ಜೀವನ ಸಂಭ್ರಮ : ಸಂಚಿಕೆ - 219
Monday, December 8, 2025
Edit
ಜೀವನ ಸಂಭ್ರಮ : ಸಂಚಿಕೆ - 219
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಮಹರ್ಷಿ ವೇದವ್ಯಾಸನ ದೃಷ್ಟಿಯಿಂದ ಅನ್ನ ಎಂದರೇನು? ಎಂಬುದರ ಬಗ್ಗೆ ನೋಡೋಣ. ಹತ್ತರಿಂದ ಹದಿನೈದು ಸಾವಿರ ವರ್ಷಗಳ ಹಿಂದೆ ಮಾನವನ ಉಗಮವಾಯಿತು ಅಂತ ವಿಜ್ಞಾನಿಗಳು ಹೇಳುತ್ತಾರೆ. ಮಾನವ ಉಗಮವಾದಾಗ ಯಾವುದೇ ಮನೆಗಳು ಇರಲಿಲ್ಲ. ಶಸ್ತ್ರಗಳು ಇರಲಿಲ್ಲ. ಆ ಮನುಷ್ಯನಿಗೆ ಮಾತು ಬರುತ್ತಿರಲಿಲ್ಲ. ಏನೂ ಗೊತ್ತಿರಲಿಲ್ಲ. ಇಂತಹ ಸ್ಥಿತಿಯಿಂದ ಮಾನವ ಈ ಹಂತಕ್ಕೆ ಬಂದಿದ್ದಾನೆ. ಮನುಷ್ಯ ಕುಲ ಮುಂದುವರಿಯುತ್ತಲೇ ಇದೆ. ಇದು ಯಾರ ಮೇಲೂ ನಿಂತಿಲ್ಲ. ಒಂದು ನಿಯಮದ ಮೇಲೆ ನಿಂತಿದೆ. ಹೀಗೆ ಮುಂದುವರಿಯಲು ಏನು ಕಾರಣ?. ಇದು ನಿರ್ಮಾಣ ಆಗಲು ಕಾರಣವೇನು..? ನಾವು ಬದುಕಲು ಏನು ಕಾರಣ?. ಅನ್ನ ಕಾರಣ. ಅನ್ನ ಇದೆ ಅಂತ ನಾವು ಬದುಕಿದ್ದೀವಿ. ಅಷ್ಟೇ ಅಲ್ಲ ಸಮಸ್ತ ಜಗತ್ತು ಬದುಕಿದೆ. ಅನ್ನದಿಂದ ಜೀವ. ಅನ್ನ ಯಾವುದು? ನಾವು ತಿನ್ನುವುದಷ್ಟೇ ಅಲ್ಲ. ಬಿಸಿಲು ಅನ್ನವೇ, ನೀರು ಅನ್ನವೇ, ಗಾಳಿ ಅನ್ನವೇ. ಆದುದರಿಂದ ಬಿಸಿಲು ಇಲ್ಲದೆ ಬದುಕುವುದಿಲ್ಲ. ನೀರು ಇಲ್ಲದೆ ಬದುಕುವುದಿಲ್ಲ. ಗಾಳಿ ಇಲ್ಲದೆ ಬದುಕುವುದಿಲ್ಲ. ಅಂದರೆ ಕೇವಲ ಮುದ್ದೆ ರೊಟ್ಟಿ ಪಲ್ಯ ಅನ್ನವಲ್ಲ. ನೋಡುವ ದೃಷ್ಟಿ ಸೌಂದರ್ಯ ಅನ್ನ. ಕೇಳುವ ಶಬ್ದ ಅನ್ನ. ಸುವಾಸನೆ ಅನ್ನ. ರಸ ಅನ್ನ. ಯಾವ ಯಾವುದು ನಮ್ಮ ಜೀವನಕ್ಕೆ ಅತ್ಯಂತ ಅವಶ್ಯಕ? ಅದೆಲ್ಲ ಅನ್ನ. ಯಾವುದು ಇಲ್ಲದೆ ಇದ್ದರೆ ಬದುಕೋದು ಇಲ್ಲ ಅವೆಲ್ಲ ಅನ್ನ ಎಂದು ಹೇಳಿದರು ಮಹರ್ಷಿ ವೇದವ್ಯಾಸ. ಹಾಗಾಗಿ ಅನ್ನದಷ್ಟು ಪ್ರಿಯವಾದ ವಸ್ತು ಯಾವುದು..? ಅನ್ನದಂತ ಬೆಲೆಯುಳ್ಳ ವಸ್ತು ಯಾವುದು ಇಲ್ಲ. ಅದರ ಬೆಲೆ, ಇಲ್ಲದಾಗ ಗೊತ್ತಾಗುತ್ತೆ.
