ನಿಷ್ಪಾಪಿ ಸಸ್ಯಗಳು : ಸಂಚಿಕೆ - 127
Thursday, November 6, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 127
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಇವುಗಳ ನಡುವೆ ಮದುವೆ, ಗೃಹಪ್ರವೇಶದಂತಹ ಸಂತಸದ ಕ್ಷಣಗಳ ನಡುವೆ ಔತಣ ಕೂಟದ ಗಮ್ಮತ್ತೇ ಗಮ್ಮತ್ತು. ಹ್ಹಾಂ.. ಅಂದಹಾಗೆ ಔತಣ ಕೂಟವೆಂದಾಕ್ಷಣ ಅಲ್ಲಿಯ ರುಚಿರುಚಿಯಾದ ಭೋಜನದ ವ್ಯವಸ್ಥೆ ಇದ್ದೇ ಇರುತ್ತದೆ. ಇಲ್ಲಿ ನಾವು ಗಮನಿಸುವುದು ರುಚಿಯಾದ ಊಟ, ತಿಂಡಿ, ತಿನಿಸುಗಳನ್ನಾದರೂ ಕೊನೆಗೆ ಅರ್ಧರ್ಧ ತಿಂದು ಉಳಿದುದನ್ನು ಬಿಸಾಡುವ ಆಹಾರವೇ ಅಧಿಕವಾಗಿರುತ್ತದೆ. ಇದನ್ನು ಯಾವತ್ತಾದರೂ ಗಮನಿಸಿದ್ದೀರಾ..?
ಹೌದು ಮಕ್ಕಳೇ, ನಾವು ಈ ಬಗ್ಗೆ ಗಮನಿಸಲೇ ಬೇಕು. ಒಂದು ಮುಷ್ಟಿ ಅನ್ನದ ಹಿಂದೆ ರೈತನ ಶ್ರಮ ಎಷ್ಟಿರುತ್ತದೆ..? ಎಂದು ನಾವು ಗಮನಿಸಲೇ ಬೇಕು. ಅಕ್ಕಿಯಿಂದ ಅನ್ನ ದೊರೆಯುತ್ತದೆ. ಈ ಅಕ್ಕಿ ಭತ್ತ ಎಂಬ ಧಾನ್ಯದಿಂದ ದೊರೆಯುತ್ತದೆ. ಭತ್ತದ ಹೊಟ್ಟನ್ನು ಬೇರ್ಪಡಿಸಿದಾಗ ದೊರೆಯುವುದೇ ಅಕ್ಕಿ ಅಥವಾ ರೈಸ್. ಇದು ನಮ್ಮ ಮುಖ್ಯ ಆಹಾರವಾಗಿದೆಯಲ್ಲವೇ..? ಭಾರತದ ಪ್ರಮುಖ ಆಹಾರ ಬೆಳೆಯೇ ಭತ್ತ.
ಭತ್ತದ ಬೇಸಾಯ ನಮ್ಮ ರೈತರ ಸಾಮಾನ್ಯ ಕೃಷಿಯಾಗಿದೆ. ಮೂರು ನಾಲ್ಕು ರೀತಿಯಲ್ಲಿ ಭತ್ತದ ಬಿತ್ತನೆ ಕಾರ್ಯ ನಡೆಯುತ್ತದೆ. ಬೀಜವನ್ನು ನೇರವಾಗಿ ಕೆಸರು ಗದ್ದೆಗೆ ಚೆಲ್ಲುವುದು, ಕೂರಿಗೆಯ ಸಹಾಯದಿಂದ ನಿರ್ಧಿಷ್ಟ ಅಂತರದಲ್ಲಿ ಬಿತ್ತನೆ ಮಾಡುವುದು. ಸುಡುಮಣ್ಣಿನ ಜೊತೆ ಮೊಳಕೆಯೊಡೆದ ಬೀಜವನ್ನು ಬೆರೆಸಿ ಮುಷ್ಟಿ ಮುಷ್ಟಿಯಾಗಿ ಗದ್ದೆಗೆ ಹಾಕುವುದು, ಸಸಿ ಮಾಡಿ 5 ರಿಂದ 7 ವಾರಗಳ ಬಳಿಕ ನಾಟಿ ಮಾಡುವ ವಿಧಾನದ ಮೂಲಕ ಭತ್ತದ ಸಸಿಗಳನ್ನು ಬೆಳೆಸಬಹುದು.
