ನಾನು ಓದಿದ ಪುಸ್ತಕ : ಸಂಚಿಕೆ - 07
Thursday, December 11, 2025
Edit
ನಾನು ಓದಿದ ಪುಸ್ತಕ : ಸಂಚಿಕೆ - 07
ಪುಸ್ತಕ : ನಿಗೂಢ ನಾಣ್ಯ
ಓದು ಮತ್ತು ಬರಹ : ಶ್ವೇತಾ ಹೆಗಡೆ, ಸಹಶಿಕ್ಷಕಿ
ಸ. ಹಿ. ಪ್ರಾ. ಶಾಲೆ ದೊಡ್ಡದುನ್ನಸಂದ್ರ,
ಹೊಸಕೋಟೆ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
Mob : +91 94806 02950
ಲೇಖಕರು : ವಿಠಲ್ ಶೆಣೈ
ಜಗತ್ತಿನಲ್ಲಿ ಹಣಕಾಸಿನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಹಣ ಹಾಗೂ ಧನ ಎಂದರೆ ಯಾವುದು? ಬ್ಲಾಕ್ ಚೈನ್, ಕ್ರಿಪ್ಟೋ ಕರೆನ್ಸಿ ಎಂದರೇನು? ವಿಶ್ವದ ಅರ್ಥ ವ್ಯವಸ್ಥೆಯಲ್ಲಿ ಇವು ಹೇಗೆ ಕೆಲಸ ಮಾಡುತ್ತವೆ? ಇವು ಕಾಗದದ ಹಣಕ್ಕಿಂತ ಹೇಗೆ ಭಿನ್ನ? ಬಿಟ್ ಕಾಯಿನ್ ನ ಸ್ವರೂಪ ಏನು, ಅದು ಎಲ್ಲಿ ಹೇಗೆ ಸಂಗ್ರಹವಾಗಿರುತ್ತೆ? ಕಾಗದದ ಹಣಕ್ಕಿಂತ ಅದು ಹೇಗೆ ಸುರಕ್ಷಿತ? ಇತ್ಯಾದಿ ವಿಚಾರಗಳನ್ನು ಸವಿವರವಾಗಿ ತಿಳಿಯಬೇಕೆಂದಿದ್ದರೆ ಖಂಡಿತ ನಿಗೂಢ ನಾಣ್ಯ ಪುಸ್ತಕವನ್ನೊಮ್ಮೆ ಓದಲೇಬೇಕು.
ಪ್ರಪಂಚದಲ್ಲಿ ಮೊದಲಿನಿಂದಲೂ ಹಣಕಾಸಿನ ವ್ಯವಸ್ಥೆ ಹೇಗೆಲ್ಲ ಬೆಳೆಯುತ್ತಾ, ಕಾಲ ಕಾಲಕ್ಕೆ ಮಾರ್ಪಾಡು ಹೊಂದುತ್ತಾ ಬರುವ ಸಂದರ್ಭದಲ್ಲಿ ದುರ್ಬಳಕೆಗೂ ಒಳಗಾಗುತ್ತಾ ಬರುವ ಸನ್ನಿವೇಶಗಳನ್ನು ಲೇಖಕರು ಇಲ್ಲಿ ಉದಾಹರಣೆ ಸಮೇತ ಅರ್ಥೈಸುತ್ತ ವಿವರಿಸುತ್ತಾರೆ. ಅರ್ಥವ್ಯವಸ್ಥೆ ಎನ್ನುವುದು ಅಷ್ಟು ಸುಲಭಕ್ಕೆ ಅರ್ಥವಾಗುವ ಲೆಕ್ಕಾಚಾರವಲ್ಲ. ಲೆಕ್ಕ ತಪ್ಪಿದರೆ ದಿವಾಳಿಯೇ! ಅಂತಹ ವಿಚಾರವನ್ನು ಓದುಗರಿಗೆ ಅರ್ಥವಾಗುವಂತೆ ವಿವರಿಸುತ್ತ, ಈಗ ತಾನೇ ಜಗದ ಕೂಸುಮರಿಯಾಗಿರುವ ಕ್ರಿಪ್ಟೋಕರೆನ್ಸಿ, ಬಿಟ್ ಕಾಯಿನ್, ಬ್ಲಾಕ್ ಚೈನ್ ನಂತಹ ವಿಚಾರವನ್ನು ಜಟಿಲವೆನಿಸದ ರೀತಿಯಲ್ಲಿ ಕಾದಂಬರಿಯ ರೂಪದಲ್ಲಿ ನೀಡಿರುವುದು ಶ್ಲಾಘನೀಯ.
