ಮಕ್ಕಳ ಕಥೆಗಳು - ಸಂಚಿಕೆ : 16, ರಚನೆ : ಶಶಾಂಕ ವಿ, 10ನೇ ತರಗತಿ
Thursday, December 4, 2025
Edit
ಮಕ್ಕಳ ಕಥೆಗಳು - ಸಂಚಿಕೆ : 16
ರಚನೆ : ಶಶಾಂಕ ವಿ
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಸವಳಂಗ
ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲೆ
ಒಂದು ಊರಲ್ಲಿ ಒಬ್ಬ ಕಳ್ಳ ಇದ್ದ. ಅವನು ಯಾವಾಗಲೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಅದೇ ಊರಿನಲ್ಲಿ ಒಬ್ಬಳು ಅಜ್ಜಿ ಇದ್ದಳು. ಅವಳ ಹತ್ತಿರ ಒಂದು ದಷ್ಟಪುಷ್ಟವಾದ ಎತ್ತು ಇತ್ತು. ಆ ಕಳ್ಳನ ಕಣ್ಣು ಅವಳ ಮೇಲೆ ಬಿತ್ತು. ಅವಳ ಮನೆ ಕಾಡಿನಲ್ಲಿ ಇತ್ತು. ಅವನು ಆ ಅಜ್ಜಿಯನ್ನು ಹಿಂಬಾಲಿಸಿದ. ಆ ಮನೆಯ ಮುಂದೆ ಒಂದು ಮರವಿತ್ತು. ಆ ಮರದ ಕೆಳಗೆ ಎತ್ತನ್ನು ಕಟ್ಟಿದ್ದಳು. ಆಗ ಕಳ್ಳ ಮರವನ್ನು ಹತ್ತಿ ಕುಳಿತನು. ರಾತ್ರೆ ನಾನು ಈ ಎತ್ತನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಕೊಂಡ. ಪಕ್ಕದಲ್ಲಿದ್ದ ಕಾಡಿನಿಂದ ಒಂದು ಹುಲಿ ಆ ಎತ್ತನ್ನು ತಿನ್ನಲು ಹೊಂಚು ಹಾಕುತ್ತಿತ್ತು. ರಾತ್ರಿಯಾಯಿತು ಆಗ ಕಳ್ಳ ಇನ್ನು ಸ್ವಲ್ಪ ಹೊತ್ತಲ್ಲಿ ಮುದುಕಿ ಮಲಗಿಬಿಡುತ್ತಾಳೆ, ಆಗ ನಾನು ಎತ್ತನ್ನು ತೆಗೆದುಕೊಂಡು ಹೋಗಬಹುದು ಎಂದು ಎಣಿಸಿದ. ಅಂದು ರಾತ್ರಿ ಜೋರಾಗಿ ಮಳೆ ಬಂದಿತು. ಮುದುಕಿ ಎತ್ತನ್ನು ಮನೆ ಒಳಗೆ ಕರೆದುಕೊಂಡು ಹೋದಳು. ಅದನ್ನು ಕಳ್ಳ ನೋಡಲಿಲ್ಲ. ಆಗ ಅದೇ ಸಮಯಕ್ಕೆ ಹುಲಿ ಅಲ್ಲಿಗೆ ಬಂದಿತು. ಆ ಮರವನ್ನು ಸುತ್ತು ಹಾಕುತ್ತಿತ್ತು. ಆ ಕತ್ತಲಲ್ಲಿ ಅದು ಹುಲಿ ಎಂದು ಕಾಣಲಿಲ್ಲ. ಅವನು ಆ ಹುಲಿಯ ಮೇಲೆ ಹಾರಿದ. ಅದರ ಕಿವಿಗಳನ್ನು ಹಿಂಡಿದ. ಅದು ಘರ್ಜಿಸಿತು. ಆಗ ಕಳ್ಳ ಹುಲಿಯ ಮೇಲಿಂದ ಇಳಿದು ಮರ ಹತ್ತಿ ಕುಳಿತ. ಹುಲಿ ಕಾಡಿನ ಕಡೆ ಓಡಿತು. ಓಡುವಾಗ ಹುಲಿಗೆ ಕರಡಿ ಕಂಡಿತು. ಕರಡಿ ಕೇಳಿತು "ಯಾಕೆ ನೀನು ಹೀಗೆ ಓಡುತ್ತಿದ್ದೀಯ" . ಅದಕ್ಕೆ ಹುಲಿ ಉತ್ತರಿಸಿತು "ಅಲ್ಲಿ ಒಬ್ಬ ಮರದ ಮೇಲೆ ಇದ್ದಾನೆ. ಅವನು ನನ್ನ ಕಿವಿಗಳನ್ನು ತಿರುವಿ ತಿರುವಿ ನೋವು ಮಾಡಿದ" . ಆಗ ಕರಡಿ "ಬಾ ಅವನು ಯಾರೆಂದು ನೋಡುತ್ತೇನೆ ಬಾ......." ಎಂದು ಕರೆದುಕೊಂಡು ಹೋಯಿತು. ಆ ಮರದ ಮೇಲಿಂದ ಕಳ್ಳ ಹುಲಿ ಮತ್ತು ಕರಡಿ ಬರುತ್ತಿರುವುದನ್ನು ನೋಡಿದ. ಕರಡಿ ಬಂದು ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ಮರಹತ್ತಿ ಅವನಿಗೆ ಒದೆಯಿತು. ಅವನು ಕೆಳಗೆ ಬಿದ್ದ ನಂತರ ಮತ್ತೆ ಮರವನ್ನೇರಿ ಕುಳಿತ. ಹೀಗೆ ಸುಮಾರು ಬಾರಿ ಅವನಿಗೆ ಒದ್ದು ಒದ್ದು ಕರಡಿಯ ಬೆನ್ನಿನ ಮೂಳೆಗಳು ಮುರಿದವು. ಆದ್ದರಿಂದ ಅವುಗಳು ಇನ್ನೊಂದು ಸಲ ಈ ಕಡೆ ತಲೆ ಕೂಡ ಹಾಕುವುದಿಲ್ಲ ಎಂದು ಓಡಿ ಹೋದವು. ಓಡುವಾಗ ಹುಲಿ ಮತ್ತು ಕರಡಿಗೆ ನರಿ ಸಿಕ್ಕಿತು. ನರಿ ಕೇಳಿತು "ಯಾಕೆ !ನೀವು ಗಾಬರಿಯಿಂದ ಓಡಿ ಬರುತ್ತಿದ್ದೀರ" ಎಂದು ಕೇಳಿತು. ಆಗ ಹುಲಿ ಹೇಳಿತು "ಆ ಮರದಲ್ಲಿ ಒಬ್ಬನಿದ್ದಾನೆ ಅವನು ನನ್ನ ಕಿವಿಗಳನ್ನು ತಿರುವಿ ತಿರುವಿ ನೋವು ಮಾಡಿದ". ನಂತರ ಕರಡಿ ಹೇಳಿತು, "ಹಾಂ! ಅವನು ನನ್ನ ಬೆನ್ನಿನ ಮೂಳೆಗಳನ್ನು ಮುರಿದುಬಿಟ್ಟ". ಆಗ ನರಿ, "ಬನ್ನಿ ಅವನು ಯಾರೆಂದು ನೋಡುತ್ತೇನೆ" ಎಂದಿತು. ಆಗ ಮರದ ಮೇಲಿದ್ದ ಕಳ್ಳ ಮೂರು ಪ್ರಾಣಿಗಳು ಬರುತ್ತಿರುವುದನ್ನು ನೋಡಿ ಮರದಿಂದ ಕೆಳಗೆ ಇಳಿದು ಓಡುತ್ತಾ ಓಡುತ್ತಾ ಒಂದು ಗುಡಿಯ ಗರ್ಭಗುಡಿಯ ಒಳಗೆ ಹೋದ. ಹುಲಿ, ನರಿ ಮತ್ತು ಕರಡಿ ಅವನು ದೇವಾಲಯದ ಒಳಗೆ ಹೋಗುವುದನ್ನು ನೋಡಿದವು. ನರಿ, ಹುಲಿ ಮತ್ತು ಕರಡಿ ದೇವಾಲಯವನ್ನು ಸುತ್ತು ಹಾಕಿದವು. ಆದರೆ ಒಳಗೆ ಹೋಗುವುದಕ್ಕೆ ದಾರಿ ಇರಲಿಲ್ಲ. ಹಾಗಾಗಿ ನರಿ ಗರ್ಭಗುಡಿಯಲ್ಲಿ ದೇವರನ್ನು ತೊಳೆದಾಗ ನೀರನ್ನು ಹೊರ ಬಿಡಲು ಇರುವ ಸಣ್ಣ ಪೈಪ್ ನಲ್ಲಿ ತನ್ನ ಬಾಲವನ್ನು ಹಾಕಿ ಕುಳಿತಿತು. ಆಗ ಕಳ್ಳ ಆ ಪೈಪಿನ ಅಕ್ಕಪಕ್ಕ ಗೋಡೆಗೆ ತನ್ನ ಎರಡು ಕಾಲನ್ನು ಇಟ್ಟು ಆ ಬಾಲವನ್ನು ಎಳೆದು ಎಳೆದು ಬಾಲವನ್ನು ತುಂಡು ಮಾಡಿಬಿಟ್ಟ. ಆಗ ಮೂರು ಪ್ರಾಣಿಗಳು ಓಡಿ ಹೋದವು. ಆಗ ತುಂಬಾ ಸಂಕಷ್ಟಕ್ಕೆ ಈಡಾಗಿ ಬದುಕುಳಿದ ಕಳ್ಳ "ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲ" ಎಂದು ತೀರ್ಮಾನ ಮಾಡಿದ.
.............................................. ಶಶಾಂಕ ವಿ
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಸವಳಂಗ
ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲೆ
******************************************
ಒಂದು ಊರಿನಲ್ಲಿ ಒಬ್ಬ ಬಿದಿರಿನ ವ್ಯಾಪಾರಿ ಇದ್ದ. ಅವನ ಹೆಸರು ಶಂಕರಪ್ಪ. ಅವನಿಗೆ ಇಬ್ಬರು ಹೆಂಡತಿಯರು. ಮೊದಲನೆಯ ಹೆಂಡತಿಯ ಮಗನ ಹೆಸರು ರಮೇಶ ಮತ್ತು ಎರಡನೆಯ ಹೆಂಡತಿಯ ಮಗನ ಹೆಸರು ವಿನಯ್. ಇಬ್ಬರೂ ಒಂದೇ ಕಾಲೇಜಿಗೆ ಹೋಗುತ್ತಿದ್ದರು. ಒಂದು ದಿನ ಶಂಕರಪ್ಪ ತೀರಿಕೊಂಡನು. ನಾಲ್ಕು ದಿನಗಳ ನಂತರ ಗಂಡ ಸತ್ತು ಹೋದ ಎಂಬ ನೋವಿನಲ್ಲಿ ಮೊದಲನೆಯ ಹೆಂಡತಿ ತೀರಿಕೊಂಡಳು. ಅವಳ ಮಗ ರಮೇಶ್ ತುಂಬಾ ನೊಂದುಕೊಂಡನು. ಅವರ ಅಪ್ಪನ ಒಂದು ಬೈಕ್ ಇತ್ತು. ಅದನ್ನು ಎರಡನೆಯ ಹೆಂಡತಿ ಮಾರಿ ತನ್ನ ಮಗನಿಗೆ ಹೊಸ ಬೈಕ್ ಕೊಡಿಸಿದಳು. ಆ ಬೈಕನ್ನು ರಮೇಶನಿಗೆ ಮುಟ್ಟಲು ಬಿಡುತ್ತಿರಲಿಲ್ಲ. ಒಂದು ದಿನ ರಮೇಶ್ ಅವನ "ಚಿಕ್ಕಮ್ಮನ ಹತ್ತಿರ ಚಿಕ್ಕಮ್ಮ ನಾನು ಅಷ್ಟು ದೂರ ಕಾಲೇಜಿಗೆ ನಡೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಅದಕ್ಕೆ ನನಗೆ ಒಂದು ಬೈಕ್ ಬೇಕು." ಎಂದು ಕೇಳಿದನು. ಆಗ ಅವರ ಚಿಕ್ಕಮ್ಮ "ನೀನು ಕೂಲಿ ಮಾಡಿ ಬೈಕ್ ತಗೋ, ಆದರೆ ವಿನಯ್ ಬೈಕ್ ಅನ್ನು ಮುಟ್ಟಬೇಡ" ಎಂದಳು.
