-->
ಜೀವನ ಸಂಭ್ರಮ : ಸಂಚಿಕೆ - 220

ಜೀವನ ಸಂಭ್ರಮ : ಸಂಚಿಕೆ - 220

ಜೀವನ ಸಂಭ್ರಮ : ಸಂಚಿಕೆ - 220
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
             
ಮಕ್ಕಳೇ, ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕೈವಲ್ಯ ಉಪನಿಷತ್ತು ಶ್ರದ್ಧೆ ಪ್ರವಚನದಲ್ಲಿ ಹೇಳಿದ್ದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಅಸ್ವಲಾಯನ ಮಹಾಗುರು. ಪರಮೇಶ್ಟಿಯನ್ನು ಭೇಟಿಯಾಗಿ ವಿಧೇಯನಾಗಿ ಕೋರುತ್ತಾನೆ. ಪರಮ ಜ್ಞಾನ ಅಂದರೆ ಬ್ರಹ್ಮ ಜ್ಞಾನ. ಅದನ್ನು ತಿಳಿಸಿಕೊಡುವಂತೆ ಬೇಡಿಕೊಳ್ಳುತ್ತಾನೆ. ಅಸ್ವಲಾಯನ ಪಂಡಿತ. ಗ್ರಂಥ ರಚಿಸಿದವನು. ಅವನ ಜ್ಞಾನದ ಹಸಿವು ಅಷ್ಟೇ ತೀವ್ರ. ಆ ಬ್ರಹ್ಮ ಜ್ಞಾನದ ಮಹತ್ವ ಆತನಿಗೆ ಗೊತ್ತು. ಅದು ಸಾಮಾನ್ಯ ವಿದ್ಯೆಯಲ್ಲ, ಶ್ರೇಷ್ಠ ವಿದ್ಯೆ. ಸಂತರು, ಋಷಿಗಳು ಆ ವಿದ್ಯೆಗಾಗಿ ಜೀವನ ಮುಡುಪಾಗಿ ಇಟ್ಟರು. ಆ ವಿದ್ಯೆಯನ್ನು ತಮ್ಮ ಮಾತುಗಳ ಮೂಲಕ ಜಗತ್ತಿನ ಮುಂದಿಟ್ಟರು. ಅಂತಹ ವಿದ್ಯೆಯನ್ನು ನನಗೆ ಕರುಣಿಸಬೇಕೆಂದು ಕೋರಿದ. ಏಕೆಂದರೆ ಆತ ಹೇಳುತ್ತಾನೆ, "ನನ್ನ ಮನಸ್ಸು ಹೊಲಸಾಗಿದೆ. ಜೀವನದಲ್ಲಿ ಅನೇಕ ಒಳ್ಳೆಯ ಕಾರ್ಯ ಮಾಡಿದ್ದೇನೆ. ಆದರೆ ಸಮಾಧಾನ ಸಿಗಲಿಲ್ಲ. ಮನಸ್ಸು ಶಾಂತಿ ಅನುಭವಿಸಲಿಲ್ಲ. ಅಂತಹ ಪರಮ ಶಾಂತಿ ಇಷ್ಟು ವರ್ಷ ದೊರಕಲಿಲ್ಲ. ಪರಮ ಸತ್ಯದ ದರ್ಶನ ಆಗದಿದ್ದರೆ ಶಾಂತಿ, ಸಮಾಧಾನ ಸಿಗುವುದಾದರೂ ಹೇಗೆ?. ಅದಕ್ಕಾಗಿ ಶ್ರೇಷ್ಠ ಜ್ಞಾನ ನೀಡಿ" ಎಂದು ಭಿನ್ನವಿಸಿದ. ಆಗ ಪರಮೇಶ್ಟಿ ಪರಮ ಗುರು ಉಪದೇಶ ಮಾಡುತ್ತಾನೆ. ಇಂತಹ ಶ್ರೇಷ್ಠ ಜ್ಞಾನ ಸ್ವೀಕರಿಸುವ ಪಾತ್ರೆ ಸ್ವಚ್ಛವಾಗಿರಬೇಕು. ಬಹಳ ಪವಿತ್ರವಾದ ಪದಾರ್ಥ ಹಿಡಿಯಬೇಕಾದರೆ ಪಾತ್ರೆ ಸ್ವಚ್ಛವಾಗಿರಬೇಕು. ನೀರು ಸ್ವಚ್ಛ. ಯಾವ ಬೊಗಸೆಯಿಂದ ನೀರು ಕುಡಿಯುತ್ತೇವೆಯೋ, ಆ ಬೊಗಸೆ ಸ್ವಚ್ಛ ಇರಬೇಕು. ಇದು ಜೀವನದ ಅಮೃತ ಜ್ಞಾನ. ಇದನ್ನು ಮಾತಿನ ಮೂಲಕ ನೀಡುತ್ತೇನೆ. ಅದನ್ನು ತುಂಬಿಕೊಳ್ಳುವ ಮನಸ್ಸು ಸ್ವಚ್ಛವಾಗಿರಬೇಕು. ಇಲ್ಲದೇ ಹೋದರೆ ಎಷ್ಟು ಒಳ್ಳೆಯ ನೀರಿದ್ದರೆ ಏನು?. ಕೈ ಹೊಲಸು ದುರ್ವಾಸನೆ ಇದ್ದರೆ ನೀರನ್ನು ಕೆಡಿಸಿಬಿಡುತ್ತದೆ. ಆಗ ನೀರಿನ ರುಚಿ ಅನುಭವಿಸಲು ಆಗುವುದಿಲ್ಲ. ಮನುಷ್ಯ ಅನುಭವಿಸುವುದು ಬಹಳ ಮುಖ್ಯ ಮಹತ್ವದ್ದು. ಜ್ಞಾನ ಮಹತ್ವದಲ್ಲ, ಅನುಭವಿಸುವುದು ಮಹತ್ವ. ಹೂಗಳು ಎಲ್ಲಿ ಬೆಳೆಯುತ್ತವೆ?. ಎಷ್ಟು ಬೆಳೆಯುತ್ತದೆ?. ಹೇಗಿದೆ?. ಅನ್ನೋ ಜ್ಞಾನ ಇರಬಹುದು. ಆದರೆ ಏನು ಮಾಡುವುದು?. ಒಂದು ದಿನ ಹೂ ತೋಟಕ್ಕೆ ಹೋಗಲಿಲ್ಲ. ಹೂಗಳನ್ನು ಕಣ್ಣಿನಿಂದ ನೋಡಲಿಲ್ಲ. ಮನಸ್ಸನ್ನು ಹೂವಿನ ಸೌಂದರ್ಯ, ಸುವಾಸನೆಯಿಂದ ತುಂಬಿಕೊಳ್ಳಲಿಲ್ಲ. ಅನುಭವಿಸಲೇ ಇಲ್ಲ. ಜ್ಞಾನ ಅನುಭವದಲ್ಲಿ ಕೊನೆ ಆಗಬೇಕು. ಜ್ಞಾನ ಪಕ್ವಗೊಳ್ಳುವುದು ಅನುಭವದಿಂದ. ಮಾಡೋದು ಎಷ್ಟು ಮಹತ್ವದ್ದು?. ತಿಳಿದುಕೊಳ್ಳೋದು ಎಷ್ಟು ಮಹತ್ವದ್ದು?. ಅದಕ್ಕಿಂತ 10 ಪಾಲು ಅನುಭವಿಸಬೇಕು. ನೋಡಿದಾಗ ಜ್ಞಾನ ಆಗುತ್ತದೆ. ಆ ಜ್ಞಾನದೊಂದಿಗೆ ಭಾವ (ಮನಸ್ಸು) ಬೆರೆಯದಿದ್ದರೆ ಅನುಭವ ಆಗುವುದಿಲ್ಲ.

ಉದಾಹರಣೆಗೆ ಒಬ್ಬ ಹಾಡುತ್ತಾನೆ ಅಂತ ಭಾವಿಸಿ. ನಾವು ಕುಳಿತು ಹೇಳುತ್ತಾ ಇರುತ್ತೇವೆ. ಹಾಡುಗಾರ ಹಾಡಿನಲ್ಲಿ ಮಗ್ನಾಗಿರುತ್ತಾನೆ. ನಾವು ಕೇಳುವವರು. ಎಲ್ಲಿ ತಪ್ಪು ಹಾಡುತ್ತಾನೆ ?.ಎಲ್ಲಿ ಸರಿ ಇದೆ?. ಹೀಗೆ ವಿಚಾರ ಮಾಡಿಕೊಳ್ಳುತ್ತಾ ಹೋದರೆ, ಜ್ಞಾನ ಆಗುತ್ತದೆ ವಿನಃ ಅನುಭವ ಆಗುವುದಿಲ್ಲ. ಅನುಭವ ಬೇರೆ. ಜ್ಞಾನ ಬೇರೆ. ಜ್ಞಾನ ಪರಿಪೂರ್ಣಗೊಳ್ಳುವುದು, ಸಾರ್ಥಕತೆ ಪಡೆಯುವುದು, ಅನುಭವದಲ್ಲಿ. ಆನಂದ ಪಡೆಯಬೇಕು ಮನುಷ್ಯ. ಆನಂದ ಪಡೆಯಬೇಕಾದರೆ ಜ್ಞಾನದೊಂದಿಗೆ ಮನಸ್ಸು ಕೂಡಬೇಕಾಗುತ್ತದೆ. ಭಾವ ಮಿಶ್ರಣ ಆಗಬೇಕು. ಭಾವದಲ್ಲಿ (ಮನಸ್ಸಿನಲ್ಲಿ) ತುಂಬಬೇಕಾಗುತ್ತದೆ. ಆಗ ಅನುಭವ. ನಾವು ಜಗತ್ತಿಗೆ ಬಂದಿದ್ದು ಏಕೆ? ಎಲ್ಲವನ್ನು ಅನುಭವಿಸಬೇಕು. ಒಬ್ಬ ಮಹರ್ಷಿ ಹೇಳುತ್ತಾನೆ. ನಾವಿಲ್ಲಿಗೆ ಬಂದಿದ್ದು ಏಕೆ? ಇನ್ನೇನು ಮಾಡುವುದು?. ಏನು ಮಾಡಬೇಕೊ ಅದೆಲ್ಲ ಇದೆ. ಬದುಕು ಶ್ರೀಮಂತ ಗೊಳಿಸಲು ಏನೇನು ಬೇಕು ಅದೆಲ್ಲ ಇದೆ. ನಾವೇನು ಮಾಡುವುದಿದೆ. ನಾವು ಅನುಭವಿಸುವುದು ಅಷ್ಟೇ.

