-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 197

ಸ್ಫೂರ್ತಿಯ ಮಾತುಗಳು : ಸಂಚಿಕೆ - 197

ಸ್ಫೂರ್ತಿಯ ಮಾತುಗಳು : ಸಂಚಿಕೆ - 197
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                           

ಕಲಿಯುಗದಲ್ಲಿ ಸಂಘ ಶಕ್ತಿಗೆ ಮಾತ್ರ ಜಯ ಎಂಬ ಅನುಭವೋಕ್ತಿಯಿದೆ. ಸಂಘ ಶಕ್ತಿ ಬಲವಾಗಿದ್ದರೆ ಗೆಲುವು ಮತ್ತು ಗೆಲವು ಇವೆರಡೂ ಖಚಿತ. ರಾಷ್ಟ್ರೋನ್ನತಿ ಮತ್ತು ಧರ್ಮೋನ್ನತಿಯಾಗಲು ಒಗ್ಗಟ್ಟು ನಮ್ಮ ಮೂಲ ಮಂತ್ರವಾಗಿರಬೇಕು. ಒಗ್ಗಟ್ಟು ರಾಹಿತ್ಯವಾದರೆ ಅಧಃಪತನವೇ ವಿನಹ ಔನ್ನತ್ಯವಿಲ್ಲ.

ಖಾಸಗಿ ವಿದ್ಯಾರ್ಥಿ‌ ನಿಲಯದಲ್ಲಿ ಬೆಳಗ್ಗಿನ ತಿಂಡಿಗೆ ಪ್ರತಿದಿನ ಬಿಸಿ ಬೇಳೆ ಬಾತ್‌ ಮಾಡುತ್ತಿದ್ದರು. ಇದನ್ನು ತಿಂದು ತಿಂದು ಕೆಲವರಿಗೆ ವಾಕರಿಕೆ ಬರಲಾರಂಭಿಸಿತು. ಅವರಿಗೆ ಬಿಸಿಬೇಳೆ ಬಾತ್‌ ಸುತಾರಾಂ ಇಷ್ಟವಿಲ್ಲದ ತಿಂಡಿ. ನಿಲಯದ ಶೇಕಡಾ ಹದಿನೈದು ವಿದ್ಯಾರ್ಥಿಗಳಿಗೆ ಬಿಸಿಬೇಳೇ ಬಾತ್ ಅಪ್ಯಾಯಮಾನವದರೆ ಉಳಿದವರ ರುಚಿಸಹ್ಯತೆ ವಿಭಿನ್ನ. ಶೇಕಡಾ ಎಂಭತೈದು ವಿದ್ಯಾರ್ಥಿಗಳು ಹಾಸ್ಟೆಲ್ ಮುಖ್ಯಸ್ಥರ ಮುಂದೆ ತಮ್ಮ ಅಹವಾಲು ಮುಂದಿಟ್ಟರು. ದಿನಾ ಬೇರೆ ತಿಂಡಿ ಮಾಡಿಕೊಡಿ, ಬಿಸಿ ಬೇಳೆ ಬಾತ್‌ ತಿಂದು ನಮ್ಮ ನಾಲಗೆಯ ರಸಾಸ್ವಾದನಾ ಶಕ್ತಿಯೇ ದುರ್ಬಲವಾಗಿದೆ. ದಯವಿಟ್ಟು ತಿಂಡಿಗಳಲ್ಲಿ ಬದಲಾವಣೆ ಮಾಡಿ ಎಂದು ಗೋಗರೆದರು. ಮುಖ್ಯಸ್ಥರು ತಾನೊಂದು ಸಭೆ ಕರೆಯುವೆ. ಹೆಚ್ಚು ಮತ ಪಡೆಯುವ ತಿಂಡಿ ಮಾಡೀಸೋಣ ಎಂದು ಅಹವಾಲುದಾರರನ್ನು ಕಳುಹಿಸಿ ಕೊಟ್ಟರು. ಅಹವಾಲುದಾರರು ಬಹಳ ಸಂತಸ ಪಟ್ಟು ಅವರ ಓದು ಅಭ್ಯಾಸಗಳ ಕೋಣೆಗಳಿಗೆ ಹಿಂತಿರುಗಿದರು.