ನಮ್ಮ ಭಾರತೀಯರು ಏಕಾದಶಿ ಅಂತ ಆಚರಣೆ ಮಾಡುತ್ತಾರೆ. ಕಾರಣ ಅನ್ನದ ಮಹತ್ವ ಗೊತ್ತಾಗಲಿ ಅಂತ. ನಾವು ಯಾವ ಯಾವುದಕ್ಕೊ ಮಹತ್ವ ನೀಡುತ್ತೇವೆ. ಜೀವನದಲ್ಲಿ ಯಾವುದು ಮಹತ್ವ ಅಂತ ಗೊತ್ತಾಗಬೇಕಾದರೆ, ವಾರಕ್ಕೊಮ್ಮೆ ಉಪವಾಸ ಮಾಡು ಅಂತ ಭಾರತೀಯ ಆಚರಣೆಯಲ್ಲಿದೆ. ಹಸಿವಾದಾಗ ಕನಸು ಮನಸ್ಸಿನಲ್ಲಿ ಯಾವುದು ಬೀರುತ್ತದೆ ಅನ್ನುವುದು ತಿಳಿಯುತ್ತಿದೆ. ಹಸಿವಾದಾಗ ಯಾವ ಒಡವೆ ವಸ್ತ್ರ ನೆನಪಿಗೆ ಬರುವುದಿಲ್ಲ. ಸಾಯಂಕಾಲ ಆಗುತ್ತಿದ್ದಂತೆ ನೆನಪಿಗೆ ಬರುವುದೇ ಅನ್ನ. ಅನ್ನ ದೇವರು ಅಂತ ಗೊತ್ತಾಗಲಿ ಎನ್ನುವುದೇ ಉಪವಾಸದ ಉದ್ದೇಶ. ವ್ಯಾಸ ಹೇಳಿದ್ದು ಅನ್ನದಂತಹ ಅಮೂಲ್ಯ ಪವಿತ್ರ ವಸ್ತು ಇಲ್ಲ. ಯಾವುದು ಅತ್ಯಂತ ಪಾವಿತ್ರ?. ಯಾವುದು ದೇವನಿಗೆ ನೈವೇದ್ಯ ಮಾಡುತ್ತೀವಿ ಅದು. ನೈವೇದ್ಯಕ್ಕೆ ಬಳಸುವುದೇ ಅನ್ನ. ಈ ಅನ್ನದ ಮೇಲೆ ಜೀವ ಜಗತ್ತು ನಿಂತಿದೆ. ಬೇರೆ ಬೇರೆ ವಸ್ತುಗಳ ಗದ್ದಲದಿಂದ ಮನುಷ್ಯ ಅನ್ನ ಮರೆಯಬಾರದು ಅಂತ ಉಪವಾಸ ಮಾಡಿದ್ದು. ಒಂದು ತಾಸು ನೀರು ಸಿಗದೇ ಹೋದರೆ ಕಣ್ಣ ಮುಂದೆ ಮನಸ್ಸಿನಲ್ಲಿ ನೀರೇ ತುಂಬಿರುತ್ತದೆ. ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಯಿಂದ ಹಿಡಿದು ಪ್ರಾಣಿ, ಪಕ್ಷಿ , ಕೀಟ ಎಲ್ಲವೂ ಬದುಕಿರುವುದು ಅನ್ನದಿಂದಲೆ.
