-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 196

ಸ್ಫೂರ್ತಿಯ ಮಾತುಗಳು : ಸಂಚಿಕೆ - 196

ಸ್ಫೂರ್ತಿಯ ಮಾತುಗಳು : ಸಂಚಿಕೆ - 196
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                   

ಮನುಷ್ಯನಲ್ಲಿ ಸ್ಮರಣ ಶಕ್ತಿಯಿರಲಿ ಅಥವಾ ಇಲ್ಲದಿರಲಿ, ಅವನು ಎರಡು ಕಾರ್ಯಗಳನ್ನು ಮಾತ್ರ ಆಜೀವ ಪರ್ಯಂತ ನೆನಪಿನಲ್ಲಿರಿಸಿಕೊಳ್ಳುತ್ತಾನೆ. ಅವು ಯಾವುವು ಎಂದರೆ ತನ್ನ ಮನಸ್ಸಿಗೆ ಇತರರು ಮಾಡಿದ “ಗಾಯ” ಮತ್ತು ಅಗತ್ಯಕಾಲದಲ್ಲಿ ತನಗೆ ಬೇರೆಯವರು ಮಾಡಿದ “ಸಹಾಯ”.

ಗಾಯವೆನ್ನುವುದು ಋಣಾತ್ಮಕ ಭಾವವಾದರೆ ಸಹಾಯವು ಧನಾತ್ಮಕ ಭಾವ. ದೊಣ್ಣೆಯಿಂದ ಬಡಿದ, ಇರಿತದಿಂದಾದ ಗಾಯವನ್ನಾದರೂ ಮರೆಯುತ್ತಾರೆ. ಆದರೆ ಮನಸ್ಸಿಗಾಗಿರುವ ಅಪಮಾನದ ಮತ್ತು ಹಂಗಿಸಿ ಹೇಳಿದ ನೋವಿನ ಮಾತುಗಳ ಗಾಯದ ನೋವು, ನೋವನ್ನುಂಟುಮಾಡುವ ದುರುದ್ದೇಶದಿಂದಲೇ ಹೇಳಿದ ಅಸಹ್ಯ ಮಾತುಗಳ ಗಾಯದ ವೇದನೆ ಮನಸ್ಸಿನೊಳಗೆ ಸ್ಥಿರವಾಗಿ ಉಳಿಯುತ್ತದೆ.
ಜನರಲ್ಲಿ ಕೃತಜ್ಞತೆಯ ಭಾವನೆ ಬತ್ತುತ್ತಿದೆ ಎಂಬ ಆರೋಪಗಳಿವೆ. ಈ ಆರೋಪಕ್ಕೆ ನಾವು ಅನುಭವದಿಂದ ಅಪವಾದಗಳನ್ನು ಕಾಣುತ್ತೇವೆ. ತನಗೆ ಅಗತ್ಯಕಾಲದಲ್ಲಿ ಮಾಡಿರುವ ಸಹಾಯವನ್ನು ಯಾರೂ ಮರೆಯುವುದಿಲ್ಲ. ಮರೆತರೆ ಕೃತಘ್ನತೆ ತೋರಿದ ಪಾಪಿಯೆಂದು ಪರಿಗಣಿಸುವುದು ಸೂಕ್ತ. 

ಸಹಾಯ ಹೇಗಿರಬೇಕು? ಅದರ ಗಾತ್ರ ಎಷ್ಟು? … ಮುಂತಾಗಿ ನಮಗೆ ಸಂದೇಹವಿರುತ್ತದೆ.
ಸಹಾಯದ ಪ್ರಮಾಣ, ಸ್ವಭಾವ, ಸನ್ನಿವೇಷಗಳು ಸ್ಮರಣೆಗೆ ಮುಖ್ಯವಾಗುತ್ತವೆಯೇ ಹೊರತು ದೊಡ್ಡ ಮೊತ್ತ ನೀಡಿದ, ಉಚಿತವಾಗಿ ಜಮೀನು ಕೊಟ್ಟಿರುವ, ಅಗತ್ಯವುಳ್ಳವರಿಗೆ ಮನೆಕಟ್ಟಿ ನೀಡುವ ಸಹಾಯ… ಇಂತಹ ಸಹಾಯಗಳೇ ಆಗಿರಬೇಕೆಂದಿಲ್ಲ. ನನ್ನ ಒಂದೆರಡು ಅನುಭವಗಳು ಹೀಗಿವೆ....

