-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 195

ಸ್ಫೂರ್ತಿಯ ಮಾತುಗಳು : ಸಂಚಿಕೆ - 195

ಸ್ಫೂರ್ತಿಯ ಮಾತುಗಳು : ಸಂಚಿಕೆ - 195
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                  

ಮಾತುಗಾರಿಕೆಗಾಗಿಯೇ ಹೆಂಗಸರನ್ನು “ಮಾತೆಯರು ಎಂದು ಕರೆಯುತ್ತಾರೆ; ಅವರಲ್ಲಿ ಮಾತೇ ಜಾಸ್ತಿಯೆಂಬ ಅರ್ಥಹೀನವಾದ ಲೇವಡಿಯಿದೆ. ಮಹಿಳೆಯರು ಮಾತನಾಡುವುದನ್ನು ಬಹಳ ಹತ್ತಿರದಿಂದ ಗಮನಿಸಿದರೆ ಅದು “ಬರೇ” ಮಾತಾಗಿರುವುದಿಲ್ಲ ಅದು “ಭಾರೀ” ಮೌಲ್ಯದ ಮಾತಾಗಿರುತ್ತದೆ. ಮಾತೆಯರ ಮಾತುಗಳಲ್ಲಿ ಭಾವನೆಯಿರುತ್ತದೆ, ಅನುಭವ ಇರುತ್ತದೆ. ಸತ್ಯಾಂಶವಿರುತ್ತದೆ. ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಒಟ್ಟಿನಲ್ಲಿ ಸಿರಿಯಿರುತ್ತದೆ. ಅವರ ಮಾತಿನಲ್ಲಿ ಯಾರನ್ನೂ ದೂರಕ್ಕೆಸೆಯುವ ಗುಣವಿರದು, ಪರಸ್ಪರ ಬೆಸೆಯುವ ಗುಣವೇ ಇರುತ್ತದೆ. 

ದಿನಾಂಕ 26.05.2025ರಂದು ಆರಂಭಗೊಂಡ ಭಗವದ್ಗೀತಾ ತರಗತಿಗೆ ನಾನು ಗೀತಾಭ್ಯಾಸಿಯಾಗಿ ಸೇರಿದೆ. ದಶಂಬರ್‌ 2025ರ ಅಂತ್ಯದೊಳಗೆ ಈ ಅಬ್ಯಾಸ ತರಗತಿಗಳು ಸಮಾಪನಗೊಳ್ಳಲಿವೆ. ಈ ತರಗತಿಯಲ್ಲಿ ಗಂಡಸರು ಅಲ್ಪಸಂಖ್ಯಾತರು. ಮಹಿಳೆಯರ ಸಂಖ್ಯೆಯದೇ ಬಾಹುಳ್ಯ. ಗಂಡಸರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆ. ಹಾಗಾದರೆ ತರಗತಿಯಲ್ಲಿ ಗಂಡಸರೇ ಇಲ್ಲವೇ? ಇದ್ದಾರೆ ಶೇಕಡಾ ಮೂರೋ ನಾಲ್ಕೋ ಅಷ್ಟೇ. ತರಗತಿಗಳು ಆನ್ಲೈನ್‌ ಮೂಲಕ ನಡೆಯುತ್ತವೆ. ರಾತ್ರಿ 8.30ರಿಂದ 9.30ರ ತನಕ ತರಗತಿ ನಿರಂತರ ನಡೆಯುತ್ತ ಬಂದಿದೆ. ನಿಯಮದಂತೆ ಸಮಾರೋಪ ಬಿಟ್ಟು ಉಳಿದಂತೆ ಯಾವ ಸಂದರ್ಭದಲ್ಲೂ ವೀಡಿಯೋ ಆನ್‌ ಮಾಡುವಂತಿಲ್ಲ. ನಮ್ಮೆಲ್ಲರಿಗೂ ಒಮ್ಮೆ ಮೈಕ್‌ ಮತ್ತು ವೀಡಿಯೋ ಆನ್‌ ಮಾಡಿ ಹರಟೆ ಹೊಡೆಯುವ ಆಸೆ. ತರಗತಿಯ ಶಿಕ್ಷಕಿಯರಾದ ಶರ್ಮಿಳಾರವರನ್ನು ಮತ್ತು ಪೂಜಾರವರನ್ನು ಈ ಬಗ್ಗೆ ವಿನಂತಿಸಿದಾಗ ತರಗತಿಯ ದಿನ ಮತ್ತು ತರಗತಿಯ ಮೂಲಕ ಈ ಮಾತುಕತೆ ಬೇಡ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಲಾಗಿ ದಿನಾಂಕ 30.11.2025ರ ರವಿವಾರದಂದು ಸಂಜೆ ಸಮಯ 8.30ರಿಂದ ಗೀತಾಭ್ಯಾಸಿಗಳು ಮಾತುಕತೆಗೆಂದು ಪರದೆಗೆ ಬಂದೆವು. ಈ ಸಂದರ್ಭದಲ್ಲಿ ಮಾತೆಯರೇ ಹೆಚ್ಚಿರುವುದರಿಂದ ಪುರುಷಾಧಿಪತ್ಯ ತೆರೆಮರೆಗೆ ಸರಿದಿರಬಹುದು. ಮಾತೆಯರ ಮಾತುಗಳನ್ನು ಆಲಿಸುವ ನೇರ ಸಂದರ್ಭವದು. ಹಿರಿಯರು ಕಿರಿಯರು ಗಂಡಸರು ಹೆಂಗಸರು ಎಂಬ ಭೇದವಿಲ್ಲದೆ ಆ ದಿನ ಪರಸ್ಪರ ಅಪರಿಚಿತರಾಗಿದ್ದವರು ಕೆಲವೇ ಕ್ಷಣಗಳಲ್ಲಿ ಆತ್ಮೀಯರಾದೆವು. ಮುಂದೆ ನಮ್ಮ ಎರಡನೇ ಭೇಟಿಯೂ ದಿನಾಂಕ 07.12.2025ರ ರಾತ್ರಿ ನಡೆದೇ ಹೋಯಿತು.

