ಸ್ಫೂರ್ತಿಯ ಮಾತುಗಳು : ಸಂಚಿಕೆ - 194
Monday, December 8, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 194
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಸ್ವಂತ ಊರಿನಲ್ಲಿ ಧನ್ಯತೆ, ಪರವೂರಿನಲ್ಲಿ ಮಾನ್ಯತೆಯನ್ನು ಗಳಿಸುವುದೇ ವ್ಯಕ್ತಿತ್ವದ ಲಕ್ಷಣ. ಸ್ವಚ್ಛ ಮನೆ, ಸುಗುಣ ಸಂಪನ್ನ ಹೆಂಡತಿ, ಪ್ರೀತಿಯ ಮಕ್ಕಳು, ನೆರವಾಗುವ ಬಂಧು ಬಾಂಧವರು, ಸೇವೆ ಮಾಡಲು ಆಳು ಕಾಳು, ಆರಾಮದ ವಾಹನ, ಸಂತೃಪ್ತಿಯ ಉದ್ಯೋಗ, ವೆಚ್ಚಕ್ಕೆ ಪೂರಕವಾದ ಸಂಪಾದನೆ ಇವೆಲ್ಲವೂ ಸಂದರ ಬದುಕಿನ ಪ್ರಮುಖ ಅಗತ್ಯಗಳು. ಜೊತೆಗೆ ದೇಹಾರೋಗ್ಯ ಮತ್ತು ಮನಸ್ಸಿನ ಆರೋಗ್ಯವೂ ವ್ಯಕ್ತಿತ್ವದ ಭಾಗ. ಇವೆಲ್ಲವನ್ನೂ ಹಣ ನೀಡಿ ಖರೀದಿ ಮಾಡಿ ಗಳಿಸಬಹುದು ಎನ್ನುವಂತಿಲ್ಲ. ಸುಂದರ ಮನೆ ಹಣಕ್ಕೆ ಸಿಕ್ಕಿದರೂ ಸುಂದರ ಮನವು ಸ್ವನಿರ್ಮಿತವೇ ಆಗಬೇಕು. ವ್ಯಕ್ತಿತ್ವಕ್ಕೆ ಇಂತಹ ಹಲವು ಸ್ವನಿರ್ಮಿತ ಭಾವನಾಂಶಗಳೂ ಅಗತ್ಯ, ಅವುಗಳನ್ನು ಪಡೆದಾಗ ನಮ್ಮೊಳಗೆ ಧನ್ಯತೆಯ ಭಾವನೆ ಗಟ್ಟಿಯಾಗುತ್ತದೆ. ಧನ್ಯತೆಯ ಕೆಲಸಗಳಾದಾಗ ಎಲ್ಲೆಡೆಯಿಂದಲೂ ಮಾನ್ಯತೆಯು ಹರಿದು ಬರಲಾರಂಭಿಸುತ್ತದೆ.
“ಬೆಳಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು...
ರಾತ್ರಿ ಮಲಗುವಾಗ ಆತ್ಮ ತೃಪ್ತಿ ಇರಬೇಕು” ಎಂಬ ಮಾತಿದೆ.
ದೇಶದಲ್ಲಿ ಧನ್ಯತೆ ವಿದೇಶದಲ್ಲಿ ಮಾನ್ಯತೆಗಳಿಸಲು ದೈನಂದಿನ ದಿನಚರಿಯೇ ಪ್ರಮುಖ ಸೋಪಾನವಾಗುತ್ತದೆ. ಹಾಸಿಗೆಯಿಂದ ಎದ್ದೊಡನೆ ಇಂದು ತಾನು ಮಾಡುವ ಎಲ್ಲ ಕೆಲಸಗಳ ನಿರ್ಧಾರ ಆಗಿರಬೇಕು. ದಿನವಿಡೀ ತನ್ನ ನಿರ್ದಾರದ ಯಶಸ್ಸಿಗಾಗಿ ಬೆಂಬತ್ತಿದರೆ ರಾತ್ರಿ ಮಲಗುವಾಗ ಆತ್ಮತೃಪ್ತಿ ದೊರೆಯುತ್ತದೆ. ಬೆಂಬತ್ತಿ ಗುರಿ ಮುಟ್ಟುವ ಪ್ರಯತ್ನವನ್ನೇ ಮಾಡದಿದ್ದಾಗ ಆತ್ಮತೃಪ್ತಿ ಕನಸಿನ ಮಾತಾಗಿ ಬಿಡುತ್ತದೆ. ಮಲಗುವಾಗ ಪ್ರತಿ ದಿನವೂ ಗುರಿ ತಲುಪಲಾಗದೆ ಅಪೂರ್ಣತೆಯ ಗೊಂದಲಗಳೇ ಉಳಿದರೆ ರಾತ್ರಿ ನಿದ್ದೆ ಹತ್ತದೆ ಆರೋಗ್ಯದಲ್ಲಿ ಏರು ಪೇರು ಖಚಿತ. ಆರೋಗ್ಯ ಕೈಕೊಟ್ಟಾಗ ಧನ್ಯತೆಯ ಜೀವನವು ಅಸಾಧ್ಯವಾಗುತ್ತದೆ.
