-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 133

ನಿಷ್ಪಾಪಿ ಸಸ್ಯಗಳು : ಸಂಚಿಕೆ - 133

ನಿಷ್ಪಾಪಿ ಸಸ್ಯಗಳು : ಸಂಚಿಕೆ - 133
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ? ಚೆನ್ನಾಗಿದ್ದೀರಿ ತಾನೆ? ಎಲ್ಲರಿಗೂ ಕ್ಯಾಲೆಂಡರ್ ವರುಷದ ಶುಭಾಶಯಗಳು... 

ನಾನು ಕಳೆದ ವಾರ ದಿನಪತ್ರಿಕೆಯೊಂದರಲ್ಲಿ ಒಂದು ಸುದ್ದಿಯನ್ನು ಓದಿದೆ. ಅದೇನೆಂದರೆ "ಕರಾವಳಿಯಲ್ಲಿ ಇನ್ನೂ ಹೂ ಬಿಡದ ಗೇರು ಕೃಷಿ" ಎಂದು. ಈ ಒಂದೇ ಒಂದು ವಾಕ್ಯದ ಓದು ನನ್ನನ್ನು ಕ್ಷಣದಲ್ಲಿ ಬಾಲ್ಯಕ್ಕೆ ಕಿತ್ತೊಗೆಯಿತು!.

ಬಾಲ್ಯದಲ್ಲಿ ನಮ್ಮ ನಾಲಿಗೆಯನ್ನಾಳುತ್ತಿದ್ದ ಅದೆಷ್ಟೋ ಹಣ್ಣುಗಳ ಪೈಕಿ ಗೇರುಹಣ್ಣು ಕೂಡ ಒಂದು!. ಸಣ್ಣ ರಸಹೀನ ಹಣ್ಣಿಗೆ ದೊಡ್ಡ ಗೇರುಬೀಜವಾಗುತ್ತಿದ್ದ 'ಪಲ್ಲೆ ಬೀಜ', ನಾರು ಜಾಸ್ತಿ ಇದ್ದು ಗಟ್ಟಿಯಾದ ಹಣ್ಣಿನ 'ಕರ್ ಕುರ್ ಗೇರುಹಣ್ಣು', ಕೆಂಪು, ಹಳದಿ, ಕೇಸರಿ, ಕಿತ್ತಳೆ ಗೇರುಹಣ್ಣುಗಳಲ್ಲದೆ ಉದ್ದ ಗೇರುಹಣ್ಣು, ಚೆಂಡು ಗೇರುಹಣ್ಣು, ಬಣ್ಣದ ಗೇರುಹಣ್ಣು, ಸಣ್ಣ ಬೀಜದ ಮೂಗುತಿ ಗೇರು ಹೀಗೆ ತರಹಾವರಿ ಮರಗಳು. ಒಂದೊಂದು ಮರದ ಹಣ್ಣು ಮತ್ತು ಬೀಜಗಳು ಒಂದೊಂದು ತರಹ. ಕೇವಲ ಹಣ್ಣು ಅಥವಾ ಬೀಜ ನೋಡಿಯೇ ಯಾವ ಮರದ್ದೆಂದು ಗುರುತಿಸಬಹುದಾದ ತಾಕತ್ತು ಮನೆಯ ಎಲ್ಲರಿಗಿತ್ತು. ಮರಗಳು ಯಾವ್ಯಾವ ಜಾಗದಲ್ಲಿದ್ದವೋ ಆ ಜಾಗದ ಹೆಸರುಗಳು ಮರಗಳಿಗಿದ್ದುವು. ಉದಾಹರಣೆಗೆ ಬೇಲಿ ಬದಿ ಮರ, ಹಟ್ಟಿ ಹಿಂದಿನ ಮರ, ತಡಮೆ ಬದಿ ಮರ. ಬೂತದ ಕಲ್ಲಿನ ಬದಿ ಮರ, ಕೆರೆ ಬದಿ ಮರ, ಗದ್ದೆ ಹುಣಿ ಮರ, ಹಳ್ಳದ ಮರ ಹೀಗೆ. ಇಡೀ ಜಾಗದ ನಕಾಶೆ ಗೇರುಮರಗಳ ನಡುವೆ ಹರಡಿತ್ತು. 