ಸೂರ್ಯಪ್ರಕಾಶ ದಿನ ಬರುತ್ತದೆ. ಎಲ್ಲಾ ಕಡೆ ಹರಡುತ್ತದೆ. ಬರೀ ಬೆಳಕಲ್ಲ ಆ ಕಿರಣಗಳ ಮೂಲಕ ಬಣ್ಣ ಬಳಿಯುತ್ತಿದ್ದಾನೆ. (ವಸ್ತುವಿಗೆ ಬಣ್ಣವಿರಲ್ಲ, ಯಾವ ಬಣ್ಣ ಪ್ರತಿಫಲಿಸುತ್ತೋ ಆ ಬಣ್ಣ ಕಾಣುತ್ತದೆ). ನಾವು ಬಣ್ಣ ಬಳಿಯುವುದಲ್ಲ .ಇದ್ದುದ್ದನ್ನು ನೋಡಿ ಆನಂದ ಪಡುವುದು. ಸೂರ್ಯನ ಬೆಳಕೆ ಇಲ್ಲದಿದ್ದರೆ ಎಷ್ಟು ದೀಪ ಹಚ್ಚಿದರೇನು?. ಮದುವೆ ಮನೆಯಲ್ಲಿ ಮನೆ ತುಂಬಾ ದೀಪಾಲಂಕಾರ ಮಾಡುತ್ತೇವೆ. ಯಾರು ಆ ಕಡೆ ಲಕ್ಷ್ಯ ಕೊಡುವುದಿಲ್ಲ. ಎಷ್ಟು ಚಂದವಾಗಿ ಅಲಂಕಾರ ಮಾಡಿರುತ್ತಾರೆ! ಆದರೆ ನಮ್ಮ ಲಕ್ಷ್ಯ ಬೇರೆ ಕಡೆ. ನಾವು ನೋಡುತ್ತಿರುವುದು ಬೇರೆ ವಸ್ತುಗಳನ್ನು ವಿನಃ ಬೆಳಕನ್ನಲ್ಲ, ಬೆಳಕಿನ ವೈಭವವನ್ನಲ್ಲ. ಹಾಗೆ ಜಗತ್ತಿನ ವೈಭವ ಮರೆತು, ಕೇವಲ ಸಣ್ಣ ವಸ್ತುಗಳ ಮಧ್ಯೆ ಮನಸ್ಸು ಬೆರೆತು ಹೋಗಿಬಿಡುತ್ತದೆ. ಆ ಕ್ಷಣವೇ ಹೋಗಿಬಿಡುತ್ತದೆ. ಅನುಭವಿಸಬೇಕಾದ ಕ್ಷಣ ಹೋಗಿಬಿಡುತ್ತದೆ. ನಾವು ಜಗತ್ತಿನಲ್ಲಿ ಅನುಭಾವಿಯಾಗಬೇಕು. ಅನುಭವಕ್ಕಾಗಿಯೆ ಕಣ್ಣು, ಕಿವಿ, ಮೂಗು, ನಾಲಿಗೆ, ಮೈ, ಮನಸ್ಸು ಮತ್ತು ಬುದ್ದಿ ಎಲ್ಲ ಇರುವುದು. ಇಂತಹ ಸುಂದರ ಜಗತ್ತಿನಲ್ಲಿ ರಕ್ಷಿಸಲು, ಪೋಷಿಸಲು ಕೈ. ಅನುಭವಿಸಲು ದೇಹ ಮನ ಮತ್ತು ಇಂದ್ರಿಯ. ಮನಸ್ಸು ಬಿಟ್ಟು ಅನುಭವಿಸಲು ಆಗುವುದಿಲ್ಲ. 

ಮನಸ್ಸು ಭಾವನೆಗಳ ಪಾತ್ರೆ. ಭಾವ ಶುದ್ಧವಾಗಿತ್ತು ಅಂದರೆ ಅನುಭವ ತೀವ್ರವಾಗುತ್ತದೆ. ಅನುಭವಕ್ಕೆ ಆಳ ಬರುತ್ತದೆ. ಹಾಗೆ ಅನುಭವಿಸಬೇಕು. ವರ್ಡ್ಸ್ ವರ್ತ್ ಹೆಸರು ಕೇಳಿದ್ದೀರಿ. ಆತ ದ್ಯಾಪೋಡಿಲ್ಸ್ ಹೂವಿನ ಬಗ್ಗೆ ಕವನ ಬರೆದಿದ್ದಾನೆ. ಬಹಳ ದೊಡ್ಡ ಕವಿ. ಆತ ದಾರಿಯಲ್ಲಿ ಹೋಗುತ್ತಾ ಇರುತ್ತಾನೆ. ಗಾಳಿ ಬೀಸುತ್ತಾ ಇರುತ್ತದೆ. ಆಕಾಶದಲ್ಲಿ ಮೇಘಗಳು ತೇಲುತ್ತಾ ಇರುತ್ತವೆ. ವಾತಾವರಣ ಅಷ್ಟು ಅಪ್ಯಾಯಮಾನವಾಗಿರುತ್ತದೆ. ಇಂತಹ ವಾತಾವರಣದಲ್ಲಿ ದಾರಿಯ ಎರಡು ಬದಿಯಲ್ಲೂ ಡೆಪೋಡಿಲ್ಸ್ ಸಣ್ಣ ಹೂಗಳು ಬಳ್ಳಿಯೊಡನೆ ತಲೆದೂಗುತ್ತಿರುತ್ತವೆ. ಅದನ್ನು ನೋಡುತ್ತಾ ನೋಡುತ್ತಾ ಅದರಲ್ಲಿ ವರ್ಡ್ಸ್ ವರ್ತ್ ಮಗ್ನನಾದನು. ನಮಗೆ ಇಂತಹವು ಇದ್ದರೂ ಲಕ್ಷ್ಯ ಆ ಕಡೆ ಹೋಗುವುದಿಲ್ಲ. ನಮಗೆ ಸಾಮರ್ಥ್ಯ ಇಲ್ಲ ಅಂತ ಅಲ್ಲ. ನಾವು ಆಗಬಲ್ಲವಿ. ಅಷ್ಟೇ ಅಲ್ಲ ಈ ಜಗತ್ತನ್ನು ನೋಡುತ್ತಾ ನೋಡುತ್ತಾ ಮಹಾ ಅನುಭವಿಯಾಗಬಲ್ಲವಿ. ಆದರೆ ಮನಸ್ಸಿರಬೇಕು. ಯಾರಿಗೂ ಅಸಾಧ್ಯನೇ ಇಲ್ಲ. ಅವರಿಗೆ ಸಾಧ್ಯ ಇದೆ ಅಂದಾಗ ನಮಗೂ ಸಾಧ್ಯ ಇದೆ. ವರ್ಡ್ಸ್ ವರ್ತ್ ನೋಡುತ್ತಾ ನೋಡುತ್ತಾ ಹುಚ್ಚಾದ. ಮನಸ್ಸಿನಲ್ಲಿ ಅದು ತುಂಬಿತು. ಮನಸ್ಸಿನಲ್ಲಿ ಸೌಂದರ್ಯ, ಸುವಾಸನೆ ತುಂಬಿತ್ತು. ಮಾತುಗಳನ್ನಾಡಿದ. ಆ ಮಾತಿನಲ್ಲಿ ಸುವಾಸನೆ, ಹೂವಿನ ಸುವಾಸನೆ ಮಾತಿನಲ್ಲಿ ಬಂದಿತ್ತು. ಹೂವಿನ ಸೌಂದರ್ಯ ಮಾತಿನ ಶಬ್ದ ಶಬ್ದಗಳಲ್ಲಿ ತುಂಬಿತ್ತು. 