ಹೀಗೆ ಒಂದು ದಿನ ಅವನಿಗೆ ಒಂದು ಉಪಾಯ ಹೊಳೆಯಿತು. ಹೇಗೂ ತನ್ನ ಅಪ್ಪ ಬಿದಿರಿನ ವ್ಯಾಪಾರಿ. ಅವನು ಆ ಬಿದಿರಿನಿಂದ ಒಂದು ಬೈಕ್ ಮಾಡಿ ತಾನು ದಿನಾ ಕಾಲೇಜಿಗೆ ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ ಕಾಲೇಜಿನಲ್ಲಿ ಒಂದು ಸಮಾರಂಭವಿತ್ತು. ಅಲ್ಲಿ ಅವನಿಗೆ ಒಂದು ಪುರಸ್ಕಾರ ಕೊಟ್ಟರು. ಕಾರಣ ಅವನು ಇಂಧನವಿಲ್ಲದ ಒಂದು ಬಿದಿರಿನ ಬೈಕ್ ಕಂಡುಹಿಡಿದಿದ್ದಕ್ಕಾಗಿ. ಇದನ್ನು ವಿನಯ್ ತನ್ನ ತಾಯಿಗೆ ಹೇಳಿದ. ರಮೇಶ ದಿನಾಲು ಬೈಕ್ ನಿಲ್ಲಿಸುವ ಜಾಗದಲ್ಲಿ ನಿಲ್ಲಿಸಿದ. ಆಗ ಅವನ ಚಿಕ್ಕಮ್ಮ ಒಂದು ಲೀಟರ್ ಪೆಟ್ರೋಲ್ ಹಾಕಿ ರಮೇಶನ ಬಿದಿರಿನ ಬೈಕನ್ನು ಸುಟ್ಟುಹಾಕಿದಳು. ರಮೇಶನಿಗೆ ತುಂಬಾ ಬೇಸರವಾಯಿತು. ರಮೇಶ ಮತ್ತೆ ಬಿದಿರಿನ ಬೈಕನ್ನು ತಯಾರಿಸಿದ. ಆಗ ಅವನು ತನ್ನ ಬೈಕನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಅವನು ತನ್ನ ಅಪ್ಪನ ಬಿದಿರಿನ ತೋಟದ ಗೋಡಾನಿನಲ್ಲಿ ಇಟ್ಟಿದ್ದ. ಅವನು ಮನೆಯಿಂದ ಹೋಗುವಾಗ ಬೈಕ್ ತೆಗೆದುಕೊಂಡು ಹೋಗಿ ಬರುವಾಗ ಗೋಡಾನಿನಲ್ಲಿ ಇಟ್ಟು ಬರುತ್ತಿದ್ದ.