ಶಾಲೆಗೆ ರಜೆ ಸಿಕ್ಕುವುದೂ ಗೇರು ಮಾವು ಹಣ್ಣಾಗುವುದೂ ಕಾಕತಾಳೀಯವೆನಲಾಗದು. ಋತುಗಾಲವೇ ಹಾಗೆ! ನವೆಂಬರ್ ಡಿಸೆಂಬರ್ ನ ತಂಗಾಳಿ, ಚುಮು ಚುಮು ಛಳಿಗೆ ಹಣ್ಣು ನೀಡುವ ಈ ಮರಗಳು ಗರಿಗೆದರಿ ಪುಷ್ಪ ಮಂಜರಿಗಳ ಸೌಂದರ್ಯ ಹೊತ್ತು ಮಕ್ಕಳಿಗೆ ಭವಿಷ್ಯದ ಆಸೆ ತೋರಿಸುತ್ತಿದ್ದವು. ಹೊಸ ಬಟ್ಟೆಯ ಖರ್ಚನ್ನು, ಜಾತ್ರೆ ಉತ್ಸವಗಳ ಸಂಭ್ರಮವನ್ನು, ಮನೆಯ ಖರ್ಚನ್ನು, ಮಕ್ಕಳಿಗೆ ಮುಂದಿನ ವರ್ಷದ ಫೀಸನ್ನು ಒದಗಿಸುವ ಕೆಲಸವನ್ನು ಆ ಗೇರು ಮರಗಳು ಮಾಡುತ್ತಿದ್ದವು ಎಂದರೆ ಇಂದಿನ ಜನಾಂಗ ನಂಬಲಾರದೇನೊ. 

ಗೇರು ಬೀಜವನ್ನು ಮಾರುತ್ತಿದ್ದರೂ ಮಳೆಗಾಲದಲ್ಲಿ ಬಿರು ಮಳೆಗೆ ಕಾಯಿಸಿ ತಿನ್ನಲೆಂದೇ ಸ್ವಲ್ಪ ಅಟ್ಟದಲ್ಲಿ ತೆಗೆದಿರಿಸುವುದು, ಹಣ್ಣುಗಳಿಗೆ ಉಪ್ಪು ಬೆರೆಸಿ ತಿನ್ನುವುದು, ಹಣ್ಣಿನ ರಸವನ್ನು ಹಲವಾರು ದಿನ ಬಿಸಿಲಲ್ಲಿ ಇಟ್ಟು ಕುಂದುವಂತೆ ಮಾಡಿ ತೆಗೆದಿರಿಸಿ ವಾಂತಿ ಭೇದಿಗೆ ಮದ್ದಾಗಿ ಬಳಸುವುದು, ಯುಗಾದಿಯ ದಿನ ಮಾಡುವ ಪಾಯಸ, ಪಲ್ಯ ಗಳಿಗೆ ಎಳೆಯ ಗೇರು ಬೀಜದ ತಿರುಳು ಬಳಸುವುದು, ಹೊಸ ಮಣ್ಣಿನ ಮಡಿಕೆ ಕಾವಲಿಗಳನ್ನು ಗೇರುಬೀಜದ ಸಿಪ್ಪೆ ಬಳಸಿ ಸುಡುವುದು, ರೈತರ ಉಗುರುಗಳ ನೋವಿಗೆ ಸಿಪ್ಪೆಯ ಎಣ್ಣೆ ಬಳಸುವುದು ಹೀಗೆ ಒಂದೇ ಎರಡೇ... ಹಲವಾರು ಉಪಯೋಗಗಳು ಈ ಗೇರು ಬೀಜದಿಂದ. ಹಣ್ಣುಗಳನ್ನು ಕೊಳೆಸಿ ಕಳ್ಳಭಟ್ಟಿ ಮಾಡಿ ಗೇರು ಹಣ್ಣಿನ ಸರಾಯಿ ಮಾಡುತ್ತಿದ್ದ ಕತೆಗಳೇ ರೋಚಕವಾಗಿದ್ದವು. ಮಕ್ಕಳ ನೋಟ್ ಪುಸ್ತಕ, ಪಾಠ ಪುಸ್ತಕ ಹರಿದರೆ ಗೇರು ಮರದ್ದೇ ಗೋಂದು! ಗೇರು ಮರವನ್ನು ಗಟ್ಟಿ ಯಾದ ದೇಹ ರಚನೆಯ ದುಂಬಿಗಳು ಕೊರೆಕೊರೆದು ಹುಡಿ ಮಾಡುತ್ತಿದ್ದರೆ ಮರವು ದು:ಖದಿಂದ ಕಣ್ಣೀರಿನಂತೆ ಗೋಂದು ಸುರಿಸುತ್ತಿತ್ತು. ಮರ ಸಾಯುತ್ತಿದೆ ಎಂದು ಹಿರಿಯರು ಹೇಳುತ್ತಿದ್ದರಲ್ಲದೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಮುಂದಿನ ಮಳೆಗಾಲಕ್ಕೆ ಅದೇ ಮರವನ್ನು ಕಟ್ಟಿಗೆ ಮಾಡಬೇಕೆಂದು ಮಾತನಾಡಿಕೊಳ್ಳುತ್ತಿದ್ದರು.

