ಪಯಣ : ಸಂಚಿಕೆ - 67 (ಬನ್ನಿ ಪ್ರವಾಸ ಹೋಗೋಣ)
Saturday, November 1, 2025
Edit
ಪಯಣ : ಸಂಚಿಕೆ - 67 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ ಬ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ಮೈಸೂರಿನ ಮತ್ತೊಂದಿಷ್ಟು ಪ್ರವಾಸಿ ತಾಣದ ಬಗ್ಗೆ ತಿಳಿಯೋಣವೇ... ಮತ್ತೇಕೆ ತಡ - ಬನ್ನಿ.... ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ "ಮೈಸೂರು ಜಿಲ್ಲೆಯ ಹಲವು ಪ್ರವಾಸ ತಾಣಗಳಲ್ಲಿ ಪ್ರಮುಖವಾದ ಕುಕ್ಕರಹಳ್ಳಿ ಕೆರೆ" ಗೆ ಪಯಣ ಮಾಡೋಣ.
ಆನಂದಮಯ ಈ ಕುಕ್ಕರಳ್ಳಿ ಕೆರೆ ಹೃದಯವು. ಕುವೆಂಪು ಮನದಲ್ಲಿ ಕವನಗಳ ಅಲೆಯೆಬ್ಬಿಸಿದ ಕೆರೆ. ಅಷ್ಟೇ ಏಕೆ, ಪುಸ್ತಕ 'ಪ್ರೇಮಿಗಳು' ಸುಳಿದಾಡುವ ತಾಣವೂ, ಮೈಸೂರಿಗೆ ಬರುವ ಪ್ರವಾಸಿಗರು ನೋಡಲೇ ಬೇಕೆಂಬ ಮಹದಾಸೆ ತರುವ ಕೆರೆಯಿದು. ರಾಷ್ಟ್ರಕವಿ ಕುವೆಂಪು ಅವರಿಗೆ ಮೈಸೂರಲ್ಲಿ ಅಚ್ಚುಮೆಚ್ಚಿನ ತಾಣಗಳೆಂದರೆ ಕುಕ್ಕರಹಳ್ಳಿ ಕೆರೆ ಹಾಗೂ ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣ.
ಫೋಟೋ - 1
ಕವಿ ಮನಸ್ಸಿನ ಕುವೆಂಪು ಇಲ್ಲಿನ ಪರಿಸರವನ್ನೂ, ತಣ್ಣನೆಯ ಗಾಳಿಯನ್ನೂ ಸವಿಯುತ್ತ ಭಾವಪರವಶರಾಗಿ ರಚಿಸಿದ ನೂರಾರು ಕವಿತೆಗಳು ಇಂದು ಜನಮಾನಸದಲ್ಲಿ ಸೇರಿವೆ. ಕುಕ್ಕರಹಳ್ಳಿ ಕೆರೆ ಕುವೆಂಪು ಸಾಹಿತ್ಯದಲ್ಲಿ ಕುಕ್ಕನಹಳ್ಳಿ ಕೆರೆಯಾಗಿಯೂ ಕರೆಸಿಕೊಂಡಿವೆ. ಮೈಸೂರಿನ ಕುಕ್ಕರಹಳ್ಳಿ ಕೆರೆ ಮೈಸೂರಿಗೇ ಏನು, ಕುವೆಂಪು ಅವರ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಜಾಗ. ಇಂದಿನ ಮೈಸೂರು ವಿವಿ ಆವರಣದ 150 ಎಕರೆ ಜಾಗದಲ್ಲಿ ಹರಡಿರುವ ಈ ಕೆರೆ ಮೈಸೂರಿಗೆ ಪರಿಸರ ಮುಕುಟದಂತಿರುವ ಅದ್ಭುತ ತಾಣ. ಈ ಕೆರೆಗೂ ಕುವೆಂಪು ಅವರಿಗೂ ಇದ್ದದ್ದು ತಾಯಿ-ಮಗನ ಅದ್ಭುತ ಸಂಬಂಧ.
ಫೋಟೋ - 2
ಕುವೆಂಪು ಅವರು 1958ರಲ್ಲಿ ಮೈಸೂರು ವಿವಿಯ ಕುಲಪತಿಯಾಗಿದ್ದಾಗ ದೂರದೃಷ್ಟಿಯಿಂದ ಮೈಸೂರು ವಿವಿಗೆ ಮಹಾರಾಜರ ಅಧೀನದಲ್ಲಿದ್ದ ಇಂದಿನ 739 ಎಕರೆಯ ಜಾಗದಲ್ಲಿ ಮಾನಸ ಗಂಗೋತ್ರಿ ನಿರ್ಮಿಸಿದರು. 150 ಎಕರೆ ಜಾಗದಲ್ಲಿದ್ದ ಕುಕ್ಕರಹಳ್ಳಿ ಕೆರೆಯನ್ನು ವಿವಿ ಅಧೀನಕ್ಕೆ ತೆಗೆದುಕೊಂಡರು. ಹಾಗಾಗಿ, ಕುವೆಂಪು ಅವರಿಗೆ ಕುಕ್ಕರಹಳ್ಳಿ ಕೆರೆ ಜೊತೆ ಅವಿನಾಭಾವ ಸಂಬಂಧ. ನಿತ್ಯ ಬೆಳಿಗ್ಗೆ-ಸಂಜೆ ಇಲ್ಲಿ ವಾಯು ಸಂಚಾರಕ್ಕೆ ಬಂದು ಕೆರೆಯ ಅದ್ಭುತ ವರ್ಣಗಳಿಂದ ಸೂರ್ಯನ ಬೆಳಕಿಗೆ ಪ್ರತಿಫಲನಗೊಳ್ಳುವ ನೀರನ್ನು ನೋಡುತ್ತಾ ಕವಿತೆಗಳನ್ನು ಬರೆಯಲು ಸ್ಫೂರ್ತಿ ಪಡೆಯುತ್ತಿದ್ದರು.