ಉದಾಹರಣೆಗೆ ಸೂರ್ಯ ಒಂದು ವಾರ ಬರಲಿಲ್ಲ ಎಂದು ಭಾವಿಸಿ. ಆಗ ಭೂಮಿಯ ಉಷ್ಣತೆ ಕಡಿಮೆಯಾಗಲು ಶುರುವಾಗುತ್ತದೆ. ಯಾವಾಗ ಶೂನ್ಯದಿಂದ ಕೆಳಗೆ ಇಳಿಯುತ್ತಾ ಹೋಯಿತು? ಎಲ್ಲಾ ಪ್ರಾಣಿ ಪಕ್ಷಿಗಳು ಬದುಕುವುದಿಲ್ಲ. ಯೋಚಿಸಿ ಯಾವುದಕ್ಕೆ ಬೆಲೆ. ಬೆಳಕೇ ಆಹಾರ. ಗಾಳಿ ಆಹಾರ. ನೀರು ಆಹಾರ. ಅನಂತರ ವ್ಯಾಸ ಹೇಳುತ್ತಾನೆ ಅನ್ನ ಯಾವುದರಿಂದ ಬರುತ್ತದೆ?. ಮಳೆ ಬೀಳುತ್ತದೆ ಅಂತ ಅನ್ನ ಬರುತ್ತದೆ. ನೀರೇ ಇಲ್ಲದಿದ್ದರೆ ಅನ್ನ ಎಲ್ಲಿ ಬರುತ್ತದೆ?. ಮಳೆ ಇಡೀ ಭೂಮಂಡಲದ ಮೇಲೆ ಬೀಳುವುದರಿಂದ, ನಿಸರ್ಗ ಬೆಳೆ ಬೆಳೆಸುತ್ತದೆ. ಮಳೆ ಕಡಿಮೆ ಬೀಳುವ ಮರುಭೂಮಿಯಲ್ಲೂ ಸವಿ ಸವಿ ಖರ್ಜುರ ಬೆಳೆಯುತ್ತದೆ. ಮುಂದೆ ವ್ಯಾಸ ಪ್ರಶ್ನೆ ಕೇಳುತ್ತಾನೆ. ಮಳೆ ಯಾವುದರಿಂದ ಬರುತ್ತದೆ?. ಸೂರ್ಯನ ಯಜ್ಞದಿಂದ ಮಳೆ ಬೀಳುತ್ತದೆ. ಯಜ್ಞ ಎಂದರೆ ಹಾಕುವುದು. ಸೂರ್ಯ ಉಷ್ಣತೆಯನ್ನು ಸಾಗರದ ನೀರಿನೊಳಕ್ಕೆ ಹಾಕುತ್ತಾನೆ. ಆಗ ನೀರು ಆವಿಯಾಗಿ ಮೇಲಕ್ಕೆ ಏರುತ್ತದೆ. ಕೊಡುವ ಕೆಲಸ, ನೀಡುವ ಕೆಲಸ, ಹಾಕುವ ಕೆಲಸ ಯಜ್ಞ ಎನ್ನುವರು. ಸೂರ್ಯ ಯಜ್ಞ ಮಾಡಿದ. ತನ್ನಲ್ಲಿರುವ ಉಷ್ಣತೆಯನ್ನು ನೀರಿಗೆ ಹಾಕಿದ. ಸೂರ್ಯನಿಂದ ಬೆಳಕು ಮತ್ತು ಶಾಖ ಬರುತ್ತದೆ. ಬದುಕು ಈ ಎರಡನ್ನು ಅವಲಂಬಿಸಿದೆ. ಯಜ್ಞ ದಿನದ 24 ತಾಸು ನಡೆಯುತ್ತಲೇ ಇದೆ. ಆಗ ನೀರು ಆವಿಯಾಗಿ ಮೋಡುವಾಗುತ್ತದೆ. ಆ ಮೋಡದಲ್ಲಿ ನೀರು ತುಂಬಿರುತ್ತದೆ. ಈ ಕ್ರಿಯೆ ನಡೆಯಲು ಸೂರ್ಯ ಮತ್ತು ಸಾಗರ ಕರ್ಮ ಮಾಡಲೇಬೇಕಾಗುತ್ತದೆ. ದೇಹದಲ್ಲಿ ಉಷ್ಣತೆ ಬರಬೇಕಾದರೆ ದೇಹ ಕೆಲಸ ಮಾಡಬೇಕು. ಎರಡು ವಸ್ತು ಘರ್ಷಿಸಿದರೆ ಉಷ್ಣತೆ ಉಂಟಾಗುತ್ತದೆ. ಸೂರ್ಯನಲ್ಲಿರುವ ಹೈಡ್ರೋಜನ್ ಹೀಲಿಯಂ ಕೆಲಸ ಮಾಡುತ್ತದೆ. ಆಗ ಶಾಖ ಮತ್ತು ಬೆಳಕು