ಕಾಳಿದಾಸ ಲಗ್ನ ಆದಾಗ ಆತ ಬಹುದಡ್ಡ. ಕವಿಯಲ್ಲ. ಸಾಹಿತಿಯಲ್ಲ. ಏನಲ್ಲ. ಅಜ್ಞಾನಿ ಅಂತ ಕರೆಸಿಕೊಳ್ಳುತ್ತಿದ್ದನು. ಆತನ ಕಾವ್ಯದಲ್ಲಿ ಅನುಭಾವದ ವರ್ಣನೆಗಳು, ಜಗತ್ತಿನ ಸೌಂದರ್ಯ ಎಲೆಎಲೆಗಳ ಮಧ್ಯೆ, ತೇಲುವ ಮೇಘಗಳ ಮಧ್ಯೆ ಸೌಂದರ್ಯ, ನದಿಯಲ್ಲಿ ಹೇಳುವ ತೆರೆಗಳ ಮಧ್ಯ ಸೌಂದರ್ಯ. ಅದೇ ನೀರು, ಇಂದು ಹರಿಯುತ್ತದೆ. ಮೇಘಗಳು ಇದ್ದಾವೆ. ಅಂತಹ ಸಾಮರ್ಥ್ಯ ನಮಗೂ ಇದೆ. ಆದರೆ ಆ ಸಾಮರ್ಥ್ಯ ಬಳಸಿಲ್ಲ ಅಷ್ಟೇ. ಕೆಲವರು ಮನೆ ಕಟ್ಟಿದ್ದಾರೆ.3 00 ಕೋಣೆಯ ಮನೆ. 300 ಕೋಣೆಗೆ ಯಾವಾಗ ಹೋಗುತ್ತಾರೆ?. ಮಾಲೀಕರು ಇರುವ ಕೋಣೆ ಬೇರೆ. ಈ ಕೋಣೆಯಲ್ಲಿ ಕೆಲಸಗಾರರು ಇರುತ್ತಾರೆ. ಆ ಕೆಲಸಗಾರರು ಆರಾಮವಾಗಿ ಮಲಗಿರುತ್ತಾರೆ. ಅವರ ಮನೆಯಲ್ಲಿ ಅನುಭವಿಸುವವರು ಅವರು. ಅಷ್ಟು ಆರಾಮವಾಗಿ ಮಲಗಿರುತ್ತಾರೆ. ಮಾಲೀಕರು ಅಷ್ಟು ಆರಾಮವಾಗಿ ಮಲಗಿರುವುದಿಲ್ಲ. ಮಾಲೀಕರಿಗೆ ನಿದ್ದೆ ಬರುವುದಿಲ್ಲ. ಯಾರು ಅನುಭವಪಡುತ್ತಾರೋ ಅವರೇ ಮಾಲೀಕರು. ಹೋಗಿ ಅವರ ಮನೆಯಲ್ಲಿ ಕುಳಿತುಕೊಂಡು, ಅವರದೇ ಕಾಫಿ ಕುಡಿದು, ಅಲ್ಲೇ ನಾಲ್ಕು ಕ್ಷಣ ಕುಳಿತು, ಅವರ ಕೂಡ ಮಾತನಾಡಿ, ಮಸ್ತಾಗಿ ಆ ಮನೆ ಅನುಭವಿಸಿ ಬರುವ ಮನುಷ್ಯ, ಮಾಲೀಕನಿಗೆ ಕಾಫಿ ಕಂಡೀತೆ ವಿನಃ ಮನೆ ಕಾಣಲಿಲ್ಲ. ಇವನಿಗೆ ಕಾಫಿ ಕಾಣಲಿಲ್ಲ ಮನೆ ಕಂಡಿದ್ದು. ಅನುಭವಿಸುವುದಕ್ಕೆ ಖರ್ಚು ಮಾಡಬೇಕಿಲ್ಲ. ಜಗತ್ತಿನದೇ ತೆಗೆದುಕೊಂಡು ಜಗತ್ತಿನಲ್ಲೇ ಅನುಭವಿಸಬೇಕು. ಅನುಭವಿಸಬೇಕಾದದ್ದು ಮನಸ್ಸು. ಅನುಭವಿಸುವುದಕ್ಕೆ ಇರುವುದೇ ಜಗತ್ತು. ಅದಕ್ಕಾಗಿ ಮನಸ್ಸು ಸ್ವಚ್ಛವಾಗಿರಬೇಕು.

ಪರಮೇಶ್ಟಿ ಹೇಳುತ್ತಾ ಇದ್ದಾನೆ, "ಅಸ್ವಲಾಯನೇ ನೀನು ಎಷ್ಟೋ ಪಂಡಿತನಾಗಿರಬಹುದು?. ಮನಸ್ಸು ಸ್ವಚ್ಛವಾಗಿರಬೇಕು. ಮನಸ್ಸು ಸ್ವಚ್ಛವಾಗಿರಬೇಕಾದರೆ ಮೂರು ಸಂಗತಿ ಇರಬೇಕು. ಶ್ರದ್ಧೆ , ಭಕ್ತಿ ಮತ್ತು ಧ್ಯಾನ. ಶ್ರದ್ಧೆ, ಸಂದೇಹ ನಾಶ ಮಾಡುತ್ತದೆ. ಭಕ್ತಿ ,ದ್ವೇಷವನ್ನು ನಾಶಮಾಡುತ್ತದೆ. ಹಾಗೂ ಧ್ಯಾನ, ಯೋಗ ಮನಸ್ಸಿನ ಚಾಂಚಲ್ಯ ಹೋಗಲಾಡಿಸುತ್ತದೆ.
ಮನಸ್ಸು ಕೆಲವು ಸಲ ಸಂದಿಗ್ಧವಾಗಿರುತ್ತದೆ. ಮನಸ್ಸಿನಲ್ಲಿ ದ್ವೇಷದ ತೆರೆಗಳು ಏಳುತ್ತವೆ. ಮನಸ್ಸು ಚಂಚಲ ಸ್ವಭಾವವಿದೆ. ಹಾಗಾಗಿ ಸಂದೇಹ, ದ್ವೇಷ ಮತ್ತು ಚಂಚಲ ಮನಸ್ಸಿನ ದೋಷಗಳು. ಇವು ಹೋಗದೆ ಇದ್ದರೆ ಜ್ಞಾನ ಅನುಭವಕ್ಕೆ ಇಳಿಯುವುದಿಲ್ಲ. ಆನಂದ ಉಂಟಾಗುವುದಿಲ್ಲ .

ಶ್ರದ್ಧೆ : ಸಂದೇಹ ಹೋಗಲಿಲ್ಲ ಅಂದರೆ ಸಮಾಧಾನ ಇರುವುದಿಲ್ಲ. ಈಗ ಒಬ್ಬ ವ್ಯಕ್ತಿ, ಸ್ನೇಹಿತನ ಮನೆಗೆ ಹೋಗುತ್ತಾನೆ ಅಂತ ಭಾವಿಸಿ. ಪಾಪ ಸ್ನೇಹಿತ ಬಂದಿದ್ದಾನೆ ಅಂತ ಮನೆ ಸ್ವಚ್ಛ ಮಾಡಿ ವಿಶೇಷ ಅಡಿಗೆ ಮಾಡಿ ಬಡಿಸುತ್ತಾರೆ. ಆಗ ಆಹಾರದಲ್ಲಿ ಏನು ಹಾಕಿದ್ದಾರೋ? ಎನ್ನುವ ಸಂದೇಹ ಬಂದರೆ, ಆಹಾರದ ರುಚಿ ಅನುಭವಕ್ಕೆ ಬರುವುದಿಲ್ಲ. ಅನುಭವಿಸಲು ಸಾಧ್ಯವೇ ಇಲ್ಲ. ಬಡಿಸುವವರ ಮೇಲೆ ನಂಬಿಕೆ ಇಲ್ಲದೆ ಇದ್ದರೆ, ಅಡಿಗೆ ಮಾಡುವವರ ಮೇಲೆ ನಂಬಿಕೆ ಇಲ್ಲದೆ ಇದ್ದರೆ, ಗೆಳೆಯನ ಮೇಲೆ ನಂಬಿಕೆ ಇಲ್ಲದೆ ಹೋದರೆ, ನನ್ನ ಮೇಲೆ ನನಗೆ ನಂಬಿಕೆ ಇಲ್ಲದೆ ಹೋದರೆ, ಅನುಭವಿಸುವುದು ಯಾವಾಗ ?. ಕುಳಿತರು ಸಂದೇಹ, ನಿಂತರೂ ಸಂದೇಹ. ಕೆಲಸಕ್ಕೆ ಹೋಗಿದ್ದಾನೆ ಒಬ್ಬ ಆತನಿಗೆ ಸಂದೇಹ. ಈಗ ಮನೆಗೆ ಯಾರು ಬಂದಿದ್ದಾರೋ? ಏನು ಮಾಡುತ್ತಿದ್ದಾರೋ? ಅನ್ನುವ ಸಂದೇಹ ಇದ್ದರೆ ಸಂತೋಷ ಎಲ್ಲಿ ಆಗುತ್ತದೆ?. ಅದಕ್ಕೆ ಸಂದಿಗ್ಧತೆ ಕಡಿಮೆಯಾಗಬೇಕು. ನಾನು ಹೇಳುವವನಿದ್ದೇನೆ ಅದನ್ನೆಲ್ಲ ಸಂದೇಹದಿಂದ ನೋಡಿದರೆ ಅದು ಫಲ ನೀಡುವುದಿಲ್ಲ. ಶಾಲೆಗೆ ಹೋಗುತ್ತೇವೆ. ಮಾಸ್ಟರ್ ಹೇಳುತ್ತಾರೆ ಇದು ಸರಿಯೋ ತಪ್ಪೋ ಎನ್ನುವ ಸಂದೇಹ ಇದ್ದರೆ ಕಲಿಕೆ ಹೇಗೆ ಆಗುತ್ತದೆ? ನೂರಕ್ಕೆ ನೂರು ನಂಬಿಕೆ ಇರಲಿ. ಸತ್ಯ ಅನ್ನುವ ನಂಬಿಕೆ ಇರಬೇಕು ಅದು ಶ್ರದ್ಧೆ.