ಫೋಟೋ - 3
ಕುವೆಂಪು ಅವರ ಪ್ರಸಿದ್ದ ಕುಕ್ಕರಹಳ್ಳಿಯ ಕೆರೆಯ ಮೇಲೆ ಕವಿತೆ, ದೇವರು ರುಜು ಮಾಡಿದನು, ಕವಿ ಪರವಶನಾಗುತ್ತಾ ಅದ ನೋಡಿದನು ಎಂಬ ಸಾಲುಗಳು ಈ ಕೆರೆಯ ಸೌಂದರ್ಯ ಬಿಚ್ಚಿಡುತ್ತವೆ. ಕುವೆಂಪು ಪುತ್ರಿ ತಾರಿಣಿದೇವಿ ರಚಿಸಿರುವ 'ಮಗಳು ಕಂಡ ಕುವೆಂಪು' ಕೃತಿಯಲ್ಲಿ ತೇಜಸ್ವಿ, ಇಂದುಕಲಾ, ತಾರಣಿದೇವಿ, ಕುಕಿಲೋದಯ ಚೈತ್ರ ಕೆರೆಯಲ್ಲಿ ಆಟವಾಡಲು ಹೋದಾಗ ಕುವೆಂಪು ಖುಷಿಯಾಗಿ ಮನೆಗೆ ಕರೆತರುತ್ತಿದ್ದದ್ದು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 'ಅಣ್ಣನ ನೆನಪು' ಕೃತಿಯಲ್ಲಿ ತೇಜಸ್ವಿ ಹಾಗೂ ಸ್ನೇಹಿತರ ಬಳಗ ಮೀನು ಹಿಡಿಯುತ್ತಿದ್ದದ್ದು ಕೆರೆಯ ಇತಿಹಾಸವನ್ನೇ ಸಾರುತ್ತವೆ.
ಫೋಟೋ - 4
ಕೆರೆಯದು ಅದ್ಭುತ ನೈಸರ್ಗಿಕ ಪರಿಸರ. ಅತಿ ಸೂಕ್ಷ್ಮ ಜಲ, ನೆಲ, ಆಗಸ ಜೀವ ವೈವಿಧ್ಯತೆ ಇರುವ ಕೆರೆ, ನೂರಾರು ಜಾತಿಯ ಪಕ್ಷಿಗಳು, ಮೀನುಗಳು, ಸಸ್ಯರಾಶಿ ಇಲ್ಲಿ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ 1864ರಲ್ಲಿ ಕಟ್ಟಿಸಿದ ಈ ಕೆರೆ ಒಂದು ಕಾಲದಲ್ಲಿ 10 ಸಾವಿರ ಎಕರೆ ಜಾಗಕ್ಕೆ ನೀರಾವರಿ, ಆರಂಭದ ಮೈಸೂರು ನಗರಕ್ಕೆ ಕುಡಿವ ನೀರನ್ನೂ ಒದಗಿಸುತ್ತಿತ್ತು. ಆದರೆ, ಒಳಚರಂಡಿ ನೀರಿನಿಂದಾಗಿ ಅಂದಿನ ಭವ್ಯ ಪರಿಸರದ ಕೆರೆ ಈಗ ಕೊಳೆತು ನಾರುವ ಗಬ್ಬು ತಾಣವಾಗಿದೆ. ಈ ಕೆರೆಯಲ್ಲೂ ಮೊಸಳೆ ಇದ್ದು, ಪ್ರವಾಸಿಗರು ಎಚ್ಚರದಿಂದಿರುವುದು ಅಗತ್ಯ.
"ಒಂದೆಡೆ ರಸಋಷಿ ರಾಷ್ಟ್ರಕವಿ ಆದ ಕುವೆಂಪು ನೆನಪು, ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರ ತಿರುಗಾಟ, ಮೈಸೂರು ವಿಶ್ವವಿದ್ಯಾನಿಲಯದ ಪರಿಸರ, ಮೈಸೂರು ಅರಮನೆ ಅರಸರ ಕೊಡುಗೆ, ಮೈಸೂರಿನ ಪ್ರಾಕೃತಿಕ ಸೌಂದರ್ಯ ಜೊತೆಗೆ ಪಕ್ಷಿಗಳ ಹಾರಾಟದ ನಡುವೆ ಕುಕ್ಕರಹಳ್ಳಿ ಕೆರೆ ನೋಡಲು ಬಲುಚಂದ" ಬನ್ನಿ ಒಮ್ಮೆ ಪ್ರವಾಸಕ್ಕೆ....
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************