.............................................. ಶಶಾಂಕ ವಿ
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಸವಳಂಗ
ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲೆ
******************************************
ನಮ್ಮ ಭಾರತದ ಸೈನ್ಯದಲ್ಲಿ ಸಂಜೀವ ಎಂಬುವವನು ಸೇವೆ ಸಲ್ಲಿಸುತ್ತಿದ್ದ. ಅವನಿಗೆ ಬಿಡುವು ಸಿಕ್ಕಾಗ ಅವನ ಕುಟುಂಬಕ್ಕೆ ಕರೆ ಮಾಡುತ್ತಿದ್ದ. ಒಂದು ದಿನ ಕರೆ ಮಾಡಿದಾಗ ಅವರ ತಾಯಿ ಉತ್ತರಿಸಿದರು. ಆಗ ಅವರ ತಾಯಿ ಅಳುತ್ತಾ "ನೀನು ಯಾವಾಗ ಬರುತ್ತೀಯ ನೀನು ಹೋಗಿ ಎರಡು ವರ್ಷವಾಯಿತು. ನೀನು ಬೇಗ ಬಾ" ಎಂದಳು. ಆಗ ಅವನ ಹೆಂಡತಿ ಸೌಮ್ಯ ಬಂದಳು. ಆಗ ಅವರ ತಾಯಿ "ನಿನ್ನ ಹೆಂಡತಿ ಸೌಮ್ಯ ಬಂದಳು ಅವಳೊಂದಿಗೆ ಮಾತನಾಡುತ್ತಿರು ನಿನ್ನ ತಂದೆಯನ್ನು ಕರೆದುಕೊಂಡು ಬರುತ್ತೇನೆ" ಎಂದಳು. ಆಗ ಸೌಮ್ಯ "ನೀವು ಯಾವಾಗ ಬರುತ್ತೀರಿ" ಎಂದಳು. ಆಗ ಸಂಜೀವ "ಗೊತ್ತಿಲ್ಲ" ಎಂದ. ಆಗ ಅವರ ತಾಯಿ ಅವನ ತಂದೆಯನ್ನು ಕರೆದುಕೊಂಡು ಬಂದಳು. ಆಗ ಅವರ ತಂದೆ "ಚೆನ್ನಾಗಿದ್ದೀಯಾ ಮಗ" ಎಂದು ಕೇಳಿದರು. "ನಾನು ಚೆನ್ನಾಗಿದ್ದೀನಿ ನೀವು ಚೆನ್ನಾಗಿರಿ" ಎಂದು ಹೇಳಿದನು. ಆಗ ಅವನ ತಂದೆ "ಯಾವಾಗ ಬರುತ್ತೀಯ" ಎಂದು ಕೇಳಿದರು. ಆಗ ಸಂಜೀವ" ಇನ್ನು 10 ದಿನಗಳಲ್ಲಿ ಊರಿಗೆ ಬರುತ್ತೇನೆ ಸೌಮ್ಯಳಿಗೆ ಹೇಳಬೇಡಿ" ಎಂದನು. ಆ 10 ದಿನ ಕಳೆಯಿತು. ಆಗ ಅವರ ಕುಟುಂಬ ರೈಲು ನಿಲ್ದಾಣಕ್ಕೆ ಬಂದರು. ಆದರೆ ಸೌಮ್ಯಳ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಸಂಜೀವ ರೈಲನ್ನು ಇಳಿದನು. ಸೌಮ್ಯಳನ್ನು ಸಂಜೀವನ ಮುಂದೆ ನಿಲ್ಲಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆದರು. ಆಗ ಸೌಮ್ಯಳಿಗೆ ತುಂಬಾ ಖುಷಿ ಆಗುತ್ತದೆ. ಎಲ್ಲರೂ ಸಂಜೀವನ್ನು ನೋಡಿ ತಬ್ಬಿಕೊಂಡು ಅಳುತ್ತಿರುತ್ತಾರೆ. ಕಾರಣ ಅವನು ತುಂಬಾ ದಿನಗಳ ನಂತರ ಬಂದಿರುವುದರಿಂದ. ಮನೆಯಲ್ಲಿ ಹಬ್ಬದ ವಾತಾವರಣ ತುಂಬಿತು. ಅವನಿಗೆ ಇಷ್ಟವಾದ ಹಪ್ಪಳ ಮತ್ತು ಉಪ್ಪಿನಕಾಯಿಗಳನ್ನು ಅವರ ತಾಯಿ ಮಾಡಿಟ್ಟಿರುತ್ತಾಳೆ.