ಈಶಾನ್ಯ ಬ್ರಜಿಲ್ ನ್ನು ಮೂಲವಾಗಿ ಪಡೆದುಕೊಂಡ ಗೇರು 17ನೇ ಶತಮಾನದಲ್ಲಿ ಪೋರ್ಚುಗೀಸರ ಮೂಲಕ ಭಾರತದ ಗೋವಾ ವನ್ನು ಪ್ರವೇಶಿಸಿತು. ಪೋರ್ಚುಗೀಸರು ಕರಾವಳಿಯಲ್ಲಿ ಮಳೆಗೆ ಮಣ್ಣು ಕರಗಿ ಹೋಗುವುದನ್ನು ತಪ್ಪಿಸಲು ಗೇರುಮರಗಳನ್ನು ನೆಡುವ ಕಾರ್ಯ ಮಾಡಿದರು. ಅಲ್ಲಿಂದ ಸ್ವ ಸಾಮರ್ಥ್ಯದ ಮೂಲಕ ಮೈದಾನ, ಪರ್ವತ ಪ್ರದೇಶಗಳಿಗೆ ಹರಡಿ ಬೆಳೆದವರ ಕಿಸೆ ತುಂಬುವ ಕೆಲಸ ಮಾಡಿದೆ. ಎಲ್ಲೋ ಕಾಡಲ್ಲಿ ಮರವಾಗಿ ಬೆಳೆದೂ ಪ್ರಕೃತಿಗೆ ಕೊಡುಗೆ ನೀಡಿದೆ. ಒಂದು ಕಾಲದಲ್ಲಿ ಮಾನವನ ಒಡನಾಡಿಯಾಗಿದ್ದು ಬಂಜರು ನೆಲದಲ್ಲೂ ಹಣ ಬೆಳೆಯುತ್ತಿದ್ದ ಗೇರುಮರ ಇಂದು ಎಲ್ಲೋ ಒಂದೊಂದು ಇದ್ದು ಒಂಟಿತನದಿಂದ ಬಳಲುತ್ತಿರುವುದನ್ನು ಕಾಣುತ್ತಿದ್ದೇವೆ. 

