-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 130

ನಿಷ್ಪಾಪಿ ಸಸ್ಯಗಳು : ಸಂಚಿಕೆ - 130

ನಿಷ್ಪಾಪಿ ಸಸ್ಯಗಳು : ಸಂಚಿಕೆ - 130
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
     


ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಇತ್ತೀಚಿನ ದಿನಗಳಲ್ಲಿ ನಮ್ಮ ಪರಿಸರವು ವಿಶೇಷವಾಗಿ ಹವಾಮಾನ ವೈಪರೀತ್ಯಗಳಿಗೆ ಈಡಾಗುತ್ತಿರುವುದನ್ನು ಗಮನಿಸಿರುವಿರಾ? ಮುಂಜಾವಿನಲಿ ಛಳಿ, ಮಧ್ಯಾಹ್ನ ಸೆಖೆ, ಸಂಜೆಯಾಗುತ್ತ ಮಳೆ! ವಾತಾವರಣದಲ್ಲಿ ಇಂತಹ ಬದಲಾವಣೆಗಳು ಮಾನವನ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ತರಬಲ್ಲದು. ನಮ್ಮ ಹಿರಿಯರು ಇಂತಹ ಸಂದರ್ಭಗಳಲ್ಲಿ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಸೌಮ್ಯ ಸ್ವಭಾವದ ಕೆಲವು ನಿಷ್ಪಾಪಿ ಸಸ್ಯಗಳನ್ನು ಗುರುತಿಸಿಕೊಂಡಿದ್ದರು. 

ಅವುಗಳಲ್ಲಿ ತುಳು ಭಾಷೆಯಲ್ಲಿ ಕದ್ಪದೆಂಗಿ ಎಂದು ಕರೆಯಲ್ಪಡುವ ಸಸ್ಯವೂ ಒಂದು. ಮಕ್ಕಳಿಗೆ ಹೊಟ್ಟೆನೋವು, ಭೇದಿ, ಶರೀರದ ಉಷ್ಣತೆ ಹೆಚ್ಚಾದರೆ ಸಾಕು, ತಾಯಂದಿರು ಈ ಗಿಡದ ತೊಗಟೆಯನ್ನು ತಂದು ಕುದಿಸಿ ಆರಿದ ನೀರಲ್ಲಿ ಕಿವುಚಿ ಅದಕ್ಕೆ ಒಂದಿಷ್ಟು ಜೀರಿಗೆ ಮತ್ತು‌ ಬೆಲ್ಲ ಪುಡಿ ಮಾಡಿ ಸೇರಿಸಿ ಕುಡಿದರೆ ಈಗಲೂ ಇಂದಿನ ಎಲ್ಲಾ ಜ್ಯೂಸ್ ಗಳಿಂದಲೂ ಉತ್ತಮವಾಗಿತ್ತೆನಿಸುತ್ತದೆ. ಅದರ ತೊಗಟೆ ಕಿವುಚಿದಾಗ ಲೋಳೆಯು ನೀರಿಗೆ ಸೇರಿ ನೀರು ದಪ್ಪವಾಗುತ್ತದೆ. ಅದರ ಜೊತೆ ಹಸಿ ಜೀರಿಗೆಯ ಪರಿಮಳ, ರುಚಿಗೆ ಬೆಲ್ಲ!. ಯಾವ ಮಕ್ಕಳೂ ಬೇಡವೆನ್ನದೆ ಕುಡಿಯುತ್ತಿದ್ದ ನೆನಪು.

