-->
ಪಯಣ : ಸಂಚಿಕೆ - 75 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 75 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 75 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಮೈಸೂರಿನ ತಲಕಾಡಿ' ಗೆ (ಭಾಗ - 1) ಪಯಣ ಮಾಡೋಣ ಬನ್ನಿ....
               
ತಲಕಾಡು ಶಿವನಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿ.ಮೀ. ದೂರದಲ್ಲಿದೆ. ಪುರಾತನ ಕಾಲದಿಂದಲೂ ಹೆಸರುವಾಸಿಯಾದ ತಲಕಾಡು, ಸಾಧಾರಣವಾಗಿ ಕರ್ನಾಟಕವನ್ನಾಳಿದ ಎಲ್ಲ ಅರಸರ ಆಳ್ವಿಕೆಗೂ ಒಳಗಾಗಿದೆ.

ಪಂಚಲಿಂಗ ದರ್ಶನದ ಸ್ಥಳಗಳಲ್ಲಿ ಒಂದಾದ ತಲಕಾಡು ಇಲ್ಲಿ ನಡೆಯುವ ಜಾತ್ರೆ ಹಾಗೂ ಪುಣ್ಯ ಸ್ನಾನದ ಉತ್ಸವಕ್ಕೆ ಖ್ಯಾತಿ ಪಡೆದಿದ್ದು, ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕಾವೇರಿ ನದಿ ತೀರದಲ್ಲಿದ್ದರೂ ತಲಕಾಡು ಮರಳುಗಾಡಾಗುವುದಕ್ಕೂ ಒಂದು ಕಥೆ ಇದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿ ಇದ್ದಳು. ಮೈಸೂರು ಅರಸರಿಗೂ ಈ ರಾಜ್ಯದವರಿಗೂ ಯುದ್ಧ ನಡೆದು ಇದರಲ್ಲಿ ಆಕೆಯ ಪತಿ ವೀರಸ್ವರ್ಗ ಸೇರುತ್ತಾನೆ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, 'ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ' ಎಂದು ಶಪಿಸಿ ತಾಯಿ ಕಾವೇರಿ ಮಡಿಲಿಗೆ ಧುಮುಕಿ ಪ್ರಾಣ ಕಳೆದುಕೊಂಡಳಂತೆ. ಈ ಕಾರಣದಿಂದ ಮೈಸೂರು ಅರಸರಿಗೆ ಈಗಲೂ ನೇರ ಸಂತಾನವಿಲ್ಲ ಎನ್ನಲಾಗುತ್ತದೆ. ಅದಲ್ಲದೇ ಅನೇಕ ಮಂದಿ ಪುರಾತತ್ವ ಶಾಸ್ತ್ರಜ್ಞರು ಮರಳಲ್ಲಿ ಹೂತ ಕಟ್ಟಡಗಳನ್ನು ಉತ್ಪನನ ಮಾಡಲು ಪ್ರಯತ್ನಿಸಿದರಾದರೂ ಬಹುಬೇಗನೆ ಅವೆಲ್ಲ ಮರಳಲ್ಲಿ ಮುಚ್ಚಿ ಹೋದವಂತೆ. ಎಲ್ಲಕ್ಕಿಂತ ವಿಶೇಷವೆಂದರೆ ಹರಿದ್ವರ್ಣದ ಕಾವೇರಿ ನದಿಯ ತಪ್ಪಲಿನಲ್ಲಿ ಮರುಭೂಮಿ ಥಟ್ಟನೆ ಎದ್ದು ನಿಂತ ಹಾಗೆ ತಲಕಾಡು ಕಾಣುತ್ತದೆ.