ಬೀಜ ಹಾಕುವ ಭತ್ತದ ಮೊಳಕೆ ಒಮ್ಮೆಲೇ ಬರಬೇಕೆಂದು ರೈತರು ಬೀಜಕ್ಕಾಗಿಟ್ಟ ಭತ್ತದ ಮುಡಿ ಅಥವಾ ಗೋಣಿಯನ್ನು ಒಂದು ದಿನ ಕೆರೆಯ ನೀರಲ್ಲಿ ಸ್ವಲ್ಪ ಇಳಿಸಿಟ್ಟು ಮರುದಿನ ಮೇಲೆತ್ತಿ ಕೆಲವು ವಿಶೇಷ ಸಸ್ಯಗಳ ಎಲೆಗಳಿಂದ ಸುತ್ತಿ ಅದರ ಮೇಲೆ ಭಾರದ ವಸ್ತು ಅಥವಾ ಕಲ್ಲುಗಳನ್ನಿಡುತ್ತಿದ್ದರು. ಮೂರ್ನಾಲ್ಕು ದಿನಗಳ ಒಳಗೆ ಬಿತ್ತನೆಗೆ ಎಲ್ಲ ಭತ್ತವೂ ಒಂದೇ ರೀತಿ ಮೊಳಕೆಯೊಡೆದಿರುತ್ತವೆ. ಅವನ್ನು ತೇವಾಂಶ ಇರುವ ಮೇಲ್ಮಣ್ಣಿಗೆ ಸೇರಿಸಿದಾಗ ಮೊಳಕೆ ಬೆಳವಣಿಗೆ ಹೊಂದಿ ಬೇರು ಹರಡಿ ಮಣ್ಣಿನಲ್ಲಿ ಗಟ್ಟಿಯಾಗಲು ಪ್ರಯತ್ನಿಸುತ್ತದೆ. ಮತ್ತೆ ನಾಲ್ಕಾರು ದಿನಗಳಾಗುತ್ತಲೇ ಹಲವಾರು ಎಲೆಗಳು ಹುಟ್ಟತೊಡಗುತ್ತವೆ. ತೆಳ್ಳಗೆ ಚೂಪಾದ ಹಸಿರು ಎಲೆಗಳ ಈ ಮರಿ ಸಸಿಗಳು ನೋಡಲು ಬಹಳ ಸುಂದರವಾಗಿರುತ್ತವೆ. ಅವುಗಳ ಬಿತ್ತನೆಗನುಸಾರವಾಗಿ ಮುಂದಿನ ಬೆಳವಣಿಗೆಯಾಗುತ್ತದೆ. ಕೇವಲ ಬಿತ್ತನೆಯಾದರೆ ಮೊಳಕೆ ಇದ್ದಲ್ಲೇ ತನ್ನ ಬೆಳವಣಿಗೆ ಮುಂದುವರಿಸಿ ಕಾಂಡದಿಂದ ಹೊಸ ಶಾಖೆಗಳು ಬೆಳೆಯಲಾರಂಭಿಸುತ್ತದೆ. ಸಸಿ ಮಡಿ ಮಾಡಿದ್ದೇ ಆದರೆ ಅವನ್ನು ಬೇರೆಡೆಗೆ ನಾಟಿ ಮಾಡಬೇಕಾಗುತ್ತದೆ. ಇದರಲ್ಲೂ ಹೆಬ್ಬೆರಳು ಮತ್ತು ತೋರು ಬೆರಳು ಬಳಸಿ ನಡೆಸುವ ಹಸ್ತಚಾಲಿತ ನಾಟಿ, ಅಂತರವಿಟ್ಟು ನೆಡುವ ಶ್ರೀ ಪದ್ದತಿ, ದಿನಕ್ಕೆ 4 ಎಕರೆ ನೆಡುವಷ್ಟು ಸಾಮರ್ಥ್ಯದ ಯಾಂತ್ರಿಕ ನಾಟಿಯೂ ಇದೆ. ಹೀಗೆ ನೆಟ್ಟ ಸಸಿಯೂ ಕಾಂಡದಿಂದ ಹೊಸ ಶಾಖೆಗಳನ್ನು ಪಡೆಯುತ್ತಾ ಬೆಳೆದು ತುದಿಯಲ್ಲಿ ಬಾಳೆಗಿಡವು ಗೊನೆ ಹಾಕಿದಂತೆ ಹೂಗೊಂಚಲು ಬೆಳೆಯುತ್ತದೆ. ಇದನ್ನು ಭತ್ತದ ತೆನೆ ಅಥವಾ ಕದಿರು ಎನ್ನುತ್ತಾರೆ. ಈ ತೆನೆಗಳಲ್ಲಿ ಭತ್ತದ ಸಿಪ್ಪೆಯ ರಚನೆಯ ಜೊತೆ ಜೊತೆಗೆ ಪುಟ್ಟಕಡ್ಡಿಯಂತಹ ಹೂಗಳು ಮಾತ್ರವೇ ಕಂಡು ಕೆಲವೇ ದಿನಗಳಲ್ಲಿ ಭತ್ತದೊಳಗೆ ಹಾಲಿನಂತಹ ದ್ರವ ತುಂಬಿಕೊಳ್ಳುತ್ತದೆ. ಈ ದ್ರವ ಧಾನ್ಯವಾಗಿ ಗಟ್ಟಿಯಾಗುತ್ತಾ ಬೆಳೆದು ಪಕ್ವವಾಗುತ್ತದೆ. ಕೆಲವೇ ದಿನಗಳಲ್ಲಿ ಧಾನ್ಯದ ಹೊಟ್ಟು ಒಣಗಿ ಹಳದಿಯಾಗುತ್ತದೆ ಹಾಗೂ ಹಸಿರಾಗಿದ್ದ ಪೈರು ಕೆಂಪು ಹಳದಿ ಬಣ್ಣಗಳ ಮಿಶ್ರಣವಾಗಿ ಮಾಗುತ್ತದೆ. ಈ ವೇಳೆ ಕಟಾವು ಮಾಡದೆ ಇದ್ದರೆ ಭತ್ತ ಉದುರತೊಡಗುತ್ತದೆ. ಕಟಾವು ಮಾಡಿದ ಪೈರನ್ನು ತಂದು ಸ್ವಚ್ಛವಾಗಿರುವ ಒಣ ನೆಲದಲ್ಲಿ ಭತ್ತವನ್ನು ಬೇರ್ಪಡಿಸಿ ಗಾಳಿಗೆ ತೂರಿ ಶುದ್ಧಗೊಳಿಸಲಾಗುತ್ತದೆ. ಹೀಗೆ ಸ್ವಚ್ಛಗೊಂಡ ಭತ್ತವನ್ನು ಬೇಯಿಸಿ ಮತ್ತೆ ಒಣಗಿಸಿ ಕುಟ್ಟಿದಾಗ ಭತ್ತದ ಹೊಟ್ಟು ಜಾರುತ್ತದೆ. ಈ ಕೆಲಸವನ್ನು ನಮ್ಮ ಹಿರಿಯರು ಒನಕೆಯ ಮೂಲಕ ನಡೆಸಿದರೆ ಈಗ ಯಂತ್ರಗಳ ಸಹಾಯ ಪಡೆಯಲಾಗುತ್ತದೆ.
ಈ ಅಕ್ಕಿ ಮಾಡುವಲ್ಲೂ ಹಲವು ಶಿಷ್ಟಾಚಾರಗಳಿವೆ. ಭತ್ತ ಬೇಯಿಸದೆ ಕುಟ್ಟಿದರೆ ಬೆಳ್ತಿಗೆ, ಭತ್ತವನ್ನು ಸ್ವಲ್ಪವೇ ಬೇಯಿಸಿ ಒಣಗಿಸಿ ಅಕ್ಕಿ ಮಾಡಿದಾಗ ದೊರೆಯುವುದು ಅದಿರು ಬೆಳ್ತಿಗೆ, ಭತ್ತ ಸರಿಯಾಗಿ ಬೇಯಿಸಿ ಕುಟ್ಟಿದಾಗ ಕಜೆ ಅಕ್ಕಿ, ಅಕ್ಕಿಯ ಮೇಲಿನ ತೌಡು ಅಥವಾ ಕಪ್ಪು ಬಣ್ಣ ಹೋಗುವವರೆಗೆ ಕುಟ್ಟಿದರೆ ಬಿಳಿ ಅಕ್ಕಿ ದೊರೆಯುತ್ತದೆ. ಭತ್ತ ಬೇಯುವುದರಲ್ಲಿ, ಒಣಗಿಸುವುದರಲ್ಲಿ ವ್ಯತ್ಯಾಸವಾದರೆ ದೊರೆಯುವುದು ಪುಡಿಯಕ್ಕಿ! ಇಷ್ಟೇ ಅಲ್ಲದೆ ಬಿಳಿಯಕ್ಕಿ, ಕೆಂಪಕ್ಕಿ, ಕಂದು, ಕಪ್ಪು, ನೇರಳೆ ಬಣ್ಣದ ಅಕ್ಕಿಗಳೂ ಇವೆ. ಭತ್ತವನ್ನು ಬೇರ್ಪಡಿಸುವಾಗ ಉದುರದೆ ಪೈರಲ್ಲೇ ಉಳಿದ ಭತ್ತವನ್ನು ಮತ್ತೆ ಕೆಲಸಮಯದ ಬಳಿಕ ಬಾಡಿ ಮುದುರಿದ ಪೈರನ್ನು ಮತ್ತೆ ಗುದ್ದಿ ಪಡೆದ ಭತ್ತದಿಂದಲೂ ಅಕ್ಕಿ ದೊರೆಯುತ್ತದೆ. ಇದು ಉತ್ತಮ ಗುಣಮಟ್ಟದಲ್ಲಿ ಇರುವುದಿಲ್ಲವಾದರೂ ನಮ್ಮ ಹಿರಿಯರ ಹಸಿವನ್ನು ತಣಿಸಿದ ಕೀರ್ತಿ ಈ 'ಬೈತ್ತ ಅರಿ' ಗೆ ಸಲ್ಲುತ್ತದೆ. ಮೊಳಕೆ ಬಂದ ಭತ್ತವನ್ನು ರಾತ್ರಿ ಇಬ್ಬನಿಗೆ ಹೊರಗಿಟ್ಟು ಹಗಲು ಒಣಗದಂತೆ ಮುಚ್ಚಿಟ್ಟು ಕೆಲವು ದಿನಗಳ ನಂತರ ಒಣಗಿಸಿ ಪಡೆವ ಅಕ್ಕಿ ತುಂಬಾ ಸಿಹಿಯಾಗಿರುತ್ತದೆ ಮಾತ್ರವಲ್ಲದೆ ಇದರಿಂದ ಸ್ವಲ್ಪ ಪ್ರಮಾಣದ ನಶೆಯಿರುವ ಪಾನೀಯವನ್ನೂ ತಯಾರಿಸುತ್ತಾರೆ. ತುಳು ಭಾಷೆಯಲ್ಲಿ ಇದನ್ನು 'ಪೊಜಿಲ್' ಎನ್ನುವರು. ಮಂಡಕ್ಕಿ, ಅವಲಕ್ಕಿ, ಹೊದ್ಲು ಪ್ರಾಚೀನ ಕಾಲದಿಂದಲೂ ನಮ್ಮ ನಡುವಿನ ಸಾಂಪ್ರದಾಯಿಕ ಹಾಗೂ ಜನಪ್ರಿಯ ಆಹಾರವಾಗಿದೆ. ನುಚ್ಚು, ಗಂಜಿ, ಇಡ್ಲಿ, ದೋಸೆಯಂತಹ ಹತ್ತಾರು ಬಗೆಯ ತಿಂಡಿಗಳನ್ನು ಅಕ್ಕಿಯಿಂದ ಮಾಡಲಾಗುತ್ತದೆ.