ತರಗತಿಯಲ್ಲಿ ಕೇರಳ ಕರ್ನಾಟಕ ಎರಡೂ ರಾಜ್ಯದವರಿದ್ದಾರೆ. ಕರ್ನಾಟಕದಿಂದ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಶಿರಸಿ, ತುಮಕೂರು ಹೀಗೆ ಬೇರೆ ಬೇರೆ ಊರಿನವರು. ನಾವು ಪರಸ್ಪರರ ಮುಖ ಹಿಂದೆಂದೂ ನೋಡಿರದವರು ಎನ್ನುವುದೇ ವಿಚಿತ್ರ. ನಾವಿರುವುದೇ ಒಟ್ಟು ಹದಿನೆಂಟು ಮಂದಿ. ಆದರೆ ನಂಟು ಮಾತ್ರ ಅಂಟಿ ಹೋಗಿತ್ತು. ಪರಸ್ಪರ ನೋಡಿ ಮಾತನಾಡಬೇಕೆಂಬ ತುಮುಲ ಎಲ್ಲರಲ್ಲೂ ಇತ್ತು. ಆದುದರಿಂದ ಮುಖ ನೋಡಿದೊಡನೆ ಆತ್ಮೀಯ ಮಾತುಕತೆ ಆರಂಭವಾಯಿತು. ನಾನು ಗಮನಿಸಿದ ಬಹಳ ಪ್ರಮುಖ ಸಂಗತಿ ಯೆಂದರೆ ಓಬ್ಬರೇ ಒಬ್ಬರಾದರೂ ಮುಖ ಗಂಟಿಕ್ಕದೆ ಅರಳಿದ ಮುಖದಿಂದಲೇ ಆನಂದದಿಂದ ತೇಲುತ್ತಾ ಮಾತನಾಡುತ್ತಿದ್ದರು. ರಿಷಾ ನಮ್ಮ ಗೀತಾ ತರಗತಿಯ ಪುಟ್ಟ ಮಗಳು. ವಿಭಾಕರ್‌ ಕೂಡಾ ಪುಟ್ಟನೇ. ಅವರಿಬ್ಬರೂ ಆರನೇ ತರಗತಿ. ಪ್ರಶವಂತಿ ಶಾಲಾ ಶಿಕ್ಷಕಿಯಾದರೆ ನಾನು ನಿವೃತ್ತ ಶಿಕ್ಷಕ. ಪ್ರೇಮಕುಮಾರ್‌ ನಿವೃತ್ತರು. ಹೆಚ್ಚಿನವರು ಗೃಹಿಣಿಯರು. ಎಲ್ಲರ ಪರಿಚಯ ಈ ಲೇಖನಕ್ಕೆ ಅನಗತ್ಯವೆಂದು ಕೈಬಿಡುವೆ.

