-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 111

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 111

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 111
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
             
    
ಪ್ರೀತಿಯ ಮಕ್ಕಳೇ... ಈಗ ನಾನು COHb ಎಂದರೆ ಸಾಕು ಓಹ್ ಅದು ಕಾರ್ಬಾಕ್ಸಿಹೀಮೋಗ್ಲೋಬಿನ್ ಎಂದು ಹೇಳುವಷ್ಟು ಅದು ಪರಿಚಿತವಾಗಿದೆ. ನೋಡಿ ಈ ಕಾರ್ಬನ್ ಮಾನಾಕ್ಸೈಡ್ ಒಂದು ಅಸ್ಥಿರ ಅನಿಲ ಅಷ್ಟೇ. ಆದರೆ ಅದನ್ನು ವಿಷಕಾರಿ ಎಂದು ನಾಮಕರಣ ಮಾಡಿದ್ದು ರಕ್ತದ ಅಂದರೆ ಹೀಮೋಗ್ಲೋಬಿನ್ ನ ಕಾರ್ಬನ್ ಮಾನಾಕ್ಸೈಡ್ ಪ್ರೇಮ. ಅಂದರೆ ಕೆಟ್ಟದೇನೂ ಇಲ್ಲ. ನಾವು ಅವುಗಳನ್ನು ಕೆಟ್ಟದಾಗಿಸುತ್ತೇವೆ ಅಷ್ಟೇ. ಈ ಕಾರ್ಬನ್ ಮಾನಾಕ್ಸೈಡ್ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂದು ನೋಡಿದೆವು. ಈಗ ಯಾವಾಗ ಎಂಬುದು ಪ್ರಶ್ನೆ.

ನೀವು ಹಳೆಯ ಅಂಬರೀಶ್ ಅವರ ಸಿನಿಮಾ ಒಂದನ್ನು ನೆನಪು ಮಾಡಿಕೊಳ್ಳಿ. ಅದರಲ್ಲಿ ನಾಯಕ ತನ್ನ ವೈರಿಯನ್ನು ಕಾರ್ ಶೆಡ್ ನ ಒಳಗೆ ಬಂಧಿಯಾಗಿಸಿ. ಕಾರ್ ಸ್ಟಾರ್ಟ್ ಮಾಡಿ ಎಕ್ಸಿಲರೇಟರ್ ಕೊಡುತ್ತಾನೆ. ಮತ್ತೆ ನೋಡುವಾಗ ವೈರಿ ಸತ್ತಿರುತ್ತಾನೆ. ಸಾಯಲು ಕಾರಣ ಗೊತ್ತಾಗುವುದೇ ಇಲ್ಲ. ನಾಯಕ ಕಾರನ್ನು ಸ್ಟಾರ್ಟ್ ಮಾಡಿದಾಗ ಕಾರು ಸಾಕಷ್ಟಿರುವ ಆಮ್ಲಜನಕವನ್ನು ಬಳಸಿಕೊಂಡು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು ನಿರಪಾಯಕಾರಿ. ಆದರೆ ಕಾರ್ ಶೆಡ್ ನ ಬಾಗಿಲು ಹಾಕಿರುವುದರಿಂದ ಆಮ್ಲಜನಕದ ಕೊರತೆಯಾಗುವುದರಿಂದ ಇಂಗಾಲದ ಡೈಆಕ್ಸೈಡ್ ಬದಲಾಗಿ ಇಂಗಾಲದ ಮಾನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಇದು ರಕ್ತವನ್ನು ವಿಷವಾಗಿಸಿ ನಾಯಕನ ವೈರಿ ಸತ್ತು ಹೋಗುತ್ತಾನೆ.

ಉತ್ತರ ಭಾರತದಲ್ಲಿ ಅತೀವ ಶೀತವಿರುವ ಕಡೆ ಕೋಣೆಯನ್ನು ಬೆಚ್ಚಗಿಡಲು ಕಲ್ಲಿದ್ದಲಿನ ಅಗ್ಗಿಷ್ಟಿಕೆಯನ್ನು ಬಳಸುತ್ತಾರೆ ನಾವು ಒಲೆಯ ಎದುರು ಕುಳಿತು ಚಳಿ ಕಾಯಿಸುತ್ತೇವಲ್ಲ ಹಾಗೆ. ರಾತ್ರಿ ಬಾಗಿಲು ಹಾಕಿ ಎಲ್ಲರೂ ಒಟ್ಟಿಗೆ ಮಲಗುತ್ತಾರೆ. ಇವರೆಲ್ಲರ ಉಸಿರಾಟ ಕಲ್ಲಿದ್ದಲ ಉರಿಯುವಿಕೆ ಗಳಿಗೆ ಆಮ್ಲಜನಕ ಬಳಕೆಯಾಗುತ್ತಲೇ ಹೋಗುತ್ತದೆ. ಬಾಗಿಲು ಹಾಕಿರುವುದರಿಂದ ಹೊಸ ಆಮ್ಲಜನಕದ ಸರಬರಾಜು ಇಲ್ಲದೇ ಇರುವುದರಿಂದ ಇರುವ ಆಮ್ಲಜನಕವನ್ನು ಉರಿಯುವ ಕಲ್ಲಿದ್ದಲು ಬಳಸಿಕೊಂಡು ಇಂಗಾಲದ ಮಾನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಇದನ್ನು ಉಸಿರಾಡುವ ಗಾಢ ನಿದ್ದೆಯಲ್ಲಿರುವವರು ಗಾಢ ನಿದ್ದೆಗೆ ಜಾರುತ್ತಾರೆ. ಒಂದು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದಿರುವುದು ಇದೇ.