ಕದ್ಪದೆಂಗಿಯನ್ನು ಕನ್ನಡದಲ್ಲಿ ಮುರಿಗೆ, ಗುರಗುರಿ, ಜಾವನಿಗಡಲೆ, ಕಾಡು ಪತಂಗ, ಕಾಯೋರಿ, ಸಣ್ಣಸಲ್ಲಿ ಎಂದೆಲ್ಲ ಕರೆಯುವರು. ಹಿಂದಿಯಲ್ಲಿ ಪಾನಿಸರ ವೆಂದೇ ಖ್ಯಾತಿ. ಕೌರಿ, ಲೀಫ್ ಗ್ರೇವಿಯಾ ಎಂಬುವುದು ಸಾಮಾನ್ಯ ಹೆಸರುಗಳು.. ವೈಜ್ಞಾನಿಕವಾಗಿ ಸಸ್ಯಜಾತಿ ಪ್ರಕಾರ ಗ್ರೆವಿಯಾ ಸೆರುಲಾಟಾ (Grewia serrulata) ಎಂಬ ಹೆಸರಿದ್ದು ಟೇಲಿಯೇಸಿ ಎಂಬ ಸೆಣಬಿನ ಜಾತಿಯ ಜೊತೆ ಮಾಲ್ವೇಸಿ ಕುಟುಂಬಕ್ಕೆ ಸೇರಿದೆ. ಇದೊಂದು ಪೊದೆಯೆಂದೂ, ಸಣ್ಣ ಮರವೆಂದೂ ಕರೆಯಲ್ಪಡ ಬಹುದಾದ ಸಸ್ಯ. ಮಿಶ್ರ ಕಾಡುಗಳಲ್ಲಿ ವ್ಯಾಪಕವಾಗಿರುವುದಲ್ಲದೆ ಹುಲ್ಲುಗಾವಲು, ನದೀದಂಡೆ ಗದ್ದೆಯಂಚು, ಗುಡ್ಡಗಾಡು ಪ್ರದೇಶಗಳಲ್ಲೂ ಭಾರತದಾದ್ಯಂತ ಕಂಡು ಬರುತ್ತದೆ. ಇದರ ರುಚಿಯಾದ ಹಣ್ಣುಗಳನ್ನು ವನ್ಯಜೀವಿಗಳು ತುಂಬಾ ಇಷ್ಟಪಡುತ್ತವೆ ಮಾತ್ರವಲ್ಲದೆ ಬೀಜಪ್ರಸಾರಕ್ಕೂ ಕಾರಣವಾಗಿವೆ. ಹೆಚ್ಚಿನ ಬಿಳಿ ಬಣ್ಣದ ಹೂವುಗಳು ಸಂಜೆ ಅರಳಿ ಬೆಳಗ್ಗೆ ಬಾಡುವಂತೆ ಈ ಮುರಿಗೆ ಹೂವೂ ಹೊಳಪಿನ ನಕ್ಷತ್ರದಂತೆ ಸಂಜೆಗೇ ಅರಳುತ್ತದೆ. ಐದು ಪುಟ್ಟ ಶ್ವೇತ ದಳಗಳ ನಡುವೆ ಹಲವು ಕೇಸರಗಳಿದ್ದು ಆಕರ್ಷಕವಾಗಿರುತ್ತವೆ. 
ಹಳದಿ ಹೂವಿನ ಜಾತಿಯೂ ಇದೆಯಾದರೂ ನಮ್ಮಲ್ಲಿ ಬಿಳಿ ಹೂಗಳಾಗುವ ಸಸ್ಯಗಳೇ ಹೆಚ್ಚು. ಈ ಕಾಡು ಹೂವಿನ ಮಕರಂದಕ್ಕಂತೂ ಕೀಟಗಳ ನೂಕುನುಗ್ಗಲೇ ಇರುತ್ತದೆ. ಆಗಸ್ಟ್ ನಿಂದ ನವೆಂಬರ್ ವರೆಗೆ ಮೂಡುವ ಗೋಳಾಕಾರದ ಹಸಿರು ಕಾಯಿಗಳು ಪಕ್ವವಾದಾಗ ಕಪ್ಪು ಬಣ್ಣಕ್ಕೆ ತಿರುಗಿ ಖಗಮೃಗಗಳಿಗೆ ಔತಣವಾಗುತ್ತದೆ. ಜೀರ್ಣಕಾರಿ ಹಾಗೂ ಹಸಿವನ್ನು ಉತ್ತೇಜಿಸುವ ಕಾರಣಕ್ಕಾಗಿ ಬಾಂಗ್ಲಾ ದೇಶದಲ್ಲಿ ಮಾಗಿದ ಹಣ್ಣುಗಳನ್ನು ಔತಣಗಳಲ್ಲಿ ಊಟದ ಮೊದಲು ನೀಡುವರಂತೆ!. ತಮಿಳುನಾಡಲ್ಲಿ ಈಗಲೂ ಈ ಹಣ್ಣುಗಳ ಕೊಯ್ಲು ನಡೆಯುತ್ತದೆ. ಇಂದಿಗೂ ಕಾಲೋಚಿತ ಟಾನಿಕ್ ಗಳಾಗಿ ಹಾಗೂ ಬಾಯಿ ಹುಣ್ಣಿಗೆ ಔಷಧಿಯಾಗಿ ಹಲವಾರು ಬುಡಕಟ್ಟುಗಳಲ್ಲಿ ಈ ಸಸ್ಯ ಬಳಕೆಯಲ್ಲಿದೆ. 20ನೇ ಶತಮಾನದಲ್ಲಿ ಜಠರದುರಿತ ಶಮನಕ್ಕಾಗಿ ಬಳಸುತ್ತಿದ್ದ ಉಲ್ಲೇಖವಿದೆ. ಕೇರಳದ 14 -15 ನೇ ಶತಮಾನದ ತಾಳೆಎಲೆ ಹಸ್ತಪ್ರತಿಯಲ್ಲಿ ಸಣ್ಣ ಜ್ವರ ಹಾಗೂ ಪಿತ್ತದೋಷ ಸಮತೋಲನಗೊಳಿಸಲು ಈ ಸಸ್ಯದ ಪ್ರಯೋಜನ ದಾಖಲಾಗಿದೆ ಎನ್ನುತ್ತಾರೆ. ಗಾಯ ಗುಣಪಡಿಸಲು ಹಾಗೂ ನಂಜು ನಿರೋಧಕವಾಗಿ ಇದನ್ನು ಬಳಸುವ ಬಗ್ಗೆ ಪರ್ಷಿಯನ್ ವ್ಯಾಪಾರಿಗಳು 'ಸುರ್ಲಾಡ್' ಎಂಬ ಹೆಸರಿನಲ್ಲಿ ಈ ಸಸ್ಯವನ್ನು ದಾಖಲಿಸಿದ್ದಾರೆ.