ಒಮ್ಮೆ ಒಂದು ಇರುವೆ ಹಣ್ಣಿನ ಮರ ಹತ್ತುತ್ತಿತ್ತು. ನಿಧಾನವಾಗಿ ಹತ್ತುತ್ತಿತ್ತು. ಅದಕ್ಕೆ ಗಿಡದ ಮೇಲೆ ಹಣ್ಣಿದೆ ಅಂತ ಗೊತ್ತಾಗಿತ್ತು. ಅದು ಬಹಳ ಎತ್ತರವಿತ್ತು. ಅದರ ಕಣ್ಣು ಚಿಕ್ಕದು. ಕಾಲು, ದೇಹ ಅಷ್ಟು ಸಣ್ಣದು. ಆದರೂ ಅದಕ್ಕೆ ಗೊತ್ತಾಗಿತ್ತು ಆ ಹಣ್ಣು ಪಕ್ವವಾಗಿದೆ. ಆ ಹಣ್ಣಿನ ರಸ ಕುಡಿಯಬೇಕೆಂದು ಹತ್ತುತ್ತಿತ್ತು. ಅವಾಗ ಅಲ್ಲೇ ಕುಳಿತಿದ್ದ ಮನುಷ್ಯ ಕೇಳಿದ, ಎಲ್ಲಿಗೆ ಹೋಗುತ್ತಾ ಇದ್ದೀಯ? ಅಂತ ಕೇಳಿದ. ಇರುವೆ ಹೇಳಿತು, ಎಲ್ಲಿ ಹಣ್ಣಿದೆ ಅಲ್ಲಿಗೆ ಹೋಗುತ್ತಾ ಇದ್ದೇನೆ ಅಂದಿತು. ಮನುಷ್ಯ ಹೇಳಿದ, ಎಷ್ಟು ಎತ್ತರ ಇದೆ ? ಗೊತ್ತೇನು ಅಂದ. ಇರುವೆ ಹೇಳಿತು, ನನಗೆ ಹಣ್ಣು ಗೊತ್ತೇ ವಿನಃ ಎತ್ತರ ಗೊತ್ತಿಲ್ಲ. ಅದು ಶ್ರದ್ಧೆ. ಆಗ ಮನುಷ್ಯ ಹೇಳಿದ, ನನಗೆ ಕಾಣುವುದಿಲ್ಲ, ನಿನಗೆ ಹೇಗೆ ಕಾಣುತ್ತದೆ?. ಆಗ ಇರುವೆ ಹೇಳಿತು, ಹಣ್ಣು ಅದೇ ಅನ್ನೋದು ಗೊತ್ತಿದೆ. ನನ್ನ ಕಣ್ಣಿಗೆ ಕಾಣಿಸಲಿಕ್ಕೆ ಇಲ್ಲ. ನನ್ನ ಮನಸ್ಸು ಹೇಳುತ್ತಾ ಇದೆ. ಆ ಹಣ್ಣು ಕಾಣಬೇಕು ಅಂದರೆ ನನ್ನ ಹೃದಯ ಬೇಕು. ಏಕೆಂದರೆ ನೀನು ತಲೆಯಿಂದ ಬದುಕುವ ಮನುಷ್ಯ. ನಾನು ಎದೆಯಿಂದ ಬದುಕುವವನು. ನಾವು ಅನುಭವಿಸಲಿಕ್ಕೆ ಬಂದಿದ್ದೇವೆ. ನೀವು ಗಳಿಸಲಿಕ್ಕೆ ಬಂದಿದ್ದೀರಿ ಎಂದು ಹೇಳಿತು ಇರುವೆ. ಆ ಬಳಿಕ ಏರುತ್ತಾ ಹೋಯಿತು. ಸುಮಾರು 8 ರಿಂದ 10 ಅಡಿ ಏರಿತ್ತು. ಗಾಳಿ ಬೀಸಿದಾಗ ಕೆಳಗೆ ಬಿತ್ತು. ನಮ್ಮ ಹಾಗೆ ಬಿದ್ದ ಕೂಡಲೇ ಆಸ್ಪತ್ರೆಗೆ ಹೋಗಲಿಲ್ಲ. ಬಿದ್ದ ಕೂಡಲೇ ಮತ್ತೆ ಏರಲು ಶುರು ಮಾಡಿತು. ಆಗ ಮನುಷ್ಯ ಹೇಳಿದ, ಬಿದ್ದೆಯಲ್ಲ ಮತ್ತೆ ಏಕೆ ಏರುತ್ತಿ? ಅಂದ. ಆಗ ಇರುವೆ ಹೇಳಿತು, ನನ್ನ ಮೈ ಹೇಳುತ್ತ ಇದೆ, ನನ್ನ ಮನಸ್ಸು ಹೇಳುತ್ತಾ ಇದೆ, ನಾನು ಹತ್ತೇ ತೀರ್ತೀನಿ. ಅದರ ರಸ ಕುಡಿದೇ ತೀರ್ತೀನಿ ಅಂದಿತು. ಹಾಗಂತ ನನ್ನ ಮನಸ್ಸು ಹೇಳ್ತಾ ಇದೆ. ನನ್ನಲ್ಲಿ ಅಂತಹ ನಂಬಿಕೆ (ಶ್ರದ್ದೆ) ಇದೆ ಅಂದಿತು. ಆತ್ಮವಿಶ್ವಾಸ ಅಂದರೆ ಇದೆ. ನಾನು ಸೋಲೋ ಮನುಷ್ಯನಲ್ಲ. ಒಂದು ಸಲ, ಎರಡು ಸಲ ಬಿದ್ದರೆ ಮನುಷ್ಯರು ನಿರಾಸೆ ಆಗುತ್ತಾರೆ. ನಾವು ಹತ್ತು ಸಲ ಬಿದ್ದರು ಏರಿಬಿಡುತ್ತೇವೆ ಅಂದಿತು. ಮನುಷ್ಯರು ಬಿದ್ದ ಬಳಿಕ ಏಳುವುದು ಕಷ್ಟ. ನಾವು ಬೀಳಲಿಕ್ಕೆ ಬಂದವರಲ್ಲ. ಏಳಲಿಕ್ಕೆ ಬಂದವರು. ಏರಕ್ಕೆ ಬಂದವರು. ಮುಟ್ಟಕ್ಕೆ ಬಂದವರು. ಮನುಷ್ಯರೇ ನೀವು ಬಿಳಕ್ಕೆ ಬಂದವರು. ನಾನು 10 ಸಲ ಅಲ್ಲ, ಇನ್ನೂ 20 ಅಡಿ ಹೋಗಿ ಬೀಳ್ತಿನಿ. 40 ಅಡಿಗೂ ಹೋಗಿ ಬೀಳ್ತೀನಿ. ಆದರೆ ಖಾತ್ರಿ ಇದೆ. ನಾನು ಏರೆ ತೀರ್ತಿನಿ. ನಾವು ಬಿದ್ದಿದ್ದರೆ ಹೇಳುತ್ತಿದ್ದೇವೆ, ಏನ್ ಕೆಟ್ಟ ಗಾಳಿ ಕೆಡಗಿಸಿತು ಅಂತ ಹೇಳುತ್ತಾ ಇದ್ದೇವು. ಅವರು ತ್ರಾಸ್ ಕೊಟ್ರು, ಇವರು ತ್ರಾಸ್ ಕೊಟ್ರು ಅಂತಿದ್ವಿ. ರಸ್ತೆನೆ ಸರಿಯಾಗಿ ಮಾಡಿಲ್ಲ ಅದಕ್ಕೆ ಬಿದ್ದಿದ್ದೇವೆ ಅಂತ ಹೇಳ್ತಾ ಇದ್ದೆವು. ಇರುವೆಗೆ ಯಾವ ರಸ್ತೆ ?. ಇರುವೆಗೆ ಗಾಳಿ ಕಡೆ ಲಕ್ಷ್ಯ ಇಲ್ಲ. ಬಿದ್ದ ಕಡೆ ಲಕ್ಷ್ಯ ಇಲ್ಲ. ಏರೋದರ ಕಡೆಗೆ ಲಕ್ಷ್ಯ. ಅದಕ್ಕೆ ಒಂದು ಸಲ ಅಲ್ಲ, 10 ಸಲ ಅಲ್ಲ , ನೂರು ಸಲ ಆದ್ರೂ ಮನಸು ಅಷ್ಟು ತಯಾರಾಗಿತ್ತದೆ. ಅದೇ ಶ್ರದ್ದೆ. ಅಶಕ್ತತೆ ಇದ್ದರೆ ಶ್ರದ್ಧೆ ಇಲ್ಲ.