ತಲಕಾಡು ಕಾವೇರಿ ನದಿಯ ಮೊನಚಾದ ತಿರುವಿನಲ್ಲಿ ಇದ್ದುದರಿಂದ ನದಿಯ ಹರಿವಿಗೆ ಅಡ್ಡ ಬಂದು ಅದರ ಒಳದಂಡೆಗಳ ಮೇಲೆ ಮರಳಿನ ರಾಶಿ ಸೇರಿಕೊಂಡು ಮರಳದಿಣ್ಣೆಯನ್ನು ಸೃಷ್ಟಿಸಿದೆಯೆಂಬ ಭೌಗೋಳಿಕ ವಿವರಣೆಯೂ ಇದಕ್ಕಿದೆ. ಈ ಮರಳು ಗುಡ್ಡೆಯ ಮೇಲೆ ಹತ್ತಿ ಹೋದರೆ ಸಿಗುವುದೇ ಪಾತಾಳೇಶ್ವರ ದೇವಸ್ಥಾನ. ಅಲ್ಲಿಂದ ಮುಂದೆ ಕೀರ್ತಿನಾರಾಯಣ ದೇವಸ್ಥಾನ ಕಾಣ ಸಿಗುತ್ತದೆ. ಇಲ್ಲಿನ ಮರಳ ಅಡಿಯಲ್ಲಿ ಸುಮಾರು ಮೂವತ್ತು ದೇವಸ್ಥಾನಗಳು ಹುದುಗಿಹೋಗಿವೆ ಎನ್ನಲಾಗುತ್ತದೆ. ಈ ಪೈಕಿ ಮರಳಿನಿಂದ ಆವೃತವಾಗದ ವೈದ್ವೇಶ್ವರ ಹಾಗೂ ಕೀರ್ತಿನಾರಾಯಣ ದೇಗುಲಗಳಿಗೆ ಮರಳಿನಿಂದ ಮುಚ್ಚಿ ಹೋಗದಂತೆ ಅವುಗಳ ಸುತ್ತ ಕಾಂಕ್ರಿಟ್ ಗೋಡೆಗಳನ್ನು ಕಟ್ಟಲಾಗಿದೆ. ಇಲ್ಲಿರುವ ಮರಳೇಶ್ವರ ದೇವಸ್ಥಾನದಲ್ಲಿ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಆಗ ಮರಳೇಶ್ವರ ದೇವಸ್ಥಾನದ ಸುತ್ತ ಇದ್ದ ಬಿಳಿಗೋಡೆಯನ್ನು ಪುನಃ ಕಟ್ಟಲಾಗುತ್ತದೆ.

ಇಲ್ಲಿಗೆ ಭೇಟಿ ನೀಡುವವರು ಕಾವೇರಿ ನದಿ, ಮಾಲಂಗಿ ಮಡು ಮತ್ತು ಮಲ್ಲಿಕಾರ್ಜುನನ ದರ್ಶನ ಭಾಗ್ಯವನ್ನೂ ಪಡೆಯಬಹುದು. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ತಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನವೆಂಬರ್ 16ರಂದು ನವ ಸಹಸ್ರಮಾನದ ಎರಡನೇ ಪಂಚಲಿಂಗದರ್ಶನ ನಡೆಯಲಿದೆ. ಪ್ರತಿ. 5, 7 ಹಾಗೂ 13 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಈ ಮಹಾ ಉತ್ಸವ ವಿಶೇಷ ಎಂಬಂತೆ ಮೂರೇ ವರ್ಷಕ್ಕೆ ಮತ್ತೆ ಬಂದಿದೆ. ಪ್ರತಿ ನೂರು ವರ್ಷಗಳಲ್ಲಿ ಮೂರು ವರ್ಷಗಳಿಗೊಮ್ಮೆ ಎರಡು ಸಲ ಪಂಚಲಿಂಗ ದರ್ಶನ ಅವಕಾಶ ಬರುತ್ತದೆ. 1908ರಲ್ಲಿ ಪಂಚಲಿಂಗದರ್ಶನ ನಡೆದಿತ್ತು. ನಂತರದ ಮೂರು ವರ್ಷಗಳ ತರುವಾಯ 1911ರಲ್ಲಿ ಪಂಚಲಿಂಗ ದರ್ಶನಕ್ಕೆ ಮುಹೂರ್ತ ಒದಗಿ ಬಂದಿತ್ತು.

ಗಂಗರಸರ ಕಾಲದಿಂದ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಅತ್ಯಂತ ವೈಭವದಿಂದ ನಡೆಯುತ್ತಿದೆ. ಪಂಚಲಿಂಗ ದರ್ಶನ ಕಾರ್ತೀಕ ಮಾಸದ ಐದನೇ ಸೋಮವಾರ ನಡೆಯುತ್ತದೆ. ಅಂದು ಅಮಾವಾಸ್ಯೆಯಾಗಿದ್ದು, ಕುಹೂ ಅಥವಾ ಪದ್ಮಯೋಗ ಮತ್ತು ವಿಶಾಖಾ ನಕ್ಷತ್ರಗಳು ಒಟ್ಟಾಗಿ ಬರುವ ಶುಭದಿನದಲ್ಲಿ ಪಂಚಲಿಂಗ ದರ್ಶನ ನಡೆಯುತ್ತದೆ.