ಒಂದು ದಿನ ಸಂಜೀವನ ಹೆಂಡತಿ ಸೌಮ್ಯ ತಲೆ ಸುತ್ತಿ ಬೀಳುತ್ತಾಳೆ. ಆಗ ಸಂಜೀವನಿಗೆ ತುಂಬಾ ಭಯವಾಗುತ್ತದೆ. ಆಗ ಡಾಕ್ಟರ್ "ಬಂದು ಭಯ ಪಡಬೇಡಿ, ನೀವು ತಂದೆಯಾಗುತ್ತಿದ್ದೀರಾ" ಎಂದರು. ಆಗ ಸಂಜೀವ ಅಕ್ಕ ಪಕ್ಕ ಮನೆಯವರಿಗೆಲ್ಲಾ ಸಿಹಿ ಹಂಚಿದ. ನನಗೆ ಗಂಡು ಮಗು ಬೇಕು" ಎಂದಳು. ಆಗ ಸಂಜೀವ "ಯಾಕೆ" ಎಂದು ಕೇಳಿದನು."ಗಂಡು ಮಗು ಆದರೆ ನಿಮ್ಮ ಹಾಗೆ ದೇಶ ಕಾಯುವುದಕ್ಕೆ"ಎಂದಳು ಸೌಮ್ಯ. ಅದಕ್ಕೆ ಸಂಜೀವ "ಹೆಣ್ಣು ಮಗು ಆದರೂ ಗಂಡು ಮಗು ಆದರೂ ಅವರು ದೇಶವನ್ನು ಕಾಯುತ್ತಾರೆ ಅದೇ ನನ್ನ ಆಸೆ" ಎಂದನು. ಸಂಜೀವ ತನ್ನ ಆರ್ಮಿಯಲ್ಲಿ ಗೆಳೆಯರೊಂದಿಗೆ ಕಳೆದ ದಿನಗಳನ್ನು ಮತ್ತು ಯುದ್ಧದ ಬಗ್ಗೆ ದಿನ ಸಂಜೆ ಹೇಳುತ್ತಿರುತ್ತಾನೆ. ಒಂದು ದಿನ ಹೀಗೆ ಕಥೆ ಹೇಳುವಾಗ ಸಂಜೀವನಿಗೆ ಒಂದು ಫೋನ್ ಕಾಲ್ ಬರುತ್ತದೆ ಆರ್ಮಿಗೆ ಜಾಯಿನ್ ಆಗಲು. ಆಗ ಎಲ್ಲರೂ ಅಳುತ್ತಾರೆ. ಮರುದಿನ ಎಲ್ಲರೂ ರೈಲು ನಿಲ್ದಾಣಕ್ಕೆ ಬರುತ್ತಾರೆ. ಆಗ ಎಲ್ಲರೂ ಅಳುತ್ತಿರುತ್ತಾರೆ. ಆಗ ಸಂಜೀವ "ಅಳಬೇಡಿ ನಾನು ಯುದ್ಧ ಮುಗಿಸಿಕೊಂಡು ಸುಮಾರು ದಿನ ರಜೆ ಹಾಕಿ ಬರುತ್ತೇನೆ" ಎಂದನು. ಸಂಜೀವನನ್ನು ರೈಲು ಹತ್ತಿಸಿ ಎಲ್ಲರೂ ಮನೆಗೆ ಬಂದರು. ಎಲ್ಲರೂ ಸಂಜೀವನ ನೆನಪಿನಲ್ಲಿ ಇದ್ದರು. ಹತ್ತು ದಿನಗಳ ನಂತರ ಅವರ ಮನೆ ಮುಂದೆ ಒಂದು ಮಿಲಿಟರಿ ಲಾರಿ ಬಂದು ನಿಲ್ಲುತ್ತದೆ. ಎಲ್ಲರೂ ಸಂಜೀವ್ ಬಂದ ಎಂದುಕೊಳ್ಳುತ್ತಾರೆ, ಆದರೆ ಲಾರಿಯಲ್ಲಿ ಬಂದಿದ್ದು ಸಂಜೀವ್ ಅಲ್ಲ ಅವನ ಮೃತ ದೇಹ ಎಲ್ಲರೂ ಅಳುತ್ತಾರೆ. ಒಂದು ತಿಂಗಳ ಕಾಲ ಎಲ್ಲರೂ ಸಂಜೀವನ ನೆನಪಿನಲ್ಲೇ ಇರುತ್ತಾರೆ. 