ಅಕ್ಕಿಯ ಮೇಲ್ಪದರವನ್ನು ತೌಡು ಎನ್ನುವರು. ಇದರಲ್ಲಿ ಕೊಬ್ಬು, ಪ್ರೊಟೀನ್, ಖನಿಜಾಂಶಗಳಿವೆ. ತೌಡಿನ ಎಣ್ಣೆಯನ್ನು ತೆಗೆದ ಬಳಿಕ ಪಶು ಆಹಾರವಾಗಿ, ಗೊಬ್ಬರವಾಗಿ ಬಳಸಲಾಗುತ್ತದೆ. ಭತ್ತದ ಹೊಟ್ಟನ್ನು ಉರುವಲಾಗಿ, ಕೋಳಿಸಾಕಣೆಗಾಗಿ, ಮಣ್ಣಿನ ತೇವಾಂಶ ಕಾಪಾಡಲು, ವಿದ್ಯುತ್ ನಿರೋಧಕ ತಯಾರಿ, ಬೋರ್ಡ್ ತಯಾರಿ, ಪ್ಯಾಕಿಂಗ್ ಗಾಗಿ, ಪ್ಲಾಸ್ಟಿಕ್ ತಯಾರಿ, ಸಿಲಿಕಾ ಇರುವುದರಿಂದ ಬೂದಿಯನ್ನು ಕೈಗಾರಿಕಾ ಉತ್ಪನ್ನಗಳಲ್ಲಿ ಬಳಸುತ್ತಾರೆ. ಭತ್ತದ ಪೈರನ್ನು ಪಶು ಆಹಾರವಾಗಿ, ಅಣಬೆ ಬೇಸಾಯದಲ್ಲಿ , ಗುಡಿಸಲ ಛಾವಣಿಗೆ, ಪ್ಯಾಕಿಂಗ್, ಕೈಕಸುಬುಗಳಲ್ಲಿ, ಚೀಲವಾಗಿ, ಜೈವಿಕ ಗೊಬ್ಬರವಾಗಿ ಬಳಸಲಾಗುತ್ತದೆ.
'ಒರಿಜ ಸಟಿವ' ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಪಡೆದ ಭತ್ತ ಕನ್ನಡದಲ್ಲಿ 'ನೆಲ್ಲು', ಆಂಗ್ಲ ಭಾಷೆಯಲ್ಲಿ ಪ್ಯಾಡಿ ಎಂದೂ ಕರೆಸಿಕೊಂಡಿದೆ. ಸಹಜವಾಗಿ ಭತ್ತವು ಕಾಡು ಸಸ್ಯವಾಗಿದ್ದು ಇದೀಗ ಭತ್ತದಲ್ಲಿ ಮುಖ್ಯವಾಗಿ ಎರಡು ಪ್ರಭೇದಗಳನ್ನು ಗುರುತಿಸಲಾಗಿದೆ. ಏಷ್ಯಾದ ಭತ್ತ 'ಒರಿಜ ಸಟಿವ' ಎಂದಿದ್ದರೆ ಆಫ್ರಿಕಾದ ಭತ್ತ 'ಒರಿಜ ಗ್ಲಾಬಿರ್ರಿಮ' ಎಂದು ಕರೆಸಿಕೊಳ್ಳುತ್ತದೆ. ಆಫ್ರಿಕಾದ ಒರಿಜ ಗ್ಲಾಬಿರ್ರಿಮವನ್ನು ಆಫ್ರಿಕಾದ ಕಾಡುಸಸ್ಯವಾದ ಒರಿಜ ಬಾರ್ಥಿಯಿಂದ ಪಡೆಯಲಾಗಿದೆ. ಹಾಗೂ ಮಾಲಿಯಲ್ಲಿರುವ ಮೇಲಿನ ನೈಜರ್ ನದಿ ಪ್ರದೇಶದಲ್ಲಿ ಎರಡು ಮೂರು ಸಾವಿರ ವರ್ಷಗಳ ಹಿಂದೆ ಪಳಗಿಸಲಾಯಿತು ಎಂದು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಒರಿಜ ಸಟಿವ ದ ಉಪಪ್ರಭೇದ ಜಪೋನಿಕವನ್ನು ಚೀನಾದ ಯಾಂಗ್ಟ್ ಜಿ ನದಿ ಕಣಿವೆಯಲ್ಲಿ ಪಳಗಿಸಲಾಯಿತು ಎಂದು ಅನುವಂಶಿಕ ಹಾಗೂ ಮಧ್ಯಪ್ರಾಚ್ಯ ಆಕರಗಳು ದೃಢಪಡಿಸುತ್ತವೆ. ಇಂಡಿಕ ಉಪಪ್ರಭೇದಕ್ಕೆ ಬ್ರಹ್ಮಪುತ್ರ ನದಿಬಯಲು ಹಾಗೂ ಗಂಗಾ ಬಯಲು ಪ್ರದೇಶ ಒಂಭತ್ತು ಹತ್ತು ಸಾವಿರ ವರ್ಷಗಳ ಹಿಂದೆ ಸಂಸ್ಕಾರ ನೀಡಿದ ಸ್ಥಳಗಳಾಗಿವೆ ಎಂದು ಅಭಿಪ್ರಾಯಪಡಲಾಗಿದೆ. ಕಾಡು ಸಸ್ಯದ ಬೀಜಗಳು ತಿಂಗಳ ವರೆಗೂ ಮೊಳಕೆ ಬರುತ್ತಿದ್ದರೆ ಎರಚಿದ ಒಮ್ಮೆಲೇ ಮೊಳೆಯಲಾಂಭಿಸಿದ್ದೇ ದೊಡ್ಡ ಸಾಧನೆ. ಇತ್ತೀಚಿನ ಆರ್ಕಿಯಾಲಜಿ ಪುರಾವೆಗಳ ಪ್ರಕಾರ ಕ್ರಿ.ಪೂ.9500 ರ ಸುಮಾರಿಗೆ ಚೀನಾದ ಹುಬೇಯ ಪ್ರಾಂತದ ಹಳ್ಳಿಯೊಂದರ ಹತ್ತಿರದಲ್ಲಿದ್ದ ಬೇಟೆಗಾರ ರಂತಹ ಆಹಾರ ಸಂಗ್ರಹಿಸುವ ಸಮುದಾಯವು ವಾರ್ಷಿಕ ಸ್ವರೂಪದ ಕಾಡುಸಸ್ಯ ಭತ್ತದ ಗಿಡಗಳನ್ನು ಆಯ್ದು ಅದರ ಬೀಜಗಳನ್ನು ಬಿತ್ತನೆಗಾಗಿ ಎರಚುತ್ತಿದ್ದರೆನ್ನಲಾಗಿದೆ. ಕಾರ್ಬನ್ ಕಾಲಗಣನೆಯ ಪ್ರಕಾರ ಕ್ರಿ.ಪೂ 7ನೇ ಸಹಸ್ರಮಾನದಲ್ಲಿನ ಉತ್ತರ ಪ್ರದೇಶದ ಲಹುರದೇವ ಎನ್ನುವ ಸ್ಥಳದಲ್ಲಿ ಸುಟ್ಟು ಕರಕಲಾದ ಅಕ್ಕಿ ಕಾಳುಗಳನ್ನು ಪತ್ತೆಹಚ್ಚಲಾಗಿದೆ.
ಜಾಗತಿಕ ಉತ್ಪಾದನೆಯಲ್ಲಿ ಕಬ್ಬು ಪ್ರಥಮ, ಮೆಕ್ಕೆಜೋಳ ದ್ವಿತೀಯ, ಭತ್ತ ಮೂರನೇ ಸ್ಥಾನದಲ್ಲಿದ್ದು.. ಜಾಗತಿಕವಾಗಿ ಭತ್ತದ ಉತ್ಪಾದನೆಯಲ್ಲಿ ಚೀನದ ನಂತರ ಭಾರತವಿದೆ. ಬೆಂಕಿರೋಗ, ದುಂಡಾಣು ರೋಗ, ಕಾಡಿಗೆ ರೋಗ, ಗಂಧಕ ರೋಗ ಗಳೆಂದು ಹಲವಾರು ರೋಗಗಳ ಜೊತೆಗೆ ಥ್ರಿಪ್ಸ್ ನುಸಿ, ಜಿಗಿಹುಳು, ಕಾಂಡ ಕೊರೆಯುವ ಹುಳು, ಎಲೆ ಸುರುಳಿ ಹುಳುವಿನಂತಹ ಕೀಟಗಳ ಬಾಧೆಯೂ ಭತ್ತಕ್ಕಿದೆ.
