ಪಯಣ : ಸಂಚಿಕೆ - 68 (ಬನ್ನಿ ಪ್ರವಾಸ ಹೋಗೋಣ)
Friday, November 7, 2025
Edit
ಪಯಣ : ಸಂಚಿಕೆ - 68 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಪ್ರಮುಖವಾದ ಚಿಟ್ಟೆ ಪಾರ್ಕ್- ಕಾರಂಜಿ ಕೆರೆ" ಗೆ ಪಯಣ ಮಾಡೋಣ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ವ್ಯಾಪ್ತಿಗೆ ಬರುವ ಕಾರಂಜಿ ಕೆರೆಯ ಪ್ರಕೃತಿ ಉದ್ಯಾನದಲ್ಲಿರುವ ಚಿಟ್ಟೆ ಉದ್ಯಾನಕ್ಕೆ (ಬಟರ್ ಫ್ಲೈ ಪಾರ್ಕ್) ನೀವು ಭೇಟಿ ನೀಡಿದಾಗ ಈ ರೀತಿ ಮನದಲ್ಲಿಯೇ ಗುನುಗದಿದ್ದರೆ ಕೇಳಿ. ಮೈಸೂರಿಗೆ ಬರುವ ಪ್ರತಿಯೊಬ್ಬ ಪರಿಸರ ಪ್ರೇಮಿಯೂ ಕೂಡ ಇಲ್ಲಿಗೆ ಭೇಟಿ ನೀಡಿಯೇ ನೀಡುತ್ತಾರೆ. ಅಷ್ಟರಮಟ್ಟಿಗೆ ಈ ಉದ್ಯಾನ ಆಕರ್ಷಣೀಯ. ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಚಿತ್ತಾಕರ್ಷಕ ಚಿಟ್ಟೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ಪ್ಲೇನ್ ಟೈಗರ್, ಡಾರ್ಗ್ ಬ್ಲು ಟೈಗರ್, ಕಾಮನ್ ಜೆಜೆಬೆಲ್, ಕ್ರಿಮಸನ್ ರೋಸ್, ಗ್ರಾಸ್ ಎಲ್ಲೋ, ರೆಡ್ ಪೈರೆಟ್, ಪ್ಯಾನ್ಸಿಸ್, ಕಾಮನ್ ಸೆರುಲೀನ್, ಬ್ಲೂ ಟೈಗರ್, ಬ್ಲೂ ಮರ್ಮಾನ್, ಕಾಮನ್ ಕ್ರೋ, ಕಾಮನ್ ವಾಂಡರರ್, ಎಮಿಗ್ರೆಂಟ್, ಲೈಮ್ ಬಟರ್‌ಫೈ ಮೊದಲಾದವು ಗಮನ ಸೆಳೆಯುವ ಚಿಟ್ಟೆಗಳಾಗಿವೆ. 60 ಬಗೆಯ ಚಿಟ್ಟೆಗಳು ಇಲ್ಲಿರುವುದು ವಿಶೇಷ. ವರ್ಷವಿಡೀ ಎಲ್ಲ ಬಗೆಯ ಚಿಟ್ಟೆಗಳನ್ನು ನೋಡಲು ಸಾಧ್ಯವಿಲ್ಲ. ಸೆಪ್ಟೆಂಬರ್-ಅಕ್ಟೋಬರ್ ಚಿಟ್ಟೆಗಳ ಸೀಸನ್.
ಕೆಲವೊಂದು ಚಿಟ್ಟೆಗಳು ಸಾಮೂಹಿಕವಾಗಿ ವಲಸೆ ಬರುತ್ತವೆ. ಬ್ಲೂ ಟೈಗರ್, ಕಾಮನ್ ಕ್ರೋ, ಡಾರ್ಗ್ ಬ್ಲೂ ಟೈಗರ್ ಹೆಚ್ಚು ವಲಸಿಗಳು. ಮೈಸೂರಿನಲ್ಲಿ ಏಪ್ರಿಲ್ ಮೊದಲ ವಾರ ಹಾಗೂ ನವೆಂಬರ್ ಮೊದಲ ವಾರ ಹೆಚ್ಚಾಗಿ ಇದು ಕಂಡು ಬರುತ್ತದೆ. ಕಾರಂಜಿ ಕೆರೆ ಉತ್ತರ ಭಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ದ್ವೀಪ ಪ್ರದೇಶವೇ ಚಿಟ್ಟೆ ಪಾರ್ಕ್.