ಬರುತ್ತದೆ. ಸೂರ್ಯ ಕೆಲಸ ಮಾಡುವುದರಿಂದ ಶಾಖ ಮತ್ತು ಬೆಳಕು ಬರುತ್ತದೆ. ಇದರಿಂದ ಮಳೆ ಬರುತ್ತದೆ. ಮತ್ತೆ ವ್ಯಾಸ ಪ್ರಶ್ನಿಸುತ್ತಾನೆ. ಕರ್ಮಕ್ಕೆ ಕಾರಣ ಯಾವುದು?. ಕರ್ಮಕ್ಕೆ ಕಾರಣ ನಿಸರ್ಗ. ವಿಶ್ವ. ನಿಸರ್ಗ ನಮ್ಮನ್ನೆಲ್ಲ ಕೆಲಸದಲ್ಲಿ ತೊಡಗಿಸಿದೆ. ನಾವು ಬೇಡ ಅಂದರೂ ಬಿಡುವುದಿಲ್ಲ. ಮಾಡಿಸೇ ಬಿಡುತ್ತದೆ. ಮಗುವಿಗೆ ತಾಯಿ ಹಾಲು ಕುಡಿಸಿ ಮಲಗಿಸಿರುತ್ತಾಳೆ. ಮಗು ಮಲಗಿದರೆ ಕೆಲಸ ಮಾಡಬಹುದೆಂದು. ಸ್ವಲ್ಪ ಹೊತ್ತಿನಲ್ಲಿ ಎದ್ದು ಓಡಾಡುತ್ತದೆ. ಮಗು ಬೆಳೆಯಲು, ವಿಕಾಸ ಹೊಂದಲು ಚಲನೆ ಮತ್ತು ಕ್ರಿಯೆ ಮುಖ್ಯ. ನಿಸರ್ಗ ಕೆಲಸ ಮಾಡಿಸುತ್ತದೆ. ನಿಸರ್ಗಕ್ಕೆ ಕೆಲಸಕ್ಕೆ ಪ್ರೇರಣೆ ಕೊಡುತ್ತದೆ. ನಿಸರ್ಗಕ್ಕೆ ಕಾರಣ ಯಾವುದು..? ಕಾಣದ ಶಾಶ್ವತ ಸತ್ಯ ಇದೆ. ಈ ಸತ್ಯ ನಿಸರ್ಗಕ್ಕೆ ಪ್ರೇರಣೆ ಕೊಡುತ್ತದೆ. ನಿಸರ್ಗ ಸೂರ್ಯನಿಗೆ ಪ್ರೇರಣೆ ಕೊಡುತ್ತದೆ. ಸೂರ್ಯ ತನ್ನ ಕೆಲಸಗಳ ಮೂಲಕ ಶಾಖ ಬರುತ್ತದೆ. ಶಾಖದಿಂದ ನೀರು ಆವಿಯಾಗುತ್ತದೆ. ಆವಿ ಮೋಡವಾಗಿ ಮಳೆ ತರುತ್ತದೆ. ಮಳೆಯಿಂದ ಆಹಾರ ಬರುತ್ತದೆ. ಇದರಿಂದ ತಿಳಿಯಬೇಕಾದದ್ದು ಕರ್ಮದ ಮೇಲೆ ಜಗತ್ತು ನಿಂತಿದೆ. ಆ ಕಾಣದ ಸತ್ಯ ವಸ್ತು ಸೂರ್ಯ, ನೀರು, ಮೋಡ, ಬೆಳೆ ಮತ್ತು ನಮ್ಮೊಳಗೂ ಇದೆ. ಸತ್ಯದ ಆಧಾರದ ಮೇಲೆ ಇಷ್ಟೆಲ್ಲ ನಡೆಯುತ್ತದೆ. ಎಲ್ಲದರ ಮಧ್ಯೆ ಸತ್ಯ, ಕಾರ್ಯದಲ್ಲಿ ಸತ್ಯ ವಸ್ತುವಿದೆ. ಜಗತ್ತಿನ ಹಿತಕಾಗಿ ಮಾಡುವುದೇ ಯಜ್ಞ. ಯಾವುದೇ ಫಲ ಅಪೇಕ್ಷೆ ಇಲ್ಲದೆ ಮಾಡುವುದು. ಸೂರ್ಯ, ಸಾಗರ, ಮೋಡ, ನಿಸರ್ಗ ಮೌನವಾಗಿ ಕೆಲಸ ಮಾಡುತ್ತವೆ. ಅನ್ನ ತಿಂದು ಗದ್ದಲ ಮಾಡುವವನೇ ಮನುಷ್ಯ ಅಲ್ಲವೆ ಮಕ್ಕಳೇ..?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************