ಭತ್ತ ಅಥವಾ ಅಕ್ಕಿಯನ್ನು ನಾವು ಸಾಮಾನ್ಯ ಧಾನ್ಯವೆಂದು ಭಾವಿಸುವಂತಿಲ್ಲ. ಸಾಮಾಜಿಕವಾಗಿವಾಗಿ, ಭಾವನಾತ್ಮಕವಾಗಿ ಅಕ್ಕಿ ನಮ್ಮ ಸಂಸ್ಕೃತಿಯಲ್ಲಿ ಬೆರೆತಿರುವುದಷ್ಟೇ ಅಲ್ಲದೆ ಪೂಜನೀಯ ಸ್ಥಾನ ಪಡೆದಿದೆ. ಇಂತಹ ಭತ್ತದ ಬಗ್ಗೆ ಕೆಲವು ವಿಶೇಷತೆಗಳಿವೆ ಗೊತ್ತೆ? ಒಮ್ಮೆ ಬಿತ್ತನೆ ಮಾಡಿದ ನಂತರ ಫಸಲು ಮಾಗಿ ಕೊಯ್ಲು ನಡೆದ ನಂತರ ಎರಡನೇ ಬೆಳೆಯಾಗಿ ಅದರ ಕಾಂಡದಿಂದ ಮತ್ತೆ ಸಸಿಗಳು ಬೆಳೆದು ತೆನೆ ಯಾಗುವ ತಳಿಯಿದೆ. ಇದನ್ನು ಕಟ್ಮುಂಡ ಎನ್ನುವರು. ಸುಗಂಧಭರಿತ ಅಕ್ಕಿ ನೀಡುವ ಕಳವೆ, ಗಂಧಸಾಲೆ, ಬಾಸ್ಮತಿಗಳೆಂಬ ತಳಿಗಳಿವೆ. ಮೂಲವ್ಯಾಧಿ ಗೆ ಔಷಧಿಯಾಗುವ ಕಯಮೆ ಎಂಬ ತಳಿ, ಮಕ್ಕಳ ವಾಂತಿ ಭೇದಿಗೆ ಸಣ್ಣಕ್ಕಿ ತಳಿ, ಬಾಣಂತಿಯರ ಟಾನಿಕ್ ಎಂದೇ ಖ್ಯಾತಿ ಪಡೆದ ಕರಿಕಳವೆ, ಕೆಮ್ಮು ಎದೆನೋವಿಗೆ ಸಂಜೀವಿನಿಯಾದ ದೊಡ್ಡಬೈರನೆಲ್ಲಿ , ರಕ್ತಹೀನತೆಗೆ ಕರಿಗಜವಲಿ, ಕರಿಭತ್ತ ತುಂಬಾ ಪ್ರಮುಖವಾದ ಅಪರೂಪದ ತಳಿಗಳಾಗಿವೆ. 2003 ರಲ್ಲಿ ಆವಿಷ್ಕಾರವಾದ ರಕ್ತಶಾಲಿ ಎಂಬ ಭತ್ತದ ಅಕ್ಕಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆಯೆಂದು ಸಂಶೋಧನೆಯೇ ನಡೆದಿದೆ.
ಜೀರ್ಸಾಲೆ, ಮಸೂರಿ, ರಾಜಕಯಮೆ, ಶಕ್ತಿ, ಮೈಸೂರು ಮಲ್ಲಿಗೆ, ಗಂಧಸಾಲೆ, ನಾಗಭತ್ತ, ಜೀರಿಗೆ, ಗಿಡ್ಡ, ಕುರುವ, ಕಳಮೆ, ಸುಮತಿ, ಮಸ್ಕತಿ ಮೊದಲಾದ ತಳಿಗಳು ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದು ನಮ್ಮ ಬಾಲ್ಯದ ದಿನಗಳಲ್ಲಿ ಎಲ್ಲೆಡ ಇದ್ದುವು. ಸೋನಾ ಮಸೂರಿ, ಕರಿಯಕ್ಕಿ, ಗಂಧಸಾಳಿ, ದೊಡಗ, ಕರಿಗಜವಿಲೆ, ಜಯ, ಇಂದ್ರಾಣಿ, ರಕ್ತದಾಳಿ, ಡಾಂಬರುಸಾಳಿ ಮೊದಲಾದುವು ವಿಜ್ಞಾನಿಗಳ ಪ್ರಯೋಗಾಲಯದಿಂದ ಹೊರಬಂದುವುಗಳು.
