-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 105

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 105

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 105
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಇವತ್ತೊಂದು ಸುದ್ದಿಯನ್ನು ನೀವೆಲ್ಲರೂ ಓದಿದ್ದೀರಿ ಅಂದುಕೊಳ್ಳುತ್ತೇನೆ. ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂರು ಜನ ಸದಸ್ಯರು ಉಸಿರುಗಟ್ಟುವಿಕೆಯಿಂದ ಸತ್ತರಂತೆ. ಚಳಿಯಿಂದ ರಕ್ಷಿಸಿಕೊಳ್ಳಲು ಒಂದು ಕೋಣೆಯ ಒಳಗೆ ಇದ್ದಲಿನ ಬೆಂಕಿ ಹಾಕಿಕೊಂಡು ಮಲಗಿದವರು ಶವವಾಗಿ ಬಿಟ್ಟಿದ್ದಾರೆ. ಇವರು ಸತ್ತದ್ದಾದರೂ ಹೇಗೆ? ಒಮ್ಮೆ ಹಿಂದು ಮುಂದೆಲ್ಲ ಎರಡು ಕಂತುಗಳಲ್ಲಿ ನೋಡೋಣವೇ.

ಜೀವಿಗಳಿಗೆ ಜೀವಕ್ರಿಯೆ ನಡೆಸಲು ಶಕ್ತಿ ಬೇಕು. ಜೀವಕೋಶದ ಒಳಗಡೆ ಗ್ಲುಕೋಸ್ ಆಮ್ಲಜನಕದೊಂದಿಗೆ ಉರಿದು ಶಕ್ತಿ ಬಿಡುಗಡೆಯಾಗುತ್ತದೆ. ಇದನ್ನು ನಾವು ಉಸಿರಾಟ ಎಂದು ಕರೆಯುವುದು. ಈ ಉಸಿರಾಟದಲ್ಲಿ ಗ್ಲುಕೋಸ್ ಬಳಕೆಯಾದರೆ ಶಕ್ತಿ ಬಿಡುಗಡೆಯಾಗುತ್ತದೆ. ಅಂದರೆ ಒಂದು ರಾಸಾಯನಿಕ ವಸ್ತು ಶಕ್ತಿಯಾಗಿ ಬದಲಾಗುವ ಕ್ರಿಯೆ ಇದು. ಇದರಲ್ಲಿ ಆಮ್ಲಜನಕ ಅನಿಲ ಬಳಸಲ್ಪಟ್ಟರೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಅಂದರೆ ಇಲ್ಲಿ ಎರಡು ಪ್ರಕ್ರಿಯೆಗಳು. ಒಂದು ರಾಸಾಯನಿಕ ಕ್ರಿಯೆ. ಇನ್ನೊಂದು ಅನಿಲ ವಿನಿಮಯ. ಅನಿಲ ವಿನಿಮಯ ಏಕ ಕೋಶಿಕ ಜೀವಿಗಳಲ್ಲಿ ಸರಳ ವಿನಿಮಯವಾದರೆ ವಿಕಾಸದ ಹಾದಿಯಲ್ಲಿ ಇದು ಸಂಕೀರ್ಣವಾಗುತ್ತಾ ಸಾಗುತ್ತದೆ. ದೇಹ ದಪ್ಪಗಾದ ಹಾಗೆ ದೇಹದ ಆಳಕ್ಕೆ ಆಮ್ಲಜನಕವನ್ನು ಸಾಗಿಸಲು ಬರಿಯ ಕರಗಿದ ಆಮ್ಲಜನಕ ಸಾಕಾಗುವುದಿಲ್ಲ. ಅದೇ ಇಂಗಾಲದ ಡೈಆಕ್ಸೈಡ್ ಶರೀರದಲ್ಲಿರುವ ದ್ರವದ ನೀರಿನಲ್ಲಿ ಕರಗಿ ಕಾರ್ಬಾನಿಕ್ ಆಮ್ಲವಾಗಿ ಪರಿವರ್ತನೆಯಾಗುವುದರಿಂದ ಅದನ್ನು ಹೊರ ಸಾಗಿಸುವುದು ಸುಲಭ. ಆದರೆ ಆಮ್ಲಜನಕವನ್ನು ಸಾಗಿಸಲು ಅದನ್ನು ತನ್ನೊಳಗೆ ಅಡಗಿಸಿಕೊಳ್ಳಬಲ್ಲ ವಿಶೇಷ ರಾಸಾಯನಿಕ ವಸ್ತುಗಳು ಬೇಕು. ಇವುಗಳಿಗೆ ವಿಶಿಷ್ಠವಾದ ಬಣ್ಣಗಳಿವೆ. ಆದ್ದರಿಂದ ಇವುಗಳನ್ನು ಉಸಿರಾಟದ ವರ್ಣಕಗಳು (respiratory pigment) ಎನ್ನುತ್ತೇವೆ.

