ಪಯಣ : ಸಂಚಿಕೆ - 72 (ಬನ್ನಿ ಪ್ರವಾಸ ಹೋಗೋಣ)
Thursday, December 4, 2025
Edit
ಪಯಣ : ಸಂಚಿಕೆ - 72 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ "ಸೀತಾಮಡು ಮತ್ತು ಧನುಷ್‌ಕೋಟಿ" ಗೆ ಪಯಣ ಮಾಡೋಣ.
ಚುಂಚನಕಟ್ಟೆಯ 'ಧನುಷ್ ಕೋಟಿ' ಯಲ್ಲಿ ಬೀಳುವ ಝರಿಯನ್ನು ಹತ್ತಿರದಿಂದ ನೋಡಲು ಹೋಗುವ ಪ್ರವಾಸಿಗರಿಗೆ ಕಾವೇರಿ ಮಾತೆ ತುಂತುರ ಹನಿಗಳನ್ನು ಸಿಂಪಡಿಸುತ್ತಾಳೆ. ಅದಕ್ಕಾಗಿಯೇ ನವದಂಪತಿಗಳ ದಂಡು ಗಂಟೆಗಳ ಕಾಲ ಇಲ್ಲೇ ನಿಂತು ಇದನ್ನು ಸವಿಯುತ್ತಾರೆ. ಶ್ರೀರಾಮಚಂದ್ರ ತನ್ನ ಪತ್ನಿ ಸೀತಾಮಾತೆಯ ಜತೆ ವನವಾಸ ಮಾಡಿದ ದಿನಗಳಲ್ಲಿ ಚುಂಚನಕಟ್ಟೆಯಲ್ಲೂ ವಾಸ್ತವ್ಯ ಮಾಡಿದ ಎನ್ನಲಾಗುತ್ತದೆ. ಅಂದಿನ ಕಾಲದಲ್ಲಿ ಚುಂಚನಕಟ್ಟೆ 'ಚುಂಚ' ಎಂಬ ಪಾಳೇಗಾರನ ಆಡಳಿತದಲ್ಲಿ ಇತ್ತು. ಇಲ್ಲಿಗೆ ಬಂದ ಕೋದಂಡರಾಮ ಸ್ವಲ್ಪ ದಿನಗಳ ತನಕ ಇಲ್ಲೇ ವಾಸ್ತವ್ಯ ಮಾಡಲು ಅನುಮತಿ ಕೇಳಿ ಪಡೆದುಕೊಂಡು ವನವಾಸ ಮಾಡಿದ ಎಂಬ ಪ್ರತೀತಿ ಇದೆ.
ಚುಂಚನಕಟ್ಟೆಯಲ್ಲಿ ವನವಾಸ ಮಾಡಿದ ದಿನಗಳಲ್ಲಿ ರಾಮ, ಸೀತಾಮಾತೆ, ಮತ್ತು ಲಕ್ಷ್ಮಣನಿಗೆ 'ಹನುಮಂತ' ಸಿಕ್ಕಿರಲಿಲ್ಲ ಎಂಬುದು ಇಲ್ಲಿಯ ಕೋದಂಡರಾಮ ದೇವಾಲಯವನ್ನು ನೋಡಿದವರಿಗೆ ತಿಳಿಯುತ್ತದೆ. ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಇರುವ 'ಧನುಷ್ ಕೋಟಿ' ಯಲ್ಲಿ ಸೀತಾಮಾತೆ ಸ್ನಾನ ಮಾಡುವ ಸಮಯದಲ್ಲಿ ಮೈದುನ ಲಕ್ಷ್ಮಣ ಆಕಸ್ಮಿಕವಾಗಿ ಅತ್ತ ಬರುವುದನ್ನು ಕಂಡ ಸೀತಾಮಾತೆ ಕಲ್ಲು ಬಂಡೆಯನ್ನೇ ಸೀಳಿಕೊಂಡು ಹೋಗಿರುವುದಾಗಿ ಉಲ್ಲೇಖವಿರುವ ಸ್ಥಳವನ್ನು 'ಸೀತಾಮಡು' ಎಂದು ಕರೆಯುತ್ತಾರೆ. ಇಲ್ಲಿ ಸದಾ ಕಾಲ 'ಝರಿ' ಬೀಳುತ್ತಿರುತ್ತದೆ.
