ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 108
Wednesday, December 10, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 108
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಇಂಗಾಲದ ಮಾನಾಕ್ಸೈಡ್ ಅನ್ನು ಹೀರಿಕೊಂಡು ಉಂಟಾಗುವ ಕಾರ್ಬಾಕ್ಸಿ ಹೀಮೋಗ್ಲೋಬಿನ್ (COHb) (ಇನ್ನು ಮುಂದೆ ಹೀಗೇ ಕರೆಯುತ್ತೇನೆ) ಒಂದು ಸ್ಥಿರ ಮತ್ತು ನಿರುಪಯಕ್ತ ಸಂಯುಕ್ತ ಎಂದು ತಿಳಿದುಕೊಂಡಾಗ ಇದರ ಪರಿಣಾಮಗಳೇನು ಎಂದು ಕೇಳಿದ್ದಾರೆ. ಹೀಗೆ ನಿರರ್ಥಕವಾದರೆ ಮುಂದೇನು ಎಂದು ಗಾಬರಿಪಟ್ಟಿದ್ದಾರೆ. ಈ COHb ರಕ್ತಕ್ಕೆ ಅಪರಿಚಿತವಲ್ಲ. ನಮ್ಮ ನಿಮ್ಮ ರಕ್ತದಲ್ಲಿಯೂ ಇದು 3% ಇದ್ದೇ ಇರುತ್ತದೆ. ಏಕೆಂದರೆ ಗಾಳಿಯಲ್ಲಿ ಅಸಮರ್ಪಕ ಉರಿಯುವಿಕೆಯಿಂದ, ಸುಸ್ಥಿತಿಯಲ್ಲಿಲ್ಲದ ವಾಹನಗಳ ಹೊಗೆಯಲ್ಲಿ, ನಮ್ಮಮ್ಮನ ಅಡುಗೆ ಮನೆಯಲ್ಲಿ ಇದು ಉತ್ಪತ್ತಿಯಾಗುತ್ತಲೇ ಇರುತ್ತದೆ. ಇನ್ನು ಧೂಮಪಾನ ಮಾಡುವವರಲ್ಲಿ 6 ರಿಂದ 9% COHb ಇರುತ್ತದೆ. ಅಂದರೆ ಅಪಾಯ ಬರುವುದಾದರೆ ಅದರ ಪ್ರಮಾಣ 10% ವನ್ನು ಮೀರಿದಾಗ ಮಾತ್ರ. ಆದರೆ ಇದು ಆರೋಗ್ಯ, ವ್ಯಕ್ತಿ, ಆತ ಧೂಮಪಾನಿಯೇ ಅಲ್ಲವೇ ಎಂಬುದು ಮುಖ್ಯ. ಧೂಮಪಾನಿಗಳು ಹೆಚ್ಚು ಸುರಕ್ಷಿತ. ಅಂದರೆ
1. 10 - 20% ದಷ್ಟಿದ್ದರೆ ತಲೆನೋವು, ಸುಸ್ತು, ಮತ್ತು ಕಿರಿ ಕಿರಿ ಕಾಣಿಸಿಕೊಳ್ಳುತ್ತದೆ.
2. 20 - 30% ವಿಪರೀತ ನಿಶ್ಯಕ್ತಿ, ತಲೆ ಸುತ್ತು, ಜೀವಕೋಶಗಳಿಗೆ ಆಘಾತಕಾರಿ ಆಮ್ಲಜನಕ ಕೊರತೆ (fatal hypoxia)
3. 30 - 60% ತೀವ್ರವಾದ ಹೃದಯದ ಬಡಿತ ಮತ್ತು ಬೆವರುವಿಕೆ, ಗೊಂದಲ, ಪ್ರಜ್ಞೆ ತಪ್ಪುವಿಕೆ, ಸ್ನಾಯು ಜೀವಕೋಶಗಳ ಚಟುವಟಿಕೆ ಏಕಾಏಕಿ ಕುಸಿತ (syncope).
4. >60% ಇದು ಮಾರಣಾಂತಿಕ. ಪ್ರಜ್ಞಾಹೀನತೆ, ಹೃದಯ ಮತ್ತು ಉಸಿರಾಟದ ಹಳಿ ತಪ್ಪುವಿಕೆ ಮತ್ತು ಸಾವು.
ಮುಂದಿನ ಪ್ರಶ್ನೆ ಮುಂದೇನು... ಅಂದರೆ ಇದನ್ನು ಗುಣಪಡಿಸಲಾಗದೇ ಎಂಬುದು ಭಾವ. ಇದನ್ನು ತಿಳಿದುಕೊಳ್ಳಬೇಕಾದರೆ ನಾವು ಅರ್ಧಾಯುಷ್ಯದ ಬಗ್ಗೆ ಸ್ವಲ್ಪ ತಿಳಿದಿರಬೇಕಾಗುತ್ತದೆ.