ಸ್ನಾನ ಮಾಡಲು ಹೆಚ್ಚಿನವರು ಬಿಸಿ ನೀರನ್ನು ಬಳಸುತ್ತಾರೆ. ಬಿಸಿ ನೀರಿನಲ್ಲಿ ಹೆಚ್ಚು ಶಕ್ತಿ ಇರುವುದರಿಂದ ಅದು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ನೀವು ಎಣ್ಣೆ ಜಿಡ್ಡಿನ ಪಾತ್ರೆಯನ್ನು ತೊಳೆಯಲು ಕೂಡಾ ಬಿಸಿ ನೀರನ್ನು ಬಳಸುತ್ತೀರಲ್ಲಾ ಹಾಗೆ. ಇದಕ್ಕೆ ಗ್ಯಾಸ್ ಗೀಸರ್ ಅನ್ನು ಬಳಸಿದರೆ ತಕ್ಷಣ ಬಿಸಿ ನೀರು ದೊರೆಯತ್ತದೆ. ಸ್ನಾನದ ಕೋಣೆಯಲ್ಲಿ ಅಡುಗೆ ಅನಿಲ ಎಂದರೆ ಬ್ಯುಟೇನ್ ಅನಿಲವನ್ನು ಬಳಸಿ ಉರಿ ಹಚ್ಚಿ ಬಿಸಿ ಬಿಸಿ ನೀರು ಪಡೆಯುತ್ತಾರೆ. ಸರಿಯಾದ ವೆಂಟಿಲೇಶನ್ ಇಲ್ಲದ ಮುಚ್ಚಿದ ಸ್ನಾನದ ಕೋಣೆಯಲ್ಲಿ ದೀರ್ಘಕಾಲದ ವರೆಗೆ ಗೀಸರ್ ಅನ್ನು ಚಾಲೂ ಸ್ಥಿತಿಯಲ್ಲಿರಿಸಿದರೆ ಕಾರ್ಬನ್ ಮಾನಾಕ್ಸೈಡ್ ಉತ್ಪತ್ತಿಯಾಗುವ ಮೂಲಕ ಸಾವು ಸಂಭವಿಸುತ್ತದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಘಟನೆಗೆ ಕಾರಣ ಇದೇ. ಹೀಗೆ ಸ್ನಾನದ ಮನೆಯೂ ಮಸಣದ ಬಾಗಿಲಾಗಬಹುದು. ನೀವು ಗ್ಯಾಸ್ ಗೀಸರ್ ಅನ್ನು ಬಳಸುತ್ತಿದ್ದರೆ ಬಾಗಿಲು ತೆಗೆದಿಟ್ಟು ನಿಮಗೆ ಸ್ನಾನಕ್ಕೆ ಸಾಕಷ್ಟು ನೀರು ಕಾದ ನಂತರವೇ ನೀವು ಸ್ನಾನದ ಮನೆಯನ್ನು ಪ್ರವೇಶಿಸಬೇಕು. ಮತ್ತೆ ನೀರು ಬಿಸಿ ಮಾಡಬೇಕಾದಾಗ‌ ವೆಂಟಿಲೇಟರ್ ಅನ್ನು ತೆರೆದಿಟ್ಟಿರಬೇಕು ಮತ್ತು ಗಾಳಿ ಹೊರಹಾಕುವ ಫ್ಯಾನ್ ಆನ್ ಮಾಡಿರಬೇಕು. ನೀವು ಸ್ನಾನಗೃಹದೊಳಗಿರುವಾಗ ನೀರು ಕಾಯಿಸುವುದನ್ನು ಆದಷ್ಟೂ ಕಡಿಮೆ ಮಾಡಬೇಕು.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************


Ads on article

Advertise in articles 1

advertising articles 2

Advertise under the article