ದೈನಂದಿನ ಕೆಲಸಗಳು ಎಲ್ಲರದೂ ಒಂದೇ ಆಗಿರುವುದಿಲ್ಲ. ಕೆಲವರು ದುಡಿಮೆಗಾರರಾದರೆ ಇನ್ನೂ ಕೆಲವರು ದುಡಿಸುವ ಮಾಲಕರು. ದುಡಿಮೆಗಾರರಿಗೆ ಅಂದಂದಿನ ತಮ್ಮ ಕೆಲಸದ ಗುರಿಯನ್ನು ಸಾಧಿಸಲಾಗದೇ ಹೋದರೆ ವೇತನದಲ್ಲಿ ಕಡಿತವಾಗುತ್ತದೆ. ಕೆಲಸದಿಂದ ವಜಾವೂ ಆಗಬಹುದು. ಆಗ ಊರಿನಲ್ಲಿ ಸೋಮಾರಿಯೆಂಬ ಪಟ್ಟ ಸಿದ್ಧವಾಗುತ್ತದೆ. ಹೊಸ ಜಾಗದಲ್ಲಿ ಕೆಲಸ ಅನ್ವೇಷಿಸಿದರೂ, “ಸೋಮಾರಿ” ಗೆ ಕೆಲಸ ದೊರೆಯದು. ಇದರಿಂದ ಮನೆಯವರೆಲ್ಲರ ಕೂಳಿಗೆ, ಅವರ ಅಗತ್ಯಗಳಿಗೆ ಕುತ್ತಾಗುತ್ತದೆ, ಬದುಕಿನಲ್ಲಿ ಧನ್ಯತೆ ಗಳಿಸುವುದು ಅವಶ್ಯಕವಾಗುತ್ತದೆ.
ಕೂಲಿಯಿಂದ ಮಾಲಿಯ ತನಕದ ಎಲ್ಲವರಿಗೂ ಧನ್ಯತೆಯ ಬದುಕು ಸಿಗಬೇಕು. ಧನ್ಯತೆಗೆ ಮನಸ್ಸು ಬೀಗಬಾರದು, ಬಾಗಬೇಕು. ಮನಸ್ಸಿನಲ್ಲಿ ಎರಡು ವಿಧಗಳಿವೆ, ಮಗು ಮನಸ್ಸು ಮತ್ತು ಬಿಗು ಮನಸ್ಸು. ಮಗು ಮನಸ್ಸು ಪುಷ್ಪದಂತೆ ಕೋಮಲ. ಬಿಗು ಮನಸ್ಸು ಕೊರಡಿನಂತೆ ಬಿರುಸು ಅಥವಾ ಕಠಿಣ. ಮನದೊಳಗೆ ಅಹಂಕಾರವೂ ಬರಬಾರದು. ಮನದೊಳಗಾಗಲೀ, ಅರಿವು ಅಥವಾ ಜ್ಞಾನದೊಳಗಾಗಲೀ ಅಹಂಕಾರವು ನುಸುಳಿದರೆ ಬದುಕು ಬರಡಾಗುತ್ತದೆ. ಧನ್ಯತೆ ಮತ್ತು ಮಾನ್ಯತೆಗಳೆರಡೂ ಬದುಕು ಬರಡಾದವರಿಗೆ ದಕ್ಕದು.
ಧನ್ಯತೆ ಮತ್ತು ಮಾನ್ಯತೆ ನಮ್ಮ ಹೃದಯದ ಗುಣಗಳನ್ನಾಧರಿಸಿದೆ. ಹೃದಯದೊಳಗೆ ಮಾಲಿನ್ಯತೆಯಿದ್ದಾಗ ಅದು ದುರ್ಗುಣ ಎನಿಸುತ್ತದೆ. ದುರ್ಗುಣಿಗೆ ಮಾನ್ಯತೆ ಎಲ್ಲೂ ಸಿಗದು. ಯಾಕೆಂದರೆ ಅವನು ತನ್ನ ಬಾಳಿನಲ್ಲಿ ಎಂದಿಗೂ ಧನ್ಯತೆಯನ್ನು ಗಳಿಸಲಾರ. ಮಲಿನ ಹೃದಯಿ ಏನು ಮಾಡಬೇಕೆಂದು ಅರ್ಜುನನೇ ಶ್ರೀಕೃಷ್ಣನನ್ನು ಪ್ರಶ್ನಿಸಿದ್ದಾನೆ. ಭಗವದ್ಗೀತೆಯ ಎರಡನೇ ಅಧ್ಯಾಯದ ಏಳನೇ ಶ್ಲೋಕದ ಒಂದು ಮತ್ತು ಎರಡನೇ ಪಾದಗಳು ಹೀಗಿವೆ.
ಕಾರ್ಪಣ್ಯ ದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಂಮೂಢಚೇತಾಃ |
ಕಾರ್ಪಣ್ಯ ದೋಷಿ ಎಂದರೆ ಕೃಪಣ. ʼಕೃಪಣʼ ಎಂಬ ಶಬ್ದವು ವಿಭಿನ್ನ ಅರ್ಥಗಳಲ್ಲಿ ವ್ಯವಹರಿಸಲ್ಪಡುತ್ತದೆ.
ಹಣ- ಸಂಪತ್ತುಗಳಲ್ಲಿ ಅತಿಯಾದ ಆಸಕ್ತಿ ಇಟ್ಟುಕೊಂಡಿರುವವರು, ವಿಷಯ ಭೋಗಗಳಲ್ಲೇ ತಮ್ಮ ಜೀವನವನ್ನು ಕಳೆದುಕೊಳ್ಳುವವರು. ಹಾಗೂ ಸಾಮಾನ್ಯವಾಗಿ ದೀನ ಸ್ವಭಾವದವರು *ಕೃಪಣ* ಎಂದು ಕರೆಸಿಕೊಳ್ಳುತ್ತಾರೆ. ಕಾರ್ಪಣ್ಯ ತೊಲಗಬೇಕು ಕಾರುಣ್ಯ ಮೊಳಗಬೇಕು. ನಾವು ನಮ್ಮ ಹೃದಯವನ್ನು ಶುದ್ಧವಾಗಿರಿಸಿ ಧನ್ಯತೆ ಮಾನ್ಯತೆ ಗಳಿಸೋಣ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************