ಸಾಮಾನ್ಯವಾಗಿ ಮಾತೆಯರು ಮಾತನಾಡಲಾರಂಭಿಸಿದರೆ “ನಾನ್‌ಸ್ಟಾಪ್” ಎಂಬ ಹುರುಳಿರದ ಆರೋಪವಿದೆ. ಮಾತಿಗೆ ಹೊರಟರೆ ಅದೂ ಮೈಕ್‌ ಸಿಕ್ಕಿದರೆ ಗಂಡಸರೂ ಮಾತಿನ ಮಲ್ಲರೇ ಅಲ್ಲವೇ? ಅಂದು ನಮ್ಮ ಗೀತಾ ತರಗತಿಯ ಮಾತೆಯರು ಎಲ್ಲರೂ ಮೈಕ್‌ ಮತ್ತು ಕ್ಯಾಮೆರಾ ಆನ್‌ ಮಾಡಿಯೇ ಇದ್ದರು. ಪ್ರತಿಯೊಬ್ಬರಲ್ಲೂ ಅವರ ಮಾತಿನೊಂದಿಗೆ ಇತರರ ಮಾತನ್ನು ಆಲಿಸುವ ಸೌಜನ್ಯವನ್ನು ಗಮನಿಸಿದೆ. ಪ್ರತಿಯೊಬ್ಬರು ನಗು ನಗುತ್ತಾ ಮಾತನಾಡುತ್ತಿದ್ದರು. ನಗು ಸಮೇತ ಮಾತನಾಡುವವರು ಗಂಡಸರೂ ಇದ್ದಾರಲ್ಲವೇ? ಹೌದು. ಇದ್ದಾರೆ: ಅವರ ನಗು ಹೃದಯದಿಂದ ಚಿಮ್ಮಿ ಬರುತ್ತದೆನ್ನುವ ಗ್ಯಾರಂಟಿಯಿಲ್ಲ. ಮಾತೆಯರ ಮಾತಿನೊಂದಿಗೆ ಪ್ರೀತಿಯೂ ಪೋಣಿಸಲ್ಪಟ್ಟಿರುತ್ತದೆ. ಮಾತನಾಡುತ್ತಾ ಮನೆಗೆ ಕರೆಯುವ ಕ್ರಮ ಮಾತೆಯರಲ್ಲಿ ಅಧಿಕ. ಗಂಡಸರಲ್ಲಿ, “ನಾನು ನಿಮ್ಮ ಮನೆಗೆ ಬರುತ್ತೇನೆ” ಎಂದು ಹೇಳಿಬಿಟ್ಟರೆ ಸಾಕು! ಅವರ ಮೊದಲ ಪ್ರಶ್ನೆ , “ಯಾವಾಗ?” ಎಂದೇ ಆಗಿರುತ್ತದೆ. ದಿನ ಹೇಳಿದರೆ ಸಮಯ ಹೇಳಬೇಕು. ಎಲ್ಲ ಕೇಳಿ ಮುಗಿದ ಮೇಲೆ ನಾವು ಬರುವುದು ಖಾತ್ರಿಯಾಗುತ್ತಿರುವಂತೆಯೇ, ಆ ದಿನ ಬುಕ್ಕಿಂಗ್‌ ಇರುವ ಬೇರೆ ಕಾರ್ಯಕ್ರಮದ ಪಟ್ಟಿ ನೀಡುತ್ತಾರೆ. 

ಮಾತೆಯರ ಮಾತಿನಲ್ಲಿ ಒಳಗೆ ಹೊರಗೆ ಎಂಬ ಪಟ್ಟುಗಳಿಲ್ಲ. ಹೇಳುವುದನ್ನು ನೇರಾ ನೇರ ಹೇಳುತ್ತಾರೆ. ಆದುದರಿಂದ ಅದು ನಂಬಲರ್ಹವಾಗುತ್ತದೆ. ಮುಖಕ್ಕೆ ತಕ್ಕಂತೆ ಮಾತನಾಡುವ ಗುಣ ಸ್ವಲ್ಪ ಗಂಡಸರಲ್ಲಿ ಅಧಿಕವಿದೆ. ಇದು ಕಾರ್ಯ ಸಾಧನೆಯ ಜಾಣ್ಮೆಯಾಗಿರಲೂ ಬಹುದು. ಮಾತೆಯರು ಮಾತಾನಡುವಾಗ ಎದುರಿಗಿರುವವರಲ್ಲಿ ತಮ್ಮ ಮಕ್ಕಳಲ್ಲಿ ಮಾತಾನಾಡುವಂತೆ ಸಂವಹನವಿರುತ್ತದೆ. ಪ್ರತೀ ಮಾತಿನೊಳಗೂ ಮುಗ್ದತೆಯಿರುತ್ತದೆ, ಮುಗ್ಧತೆ ಅಪಾಯಕಾರಿ ಎಂಬ ಅರಿವಿದೆಯಾದರೂ, “ತಿಳಿ” ಹೇಳುವ ಅವರ ಮಾತಿನ ಜಾಯಮಾನದ ಹಿಂದೆ ಸಮಾಜ ಹಿತದ ಗಂಧವಿರುತ್ತದೆ. ಮಾತು ಹತವಾಗದೆ ಹಿತವಾದರೆ ಸುಖ ಅಲ್ಲವೇ?
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************




Ads on article

Advertise in articles 1

advertising articles 2

Advertise under the article