ತಲಕಾಡು ಗಂಗರಸರ ರಾಜಧಾನಿ. ಅದು ಪುರಾಣ, ಇತಿಹಾಸ ಮತ್ತು ಪ್ರಕೃತಿ ಸೌಂದರ್ಯಗಳ ಅಪೂರ್ವ ಸಮಾಗಮ, ಆಸ್ತಿಕರ ಪಾಲಿಗೆ ಪುಣ್ಯಕ್ಷೇತ್ರ, ಶೈವರಿಗೆ ದಕ್ಷಿಣ ಕಾಶಿ. ವೈಷ್ಣವರಿಗೆ ವೈಕುಂಠ, ಪ್ರವಾಸಿಗರಿಗೆ ಮನಮೋಹಕ.

ಕ್ರಿ.ಶ. 325 ರಿಂದ 1004ರವರೆಗೆ ಗಂಗರಸರು, 116ರವರೆಗೆ ಚೋಳರು, 1346ರವರೆಗೆ ಹೊಯ್ಸಳರು, 1610ರವರೆಗೆ ವಿಜಯನಗರ ಅರಸರು ಹಾಗೂ 1950ರವರೆಗೆ ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿದ್ದ ತಲಕಾಡು ಅಪೂರ್ವವಾದ ಶಿಲ್ಪಕಲಾ ಸೌಂದರ್ಯಕ್ಕೆ ಹೆಸರುವಾಸಿ.

ಕಾವೇರಿ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೆ ತೀರದಲ್ಲಿ ಪವಿತ್ರವಾದ ಶೈವ ಹಾಗೂ ವೈಷ್ಣವ ಕ್ಷೇತ್ರಗಳಿವೆ. ಕಾವೇರಿ ನದಿ ತಲಕಾಡು ಬಳಿ ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುತ್ತಾಳೆ. ಇಲ್ಲಿನ ನಾಲ್ಕೂ ದಿಕ್ಕುಗಳಲ್ಲಿ ಶಿವ ದೇವಾಲಯಗಳಿವೆ. ಇವುಗಳ ಜೊತೆಗೆ ಪರಶಿವನ ಐದನೇ ಮುಖ್ಯವಾದ ವೈದ್ಯನಾಥೇಶ್ವರ ಲಿಂಗವೂ ಇಲ್ಲಿರುವುದರಿಂದ ಇದು ಪಂಚಲಿಂಗ ಕ್ಷೇತ್ರ, ಪಂಚ ಮಹಾಲಿಂಗಗಳ ದರ್ಶನ ಮಾಡುವವರಿಗೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಕಾವೇರಿ ಎಡ ದಂಡೆಯ ಮೇಲಿರುವ ಈ ಐದೂ ಶಿವ ದೇವಾಲಯಗಳಿಗೆ ನಿರ್ದಿಷ್ಟ ಮಹೋತ್ಸವದಲ್ಲಿ ಹೋಗಿ ಪೂಜೆ ಸಲ್ಲಿಸುವುದೇ ಪಂಚಲಿಂಗ ದರ್ಶನ. ವೈದ್ಯನಾಥೇಶ್ವರ, ಆರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನಸ್ವಾಮಿ ಇವೇ ಆ ಐದು ಪಂಚಲಿಂಗಗಳು. ಇವುಗಳ ಜತೆಗೆ ಕೀರ್ತಿನಾಥ ಸ್ವಾಮಿ, ಗೋಕರ್ಣ ಪುಷ್ಕರಣಿ, ವಿಸ್ತಾರವಾದ ಮರಳರಾಶಿ, ಕಾವೇರಿ ತೀರ ಇನ್ನಿತರ ವಿಶೇಷ ಆಕರ್ಷಣೆಗಳಿವೆ.

  "ಕಾವೇರಿ ನದಿಯ ಮಡಿಲು, ಹಲವು ದೇಗುಲಗಳ ಒಡಲು, ಮರಳುಗಳ ರಾಶಿ, ಮೈಸೂರು ಅರಮನೆಗೂ ಸಂಬಂಧದ ಕೊಂಡಿ ಈ ತಲಕಾಡು..." 
ಬನ್ನಿ ಒಮ್ಮೆ ಪ್ರವಾಸಕ್ಕೆ
  [ಮುಂದುವರಿಯುವುದು...]

ಬನ್ನಿ ಒಮ್ಮೆ.... ಮೈಸೂರಿಗೆ....

 ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article