ಸುಮಾರು 96 ಎಕರೆ ವಿಸ್ತೀರ್ಣವಿರುವ ಕಾರಂಜಿ ಕೆರೆಯನ್ನು 1976ರಲ್ಲಿ ಮೈಸೂರು ಮೃಗಾಲಯ ತನ್ನ ವಶಕ್ಕೆ ತೆಗೆದುಕೊಂಡಿತು. 1999ರಲ್ಲಿ ಚಿಟ್ಟೆ ಪಾರ್ಕ್ ಆರಂಭಿಸಲಾಯಿತು. 2004ರಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ನೆರವಿನಿಂದ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಬಣ್ಣ ಬಣ್ಣದ ಚಿಟ್ಟೆಗಳಿಗೆ ನೈಸರ್ಗಿಕ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಸಲಾಯಿತು. ಚಿಟ್ಟೆಗಳು ಕೂರಲು ಹಾಗೂ ತಿನ್ನಲು ಬೇಕಾದ ಸಸ್ಯಗಳನ್ನು ಬೆಳೆಸಲಾಯಿತು. ಅಂದಿನಿಂದಲೂ ಈ ದ್ವೀಪ ಚಿಟ್ಟೆಗಳಿಗೆ ನೆಚ್ಚಿನ ತಾಣವಾಗಿದೆ. ಇಲ್ಲಿ ವಾತಾವರಣ ಕೂಡ ಚಿಟ್ಟೆಗಳಿಗೆ ಹೇಳಿ ಮಾಡಿಸಿದಂತಿದೆ.
ಈ ಕೀಟಗಳಲ್ಲಿ ಚಿಟ್ಟೆಗಳಿಗೆ ವಿಶೇಷ ಸ್ಥಾನ. ಕಿರೀಟಕ್ಕೆ ಮುಕಟಮಣಿ ಇದ್ದಂತೆ. ಕವಿಗಳಿಗೆ ಕಾವ್ಯ ರಚನೆಗೆ, ಛಾಯಾಗ್ರಾಹಕರಿಗೆ ಸುಂದರವಾದ ದೃಶ್ಯಕ್ಕೆ ಹಾಗೂ ವಿಜ್ಞಾನಿಗಳಿಗೆ ಸಂಶೋಧನೆಗೆ ಸ್ಫೂರ್ತಿ ನೀಡುತ್ತವೆ. ಪರಿಸರದಲ್ಲಿ ಸಸ್ಯಗಳ ಪರಾಗಸ್ಪರ್ಶಕ್ಕೂ ಚಿಟ್ಟೆಗಳ ಸಹಾಯ ಬೇಕೇಬೇಕು. ಚಿಟ್ಟೆಗಳು ಆಹಾರ ಸರಪಳಿಗೂ ಅತ್ಯುತ್ತಮ ನಿದರ್ಶನವಾಗಿವೆ.
ವಿಕಲಚೇತನರು ಹಾಗೂ ವಿಶೇಷ ಮಕ್ಕಳಿಗೆ ಉಚಿತ ಪ್ರವೇಶ, ಗಾಲಿ ಚಕ್ರಗಳ ಸೌಲಭ್ಯ ಇದೆ. ದೋಣಿ ವಿಹಾರ, ವಾಹನ ನಿಲುಗಡೆ, ವಿಶ್ರಾಂತಿ ತಾಣ, ಕುಡಿಯುವ ನೀರು, ಶೌಚಾಲಯ, ಮಕ್ಕಳ ಆಟ ತಾಣಗಳು, ವೀಕ್ಷಕರಿಗೆ ಕೊಡೆ ಸೌಲಭ್ಯ, ಮಳೆ ಹಾಗೂ ಬೇಸಿಗೆ ಕಾಲದಲ್ಲಿ ಅನನುಕೂಲ ತಪ್ಪಿಸಲು ಶೆಲ್ಟರ್ ಮೊದಲಾದ ಸೌಲಭ್ಯಗಳಿವೆ.
ಕಾರಂಜಿ ಕೆರೆಯಲ್ಲಿ ಚಲನಚಿತ್ರಗಳ ಚಿತ್ರೀಕರಣ, ಧ್ವನಿವರ್ಧಕ ಹಾಕಿಕೊಂಡು ಸಮಾರಂಭ ನಡೆಸುವುದು, ವಾಯು ವಿಹಾರಕ್ಕೆ ಬಂದವರು ಚಪ್ಪಾಳೆ ತಟ್ಟುವುದು, ಶಬ್ದ ಮಾಡುವುದು, ಪ್ರಕೃತಿ ಉದ್ಯಾನದೊಳಗೆ ವಾಹನಗಳಲ್ಲಿ ಬರುವುದು, ಅಡುಗೆ ಮಾಡುವುದು, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಇತರೆ ದಿನಗಳಲ್ಲಿ ಬೆಳಗಿನ 8.30ರಿಂದ ಸಂಜೆ 5.30ರವರೆಗೆ ಪ್ರವೇಶ ಉಂಟು.
"ಮೈಸೂರಿನ ಈ ಚಿಟ್ಟೆ ಪಾರ್ಕ್- ಕಾರಂಜಿ ಕೆರೆಯೊಂದಿಗೆ ಉದ್ಯಾನವನವು ಅತ್ಯಂತ ರಮಣೀಯವಾಗಿ ಕಾಣಿಸುವುದು. ವಿವಿಧ ಚಿಟ್ಟೆಗಳ ಚಿತ್ತಾರ ಜೊತೆಗೆ ಪಕ್ಷಿಗಳ ಹಾರಾಟದೊಂದಿಗೆ ನೀರಿನ ಮೇಲಾಟ ನೋಡುವುದೆ ಚಂದ" ಬನ್ನಿ ಒಮ್ಮೆ ಮೈಸೂರಿಗೆ....
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************