ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 107
Tuesday, December 2, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 107
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.. ಆಮ್ಲಜನಕ ಮತ್ತು ಹೀಮೋಗ್ಲೋಬಿನ್ ನಡುವಿನ ಬಂಧ ಅಸ್ಥಿರವಾದದ್ದು ಎಂದು ನೋಡಿದೆವು. ಒಂದು ವೇಳೆ ಸ್ಥಿರ ಬಂಧ ಸ್ಥಾಪಿಸುವುದು ಸಾಧ್ಯವಾದರೆ ಪರಿಣಾಮ ಹೇಗಾಗಬಹುದು ನೋಡೋಣ. ಇದು ಆಮ್ಲಜನಕ ಹೀಮೋಗ್ಲೋಬಿನ್ ನ ಕಬ್ಬಿಣದ ನಡುವೆ ಸಾಧ್ಯವಿಲ್ಲ. ಹಾಗಾದರೆ ಇನ್ನೊಬ್ಬರಿಗಾಗಿ ಹುಡುಕಾಟ ನಡೆಸೋಣ ಬನ್ನಿ.
ಇಂಗಾಲ ಅಥವಾ ಇದ್ದಿಲು ನಮಗೆ ಸಾಮಾನ್ಯವಾದರೂ ಇದರ ದೊರಕುವಿಕೆ ಭೂಮಿಯಲ್ಲಿ ಇದರ ಲಭ್ಯತೆ 0.5% ಮಾತ್ರ. ಇದರ ಕೆಲವು ವಿಶಿಷ್ಟ ಗುಣಗಳಿಂದಾಗಿ ಇದು ಒಂದು ಕೋಟಿಗಿಂತಲೂ ಅಧಿಕ ಸಂಯುಕ್ತಗಳನ್ನುಂಟು ಮಾಡುತ್ತದೆ. ನಾವು ತಿನ್ನುವ ಆಹಾರ ತೊಡುವ ಬಟ್ಟೆ ಎಲ್ಲವೂ ಇಂಗಾಲದ ಸಂಯುಕ್ತಗಳೇ. ನಮಗೆ ತೀರಾ ಪರಿಚಿತವಾದುದು ಎಂದರೆ ಇಂಗಾಲದ ಡೈಆಕ್ಸೈಡ್. ಇದು ನಮ್ಮ ವಾತಾವರಣದಲ್ಲಿ 0.03% ನಷ್ಟಿದೆ. ನಾವು ಒಳ ತೆಗೆದುಕೊಳ್ಳುವ ಗಾಳಿಯಲ್ಲಿ ಇದು 4.4% ನಷ್ಟಿರುತ್ತದೆ. ಇಂಗಾಲವನ್ನು ಇಂಗಾಲದ ಸಂಯಕ್ತಗಳಾದ ಮರ, ಕಲ್ಲಿದ್ದಲು, ಕಾಗದ, ಇಂಧನಗಳನ್ನು ಧಾರಾಳವಾದ ಗಾಳಿಯಲ್ಲಿ ಉರಿಸಿದಾಗ ಇಂಗಾಲದ ಡೈಆಕ್ಸೈಡ್ (Carbon dioxide CO2) ಉತ್ಪತ್ತಿಯಾಗುತ್ತದೆ. ಒಂದು ಇಂಗಾಲದ ಪರಮಾಣು ಎರಡು ಆಮ್ಲಜನಕದ ಪರಮಾಣುಗಳೊಂದಿಗೆ ನಾಲ್ಕು ಎಲೆಕ್ಟ್ರಾನ್ ಗಳನ್ನು ಹಂಚಿಕೊಳ್ಳುವ ತಮ್ಮ ನಡುವೆ ಒಂದು ಬಂಧವನ್ನು ಸ್ಥಾಪಿಸಿಕೊಳ್ಳುತ್ತವೆ. ಇಲ್ಲಿ ತಲಾ ನಾಲ್ಕು ಜೊತೆ ಎಲೆಕ್ಟ್ರಾನ್ ಗಳು ಭಾಗವಹಿಸುತ್ತವೆ ಮತ್ತು ಈ ಎಲೆಕ್ಟ್ರಾನ್ ಗಳ ಮೇಲೆ ಒಂದು ಇಂಗಾಲದ ಪರಮಾಣು ಮತ್ತು ಎರಡು ಆಮ್ಲಜನಕದ ಪರಮಾಣುಗಳಿಗೆ ಸಮಾನ ಅಧಿಕಾರವಿರುತ್ತದೆ. ಈ ರೀತಿಯ ರಾಸಾಯನಿಕ ಬಂಧವನ್ನು ಸಹಬಂಧ (covalent bond) ಎಂದು ಕರೆಯುತ್ತೇವೆ. ಇದು ಒಂದು ಸ್ಥಿರವಾದ ಬಂಧ. ಇಂಗಾಲ ಉರಿಯುವಾಗ ದೊರೆಯುವ ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಇಂಗಾಲದ ಪರಮಾಣು ಎರಡು ಆಮ್ಲಜನಕದ ಪರಮಾಣುಗಳ ಬದಲಾಗಿ ಒಂದೇ ಆಮ್ಲಜನಕದ ಪರಮಾಣುವಿನಿಂದ ತೃಪ್ತಗೊಳ್ಳುತ್ತದೆ. ಈಗ ಉತ್ಪತ್ತಿಯಾಗುವುದು ಇಂಗಾಲದ ಡೈಆಕ್ಸೈಡ್ ಅಲ್ಲ ಬದಲಾಗಿ ಇಂಗಾಲದ ಮಾನಾಕ್ಸೈಡ್ (carbon monoxide CO). ಇದು ಅಸ್ಥಿರವಾದ ಎಲ್ಲಿಯಾದರೂ ಆಮ್ಲಜನಕ ದೊರೆತರೆ ಕೂಡಲೇ ಉರಿದು ಇಂಗಾಲದ ಡೈಆಕ್ಸೈಡ್ ಆಗಿ ಸ್ಥಿರಗೊಳ್ಳುತ್ತದೆ.