ಆಗ ನನಗೆ ವಯಸ್ಸು ಇಪ್ಪತ್ತೆರಡು. ಅಧ್ಯಾಪಕನಾಗಿ ಸೇವೆಗೆ ಸೇರಿದ ಹೊಸ ಅನುಭವಿ. ಒಂದನೇ ತರಗತಿಯ ಭಾಷಾ ಪಠ್ಯ ರಚನೆಗೆ ಬೆಂಗಳೂರಿಗೆ ನನ್ನನ್ನು ನಿಯೋಜಿಸಿದ್ದರು. ನನಗೆ ಬೆಂಗಳೂರು ಹೊಸತು. ಕೋಲಾರದ ಒಬ್ಬ ಅಧ್ಯಾಪಕರು, ನನಗಿಂತ ಬಹಳ ಹಿರಿಯರು ಮತ್ತು ಅನುಭವಿ - ಅವರೂ ತರಬೇತಿಯಲ್ಲಿ ನನಗೆ ಜೊತೆಯಾದರು. ಅವರದು ನನಗೆ ಹೊಸ ಪರಿಚಯ. ತರಬೇತಿ ಮುಗಿಸಿ ಬೆಂಗಳೂರಿನಿಂದ ಮರಳಲು ನಾನು ರಾಜ್ಯ ಸಾರಿಗೆ ನಿಗಮದ ಬಸ್‌ ನಿಲ್ದಾಣಕ್ಕೆ ಹೋದೆ. ಆಗ ಇಂದಿನಂತೆ ಆನ್‌ಲೈನ್‌ ಬುಕ್ಕಿಂಗ್‌ ಇರಲಿಲ್ಲ. ಬಸ್‌ ಬುಕ್ಕಿಂಗ್‌ ಕೌಂಟರಿಗೆ ಹೋದೆ. ಕೋಲಾರದ ಆ ಹೊಸ ಸ್ನೇಹಿತರೂ ನನ್ನೊಡನಿದ್ದರು. ಆದರೆ ಮಂಗಳೂರು ಬಸ್‌ಗಳಲ್ಲಿ ಆ ದಿನ ಯಾವುದೇ ಸೀಟುಗಳಿರಲಿಲ್ಲ. ಇನ್ನೇನು ರಾತ್ರಿಯಿಡೀ ಬಸ್‌ ನಿಲ್ದಾಣದಲ್ಲಿ ಸೊಳ್ಳೆಗಳಿಂದ ಕಚ್ಚಿಸಿ ಶಿಕ್ಷೆಗೊಳಗಾಗುವುದೇ ಗತಿಯೆಂದು ಚಿಂತಿಸತೊಡಗಿದೆ.