ಮಕ್ಕಳೇ ಹಿಂದೆ ಬದುಕಿದ್ದ ಜೀವಿಗಳು ಎಷ್ಟು ವರ್ಷಗಳ ಹಿಂದೆ ಬದುಕಿದ್ದವು ಎಂದು ತಿಳಿಯಲು ಅವುಗಳ ಪಳೆಯುಳಿಕೆಗಳನ್ನು ಪರೀಕ್ಷಿಸಿ ನಿರ್ಧರಿಸಲಾಗುತ್ತಿದೆ ಎಂದು ನಿಮಗೆ ತಿಳಿದಿದೆ. ನೀವು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿ ಮರವೊಂದರ ಪಳೆಯುಳಿಕೆಯನ್ನು ಪ್ರದರ್ಶನಕ್ಕಿಟ್ಟಿರುವುದನ್ನು ನೀವು ನೋಡಿದ್ದೀರಿ ತಾನೆ. ಅದು ಮಿಲಿಯಾಂತರ ವರ್ಷಗಳಷ್ಟು ಹಳೆಯವು. ಅವುಗಳ ವಯಸ್ಸು ಅಷ್ಟು ನಿಖರವಾಗಿ ಹೇಳುತ್ತಾರೆಂದು ನಿಮ್ಮ ಗುರುಗಳ ಬಳಿ ಕೇಳಿದರೆ ಅವರು ಅದು ಇಂಗಾಲ ಕಾಲ ನಿರ್ಣಯ (carbon dating) ಎಂದಿರಬಹುದು. ಈ ಕಾರ್ಬನ್ ಡೇಟಿಂಗ್ ಅಂದರೆ ಏನು?
ಪ್ರತಿಯೊಂದು ಮೂಲವಸ್ತುವೂ ಪರಮಾಣುಗಳಿಂದಾಗಿರುತ್ತವೆ. ಈ ಪರಮಾಣುಗಳಲ್ಲಿರುವ ಪ್ರೋಟಾನ್ ಗಳ ಸಂಖ್ಯೆ ಅದರ ಪರಮಾಣು ಸಂಖ್ಯೆ. ಅದರಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳ ಸಂಖ್ಯೆಯ ಮೊತ್ತವನ್ನು ಪರಮಾಣು ರಾಶಿ ಎನ್ನುತ್ತೇವೆ. ಒಂದೇ ಪರಮಾಣು ಸಂಖ್ಯೆ ಇದ್ದು ಬೇರೆ ಬೇರೆ ಪರಮಾಣು ರಾಶಿಯನ್ನು ಹೊಂದಿರುವಂತಹವು ಐಸೋಟೋಪ್ ಗಳು. ಇಂಗಾಲಕ್ಕೆ ಎರಡು ಐಸೋಟೋಪುಗಳಿವೆ. ಒಂದು C12 ಮತ್ತು ಇನ್ನೊಂದು C14. ಇವುಗಳಲ್ಲಿ C12 ಸಾಮಾನ್ಯವಾದರೆ C14 ತುಂಬಾ ವಿರಳ. ಆದರೂ ವಾತಾವರಣದಲ್ಲಿ ಇವುಗಳ ಅನುಪಾತ ಸ್ಥಿರವಾದದ್ದು. ಅಂದರೆ ಪ್ರತಿ ಒಂದು ಟ್ರಿಲಿಯನ್ C12 ಗೆ ಒಂದು C14 ಪರಮಾಣು ಇರುತ್ತದೆ. ಇದು ಜೀವಿಯ ಒಳಗೆ ಪ್ರವೇಶಿಸಿದಾಗ ಅಲ್ಲಿ ಇವೆರಡು ಬಂಧಿಯಾಗುತ್ತವೆ. ಈ C14 ಒಂದು ವಿಕಿರಣ ವಸ್ತು (radioactive). ಇದು ಬೀಟಾ ಕಿರಣಗಳನ್ನು ಹೊರಸೂಸುತ್ತವೆ. ಇದನ್ನು ಬೀಟಾ ಕ್ಷಯ (beta decay) ಎನ್ನುವುದು. ಬೀಟಾ ಕ್ಷಯದ ಅಂತ್ಯದಲ್ಲಿ ಒಂದು ನ್ಯೂಟ್ರಾನ್ ಪ್ರೋಟಾನ್ ಆಗಿ ಬದಲಾಗುತ್ತದೆ. ಇದರಿಂದ C14 ಪರಮಾಣು ಸಾರಜನಕ (nitrogen N14) ಆಗಿ ಬದಲಾಗುತ್ತದೆ. ಒಟ್ಟು ಲಭ್ಯವಿರುವ C14 ಪರಮಾಣುಗಳ ಸಂಖ್ಯೆಯು ಅದರ ಅರ್ಧದಷ್ಟಾಗಲು 5300 ವರ್ಷಗಳ ಕಾಲ ಬೇಕು. ಹೀಗೆ ತನ್ನ ಅರ್ಧದಷ್ಟಾಗಲು ತೆಗೆದುಕೊಳ್ಳುವ ಕಾಲವೇ ಅರ್ಧಾಯುಷ್ಯ (half life