಶ್ರಣ ಸಿದ್ದಪಡಿಸುವಾಗ ಅದಕ್ಕೆ ಅಂಟು ಸೇರಿಸುತ್ತಾರೆ. ಈ ಅಂಟು ಈ ಶಿಲೀಂದ್ರನಾಶಕದ ಅರ್ಧಾಯುಷ್ಯವನ್ನು ಹೆಚ್ಚಿಸುತ್ತದೆ. ಅಂದರೆ ಅದು ಹೆಚ್ಚು ಸಮಯ ಪ್ರಬಲತೆ ಕಡಿಮೆಯಾಗದೆ ಹಾಗೆ ಉಳಿಯುತ್ತದೆ.
ಈಗ ನಮ್ಮ ವಿಷಯಕ್ಕೆ ಬರೋಣ. ರಕ್ತವನ್ನು ವಿಷವಾಗಿಸುವ ಕಾರ್ಬಾಕ್ಸಿ ಹೀಮೋಗ್ಲೋಬಿನ್ ಇದೆಯಲ್ಲಾ ಅದಕ್ಕೂ ಅರ್ಧಾಯುಷ್ಯವಿದೆ. ಆದರೆ ಅದು ಊಸರವಳ್ಳಿಯ ತರಹ ಬೇರೆ ಬೇರೆ ಸಂದರ್ಭದಲ್ಲಿ ಬೇರೆಬೇರೆ ಅರ್ಧಾಯುಷ್ಯವನ್ನು ಪ್ರದರ್ಶಿಸುತ್ತದೆ ಅಷ್ಟೇ. ಮೂರು ಸಂದರ್ಭಗಳಿವೆ. ಮೊದಲನೆಯದು ಸಾಮಾನ್ಯ ವಾತಾವರಣದಲ್ಲಿ COHb ನ ಅರ್ಧಾಯುಷ್ಯ 300 ನಿಮಿಷಗಳು ಅಂದರೆ 5 ಗಂಟೆಗಳು. ಇದು ವ್ಯಕ್ತಿಯಿಂದ ವ್ಯಕ್ತಿಗೆ 4 ರಿಂದ 6 ಗಂಟೆಗಳು. ಸಾಮಾನ್ಯ ಒತ್ತಡದಲ್ಲಿ (normobaric) 100% ಆಮ್ಲಜನಕದ ವಾತಾವರಣದಲ್ಲಿ COHb ನ ಅರ್ಧಾಯುಷ್ಯ 40 ರಿಂದ 80 ನಿಮಿಷಗಳಿಗೆ ಇಳಿಯುತ್ತದೆ. ಅಧಿಕ ಒತ್ತಡದಲ್ಲಿರುವ (hyperbaric) 100% ಆಮ್ಲಜನಕವನ್ನು ಒದಗಿಸಿದರೆ ಈ ಸಮಯವು 15 ರಿಂದ 30 ನಿಮಿಷಗಳಿಗಿಳಿಯುತ್ತದೆ. ಆದ್ದರಿಂದ ತೀವ್ರ ಪ್ರಬಲತೆಯ ಸಂದರ್ಭದಲ್ಲಿ ನೀಡುವ ಈ ರೀತಿಯ ಚಿಕಿತ್ಸೆಯು ಪ್ರಾಣವುಳಿಸುವಲ್ಲಿ ಅತ್ಯಂತ ಸೂಕ್ತವಾದುದು. ಇದನ್ನು ಅಧಿಕ ಒತ್ತಡದ ಆಮ್ಲಜನಕ ಚಿಕಿತ್ಸೆ ಎನ್ನುವುದು (Hyperbaric Oxygen Therapy HBOT).
ನೋಡಿದಿರಾ ನಾವಿಬ್ಬರೂ ಜನುಮದ ಜೋಡಿ ಎಂದು ನಂಬಿಸಿ ಇಂಗಾಲದ ಮಾನಾಕ್ಸೈಡ್ ನ ಜೊತೆಗೆ ಹೋದ ಹೀಮೋಗ್ಲೋಬಿನ್ ಆಮ್ಲಜನಕ ಬೇಕಾದಷ್ಟು ಸಿಗುತ್ತದೆ ಎಂದಾಗ ಇಂಗಾಲದ ಮಾನಾಕ್ಸೈಡ್ ಅನ್ನು ಒದ್ದು ಹೊರ ಹಾಕಿ ಆಮ್ಲಜನಕವನ್ನು ಮತ್ತೆ ಮದುವೆಯಾಗಿಬಿಡುತ್ತದೆ.
ಈ ರೀತಿಯ ಹೀಮೋಗ್ಲೋಬಿನ್ ನ ಗೋಸುಂಬೆತನ ಜೀವ ಉಳಿಸುತ್ತದೆ ನೋಡಿ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************