ಮರುದಿನ ನಿಲಯದ ಮೇಲ್ವಿಚಾರಕರ ಸಮಕ್ಷಮ ಮುಖ್ಯಸ್ಥರು ನಿಲಯಾರ್ಥಿಗಳ ಸಭೆ ಕರೆದರು. ಎಲ್ಲ ವಿದ್ಯಾರ್ಥಿಗಳೂ ಸೇರಿದರು. ಅವರೆಲ್ಲರಲ್ಲಿ ತಿಂಡಿಯ ಉದ್ದನೆಯ ಪಟ್ಟಿಯಿತ್ತು. ಇವುಗಳಲ್ಲಿ ಯಾವುದಾದರೂ ನಮಗೊಪ್ಪಿಗೆಯಿದೆ ಎಂದು ಪಟ್ಟಿಯನ್ನು ಪ್ರತಿಯೊಬ್ಬರೂ ಮುಖ್ಯಸ್ಥರಿಗೆ ನೀಡಿದರು. ಕೆಲವರ ಪಟ್ಟಿಯಲ್ಲಿ ಪೂರಿ ಸಾಗು, ಕೆಲವರದರಲ್ಲಿ ಚಪಾತಿ ಗಸಿ, ಇನ್ನೂ ಕೆಲವರೆಲ್ಲಿ ಇಡ್ಲಿ ವಡೆ ಹೀಗೆ ಪಟ್ಟಿಯೊಳಗೆ ವಿವಿಧ ರೀತಿಯ ತಿಂಡಿಯ ಬೇಡಿಕೆಯಿತ್ತು. ನಿಲಯದ ಮುಖ್ಯಸ್ಥರು ಅಪೇಕ್ಷಿತ ತಿಂಡಿಗಳನ್ನು ಮತಕ್ಕೆ ಹಾಕಿದರು. ಶೇಕಡಾ ಹದಿಮೂರು ಮಂದಿ ಇಡ್ಡಿ ವಡೆಗೆ, ಶೇಕಡಾ ಹನ್ನೊಂದು ಮಂದಿ ಚಪಾತಿ ಕೂರ್ಮ, ಶೇಕಾಡಾ ಎಂಟು ಮಂದಿ ಶಾವಿಗೆ ಸಾಂಬಾರು, ಶೇಕಡಾ ಹತ್ತು ಮಂದಿ ದೋಸೆ ಚಟ್ನಿ, ಶೇಕಡಾ ಹದಿನಾಲ್ಕು ಮಂದಿ ಉಪ್ಪಿಟ್ಟು ಅವಲಕ್ಕಿ ಶೇಕಡಾ ಒಂಭತ್ತು ಮಂದಿಗೆ ಮಸಾಲೆದೋಸೆ, ಶೆಕಡಾ ಎಂಟು ಮಂದಿ ಪಲಾವ್‌, ಶೇಕಡಾ ಏಳು ಮಂದಿ ಚಿತ್ರಾಹ್ನ, ಶೇಕಡಾ ಹದಿನೈದು ಮಂದಿ ಬಿಸಿಬೇಳೆ ಬಾತ್ ಶೇಕಡಾ ಐದು ಮಂದಿ ದಿನಾ ಬೇರೆ ಬೇರೆ ತಿಂಡಿ ಎಂದು ಮತಹಾಕಿದರು. ಪ್ರತಿ ತಿಂಡಿಗೂ ಬಿದ್ದ ಮತವನ್ನು ಎಣಿಸಲಾಗಿ ಬಿಸಿಬೇಳೆ ಬಾತ್‌ ತಿಂಡಿ ಗೆದ್ದು ಬೀಗಿತು. ಶೇಕಾಡ ಎಂಭತ್ತು ಮಂದಿಯೂ ತಮಗಿಷ್ಟವಿರದ ತಿಂಡಿಯನ್ನೇ ಮತ್ತೆ ಮುಂದುವರಿದು ತಿನ್ನಲೇ ಬೇಕಾದ ದಯನೀಯ ಸ್ಥಿತಿಗೆ ತುತ್ತಾದರು. ಬಿಸಿಬೇಳೆ ಬಾತ್‌ ಶೇಕಡಾ ಎಂಭತ್ತೈದು ಮಂದಿಗೆ ಬೇಡವಾಗಿದ್ದರೂ ಅವರಲ್ಲಿ ಒಗ್ಗಟ್ಟಿರದೇ ಇದ್ದುದರಿಂದ ಅದನ್ನೇ ಮುಕ್ಕಬೇಕಾಯಿತು. ಬಿಸಿಬೇಳೆ ಬಾತ್‌ ಇಷ್ಟಪಡುವವರು ಒಗ್ಗಟಾಗಿದ್ದು ತಮ್ಮ ಬಯಕೆಯನ್ನು ಪಡೆದರು. 