ನೀರಾವರಿ, ತಗ್ಗು ಭೂಮಿ, ಉಬ್ಬರವಿಳಿತದ ಗದ್ದೆಗಳು, ಆಳನೀರಿನ ವ್ಯವಸ್ಥೆ, ಎತ್ತರದ ಭೂಮಿಯಲ್ಲಿ ಅಂದರೆ ಭತ್ತವು ಕಾಲಮಾನ, ಮಣ್ಣು, ನೀರಿನ ವ್ಯವಸ್ಥೆ, ಭೂಲಕ್ಷಣಗಳ ಆಧಾರದಲ್ಲಿ ಬದುಕುವ ಸಾಹಸ ಮಾಡುತ್ತದೆ. ಎಲ್ಲೂ ಸೋಲದೆ ಗೆಲ್ಲುತ್ತದೆ. ಭಾರತ ಬಾಂಗ್ಲಾದೇಶಗಳ ಗಂಗಾ, ಬ್ರಹ್ಮಪುತ್ರಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಆಳ ನೀರಿನ ಭತ್ತ ಬೇಸಾಯ ನಡೆಯುತ್ತದೆ. 50 ಸೆ.ಮೀ ನೀರಿಗಿಂತ ಹೆಚ್ಚು ನೀರು ಕನಿಷ್ಟ ಒಂದು ತಿಂಗಳು ಇರುವ ನೆರೆಸ್ಥಿತಿಯಲ್ಲೂ ಇಲ್ಲಿ ಭತ್ತ ಸವಾಲನ್ನು ಎದುರಿಸಿ ಗೆಲ್ಲುತ್ತದೆ. ಉದ್ದನೆಯ ಎಲೆಯ ಜೊತೆ ತೇಲುವ ಭತ್ತ 4ಮೀಟರ್ ನೀರಿದ್ದರೆ ಭತ್ತ ಅದಕ್ಕಿಂತಲೂ ಎತ್ತರ ಬೆಳೆಯುತ್ತದೆ. ಸಮುದ್ರ ತೀರದಲ್ಲಿ ನದಿಗಳು ಸಮುದ್ರ ಸೇರುವ ಜಾಗಗಳಲ್ಲೂ ಭತ್ತ ಬೆಳೆಯುವ ಜಾಣ್ಮೆ ಮಾನವನಿಗಿದೆ. ಇಲ್ಲಿ ಬೆಳೆಯುವ ನಿಷ್ಪಾಪಿ ಭತ್ತದ ತಳಿ ಕಗ್ಗ. ಸಮುದ್ರತಟದ ಅಚ್ಚುಕಟ್ಟು ಪ್ರದೇಶದಲ್ಲಿ ಭರತ ಇಳಿತದ ಲೆಕ್ಕಾಚಾರವಿದೆ. ರೈತರು ಒಗ್ಗಟ್ಟಿನಿಂದ ಸಾಮೂಹಿಕವಾಗಿ ಸೇರಿ ಹಗ್ಗ ಹಿಡಿದು ಜಾಗ ಭಾಗಮಾಡಿಕೊಂಡು ಭತ್ತ ಬಿತ್ತನೆ ನಡೆಸುತ್ತಾರೆ. ಬೆಳೆ ಬಂದಾಗಲೂ ಹಗ್ಗ ಹಿಡಿದೇ ಕಟಾವು ಕಾರ್ಯ ನಡೆಯುತ್ತದೆ. ಸೊಂಟ ಮಟ್ಟದ ನೀರಿನಲ್ಲೇ ಕೇವಲ ತೆನೆ ಮಾತ್ರ ಕೊಯ್ದು ಸಣ್ಣ ಹೊರೆ ಮಾಡಿ ದೋಣಿಗಳಲ್ಲಿ ಸಾಗಿಸುವರು. ನೆರೆ ಬಂದರೂ ಕೊಳೆಯದೆ ಮೊಳಕೆ ಹಾಳಾಗದೆ ನೆರೆ ಇಳಿದ ನಂತರ ಕ್ಷಾರಯುಕ್ತ ಜಮೀನಿನಲ್ಲಿ ಅರಳಬಲ್ಲ ಕಗ್ಗ ತಳಿ ಪೂರ್ವಜರೇ ಅಭಿವೃದ್ಧಿ ಪಡಿಸಿದ್ದಾಗಿದೆ. ಸಾಮಾನ್ಯ ಭತ್ತ 90 ರಿಂದ150 ದಿನಗಳ ನಡುವೆ ಬೆಳೆಯುವ ಭತ್ತದ ತಳಿಗಳ ನಡುವೆ ಯಾವುದೇ ನಿರ್ವಹಣೆ ಇಲ್ಲದೆ ಕಗ್ಗ ತಳಿ ನಾಲ್ಕೂವರೆ ತಿಂಗಳ ಸುದೀರ್ಘ ಬೆಳೆಯಾಗಿದೆ. ಇಳುವರಿ ಕಡಿಮೆಯಾದರೂ ಔಷಧೀಯ ಗುಣ ಹೊಂದಿದೆ ಎಂಬ ಕಾರಣದಿಂದ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಅಘನಾಶಿನಿಯ ಹಿನ್ನೀರಿನಲ್ಲಿ ಈ ಭತ್ತ ಬೆಳೆಸುವರು. ಈ ತಳಿ ನಾಶವಾದರೆ ಮುಂದೆಂದೂ ಸಿಗದು. ಇದರ ಪೇಟೆಂಟ್ ಪಡೆಯಲು ಬಹುರಾಷ್ಟ್ರೀಯ ಕಂಪನಿಗಳು ತುದಿಗಾಲಲ್ಲಿವೆ.