ಕಾಂಡವು ಬೂದು ಕಂದು ಬಣ್ಣದಿಂದಿದ್ದು ನಯವಾದ ಎಳೆಯ ಶಾಖೆಗಳು ಮೃದುವಾಗಿರುತ್ತವೆ. ಇದರ ತೊಗಟೆ ನಾರಿನಿಂದ ಕೂಡಿದೆ. ಸರಳವಾದ ರೋಮರಹಿತ ಎಲೆಗಳು ಪರ್ಯಾಯವಾಗಿದ್ದು ಅಂಡಾಕಾರವಾಗಿವೆ. ಎರಡರಿಂದ ಐದು ಮೀಟರ್ ಎತ್ತರ ಬೆಳೆಯಬಲ್ಲ ಈ ಮುರಿಗೆ ಮರದ ದಂತುರೀಕೃತ ಅಂಚಿನ ಎಲೆಗಳು ಗಮನಾರ್ಹ ಭಾಗಗಳಾಗಿವೆ. ಆದ್ದರಿಂದಲೇ ಈ ಸಸ್ಯಕ್ಕೆ ಸೆರುಲಾಟಾ ಎಂಬ ಹೆಸರು ಬಂದಿದೆಯಂತೆ!.

ಆಫ್ರಿಕನ್ ಹಾಗೂ ಏಷ್ಯನ್ ಪ್ರದೇಶಗಳಿಗೆ ಸ್ಥಳೀಯವಾದ ಮುರಿಗೆ ಬೆಚ್ಚಗಿನ ಹವಾಮಾನ, ಮಧ್ಯಮ ಮಳೆ, ಸಂಪೂರ್ಣ ಬಿಸಿಲಿಗೆ ಚೆನ್ನಾಗಿ ಬೆಳೆಯುತ್ತದೆ. ಅಲಂಕಾರಿಕ ಸಸ್ಯವಾಗಿ ಹಾಗೂ ಜೀವ ವೈವಿಧ್ಯತೆಗೆ ಸಹಾಯಕವಾಗಿ ಈ ಸಸ್ಯವನ್ನು ಎಲ್ಲೆಡೆಯೂ ಬೆಳೆಸುವುದು ಸಾಧುವಾಗಿದೆ. ನಮ್ಮ ನಡುವೆ ಇದ್ದ ಮರಗಳೂ ಈಗ ಅತಿ ವಿರಳವಾಗಿದೆ. ಜೀವ ಸಂಕುಲದ ಸೇತುವಾಗಿರುವ ಇಂತಹ ಸಸ್ಯಗಳು ಪರಿಸರದ ಜೀವಾಳ. ಇವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವೇ ತಾನೇ?

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************




Ads on article

Advertise in articles 1

advertising articles 2

Advertise under the article