ಗೋಡಂಬಿ ಇಂದು ಬೆಲೆ ಬಾಳುವ ವಸ್ತುವಾಗಿರುವುದರಿಂದ ಆಸಕ್ತರು ಪಾಳು ಬಿದ್ದ ಭೂಮಿ, ಬರಡು ನೆಲದಲ್ಲಿ ಮಾತ್ರವಲ್ಲದೆ ಫಲವತ್ತಾದ ಮಣ್ಣಲ್ಲೂ ಗೇರನ್ನು ಲಾಭದಾಯಕ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಗೋಡಂಬಿ ಪ್ರಮುಖ ತೋಟಗಾರಿಕಾ ಬೆಳೆಯಾಗಿ ಬೆಳೆದಿದ್ದು ದೇಶಕ್ಕೆ ರಫ್ತಿನಲ್ಲಿ ಅತೀ ಹೆಚ್ಚು ಆದಾಯ ತರುವ ಮೊದಲನೇ ಬೆಳೆ ಸೆಣಬಾದರೆ ಎರಡನೇ ಬೆಳೆ ಗೋಡಂಬಿಯಾಗಿದೆ. ಭಾರತದ ಗೋಡಂಬಿ ಅತ್ಯುತ್ತಮ ಗುಣಮಟ್ಟಕ್ಕೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಉತ್ಪಾದಕ, ಸಂಸ್ಕರಣೆ, ರಫ್ತು ಎಲ್ಲದಕ್ಕೂ ನಮ್ಮದೇ ಜನರ ಕೈಚಳಕ. ದೇಶದೊಳಗೆ 15 ಲಕ್ಷ ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು ರಫ್ತಿನಲ್ಲಿ 24 ವರ್ಗಗಳ ವೈವಿಧ್ಯಮಯ ವಿಧಾನಗಳಿವೆ. ಕರ್ನಾಟಕ , ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳಗಳಲ್ಲಿ ಕಸಿ ಕಟ್ಟಿದ ಮೂವತ್ತಕ್ಕೂ ಹೆಚ್ಚು ಹೊಸ ತಳಿಗಳನ್ನು ಸಂಶೋಧಿಸಿ ಬೆಳೆಯುತ್ತಿದ್ದಾರೆ. ಉಳ್ಳಾಲ ೧, ಉಳ್ಳಾಲ ೨, ಉಳ್ಳಾಲ ೩, ಉಳ್ಳಾಲ ೪ ನಮ್ಮದೇ ಹೊಸ ತಳಿಗಳಾದರೆ ನೆರೆಯ ಕೇರಳದಲ್ಲಿ ಮಡಕ್ಕಥರ, ಕನಕ, ಧನಾ, ಅಮೃತ ಮುಖ್ಯವಾದುವು. ಅಮೃತ ತಳಿಯ ಒಂದು ಮರ ವರ್ಷಕ್ಕೆ 17 ಕಿಲೋ ಗೇರುಬೀಜ ನೀಡಿದರೆ ಧನಾ ತಳಿಯ ಒಂದು ಬೀಜದ ಭಾರ 8.2 ಗ್ರಾಮ್!.  