9 ತಿಂಗಳು ಕಳೆಯಿತು ಸೌಮ್ಯಳಿಗೆ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. ಎಲ್ಲರೂ ಖುಷಿಪಟ್ಟರು ಸಂಜೀವನ ತಾಯಿ "ಸಂಜೀವನಂತೆ ಇದ್ದಾನೆ" ಎಂದು ಮಗುವಿಗೆ ದೃಷ್ಟಿ ತೆಗೆದಳು. 20 ವರ್ಷ ಕಳೆಯಿತು ಸಂಜೀವನ ತಂದೆ ತಾಯಿ ತೀರಿಕೊಂಡಿದ್ದರು. ಸಂಜೀವನ ಮಗುವಿನ ಹೆಸರು 'ಸೋಮೇಶ್ವರ'. ಅವನು ಆರ್ಮಿಗೆ ಸೇರುತ್ತಾನೆ. ತನ್ನ ತಾಯಿಗೆ "ಅಮ್ಮ ನಾನು ಆರ್ಮಿಗೆ ಹೋಗಿ ಅಪ್ಪನ ಹೆಸರನ್ನು ಉಳಿಸುತ್ತೇನೆ" ಎಂದು ಹೇಳುತ್ತಾನೆ. ಒಂದು ದಿನ ಇಬ್ಬರೂ ರೈಲು ನಿಲ್ದಾಣಕ್ಕೆ ಬರುತ್ತಾರೆ. ಆಗ ಸೋಮೇಶ್ವರ ರೈಲು ಹತ್ತುವಾಗ ಸೌಮ್ಯ ಅಳಲಿಲ್ಲ. ಒಂದು ದಿನ ಆರ್ಮಿ ಕಚೇರಿಯಿಂದ ಒಂದು ಪತ್ರ ಬಂದಿತು. ಅದರಲ್ಲಿ "ಸಭೆಗೆ ಬನ್ನಿರಿ" ಎಂದು ಬರೆದಿತ್ತು. ಅಂದು ಸೌಮ್ಯ ಅಲ್ಲಿಗೆ ಹೊರಡುತ್ತಾಳೆ. ಅಲ್ಲಿ ಸೋಮೇಶ್ವರನಿ ಗೆ 'ಬೆಸ್ಟ್ ಆರ್ಮಿ' ಪದಕ ಸಿಗುತ್ತದೆ. ಸೌಮ್ಯಳಿಗೆ ತುಂಬಾ ಖುಷಿಯಾಗುತ್ತದೆ. ಆಗ ಅಲ್ಲಿದ್ದ ಮೀಡಿಯಾದವರು ಬಂದು ಕೇಳುತ್ತಾರೆ. "ಮ್ಯಾಮ್, ನಿಮ್ಮ ಗಂಡ ಒಂದು ಯುದ್ಧದಲ್ಲಿ ತೀರಿಕೊಂಡರು. ನೀವು ನಿಮ್ಮ ಮಗನನ್ನು ಆರ್ಮಿಗೆ ಯಾಕೆ ಕಳುಹಿಸಿದಿರಿ" ಎಂದು ಕೇಳಿದರು. ಆಗ ಸೌಮ್ಯ "ನನ್ನ ಗಂಡ ಗಂಡು ಮಗು ಆದರೂ ಹೆಣ್ಣು ಮಗು ಆದರೂ ಅವರು ದೇಶ ಕಾಯುವುದೇ ಅವರ ಕೊನೆ ಆಸೆಯಾಗಿತ್ತು" ಎಂದು ಹೇಳಿದಳು.
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಸವಳಂಗ
ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲೆ
******************************************