ಒಂದು ಸಣ್ಣ ಕೊಳ ಇತ್ತು, ಅದರ ಸಮೀಪ ಗುಬ್ಬಿ ಬಂತು. ಕೋಳಿ ಮರಿಗೆ ಹೇಳಿತು. ತಿಪ್ಪೆಯಲ್ಲಿ ಯಾಕೆ ಓಡಾಡುತ್ತಾ ಇದ್ದೀಯ?. ಹಾರೋಣ ಬಾ ಮೇಲೆ ಎಂದಿತು. ಎರಡು ಒಂದೇ ಗಾತ್ರ ಇದ್ದವು. ಕೋಳಿ ಮರಿ ಹೇಳಿತು, ಅಲ್ಲಿ ಹೇಗೆ ಹಾರುವುದು?. ಮೇಲೆ ಅಷ್ಟು ಎತ್ತರ ಹೇಗೆ ಹಾರುವುದು?. ನನ್ನ ಕೈಯಲ್ಲೇ ಆಗುವುದಿಲ್ಲ ಅಂದಿತು. ಆಗ ಗುಬ್ಬಿ ಹೇಳಿತು, ನಾನು ನಿನ್ನಷ್ಟೇ ಇದ್ದೀನಿ. ನನಗೆ ಹಾರೋದಿಕ್ಕೆ ಬರುತ್ತಿದೆಯಲ್ಲ. ನೀನು ಸ್ವಲ್ಪ ಪ್ರಯತ್ನ ಮಾಡು. ಅಸಾಧ್ಯ ಅಂತ ಮೊದಲೇ ಹೇಳಬೇಡ. ಸ್ವಲ್ಪ ಪ್ರಯತ್ನಿಸು ಅಂತ ಒತ್ತಾಯ ಮಾಡಿತು. ಆಗ ಉಳಿದ ಕೋಳಿಗಳು ಆ ಕೋಳಿ ಮರಿ ಸಮೀಪ ಬಂದು ಹೇಳಿದವು, ಇವನ ಮಾತ ಕೇಳುವುದಕ್ಕೆ ಹೋಗಬೇಡ. ಹೀಗೆ ಹೇಳಿ ಆತ ಮೇಲೆ ಹೋಗಿದ್ದಾನೆ. ಆತ ನಮ್ಮ ತಿಪ್ಪೆ ಬಿಡಿಸುತ್ತಾನೆ. ಏನು ಅದ್ಭುತ ತಿಪ್ಪೆ!. ಅಲ್ಲೊಂದು ಇಲ್ಲೊಂದು ಕಾಳು ಎಷ್ಟು ಆರಾಮಾಗಿ ಇರಬಹುದು. ಇಂತಹುದನ್ನು ಬಿಡಿಸಿ ಕರೆದೊಯ್ಯುತ್ತಾನೆ. ಇವನ ಮಾತಾ ಕೇಳೋಕೆ ಹೋಗಬೇಡ ಅಂದವು. ಗುಬ್ಬಿ ಹೇಳಿತು, ಅವೆಲ್ಲ ಹೇಳಿದ್ದು ಸತ್ಯ ಅಂತ ತಿಳಿದುಕೊಳ್ಳಬೇಡ. ನನ್ನ ಮಾತು ಸ್ವಲ್ಪ ಕೇಳು ಅಂದಿತು. ನನಗೆ ಹಾರೋದಿಕ್ಕೆ ಬರುತ್ತದೆ. ನಿನಗೂ ಪುಕ್ಕಗಳು ಇದೆ, ಬಳಸಿಲ್ಲ ಅಷ್ಟೇ. ಪ್ರಯತ್ನಿಸಿ ನೋಡು. ನಿನ್ನ ಹಾಗೆ ನಾವು ಇದ್ದವರು. ಹಾರೋದಕ್ಕೆ ಶುರು ಮಾಡಿದ್ದೀವಿ. ನೀನು ಬರೀ ಓಡಾಡಿ ಹೀಗೆ ಆಗಿದ್ದು. ನಿನ್ನ ತಾಯಿ ಇಲ್ಲೇ ಓಡಾಡಿದ್ದು. ನಿನ್ನ ತಂದೆ ಇಲ್ಲೇ ಓಡಾಡಿದ್ದು. ಅದಕ್ಕೆ ಇಲ್ಲೇ ಸ್ವರ್ಗ ಇದೆ ಅನ್ನೋ ಚಟ ಬಿತ್ತು. ಅದಕ್ಕೆ ನಿನ್ನ ಬಳಸಿಕೊಂಡು ಅಡುಗೆ ಮಾಡಿದರು. ನಾವು ಹಾಗೆ ಸಿಗುವುದಿಲ್ಲ. ನಾವು ಹಾರುವವರು. ಹಾರೋದಕ್ಕೆ ಕಲಿ. ಆಗ ಕೋಳಿ ಬಳಗ ಹೇಳಿದವು, ಅವನೇನು ಹೇಳ್ತಾನೆ?. ಅವನಿಗೆ ಏನು ತಿಳಿಯುತ್ತದೆ?. ಇಲ್ಲಿರುವ ವೈಭವ. ಆಗ ಗುಬ್ಬಿ ಹೇಳಿತು, ನನ್ನ ಮಾತಿನಲ್ಲಿ ಶ್ರದ್ಧೆ ಇಟ್ಟಿಕೋ. ನನ್ನ ಮಾತು ಕೇಳು. ಬಲಿಷ್ಠ ಆಗುತ್ತಿ. ಮೊದಲೆಲ್ಲ ಹೀಗೆ ಇರುವುದು. ಎಲ್ಲರೂ ಪುಕ್ಕನೆ ಬಡಿದೆ ಇದ್ರೆ ಮತ್ತೇನು ಮಾಡೋದಕ್ಕೆ ಆಗುತ್ತೆ. ನನಗೆ ಆಗುವುದಿಲ್ಲ ಅಂತ ನೆಲ ಹಿಡಿದು ಕುಳಿತ ಬಳಿಕ ಇನ್ನು ಅವನನ್ನು ಎಬ್ಬಿಸುವವರು ಯಾರಿದ್ದಾರೆ?. ಆಗುವುದಿಲ್ಲ ಅನ್ನುವುದನ್ನು ತಲೆಯಿಂದ ತೆಗೆದು, ಮನಸ್ಸಿನಿಂದ ತೆಗೆದರೆ ಆಗ ಸಾಧನೆಯಾಗುತ್ತದೆ. 