ಗೇರು ನಿತ್ಯಹರಿದ್ವರ್ಣದ ಚಿಕ್ಕ ಮರ. 12 ರಿಂದ 14 ಮೀಟರ್ ಎತ್ತರ ಬೆಳೆದರೂ ಅಡ್ಡಾದಿಡ್ಡಿ ಶಾಖೆಗಳನ್ನು ಹರಡಿಸಿ ವಿಸ್ತಾರ ಪಡೆಯುತ್ತದೆ. ಇದರ ನಾರಿನಂತಹ ಶಾಖೆಗಳು ಕತ್ತಿ, ಕೊಡಲಿಗಳಿಗೆ ಹಿಡಿಯಾಗುತ್ತವೆ. ಮಕ್ಕಳಿಗೆ ಗೇರು ಮರ ಹತ್ತಿಳಿಯುವುದೆಂದರೆ ಮೋಜಿನಾಟ! ಇದರ ಅಂಡಾಕಾರದ ಹಸಿರು ಎಲೆಗಳು ವಿಶಿಷ್ಟವಾದುವು. ಎಲೆಗಳನ್ನು ಹಲ್ಲುಜ್ಜಲು ನಮ್ಮ ಹಿರಿಯರು ಬಳಸುತ್ತಿದ್ದರು. ಪ್ರತಿ ಶಾಖೆಯ ತುದಿಯಲ್ಲೂ ಪುಷ್ಪಗುಚ್ಛಗಳು. ಐದು ದಳಗಳ ಪುಟಾಣಿ ಹೂಗಳು ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಮೂಡತೊಡಗಿದರೆ ಮಾರ್ಚ್, ಎಪ್ರಿಲ್, ಮೇ ತಿಂಗಳವರೆಗೂ ಮಿಡಿ, ಕಾಯಿ, ಹಣ್ಣುಗಳಿರುತ್ತವೆ. ತುಳುವಿನಲ್ಲಿ ಇನ್ನೂ ಹಣ್ಣು ಬಲಿಯದೆ ಬೀಜದೊಳಗಿನ ತಿರುಳು ಮಾತ್ರ ಬೆಳೆದಾಗ ಲತ್ತ್ ಬೀಜ, ಬೀಜ ಸ್ವಲ್ಪ ಬಲಿತು ತೆಳ್ಳಗಿನ ಕಾಯಿ ಕಂಡಾಗ 'ಕಣ್ಣ್ ನುಂಗೆಲ್, ಸರಿಯಾಗಿ ಕಾಯಿ ರೂಪುಗೊಂಡಾಗ 'ಕಾಯನ' ವೆಂದು, ಸಂಪೂರ್ಣ ಬೆಳೆದು ಪಕ್ವವಾದಾಗ 'ಗೋಂಕು' ಎಂದು ಕರೆಸಿಕೊಳ್ಳುತ್ತದೆ.