ಈ ಕಾದಂಬರಿಯಲ್ಲಿ ವಿವೇಕ್, ಅವನ ತಾಯಿ ಗಿರಿಜಾ, ಸೂರಜ್ ರೆಡ್ಡಿ, ಅವನ ಮಗ, ಉಮಾ ಮೆಹೆಂದಳೆ, ರಾಮೇ ಗೌಡ, ಪಟ್ಟಸ್ವಾಮಿ, ಗೋವಿಂದ್, ಪ್ರೇಮ್, ಪೃಥ್ವಿ, ಗೌರಿಶಂಕರ ಹಾಗೂ ಅನ್ವರ್ ಎಂಬ ವ್ಯಕ್ತಿ.. ಎಂಬಿತ್ಯಾದಿ.. ಇಷ್ಟೇ ಪಾತ್ರಗಳು. ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ, ಬ್ಲಾಕ್ ಚೈನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವೇಕ್ ನ ಪಾತ್ರದ ಮೂಲಕ ಲೇಖಕರು ವಿವರಿಸುತ್ತಾರೆ.
ವಿವೇಕ್ ಬಿಟ್ ಕಾಯಿನ್ ಎ. ಟಿ. ಎಂ. ಒಂದನ್ನು ತುಳಸಿ ಮಾಲ್ ನಲ್ಲಿ ತೆರೆಯುತ್ತಾನೆ. ಬಿಟ್ ಕಾಯಿನ್ ಮಾನ್ಯವಲ್ಲ ಎಂಬ ಕಾರಣವೊಡ್ಡಿ ಅವನನ್ನು ಅರೆಸ್ಟ್ ಮಾಡಲಾಗುತ್ತದೆ. ಕೋರ್ಟ್ ನಲ್ಲಿ ವಿವೇಕ್ ಬಿಟ್ ಕಾಯಿನ್ ಬಗ್ಗೆ ತನ್ನ ವಾದ ಮಂಡಿಸುತ್ತಾನೆ. ಐ. ಟಿ. ಡಿಪಾರ್ಟ್ಮೆಂಟ್ ಇಂಟಲಿಜೆನ್ಸ್ ವಿಂಗ್ ಸೀನಿಯರ್ ಆಫೀಸರ್ ಉಮಾ ಮೆಹೆಂದಳೆ ಸೂರಜ್ ರೆಡ್ಡಿಯ ಮನೆಯನ್ನು ಕಪ್ಪು ಹಣಕ್ಕಾಗಿ ಹುಡುಕಾಡುತ್ತಾಳೆ. ಸೂರಜ್ ರೆಡ್ಡಿಯ ಮಗನ ಚೀಲದಲ್ಲಿ ನಿ. ನಾ. ಎಂದು ಬರೆದ ಹಾಳೆಯನ್ನು ಗಮನಿಸುತ್ತಾಳೆ. ಅದರಲ್ಲಿರುವ ಅರ್ಥವಾಗದ ಸಂಖ್ಯೆ ಮತ್ತು ಅಕ್ಷರಗಳ ಜಾಡು ಹಿಡಿದು ಹೊರಡುತ್ತಾಳೆ. ವಿವೇಕ್ ಕ್ರಿಪ್ಟೋ ಕರೆನ್ಸಿ ಮತ್ತು ಬ್ಲಾಕ್ ಚೈನ್, ಬಿಟ್ ಕಾಯಿನ್ ಗಳ ಬಗ್ಗೆ ಪ್ರೇಮ್ ಮತ್ತು ಉಮಾರಿಗೆ ವಿಸ್ತೃತವಾಗಿ ತಿಳಿಸುತ್ತಾನೆ. ಜಟಿಲವಾದ ಬಿಟ್ ಕಾಯಿನ್ ಬಗ್ಗೆ ಅರ್ಥೈಸುವಾಗ ಅನೇಕ ಉದಾಹರಣೆಗಳನ್ನು ನೀಡುತ್ತಾ ಹೋಗುತ್ತಾನೆ. "ನಿಮ್ಮ ಕಂಪನಿಯ ವಾಲೆಟ್ ಗಳು ಈ ಸ್ಕ್ಯಾಮ್ ನಲ್ಲಿ ಶಾಮೀಲಾಗಿವೆ... ಇದರಿಂದ ನಿಮ್ಗೆ ತೊಂದರೆ ಅಲ್ವಾ? ಆಗಲೇ ಒಂದು ಆರೋಪ ಇದೆ ನಿಮ್ಮೇಲೆ!" ಎಂದು ಉಮಾ ಹೇಳಿದಾಗ, "ಅದು ಹೇಗೆ? ನಾವು ಮಾರುವುದು ಕೇವಲ ವಾಲೆಟ್! ಅದರ ಒಳಗಿರುವ ದುಡ್ಡು ನಮಗೆ ಸಂಬಂಧ ಇಲ್ಲ. ಪ್ಯಾನ್ಸಿ ಸ್ಟೋರ್ ನಿಂದ ಯಾರೋ ಪರ್ಸ್ ಕೊಂಡರು, ನಂತರ ಅದರಲ್ಲಿ ಕಳ್ಳತನ ಮಾಡಿದ ದುಡ್ಡು ಹಾಕಿದರು. ಆಗ ಆ ಪ್ಯಾನ್ಸಿ ಸ್ಟೋರ್ ನವರನ್ನು ಬಂಧಿಸುತ್ತಾರಾ?" ಎನ್ನುತ್ತಾನೆ ವಿವೇಕ್. ಹೀಗೆ ನಿದರ್ಶನಗಳ ಮೂಲಕ ಬಿಟ್ ಕಾಯಿನ್ ಕುರಿತಾದ ಪ್ರತೀ ಅಂಶವನ್ನೂ ವಿವರಿಸುತ್ತಾನೆ.
ಸೂರಜ್ ರೆಡ್ಡಿಯ ಕೇಸ್ ಬಗೆಹರಿಸುವಲ್ಲಿ ವಿವೇಕ್ ನ ಪಾತ್ರ ಏನು? ಸೂರಜ್ ತನ್ನ ಮೇಲೆ ಬಂದ ಆರೋಪದಿಂದ ಹೇಗೆ ಮುಕ್ತವಾಗುತ್ತಾನೆ?ಬ್ಲಾಕ್ ಚೈನ್ ಎಂದರೇನು? ಬಿಟ್ ಕಾಯಿನ್ ತಂತ್ರಜ್ಞಾನ ಹೇಗೆ ವಿಕೇಂದ್ರೀಕೃತವಾಗಿದೆ? ಕೊನೆ ಕ್ಷಣದಲ್ಲಿ 200 ಕೋಟಿ ಮೌಲ್ಯದ ಬಿಟ್ ಕಾಯಿನ್ ಎಲ್ಲಿಗೆ ಸೇರಿತು ಎಂಬಿತ್ಯಾದಿ ಕುತೂಹಲಕಾರಿ ಅಂಶಗಳನ್ನು, ರೋಚಕ ತಿರುವುಗಳನ್ನು ಕಾದಂಬರಿ ಓದಿ ತಿಳಿಯುವ ಮಜವೇ ಬೇರೆ.
ಒಮ್ಮೆ ಒಬ್ಬರು ಹಣವನ್ನು ದ್ವಿಗುಣ ಮಾಡಿಕೊಳ್ಳುವ ಹಾಗೂ ಬೇಗ ಹಣ ಗಳಿಸುವ ಬಗ್ಗೆ ತಿಳಿಸುತ್ತೇನೆ ಎಂದು ಈ ಕ್ರಿಪ್ಟೋ ಕರೆನ್ಸಿ ಬಗ್ಗೆ ತಿಳಿಸಿದ್ದರು. ಅದೇಕೋ ನನಗೆ ಅದು ತಲೆಗೆ ಹೋಗದೆ ಸ್ಕ್ಯಾಮ್ ಅನಿಸಿತ್ತು. ನಾನು ಕ್ರಿಪ್ಟೋ ಕರೆನ್ಸಿ ಹಾಗೂ ಬಿಟ್ ಕಾಯಿನ್ ಬಗ್ಗೆ ಪತ್ರಿಕೆಯೊಂದರಲ್ಲಿ ಓದಿದ್ದೆ. ಆಗಲೂ ಅದು ಅರ್ಥವಾಗಿರಲಿಲ್ಲವಾದರೂ ಅಮಾನ್ಯವಲ್ಲ ಎಂದೆನಿಸಿತ್ತು. ಆದರೆ ನಿಗೂಢ ನಾಣ್ಯ ಪುಸ್ತಕ ಓದಿದ ಮೇಲೆ ಬದಲಾಗುತ್ತಿರುವ ಅರ್ಥ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನಕ್ಕೆ ಇಳಿದಿದ್ದೇನೆ. ಪ್ರಸ್ತುತದ ಅರ್ಥ ವ್ಯವಸ್ಥೆಯಲ್ಲಾಗುತ್ತಿರುವ ಆಮೂಲಾಗ್ರ ಬದಲಾವಣೆಗೆ ಕಥಾ ವಸ್ತುವನ್ನು ಸೃಷ್ಟಿಸಿ ಪಾತ್ರಗಳನ್ನು ಹೆಣೆದು ಆ ಮೂಲಕ ಓದುಗರಿಗೆ ಮುಟ್ಟಿಸುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಇಂತಹ ಅಮೂಲ್ಯ ಹಾಗೂ ಅಪರೂಪದ ಕಥಾವಸ್ತುವನ್ನು ಕನ್ನಡಿಗರ ಕೈಗಿತ್ತಿದ್ದು ಗಣನೀಯ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಾದಂಬರಿ ರೂಪದಲ್ಲಿ ಸರಳವಾಗಿ ತಿಳಿಸಿಕೊಟ್ಟ ಲೇಖಕರಾದ ಶ್ರೀ ವಿಠಲ್ ಶೆಣೈ ಅವರಿಗೆ ಶುಭವಾಗಲಿ...
ಸಹಶಿಕ್ಷಕಿ
ಸ. ಹಿ. ಪ್ರಾ. ಶಾಲೆ ದೊಡ್ಡದುನ್ನಸಂದ್ರ,
ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ
Mob : +91 94806 02950
******************************************