ಗುಡ್ಡಗಳ ಇಳಿಜಾರು ನೆಲದಲ್ಲಿ ಉತ್ತು ಬಿತ್ತನೆ ಮಾಡುವ ಕುಮೇರು ಭತ್ತ ವಿಶಿಷ್ಟವಾದುದು. ಮಳೆಯ ನೀರಷ್ಟೇ ಇದಕ್ಕೆ ಆಧಾರ. ಗದ್ದೆಯ ಯಾವುದೇ ಸ್ವರೂಪ ಇದಕ್ಕಿರುವುದಿಲ್ಲ. ಹಾಗೆಯೇ ಭತ್ತದಂತೆಯೇ ಬೆಳೆದು ಹಾಗೆಯೇ ತೆನೆಬರುವ ಕುನಲೆ ಎಂಬ ತಳಿಯೊಂದಿದೆಯಾದರೂ ಅದು ಪಕ್ವವಾಗುತ್ತ ಉದುರಿ ಹೋಗುವುದರಿಂದ ಬೇಸಾಯಕ್ಕೆ ಒದಗಿಲ್ಲವೆನಿಸುತ್ತದೆ. ವೆಟ್ಟಿ ಬೆಳ್ಳಟ್ಟಿ ಎಂಬ ತಳಿಯ ಪೈರಿನ ಮೇಲೆ ಹತ್ತು ಹನ್ನೆರಡು ದಿನ ನೀರು ನಿಂತರೂ ಬೆಳೆ ಹಾಳಾಗದು. ಹೀಗೆ ಎಣೆಲು, ಪಟ್ಲ, ಸುಗ್ಗಿ, ಕೊಳಕೆ ಎಂದು ಅಷ್ಟೇ ಅಲ್ಲದೆ ಬೆಳೆಯುವ ಭತ್ತದ ವೈವಿಧ್ಯತೆ ಎಷ್ಟೊಂದು ವಿಶೇಷವಾಗಿದೆಯಲ್ಲವೇ?
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗಾಡಿ ಸಮೀಪದ ಮಿತ್ತ ಬಾಗಿಲಿನ ಅಮೈ ನಿವಾಸಿ ಬಿ.ಕೆ. ದೇವರಾವ್ ತನ್ನ ಐದು ಎಕರೆ ಗದ್ದೆಯಲ್ಲಿ 140 ಕ್ಕೂ ಅಧಿಕ ತಳಿ ಬೆಳೆಯುತ್ತಿದ್ದಾರೆ. ಭತ್ತವನ್ನು ನೋಡಿಯೇ ತಳಿ ಗುರುತಿಸುವಷ್ಟು ಸೂಕ್ಷ್ಮತೆ ಇವರಿಗಿದೆಯಂತೆ.
ಹಾಗೇ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಕಿರುಗಾವಲಿನ ರೈತ ಸೈಯ್ಯದ್ ಮಹಮ್ಮದ್ ಘನಿಖಾನ್ ರವರ ಭತ್ತದ ಕಣಜದಲ್ಲಿ 567 ತಳಿಗಳಿವೆಯಂತೆ. ಇಂದು ಕಾಡು ಪ್ರಾಣಿಗಳ ಉಪಟಳ, ಕಾರ್ಮಿಕರ ಕೊರತೆ, ಸುಲಭದಲ್ಲಿ ಹೆಚ್ಚು ಹಣ ನೀಡುವ ಇತರ ಆರ್ಥಿಕ ಬೆಳೆಗಳ ಆಕರ್ಷಣೆಯಿಂದಾಗಿ "ಒಳ್ಳೆಯ ಅನ್ನ ಬೇಕು, ಬೇಸಾಯ ಬೇಡ" ಎಂಬಂತಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಮಿತಿ ಮೀರಿದ ಕಾರಣ ಬದುಕಿನ ಭದ್ರತೆಯಾದ ಅನ್ನವೇ ವಿಷವಾಗಿದೆ. ಇರುವ ಗದ್ದೆಗಳು ಬೇಸಾಯ ಕಾಣದೆ ಗತ ಇತಿಹಾಸವನ್ನು ನೆನೆಯುತ್ತಿವೆ. ನಾವು ಸಾವಯವ ಗೊಬ್ಬರದ ಜೊತೆ ಭತ್ತ ಬೆಳೆದು ಬದುಕಲಾರಂಭಿಸಿದಾಗ ಆಹಾರವೇ ಅಮೃತವಾಗಬಹುದಲ್ಲವೇ? ನಾವು ತಿನ್ನುವ ಒಂದೊಂದು ಅಗುಳಿಗೂ ಎಷ್ಟೊಂದು ಮಹತ್ವವಿದೆ! ರೈತರು ಪಡುವ ಕಷ್ಟಗಳೇನೆಂಬ ಬಗ್ಗೆ ಅರಿವಿರಲೇ ಬೇಕಲ್ಲವೇ..?
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
******************************************