ಕಥೆಯನ್ನು ಕಥೆಯಾಗಿಯೇ ಒಪ್ಪಿದರೆ ಅಲ್ಲಿಂದಲೇ ವ್ಯಥೆಯ ಆರಂಭವೂ ಆಗುತ್ತದೆ. ನಮ್ಮ ದಮನ ಅಥವಾ ದಯನೀಯ ಬದುಕಿಗೆ ನಾವೇ ಕಾರಣರಾಗುತ್ತೇವೆ. ಮರವನ್ನು ಕಡಿಯುವ ಕತ್ತಿಯ ಹಿಡಿ ಅಥವಾ ಕೊಡಲಿಯ ಹಿಡಿ ಮರದ್ದೇ ಆಗಿದೆಯಾದರೂ ಮರದ ಅವಸಾನಕ್ಕೆ ಕಾರಣವಾಗುತ್ತದೆ. ನಮ್ಮ ನಾಶಕ್ಕೂ ನಮ್ಮವರೇ ಕಾರಣರು. ದಮನಿಸುವವರು ಅಲ್ಪ ಸಂಖ್ಯೆಯಲ್ಲಿದ್ದರೂ ನಮ್ಮೊಳಗೆ ಒಗ್ಗಟ್ಟಿಲ್ಲದೇ ಛಿದ್ರ ಗುಂಪುಗಳಾದಾಗ, ಕಥೆಯಲ್ಲಿ ಉಲ್ಲೇಖಿಸಿದ ಬಿಸಿಬೇಳೆ ಬಾತ್‌ಗಳಿಸಿದಂತೆ ಅನಪೇಕ್ಷಿತವಾದುದೇ ಜಯಗಳಿಸುತ್ತದೆ. ನಾವು ಅನಪೇಕ್ಷಿತವಾದುದನ್ನೇ ಅನುಭವಿಸುತ್ತಾ ಸಹಿಸುತ್ತಾ ಕೊರಗುತ್ತಿರಬೇಕಾಗುತ್ತದೆ. ನಮ್ಮೊಳಗಿನ ಬಿಕ್ಕಟ್ಟು ನಮ್ಮ ನಾಶಕ್ಕೆ ಹೇತುವಾಗುತ್ತದೆ.

ಇಂದು ಸಂಘಟನೆಗಳ ಸಂಖ್ಯೆಗೇನೂ ಕೊರತೆಯಿಲ್ಲ. ಯುವ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ರಾಜಕೀಯ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಹಲವಾರಿವೆ. ಈ ಸಂಘಟನೆಗಳಿಗೆ ಪದಾಧಿಕಾರಿಗಳು, ಸದಸ್ಯರು ಎಲ್ಲರೂ ಇದ್ದಾರೆ. ಆದರೆ ಸಂಘಟನೆಯೆಂಬ ನಾಮಫಲಕದಿಂದ ಕಾರ್ಯಸಾಧನೆಯಾಗುವುದಿಲ್ಲ. ತಿಂಗಳಿಗೊಮ್ಮೆಯಾದರೂ ಸದಸ್ಯರು ಪದಾಧಿಕಾರಿಗಳು ಒಟ್ಟಿಗೆ ಕುಳಿತು ಚಿಂತನೆ ಮಾಡುತ್ತಿರುವರೇ? ಸಂಘಟನೆಯ ಕಾರ್ಯಕ್ರಮಗಳ ಬಗ್ಗೆ ಎಲ್ಲರೂ ಕಾಳಜಿ ಹೊಂದಿ, ಯಶಸ್ಸಿನಲ್ಲಿ ಕಟಿಬದ್ಧತೆ ತೋರುತ್ತಿರುವರೇ? ಸಂಘಟನೆಯೊಳಗೆ ಒಳಗುಂಪುಗಳಿವೆಯೇ? ಕಾಲೆಳೆಯುವ ಪ್ರಯತ್ನಗಳಾಗುತ್ತಿವೆಯೇ? ಇವೆಲ್ಲವೂ ಸಂಘಟನೆಯ ಉದ್ದೇಶಗಳು ಈಡೇರುವಲ್ಲಿ ನಿರ್ಣಾಯಕ ಅಂಶಗಳಾಗಿರುತ್ತವೆ. ಸಂಘಟನೆಯೊಳಗೆಯೇ ಬಿರುಕುಗಳಿದ್ದರೆ ಅಂಥಹ ಸಂಘಟನೆಗಳು ಇದ್ದೂ ಉಪಯೋಗವಿಲ್ಲ. ಸಂಘಟನೆಗಳ ಉತ್ಕರ್ಷವಾಗದೆ ದೇಶದ ಏಳಿಗೆ ಅಸಾಧ್ಯ. ಸಂಘಟನೆಗಳು ಉತ್ತಮವಾಗಲು ಅದರ ಭಾರವಾಹಿಗಳು, ಬೆಂಬಲಿಗರು ಏಕಭಾವ, ಏಕಚಿಂತನೆ, ಏಕ ಉದ್ದೇಶಗಳನ್ನು ಹೊಂದಿರಬೇಕು. ಸಮಾನ ಮನಸ್ಕರಲ್ಲದವರು ಸೇರಿ ಮಾಡುವ ಯಾವುದೇ ಸಂಘಟನೆಗಳು ತೂತಿರುವ ಮಡಿಕೆಗೆ ಸಮ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************




Ads on article

Advertise in articles 1

advertising articles 2

Advertise under the article