ಕೋಲಾರದವರಿಗೆ ನನಗಾದ ಸಮಸ್ಯೆ ಎದುರಾಗಿರಲಿಲ್ಲ. ಅವರಿಗೆ ಕೋಲಾರಕ್ಕೆ ಹೋಗುವ ಬಸ್‌ಗಳಲ್ಲಿ ಸಾಕಷ್ಟು ಸೀಟ್‌ಗಳ ಅವಕಾಶವಿತ್ತು. ಅವರು ನನ್ನ ಅಸಹಾಯಕತೆಗೆ ನೆರವಾಗಲು ಮುಂದೆ ಬಂದರು. ಆಗ ರಾಜ್ಯ ಸಾರಿಗೆ ನಿಗಮದ ನಿಲ್ದಾಣದಲ್ಲಿ ಶಾಸಕರಿಗೆ ಟಿಕೇಟ್‌ ಬುಕಿಂಗ್‌ ಮಾಡುವ ಪ್ರತ್ಯೇಕ ವ್ಯವಸ್ಥೆಯಿತ್ತು.. ಕೋಲಾರದ ನನ್ನ ಆ ಹೊಸ ಮಿತ್ರ ಕೂಡಲೇ ಅವರ ಪರಿಚಿತ ಶಾಸಕರಿಗೆ ಫೋನಾಯಿಸಿದರು. ಅದು ಮೊಬೈಲ್‌ ಯುಗವಲ್ಲ. ಶಾಸಕರು ಫೋನ್‌ ತೆಗೆಯಲಿಲ್ಲ. ಹಲವಾರು ಪ್ರಯತ್ನಗಳನ್ನು ಮಾಡಿದರೂ ಅವರು ಫೋನ್‌ ತೆಗೆಯಲೇ ಇಲ್ಲ. ಕೊನೆಯ ಪ್ರಯತ್ನವೆಂದು ಶಾಸಕರಿಗೆ ಕರೆ ಮಾಡಿದರೆ ಶಾಸಕರ ಹೆಂಡತಿ ಫೋನ್‌ ಸ್ವೀಕರಿದರು. “ಶಾಕರಿಲ್ಲ, ಕಾರ್ಯಕ್ರಮಕ್ಕೆ ಹೋಗಿದ್ದಾರೆ, ಬರುವಾಗ ರಾತ್ರಿ ತಡವಾಗುತ್ತದೆ. ಅವರಿರುವ ಊರಿನ ಯಾರ ಸಂಪರ್ಕ ಸಂಖ್ಯೆಯೂ ನನ್ನಲ್ಲಿಲ್ಲ” ಎಂದು ಆಕೆ ಹೇಳಿ ಫೋನ್‌ ಕೇಳಗಿಡುವುದರ ಮೊದಲು ಶಾಸಕರ ಆಪ್ತ ಸಹಾಯಕರ ಕಛೇರಿಯ ಸಂಖ್ಯೆ ನೀಡಿದರು.
ನನ್ನ ಸನ್ಮಿತ್ರರು ಶಾಸಕರ ಪಿ.ಎ. ಜೊತೆ ಮಾತನಾಡಿದರು. ಅವರು ತಕ್ಷಣ ನಿಗಮದಲ್ಲಿ ಶಾಸಕರಿಗೆ ಮೀಸಲಾಗಿರುವ ಸೀಟು ಹಂಚಿಕೆ ಕೌಂಟರಿಗೆ ಫೋನಾಯಿಸಿದರು. ಬೆಂಗಳೂರಿನಿಂದ ಮಂಗಳೂರಿಗೆ ಬರುವ ಬಸ್‌ಗಳಲ್ಲಿ ಖಾಲಿಯಿರುವ ಒಂದು ಶಾಸಕರ ಸೀಟು ನನಗೆ ದೊರೆಯಿತು. ಈ ಸಹಾಯವು ಈಗ 69 ವಯೋಮಾನದವನಾಗಿರುವ ನನಗೆ ಮರೆಯಲಾಗುತ್ತಿಲ್ಲ. ಇದು ಆ ಕಾಲದಲ್ಲಿ ನಾನು ಪಡೆದ ಸಹಾಯದ ಸ್ಮರಣೆ.