ಸಸ್ಯಶಾಸ್ತ್ರೀಯವಾಗಿ ಅನಕಾರ್ಡಿಯಮ್ ಅಕ್ಸಿಡೆಂಟೇಲ್ (Anacardiam Occidentals) ಎಂಬ ನಾಮಧೇಯದ ಗೇರು ಅನಕಾರ್ಡಿಯೇಸಿ (Anacardiaceae) ಕುಟುಂಬದ ಸದಸ್ಯ ಸಸ್ಯವಾಗಿದೆ. ಕಾರ್ಡಿಯಂ ಅಂದರೆ ತಲೆಕೆಳಗಾದ ಹೃದಯ. ಅನಾಕಾರ್ಡಿಯಮ್ ಹಣ್ಣಿನ ಆಕಾರವನ್ನು ಉಲ್ಲೇಖಿಸುತ್ತದೆ.

Cashew Apple ಜನಪ್ರಿಯ ಹೆಸರು. ಕಾಜು ಪೋರ್ಚ್ ಗೀಸ್ ಹೆಸರಾಗಿದೆ. ಮಾರ್ಕಿಂಗ್ ನಟ್ ಟ್ರೀ, ಧೋಬಿ ನಟ್ ಟ್ರೀ, ಭಲ್ಲಾಟಕ. ಕೇರುಮರ, ಗುಡ್ಡೆ ಗೇರು ಮೊದಲಾದ ಹೆಸರುಳ್ಳ ಗೋಡಂಬಿಯು ದ್ವಿದಳ ಧಾನ್ಯದ ಗುಂಪಿಗೆ ಸೇರುತ್ತದೆ. ಮರಗಳ ಬುಡದಲ್ಲಿ ಹೆಕ್ಕದೆ ಉಳಿದ ಬೀಜಗಳು ಮಳೆಗಾಲ ಆರಂಭವಾಗುತ್ತಲೇ ಮೊಳೆತು ಎರಡೆಲೆ ಬಿಟ್ಟು ನಿಲ್ಲುತ್ತದೆ. ಆ ವೇಳೆಯಲ್ಲಿ ಭೂಮಿಯಿಂದ ಮೇಲೇರಿದ ಕಾಂಡದಲ್ಲಿ ಬೀಜದ ತಿಳಿ ಹಸಿರಾದ ದಳಗಳು ಕಾಣಿಸುತ್ತವೆ. ಅದನ್ನು ಹುಡುಕಿ ತಿನ್ನಲು ಮಕ್ಕಳ ಜೊತೆ ಮೊಲ, ಅಳಿಲು ಮೊದಲಾದ ಸಣ್ಣ ಪುಟ್ಟ ಪ್ರಾಣಿಗಳೂ ಪೈಪೋಟಿಗಿಳಿಯುತ್ತವೆ. ಗೇರು ಹಣ್ಣು ಬಾವಲಿಗಳ, ಹಕ್ಕಿಗಳ ಪ್ರೀತಿಯ ತಿನಿಸು. ಹಣ್ಣಿನಿಂದ ಹೊರಗಡೆ ಬೀಜ ಬೆಳೆಯುವ ವಿಶೇಷತೆ ಗೇರು ಹಣ್ಣಿನದು. ಬೀಜದ ತಿರುಳಿನ ಸುತ್ತಲು ಗಟ್ಟಿಯಾದ ಕವಚವಿದ್ದು ಅದು ಕ್ಷಾರಯುಕ್ತವಾದ ಎಣ್ಣೆಯನ್ನು ಹೊಂದಿದೆ. ಈ ಎಣ್ಣೆ ಚರ್ಮಕ್ಕೆ , ಬಟ್ಟೆಗೆ ತಾಗಿದರೆ ಅಲ್ಲಿ ಸುಟ್ಟಂತಾಗುತ್ತದೆ. ಕೆಲವು ಜಾತಿಯ ಹಣ್ಣು ಗಳಲ್ಲೂ ಸೊನೆ ಇದ್ದು ತಿನ್ನಲು ಯೋಗ್ಯವಾಗಿರುವುದಿಲ್ಲ. ಮಲೆನಾಡಿನಲ್ಲಿ ಯುಗಾದಿಗೆ ಬೀಜದ ಸೊನೆಯನ್ನು ಹಣೆಗಿಡುವುದು ಸಂಪ್ರದಾಯ. ಅಳಿಸಲಾಗದ ಶಾಯಿಯ ಬಳಕೆಗೆ, ನೈಸರ್ಗಿಕ ಬಣ್ಣ, ಕಾಲಿನ ಆಣಿ, ಉಗುರಿನ ಕಾಯಿಲೆಗೆ, ಮಣ್ಣಿನ ಹೊಸ ಪಾತ್ರೆಗಳನ್ನು ಬಳಸುವ ಮೊದಲು ಗೇರು ಬೀಜದ ಎಣ್ಣೆ ಉಪಯುಕ್ತವಾಗಿದೆ. ಹಿಂದೆ ಮಣ್ಣಿನ ಮಡಿಕೆಗಳು ಒಡೆದಾಗ ಅದನ್ನು ಸರಿಪಡಿಸಲು ಈ ಎಣ್ಣೆಯೆ ನಿರ್ಣಾಯಕ ಪಾತ್ರವಹಿಸುತ್ತಿತ್ತು.