ಮುಂಗಾರಿನ ಸಮಯದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ದಿನಗಳಲ್ಲಿ 'ಧನುಷ್ಕೋಟಿ' ಯಲ್ಲಿ 27 ಮೀಟರ್‌ಗೂ ಅಧಿಕ ಎತ್ತರದಿಂದ ಧುಮುಕುವ ಕಾವೇರಿಯ ಆರ್ಭಟ ಸುಮಾರು ಆರು ಕಿಲೋಮೀಟರ್ ದೂರದ ತನಕ ಕೇಳಿಸುತ್ತದೆ. ಆದರೆ ಅನತಿ ದೂರದಲ್ಲೇ ಇರುವ ಕೋದಂಡರಾಮನ 'ಗರ್ಭಗುಡಿ' ಗೆ ಹೋದರೆ ಕಾವೇರಿಯ ಆರ್ಭಟದ ಶಬ್ದ ಕಿವಿಗೆ ಬೀಳುವುದಿಲ್ಲ!
ವಿಜಯನಗರ ಅರಸರ ಶೈಲಿಯಲ್ಲಿ ನಿರ್ಮಿಸಲಾಗಿರುವ ಕೋದಂಡ ರಾಮನ ದೇವಾಲಯದ ಧಾರ್ಮಿಕಾಸಕ್ತರಿಗೆ ನೆಮ್ಮದಿಯ ತಾಣವಾಗಿದ್ದು, ದೇವಾಲಯದ ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣರೊಂದಿಗೆ ಹನುಮಂತ ಇಲ್ಲದಿದ್ದರೂ ಹೊರಗಡೆ ಮಾತ್ರ ಪ್ರವಾಸಿಗರ ಕೈಚೀಲಕ್ಕೆ ಬಾಯಿಹಾಕಲು ಹನುಮಂತ ಹಾತೊರೆಯುತ್ತಿರುತ್ತಾನೆ.
ಚುಂಚನಕಟ್ಟೆಗೆ ಬರುವ ಮೊದಲು ಕಪ್ಪಡಿ ರಾಜಪ್ಪಾಜಿ ಕ್ಷೇತ್ರ, ಶ್ರೀರಾಮನಿಂದಲೇ ಪ್ರತಿಷ್ಠಾಪನೆಯಾಗಿರುವ ರಾಮಲಿಂಗೇಶ್ವರ ದೇವಾಲಯ. ಗ್ರಾಫೈಟ್ ಆಫ್ ಇಂಡಿಯಾದ ವಿದ್ಯುತ್ ಉತ್ಪಾದನಾ ಕೇಂದ್ರ, ಹನಸೋಗೆಯ ತ್ರಿಕೂಟ ಬಸದಿ, ಸಾಲಿಗ್ರಾಮದ ಜೈನರ ಪಂಚ ಬಸದಿ, ಪುರಾಣ ಪ್ರಸಿದ್ಧ ಭಾಸ್ಕರಸ್ವಾಮಿ ದೇವಾಲಯ, ಶಂಕರಾಚಾರ್ಯರು ವಾಸ್ತವ್ಯ ಮಾಡಿದ ಯೋಗನರಸಿಂಹ ದೇವಾಲಯ, ದೇವಿತಂದ್ರೆ ಗ್ರಾಮದ ಶಕ್ತಿ ದೇವತೆ ದೇವಿರಮ್ಮನ ದರ್ಶನ, ಹೆಬ್ಬರು ಗ್ರಾಮದಲ್ಲಿ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ದಾರವಾಗುತ್ತಿರುವ 'ಜಪದಕಟ್ಟೆಯ' ಶಿವನ ದರ್ಶನ ಮಾಡಬಹುದು.
'ಕರ್ನಾಟಕದ ಜೀವನದಿ ಕಾವೇರಿಯ ಕಲರವ - ರಾಮಾಯಣದ ಕುರುಹು - ಮನ ತಣಿಸುವ ಸೀತಾಮಡು ಮತ್ತು ಧನುಷ್‌ಕೋಟಿ' ಗೆ
ಬನ್ನಿ ಒಮ್ಮೆ ಪ್ರವಾಸಕ್ಕೆ
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************