period). ಅಂದರೆ ಆರಂಭದಲ್ಲಿ 100 ದೇಹದಲ್ಲಿ C14 ಪರಮಾಣುಗಳಿದ್ದರೆ 5300 ವರ್ಷಗಳಲ್ಲಿ ಈ ಸಂಖ್ಯೆ 50 ಆಗುತ್ತದೆ. ಮತ್ತು ಮುಂದಿನ 5300 ವರ್ಷಗಳಲ್ಲಿ ಅದು 25 ಆಗುತ್ತದೆ. ಪಳೆಯುಳಿಕೆಯಲ್ಲಿರುವ C14 ಮತ್ತು C12 ಪರಮಾಣುಗಳ ಅನುಪಾತದ (ratio) ಆಧಾರದ ಮೇಲೆ ಆ ಪಳೆಯುಳಿಕೆ ಎಷ್ಟು ಹಳೆಯದು ಎಂದು ಅದರ ಆಯಷ್ಯವನ್ನು ನಿರ್ಧರಿಸಲಾಗುತ್ತದೆ. ಆದರೆ ಆ ಪಳೆಯುಳಿಕೆ 50,000 ಕ್ಕಿಂತ ಹಳೆಯದಾದರೆ ಈ ಕಾರ್ಬನ್ ಡೇಟಿಂಗ್ ನಿಂದ ಕಾಲ ನಿರ್ಣಯ ಕಷ್ಟ. ಅಂತಹ ಸಂದರ್ಭದಲ್ಲಿ ಪೊಟಾಸಿಯಂ - ಆರ್ಗಾನ್ ಕಾಲ ನಿರ್ಣಯ (K - Ar dating), ಯುರೇನಿಯಂ - ಸೀಸ ಕಾಲ ನಿರ್ಣಯ (U - Pb dating) ಹೀಗೆ.
ಈ ರೀತಿಯ ಅರ್ಧಾಯುಷ್ಯ ವಿಕಿರಣ ಶೀಲ ವಸ್ತುಗಳಿಗೆ ಮಾತ್ರವಲ್ಲ ಕೆಲವೊಂದು ರಾಸಾಯನಿಕಗಳಿಗೂ ಇವೆ. ಉದಾಹರಣೆಗೆ ಕೆಫಿನ್. ಕೆಫಿನ್ ಕಾಫಿ ಚಹಾಗಳಲ್ಲಿರುವ ಒಂದು ಉತ್ತೇಜಕ ವಸ್ತು (stimulant). ಇದು ವಿಷ ವಸ್ತುವೂ ಹೌದು. ಒಂದು ಕಪ್ ಕಾಫಿಯಲ್ಲಿ ಕಾಫಿಯ ವಿಧವನ್ನು ಅವಲಂಭಿಸಿ 60 ರಿಂದ 200 ಮಿ.ಗ್ರಾಮ್ ಕೆಫಿನ್ ಇರುತ್ತದೆ. ನೀವು ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುತ್ತೀರಾದರೆ ಎಷ್ಟು ಕೆಫಿನ್ ನಿಮ್ಮ ರಕ್ತ ಸೇರುತ್ತದೆ ಗಮನಿಸಿ. ರಕ್ತದಲ್ಲಿ ಎಲ್ಲಾದರೂ 180 mg/dL ಕೆಫಿನ್ ಸಾವು ತರುತ್ತದೆ. ಆದರೆ ಕಾಫಿ ಕುಡಿದು ಸತ್ತರು ಎಂದು ಕೇಳಿದ್ದೀರಾ. ಯಾವತ್ತೂ ಇಲ್ಲ ಯಾಕೆ? ಕುಡಿದ ಕಾಫಿಯಲ್ಲಿನ ಕೆಫಿನ್ ನ ಪ್ರಭಾವ 15 ರಿಂದ 60 ನಿಮಿಷಗಳ ಕಾಲ ಗರಿಷ್ಠವಿರುತ್ತದೆ. ಮೂತ್ರಜನಕಾಂಗ ಕೆಫಿನ್ ಅನ್ನು ನಿರಂತರವಾಗಿ ರಕ್ತದಿಂದ ಹೊರ ಹಾಕುತ್ತದೆ. 4 ರಿಂದ 6 ಗಂಟೆಗಳಲ್ಲಿ ಅರ್ಧದಷ್ಟು ಮತ್ತು 10 ಗಂಟೆಗಳಲ್ಲಿ ಪೂರ್ತಿಯಾಗಿ ರಕ್ತದಿಂದ ಹೊರ ಹಾಕಲ್ಪಡುತ್ತದೆ. ಆದ್ದರಿಂದ ಕೆಫಿನ್ ಗೆ ರಕ್ತದಲ್ಲಿನ ಅರ್ಧಾಯುಷ್ಯ 4 ರಿಂದ 6 ಗಂಟೆಗಳು ಎನ್ನಬಹುದು.
ವಿಷಯಾಂತರ ಮಾಡಿದ್ದೀರಲ್ಲ ನಿಮ್ಮ ವಿಷಯಕ್ಕೂ ಅರ್ಧಾಯುಷ್ಯಕ್ಕೂ ಏನು ಸಂಬಂಧ ಎಂದು ಮುಂದಿನ ವಾರ ನೋಡೋಣ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************