ಇತ್ತೀಚೆಗಿನ ಒಂದು ಘಟನೆಯು ಹೀಗಿದೆ. ನಾನು ಕಲ್ಲಡ್ಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಹಿತ್ಯ ತರಬೇತಿ ನೀಡಿ ವಿಟ್ಲಕ್ಕೆ ಮರಳಿ ಬರಲು ಖಾಸಗಿ ಬಸ್‌ ಏರಿದೆ. ನೂಕು ನುಗ್ಗಲು. ಶರಾಬು ಕುಡಿದವರಂತೆ ಅತ್ತಿಂದಿತ್ತ ಓಲಾಡುತ್ತ ಇದ್ದೆ. ನಿಲ್ಲಲೂ ಕಷ್ಟವಾದ ಸಂದರ್ಭ. ಒಂದು ಸೀಟಿನಿಂದ ವಿದ್ಯಾರ್ಥಿನಿಯರಿಬ್ಬರು ಎದ್ದರು. ಬನ್ನಿ ಕುಳಿತುಕೊಳ್ಳಿ ಎಂದು ನನ್ನನ್ನು ಮತ್ತು ನನ್ನ ಜೊತೆಗಿದ್ದ ಭಾಸ್ಕರ ಅಡ್ವಳರನ್ನು ಕರೆದರು. ನಾವು ಆರಾಮವಾದೆವು. ಆ ವಿದ್ಯಾರ್ಥಿನಿಯರು ಇಂದಿಗೂ ಕಣ್ಣ ಮುಂದೆ ಕಾಣಿಸುತ್ತಾರೆ. ಅವರ ಸಹಾಯ ಮರೆಯುವಂತಹುದಲ್ಲ.

ಸಹಾಯವು ಯಾವಾಗ ಮಿಗಿಲಾಗುತ್ತದೆಂಬುದರ ಅರಿವು ನೀಡಲು ಈ ಘಟನೆಗಳನ್ನು ಹೇಳಿದ್ದೇನೆ. ಇಂತಹ ಹಲವಾರು ಸಂದರ್ಭಗಳು ಪ್ರತೀ ದಿನ ನಮಗೊದಗುತ್ತಿರುತ್ತವೆ. ಅವರಿಗೆ ಒಮ್ಮೆ ಥ್ಯಾಂಕ್ಸ್‌ ಅಂತ ಹೇಳಿದ ಮೇಲೆ ಅದು ಸದಾ ನೆನಪಿನಲ್ಲಿಯೂ ಉಳಿಯುತ್ತದೆ. ಹಸಿದು ನಿತ್ರಾಣಗೊಂಡವನಿಗೆ ಅರ್ಧ ರೊಟ್ಟಿಯೂ ದೊಡ್ಡ ಸಹಾಯ. ಬದಕುಕಿನಲ್ಲಿ ರೋಸಿ ಆತ್ಮಹತ್ಯೆಗೆ ಹೊರಟವನಿಗೆ ಅಥವಾ ಹೊರಟವಳಿಗೆ ಬದುಕು ಮುಂದುವರಿಯುವಂತೆ ನೆರವಿನ ಭರವಸೆಯೂ ಸಹಾಯವೇ ಆಗುತ್ತದೆ. ಮುಖ ಪರಿಚಯವೇ ಇರದ ವ್ಯಕ್ತಿ ಅವರ ಸಮಸ್ಯೆಗಳನ್ನು ನಮ್ಮ ಮುಂದೆ ಮೊಬೈಲಿನಲ್ಲಿ ಬಿಚ್ಚಿಟ್ಟಾಗ “ರಾಂಗ್‌ ನಂಬರ್”‌ ಎನ್ನದೆ ಅವರೊಡನೆ ಸ್ಪಂದಿಸುವುದು, ಸಹಕರಿಸುವುದು, ಅಥವಾ ಸಹಕರಿಸಬಹುದಾದವರನ್ನು ತೋರಿಸಿ ಕೊಡುವುದೂ ಸಹಾಯವೇ ಆಗುತ್ತದೆ.
ಜೀವನದಲ್ಲಿ ನಮ್ಮದು “ಗಾಯ” ಮಾಡುವ ಹಸ್ತಗಳಾಗದೆ “ಸಹಾಯ” ಮಾಡುವ ಹಸ್ತಗಳಾಗಿ ಖ್ಯಾತವಾಗಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************


Ads on article

Advertise in articles 1

advertising articles 2

Advertise under the article