ಪಯಣ : ಸಂಚಿಕೆ - 70 (ಬನ್ನಿ ಪ್ರವಾಸ ಹೋಗೋಣ)
Friday, November 21, 2025
Edit
ಪಯಣ : ಸಂಚಿಕೆ - 70 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟ" ಕ್ಕೆ ಪಯಣ ಮಾಡೋಣ.
ಸಮುದ್ರ ಮಟ್ಟಕ್ಕಿಂತ 1057 ಮೀಟರ್ ಎತ್ತರವಿರುವ ಚಾಮುಂಡಿ ಬೆಟ್ಟ ಮೈಸೂರು ನಗರದ ಹೆಗ್ಗುರುತು. ಮೈಸೂರು ನಗರಕ್ಕೆ ಯಾವುದೇ ದಿಕ್ಕಿನಿಂದ ಬಂದರೂ, ಇನ್ನೂ 20 - 30 ಕಿ.ಮೀ. ದೂರವಿರುವ ಮೊದಲೇ ಮಲಗಿದ ಆಮೆಯಂತೆ ಕಾಣುವ ಬೆಟ್ಟ ನಗರ ಹತ್ತಿರವಾಗುತ್ತಿರುವ ಸೂಚನೆ ನೀಡುತ್ತದೆ.
ನಾವೀಗ ನೋಡಲು ಹೊರಟಿರುವುದು ನಗರ ಪ್ರದಕ್ಷಿಣೆಗಲ್ಲ, ಆಧುನಿಕ ಇತಿಹಾಸ ಮೀರಿದ ಚಾಮುಂಡಿ ಬೆಟ್ಟದ ಐಸಿರಿಯನ್ನು ಸವಿಯಲು. ಹೀಗೆಂದ ಮಾತ್ರಕ್ಕೆ ನಗರದ ಪುರಾನತೆ ಕಡಿಮೆ ಏನಿಲ್ಲ.
ಉತ್ಪನನದಿಂದ ದೊರೆತ ಸಾಕ್ಷಾಧಾರಗಳಿಂದ ಡಾ. ಬಿ.ಕೆ. ಗುರುರಾಜ್‌ರವರು ಇಂದಿನ ಮೈಸೂರಿನ ತೊಣಚಿ ಕೊಪ್ಪಲಿನಲ್ಲಿ ಹಳೆಯ ಶಿಲಾಯುಗದಲ್ಲಿ ಆದಿ ಮಾನವರಿದ್ದ ಐತಿಹ್ಯವನ್ನು ದಾಖಲಿಸಿದ್ದಾರೆ. ಇದಕ್ಕಿಂತಲೂ ಪುರಾತನವಾದದ್ದು, ಚಾಮುಂಡಿ ಬೆಟ್ಟ. 80 ಕೋಟಿ ವರ್ಷಗಳ ಹಿಂದೆ ಹೊಸ ಜ್ವಾಲಾಮುಖಿಯಿಂದಾದ ಅಗ್ನಿ ಶಿಲೆಯಿಂದ ರೂಪುಗೊಂಡ ಬೆಟ್ಟವಿದು.
ಇಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವೆಂದರೆ ನವರಾತ್ರಿ. ಮೈಸೂರು ದಸರಾವನ್ನು ಕರ್ನಾಟಕದ ರಾಜ್ಯದಲ್ಲಿ ನಾಡ ಹಬ್ಬ ಎಂದು ಆಚರಿಸಲಾಗುತ್ತದೆ, ನವರಾತ್ರಿಯ ಸಮಯದಲ್ಲಿ, ನವದುರ್ಗೆಯರು ಎಂದು ಕರೆಯಲ್ಪಡುವ ದೇವಿಯ ಒಂಬತ್ತು ವಿಭಿನ್ನ ಅಂಶಗಳನ್ನು ಚಿತ್ರಿಸಲು ವಿಗ್ರಹವನ್ನು ೯ ವಿಧಗಳಲ್ಲಿ ಅಲಂಕರಿಸಲಾಗುತ್ತದೆ. ಕಾಳರಾತ್ರಿ ದೇವಿಗೆ ಸಮರ್ಪಿತವಾದ ನವರಾತ್ರಿಯ ೭ನೇ ದಿನದಂದು, ಮೈಸೂರಿನ ಜಿಲ್ಲಾ ಖಜಾನೆಯಿಂದ ಮಹಾರಾಜರು ದಾನ ಮಾಡಿದ ಬೆಲೆಬಾಳುವ ಆಭರಣಗಳನ್ನು ತಂದು ಮೂರ್ತಿಯನ್ನು ಅಲಂಕರಿಸಲು ದೇವಸ್ಥಾನಕ್ಕೆ ನೀಡಲಾಗುತ್ತದೆ.
ಚಾಮುಂಡೇಶ್ವರಿ ದೇವಸ್ಥಾನದ ಬಳಿ ಇರುವ ನಂದಿ ವಿಗ್ರಹವು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿದೆ, ಇದನ್ನು ದೊಡ್ಡ ದೇವರಾಜ ಒಡೆಯರ್ ಅವರು 1659 -1673ರ ಅವಧಿಯಲ್ಲಿ ನಿರ್ಮಿಸಿದರು. ಇದು ಭಾರತದ ಅತಿ ದೊಡ್ಡ ನಂದಿ ವಿಗ್ರಹಗಳಲ್ಲಿ ಒಂದಾಗಿದೆ ಮತ್ತು ಇದನ್ನು ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತುವ ಮಾರ್ಗದಲ್ಲಿ ಕಾಣಬಹುದು.
ಗುಲಾಬಿ ಮತ್ತು ಬೂದು ಬಣ್ಣದ ಬಂಡೆಗಳಿಂದಾವೃತ್ತ ಬೆಟ್ಟ, ಬಿಸಿಲು ಮಳೆಗಾಳಿಗೆ ಮೈಯೊಡ್ಡಿ ಶಿಥಲೀಕರಣಗೊಂಡು ಹೆಚ್ಚು ಸಿಲಿಕಾ ಮಿಶ್ರಿತ ಖನಿಜಯುಕ್ತ-ಆಳವಿಲ್ಲದ, ಮರಳು ಮಿಶ್ರಿತ ಕೆಂಪು ಮಣ್ಣಾಗಿ ಬೆಟ್ಟದಲ್ಲಿರುವ ಗಿಡಮರ ಪೊದೆ ಬಳ್ಳಿಗಳಿಗೆ ಆಶ್ರಯ ನೀಡಿದೆ.
"ನಾಡ ಹಬ್ಬದ ಕೇಂದ್ರಬಿಂದು, ನಾಡ ದೇವಿಯ ಆರಾಧನೆ ಜೊತೆಗೆ - ಇಡೀ ಮೈಸೂರಿನ ಮನಮೋಹಕ ದೃಶ್ಯವನ್ನು ಒಂದೆಡೆ ನೋಡಬಹುದಾದ ಶಕ್ತಿ ಭಕ್ತಿಯ ಸ್ಥಳ ಚಾಮುಂಡೇಶ್ವರಿ ಬೆಟ್ಟ"
ಬನ್ನಿ ಒಮ್ಮೆ ಪ್ರವಾಸಕ್ಕೆ....
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************