ಇವೆರಡರಲ್ಲಿ ವ್ಯತ್ಯಾಸವಿದೆ ನಮಗೂ ಸಾಧ್ಯ ಇದೆ ಅಂತ ಭಾವಿಸಬೇಕು. ನಮ್ಮ ಮನಸ್ಸನ್ನು ಮೇಲೆ ಮೇಲೆ ಎತ್ತುವುದದೆ. ವಿಶಾಲವಾದ ವಸ್ತುವನ್ನು ಜಗತ್ತಿನಲ್ಲಿ ನೋಡಿ ಆನಂದಿಸುವುದಿದೆ. ಒಂದು ಬಟ್ಟಲಿನಲ್ಲಿರುವ ನೀರು ನೋಡಿ ಆನಂದಿಸುವುದು ಎಷ್ಟು ಮಹತ್ವವೊ, ಸಮೀಪ ಹೋಗಿ ಒಮ್ಮೆ ಸಾಗರ ನೋಡಬೇಕು. ಆನಂದಿಸಬೇಕು. ಶ್ರದ್ಧೆ ಶಕ್ತಿಯನ್ನು ಕೊಡುತ್ತದೆ. ಆಗುವುದಿಲ್ಲ ಅನ್ನುವ ಭಾವನೆಯನ್ನು ತೆಗೆದು ಹಾಕುತ್ತದೆ. ಆಗಲಾರದವರು ಅನ್ನುವ ಕಲ್ಪನೆ ತೆಗೆದುಹಾಕುತ್ತದೆ. ನೋಡಿ ಏನೂ ಇಲ್ಲದವರು ಎಲ್ಲೆಲ್ಲೋ ಹೋಗಿದ್ದಾರೆ. ಸಾಧ್ಯತೆ ಇದೆ ಅನ್ನುವುದೇ ಶ್ರದ್ಧೆ. ನಮ್ಮ ದೃಷ್ಟಿ ಬದಲಿಸಿಕೊಳ್ಳಬೇಕು. ಅಲ್ಲವೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************






Ads on article

Advertise in articles 1

advertising articles 2

Advertise under the article