ನಮ್ಮ ಉಸಿರಿನಲ್ಲಿರುವ ಇಂಗಾಲದ ಡೈಆಕ್ಸೈಡ್ ಸ್ಥಿರವಾದ ಸಂಯುಕ್ತವಾದುದರಿಂದ ಇದು ಹೀಮೋಗ್ಲೋಬಿನ್ ನೊಂದಿಗೆ ಬಂಧಿಯಾಗುವುದಿಲ್ಲ. ಆದರೆ ಉಸಿರಿನಲ್ಲಿ ಎಲ್ಲಿಯಾದರೂ ಇಂಗಾಲದ ಮಾನಾಕ್ಸೈಡ್ ಸೇರಿದ್ದರೆ ಅಸ್ಥಿರವಾದ ಇದು ಇನ್ನೊಬ್ಬರೊಂದಿಗೆ ಸಂಬಂಧಹೊಂದಲು ಉತ್ತಮವಾಗಿರುತ್ತದೆ. ಇದು ಹೀಮೋಗ್ಲೋಬಿನ್ ನಲ್ಲಿರುವ ಕಬ್ಬಿಣದ ಅಯಾನ್ ಗೆ ಹೋಗಿ ಅಂಟಿಕೊಂಡು ಬಿಡುತ್ತದೆ. ಇಂತಹ ಹೀಮೋಗ್ಲೋಬಿನ್ ಇನ್ನು ಮುಂದೆ ಕಾರ್ಬಾಕ್ಸಿ ಹೀಮೋಗ್ಲೋಬಿನ್ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಇಂಗಾಲದ ಮಾನಾಕ್ಸೈಡ್ ಕಬ್ಬಿಣದೊಂದಿಗೆ ಸಹಸಂಬಂಧಿ ಬಂಧವನ್ನು (covalent coordinate bond) ಸ್ಥಾಪಿಸಿಕೊಳ್ಳುತ್ತದೆ. ಇಲ್ಲಿ ಉಂಟಾಗುವ ಬಂಧ ಉಡದ ಹಿಡಿತದ ಬಂಧ (chelate bond). ಇಂಗಾಲದ ಮಾನಾಕ್ಸೈಡ್ ಮತ್ತು ಹೀಮೋಗ್ಲೋಬಿನ್ ನಡುವಿನ ಆಕರ್ಷಣೆಯು ಆಮ್ಲಜನಕ ಮತ್ತು ಹೀಮೋಗ್ಲೋಬಿನ್ ನಡುವಿನ ಆಕರ್ಷಣೆ 200 - 250 ಪಟ್ಟು ಅಧಿಕ. ಆದ್ದರಿಂದ ಇಂಗಾಲದ ಮಾನಾಕ್ಸೈಡ್ ನಿಂದ ಕಾರ್ಬಾಕ್ಸಿ ಹಿಮೋಗ್ಲೋಬಿನ್ ಆಗಿ ಪರಿವರ್ತನೆಯಾದರೆ ಅಂತಹ ಹೀಮೋಗ್ಲೋಬಿನ್ ಇಂಗಾಲದ ಮಾನಾಕ್ಸೈಡ್ ಅನ್ನು ಬಿಟ್ಟು ಕೊಡುವ ಪ್ರಶ್ನೆಯೂ ಇಲ್ಲ ಆಮ್ಲಜನಕದ ಕಡೆಗೆ ತಿರುಗಿ ನೋಡುವುದೂ ಇಲ್ಲ. ಅಂದರೆ ಆ ಹೀಮೋಗ್ಲೋಬಿನ್ ಅನ್ನು ನೀವು ಕಳೆದುಕೊಂಡ ಹಾಗೆ. ಇನ್ನು ಮುಂದೆ ಉಸಿರಾಟಕ್ಕೆ ಬಳಕೆಯಾಗದು. ಅಂದರೆ ಹೀಮೋಗ್ಲೋಬಿನ್ ನ ಖೇಲ್ ಖತಂ ನಾಟಕ ಬಂದ್
ಮುಂದಿನವಾರ ಬೆಳಗಾವಿಯ ಪ್ರಕರಣ
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************