ಯಾವುದೇ ಪೋಷಣೆಯಿಲ್ಲದೆ ಬಿದ್ದಲ್ಲೆ ಬೇರೂರಿ ನೆಲೆ ಕಾಣುವ ಈ ನಿಷ್ಪಾಪಿ ಸಸ್ಯ ದ ಹಣ್ಣಿನಿಂದ ಮಾಡುವ ಸಾಂಪ್ರದಾಯಿಕ ಪಾನೀಯ ಕ್ಯಾಶೂಪೆನ್ನಿ ಗೋವಾದಲ್ಲಿ ಹೆಸರುವಾಸಿ. ದನಗಳಿಗೆ, ಪಶುಪಕ್ಷಿಗಳಿಗೆ ಆಹಾರ. ಗೊಬ್ಬರಕ್ಕೆ ಎಲೆಗಳು, ಉರುವಲಿಗೆ ಮರಗಳು, ಹಣ್ಣುಗಳಿಂದ ಮದ್ಯ ತಯಾರಿ ಮಾತ್ರವಲ್ಲದೆ ತಂಪು ಪಾನೀಯ, ಚಟ್ನಿ, ಉಪ್ಪಿನಕಾಯಿ, ಹಲ್ವ, ಚಾಕ್ಲೆಟ್, ಪಾಯಸದಲ್ಲಿ ಬಳಕೆಯಿದೆ. ಗೇರು ಹಣ್ಣಿನ ರಸ ಒತ್ತಡ ನಿವಾರಕವೆನಿಸಿದೆ. ಹೃದಯದ ಆರೋಗ್ಯ, ಚರ್ಮದ ಹುಣ್ಣು, ವಸಡಿನ ಸಮಸ್ಯೆ, ರಕ್ತದೊತ್ತಡ ನಿಯಂತ್ರಣ, ಒಳ್ಳೆಯ ಕೊಲೆಸ್ಟರಾಲ್‌ ಹೆಚ್ಚಳಕ್ಕೆ , ಜಂತುಹುಳುಗಳ ನಿರ್ಮೂಲನ , ಆಮಶಂಕೆ, ಮೂಲವ್ಯಾಧಿ, ಕೂದಲು ಕಪ್ಪಾಗಲು ಗೇರುಹಣ್ಣು ಹಾಗೂ ಗೋಡಂಬಿ ಸಹಾಯಕವಾಗಿದೆ. ಯಥೇಚ್ಛವಾದ ಪ್ರೊಟೀನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ , ಜಿಂಕ್, ಮ್ಯಾಂಗನೀಸ್ ಹೀಗೆ ಹಲವು ಶ್ರೇಷ್ಠ ಅಂಶಗಳನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ಕೋಶಗಳ ಪುನರಾವರ್ತನೆ ನಿಗ್ರಹಿಸುವ ಶಕ್ತಿ ಗೇರುಹಣ್ಣಿಗಿದೆ. ಕಡಿಮೆ ಕೊಲೆಸ್ಟರಾಲ್‌ ಹೊಂದಿರುವುದರಿಂದ ದೇಹದ ತೂಕ ಕಳೆದುಕೊಳ್ಳಲು, ಸಮೃದ್ಧವಾದ ಕಬ್ಬಿಣಾಂಶ ಇರುವುದರಿಂದ ಅನಿಮಿಯಾ ತಡೆಗೆ ಸಹಾಯಕ. ಋತುಗಾಲಗಳಿಗೆ ಅನುಸಾರವಾಗಿ ಪ್ರಾದೇಶಿಕವಾಗಿ ದೊರಕುವ ಹಣ್ಣುಗಳನ್ನೆ ಹೆಚ್ಚು ತಿನ್ನಬೇಕೆಂಬ ಆರೋಗ್ಯದ ಗುಟ್ಟನ್ನು ಮರೆತ ನಾವು ಗೇರು ಹಣ್ಣಿನಿಂದ ಬಹಳಷ್ಟು ದೂರವಾಗಿದ್ದೇವೆ. ಮರಗಳೇ ಕಣ್ಮರೆಯಾಗಲು ಸಾಕಷ್ಟು ಪ್ರಯತ್ನಿಸಿದ್ದಾಗಿದೆ. 

ಮಕ್ಕಳೇ ನಾವು ಈಬಗ್ಗೆ ಚಿಂತಿಸಬೇಕಾಗಿದೆ. ಗೇರು ಮರವನ್ನು ಸಾಕುವುದು ಬಹಳ ಸುಲಭ. ನಮಗೆ ಖುಷಿಗಾಗಿ ತಿನ್ನಲಾದರೂ ನಾಲ್ಕು ಹಣ್ಣು ಬೇಡವೇ?

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************




Ads on article

Advertise in articles 1

advertising articles 2

Advertise under the article