ಇವುಗಳಲ್ಲಿ ಒಂದು ಲೋಹದ ಅಯಾನುಗಳಿದ್ದು ಈ ಲೋಹದ ಅಯಾನುಗಳಿಗೆ ಪ್ರೋಟೀನ್ ಸರಪಣಿಗಳು ತಳುಕು ಹಾಕಿಕೊಂಡಿರುತ್ತವೆ. ಇಲ್ಲಿರುವ ಲೋಹದ ಅಣು ವರ್ಣಕದ ಬಣ್ಣವನ್ನು ನಿರ್ಧರಿಸುತ್ತದೆ. ತಾಮ್ರದ ಅಯಾನ್ ಇದ್ದರೆ ಅದು ಹೀಮೋಸಯಾನಿನ್. ಇದು ಆಮ್ಲಜನಕವನ್ನು ಹೀರಿಕೊಂಡಾಗ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದು ಕೆಲವು ಮೃದ್ವಂಗಿಗಳು (molluscans) ಮತ್ತು ಸಂದಿಪಾದಿಗಳಲ್ಲಿ (arthropods) ಕಂಡು ಬರುತ್ತವೆ. ಆದರೆ ಇವು ರಕ್ತದಲ್ಲಿರುವುದಿಲ್ಲ. ಬದಲಾಗಿ ದುಗ್ಧರಸ ದಲ್ಲಿರುತ್ತವೆ (lymph) . ಇನ್ನು ಸಸ್ತನಿಗಳ (mammals), ಪಕ್ಷಿಗಳ (aves), ಸರಿಸೃಪಗಳಲ್ಲಿ (reptiles) ರಕ್ತ ಕೆಂಪಾಗಿರುತ್ತದೆ. ಅದಕ್ಕೆ ಕಾರಣ ಕಬ್ಬಿಣದ ಅಯಾನು. ಕಬ್ಬಿಣದ ಅಯಾನು ಇರುವ ಉಸಿರಾಟದ ವರ್ಣಕ ಹೀಮೋಗ್ಲೋಬಿನ್. ಇದು ಆಮ್ಲಜನಕವನ್ನು ಯಶಸ್ವಿಯಾಗಿ ಶರೀರದ ಮೂಲೆ ಮೂಲೆಗಳಿಗೆ ಸಾಗಿಸುವುದರಿಂದ ಉಷ್ಣ ರಕ್ತ ಪ್ರಾಣಿಗಳು ಬಹಳ ಚಟುವಟಿಕೆಯಿಂದ ಇರುವುದು ಸಾಧ್ಯವಾಗಿದೆ. ಈ ಹೀಮೋಗ್ಲೋಬಿನ್ ಆಮ್ಲಜನಕವನ್ನು ಹೇಗೆ ಸಾಗಿಸುತ್ತದೆ ನೋಡೋಣ. 

ಉಸಿರಾಟದ ಅಂಗಗಳಲ್ಲಿ ಹೀಮೋಗ್ಲೋಬಿನ್ ಗೆ ಆಮ್ಲಜನಕ ದೊರೆಯುತ್ತದೆ. ಇಲ್ಲಿ ಆಮ್ಲಜನಕವನ್ನು ಹೀರಿಕೊಂಡು ಆಮ್ಲಜನಕ ಹೊಳೆಯುವ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೀಮೋಗ್ಲೋಬಿನ್ ಮಾಸದ ಕೆಂಪು ಬಣ್ಣದ ವಸ್ತು. ಇದು ಆಮ್ಲಜನಕವನ್ನು ಹೀರಿಕೊಂಡಾಗ ಉತ್ಪತ್ತಿಯಾಗುವ ತೀರಾ ಅಸ್ಥಿರವಾದ (highly unstable) ಆಕ್ಸಿ ಹೀಮೋಗ್ಲೋಬಿನ್ ಉಜ್ವಲ ಕೆಂಪು ಬಣ್ಣದೊಂದಿಗೆ ಕಂಗೊಳಿಸುತ್ತದೆ. ನಂದಿ ಹೋಗುವ ದೀಪ ಕಂಗೊಳಿಸುತ್ತದೆ ಎನ್ನುವ ಹಾಗೆ ಈ ಅಲ್ಪಾಯುಷಿ ಆಕ್ಸಿ ಹೀಮೋಗ್ಲೋಬಿನ್ ಹರಿದಲ್ಲೆಲ್ಲ ಆಮ್ಲಜನಕವನ್ನು ಹಂಚುತ್ತಾ ಸಾಗುತ್ತದೆ.

ಈ ಆಕ್ಸಿಹೀಮೋಗ್ಲೋಬಿನ್ ನ ಹುಟ್ಟು ಸಾವು ಹೇಗೆ ಮುಂದಿನ ವಾರ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************




Ads on article

Advertise in articles 1

advertising articles 2

Advertise under the article