ಜೀವನ ಸಂಭ್ರಮ : ಸಂಚಿಕೆ - 216
Monday, November 17, 2025
Edit
ಜೀವನ ಸಂಭ್ರಮ : ಸಂಚಿಕೆ - 216
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಬುದ್ಧನ ಕಾಲದಲ್ಲಿ ನಡೆದ ಘಟನೆ ತಿಳಿದುಕೊಳ್ಳೋಣ. ಜೀವನ ಸುಂದರ. ಇದನ್ನು ಯಾವುದಕ್ಕಾಗಿ ಕಳೆಯಬೇಕು? ಯೋಚಿಸಬೇಕು. ಬುದ್ಧ ಅಂದರೆ ಪ್ರಶಾಂತ ಸಂತ. ಈತನ ಸಮೀಪದಲ್ಲಿ ಶಾಂತಿಯ ಗಾಳಿ ಬೀಸುತ್ತಿತ್ತು. ಆತನ ಸಮೀಪಕ್ಕೆ ಹೋದವರೆಲ್ಲ ಪರಿವರ್ತನೆಗೊಂಡಿದ್ದರು. ಅಷ್ಟು ಸಾಮರ್ಥ್ಯ ಆತನಲ್ಲಿ. ಇಡೀ ಬಿಹಾರ "ಬುದ್ಧಂ ಶರಣಂ ಗಚ್ಛಾಮಿ" ಅನ್ನುತ್ತಿತ್ತು. ಅಲ್ಲಿ ಒಂದು ಹೊಳೆ ಹರಿಯುತ್ತಿತ್ತು. ಆ ಹೊಳೆಯ ಒಂದು ಬದಿ ಒಂದು ರಾಜ್ಯ, ಇನ್ನೊಂದು ಬದಿ ಇನ್ನೊಂದು ರಾಜ್ಯ. ಈ ನದಿ ನೀರು ಬಳಸಿಕೊಂಡು ಎರಡು ರಾಜ್ಯವು ಶ್ರೀಮಂತವಾಗಿದ್ದವು. ಒಮ್ಮೆ ನೀರಿಗಾಗಿ ಜಗಳ ಶುರುವಾಯಿತು. ಆ ನದಿ ನಮ್ಮ ಒಡೆತನಕ್ಕೆ ಬರಬೇಕೆಂದು ಜಗಳ ಶುರುವಾಯಿತು. ನದಿ ಸುಮ್ಮನೆ ಹರಿದಿತ್ತು. ಇದು ಸಾವಿರಾರು ವರ್ಷದಿಂದ ಹರಿಯುತ್ತಿತ್ತು. ತಾನು ಹರಿಯುವ ಸುತ್ತಮುತ್ತ ಹಸಿರಿನಿಂದ ಕಂಗೊಳಿಸುವಂತೆ ಮಾಡಿತ್ತು. ಶ್ರೀಮಂತ ಮಾಡಿತ್ತು. ಆದರೆ ಮನುಷ್ಯನ ಆಶೆ ಶುರುವಾಯಿತು. ಎರಡು ರಾಜ್ಯದ ರಾಜರು ತೀರ್ಮಾನ ಮಾಡಿದರು. ಈ ನದಿ ನಮ್ಮ ಒಡೆತನಕ್ಕೆ ಸೇರಬೇಕು. ನಮ್ಮ ಒಪ್ಪಿಗೆ ಇಲ್ಲದೆ ಅವರು ನೀರನ್ನು ಬಳಸಬಾರದು ಎಂದು. ಒಂದು ದಿನ ಇಬ್ಬರೂ ರಾಜರು ಯುದ್ಧ ಮಾಡಲು ಸಿದ್ಧರಾದರು. ಎರಡು ಕಡೆ ಸೈನ್ಯ ತಯಾರಾಗಿ ನಿಂತಿದೆ. ಇನ್ನೇನು ಯುದ್ಧ ಶುರುವಾಗಬೇಕು. ಯುದ್ಧ ಶುರುವಾಯಿತು ಅಂದರೆ, ಸ್ವಚ್ಛವಾಗಿ ಹರಿಯುವ ನೀರು ರಕ್ತಮಯವಾಗುತ್ತಿತ್ತು. ಈ ವಿಚಾರ ಬುದ್ಧನಿಗೆ ತಿಳಿಯಿತು. ತಕ್ಷಣ ಬುದ್ಧ ಅಲ್ಲಿಗೆ ಬಂದನು. ಅಲ್ಲಿ ಸಾವಿರಾರು ಸೈನಿಕರು ನದಿಗಾಗಿ ಪ್ರಾಣ ಬಿಡಬೇಕಿತ್ತು. ಯಾವ ನದಿ ಇವರನ್ನು ಪೋಷಿಸಿತ್ತೊ? ಅದಕ್ಕಾಗಿ ಯುದ್ಧ ಮಾಡಲು ತಯಾರಾಗಿದ್ದರು. ಅಲ್ಲಿ ಬುದ್ಧ ಎರಡು ರಾಜರನ್ನು ಕರೆದ. ಇಬ್ಬರು ರಾಜರು ಬುದ್ದನಲ್ಲಿಗೆ ಬಂದರು. ಅವರ ಜೊತೆ ಸೇನಾಪತಿಗಳು ಬಂದರು. ಆಗ ಬುದ್ಧ ಕೇಳಿದ, "ಏನು ಮಾಡ್ತಾ ಇದ್ದೀರಿ ಇಬ್ಬರೂ"?. ರಾಜರು ಹೇಳಿದರು, "ಬುದ್ದ ಭಗವಂತನೇ, ಈ ನದಿ ನಮಗೆ ಸೇರಬೇಕು" ಅಂತ ಇಬ್ಬರೂ ರಾಜರು ಹೇಳಿದರು. ಬುದ್ಧ ಹೇಳಿದ "ಇಷ್ಟು ವರ್ಷ ಯಾರಿಗೆ ಸೇರಿತ್ತು?." ನೀವು ಇರಲಿಲ್ಲ, ನದಿ ಹರಿದಿತ್ತು. ನಿಮ್ಮ ರಾಜ್ಯಗಳೇ ಇಲ್ಲದಾಗಲೂ, ಈ ನದಿ ಹರಿತಾ ಇತ್ತು. ಮನುಷ್ಯ ಕುಲವೇ ಇರಲಿಲ್ಲ, ನದಿ ಹರಿಯುತ್ತಾ ಇತ್ತು. ಎಷ್ಟು ಪ್ರಾಣಿಗಳಿಗೆ ನೀರು ಕೊಟ್ಟಿದೆ? ಎಷ್ಟು ಸಸ್ಯ ಸಂಪತ್ತಿಗೆ ನೀರುಣಿಸಿದೆ?. ಇಂತಹ ಅತ್ಯದ್ಭುತ ನದಿ ನಿಮ್ಮದು ಹೇಗಾಗುತ್ತದೆ?" ಅಂದನು. "ಈ ನದಿ ನಿಂತಿಲ್ಲ, ಹರಿಯುತಾ ಇದೆ, ಹರಿಯುವಾಗ ನಿಮ್ಮ ಬಳಿ ಬಂದರೆ ನಿಮ್ಮದು, ಮುಂದೆ ಹೋದಾಗ ಮತ್ತೊಬ್ಬರದ್ದು. ಹಾಗಾಗಿ ಇದು ಯಾರದೂ ಅಲ್ಲ, ನದಿ ನದೀದು. ಹರಿದು ಹೋಗುವ ನದಿಗಾಗಿ ರಕ್ತ ಹರಿಸುತ್ತೀರಲ್ಲ , ನೀವು ಜಾಣರೊ ದಡ್ಡರೊ" ಎಂದನು. "ಈ ನದಿ ಯಾರ ಮಾತು ಕೇಳುವುದಿಲ್ಲ. ಅಂತಹ ಹರಿದು ಹೋಗುವ ನದಿಗಾಗಿ ನಿಮ್ಮ ಪ್ರಾಣ ಕೊಡುತ್ತೀರಲ್ಲ, ನಿಮ್ಮ ರಕ್ತಕ್ಕೆ ಬೆಲೆ ಇಲ್ಲವೇನು?." ಅಂದನು. "ನೀವು ಕ್ಷತ್ರಿಯರು, ರಾಜರು. ನಿಮ್ಮ ರಕ್ತಕ್ಕೆ ಬೆಲೆ ಇಲ್ಲವೇನು?" ಅಂದನು. ಆಗ ರಾಜರು ಹೇಳಿದರು, ಹೌದು, ನಾವು ಕ್ಷತ್ರಿಯರು, ನಮ್ಮ ರಕ್ತಕ್ಕೆ ಬೆಲೆ ಇದೆ ಎಂದರು. ಆಗ ಬುದ್ಧ ಹೇಳಿದ "ಹರಿದು ಹೋಗುವ ನೀರಿಗಾಗಿ ಈ ಬೆಲೆಯುಳ್ಳ ರಕ್ತ ಹರಿಸುತ್ತಾರೆ ಏನು?" ಎಂದನು. ಹರಿದು ಹೋಗುತ್ತದೆ. ನಿಮ್ಮ ಬಳಿ ಇರುವುದಿಲ್ಲ. ಹೇಳಿ ಯಾವ ನದಿ ನೀರು ನಿಮ್ಮ ಬಳಿ ಇರುತ್ತದೆ?" ಎಂದನು. "ಈಗ ನಿಮ್ಮದೇ ಆಯಿತು ಅಂತ ಇಟ್ಟುಕೊಳ್ಳಿ. ಆ ನದಿ ನಿಮ್ಮ ಮಾತು ಕೇಳುವುದಿಲ್ಲ. ಸುಮ್ಮನೆ ಹರಿತ ಇರುತ್ತದೆ. ನಿಮ್ಮದು ಅಂತ ಅದಕ್ಕೆ ಗೊತ್ತಿಲ್ಲ. ಅವರದ್ದು ಅಂತ ಗೊತ್ತಿಲ್ಲ. ಇದು ಸರಿಯೇ. ಏನು ಗೊತ್ತಿರದ ಈ ನದಿ ಎಷ್ಟು ಶಾಂತವಾಗಿ ಹರಿಯುತ್ತದೆ?. ಬುದ್ಧಿವಂತರಾದ ನಿಮಗೆ ಬದುಕಲು ಬರುತ್ತಾ ಇಲ್ಲವಲ್ಲ, ಬೆಲೆಯುಳ್ಳ ನಿಮ್ಮ ರಕ್ತವನ್ನು ಈ ಹರಿಯುವ ನೀರಿಗಾಗಿ ಖರ್ಚು ಮಾಡುತ್ತೀರಲ್ಲ, ನಾಳೆ ಈ ನದಿಗಳಲ್ಲಿ ನೀರು ಹರಿಯುವುದಿಲ್ಲ ಬರಿ ರಕ್ತ ಹರಿಯುತ್ತದೆ. ಇಷ್ಟಕ್ಕಾಗಿ ಜೀವನವೇ. ಎಲ್ಲಾ ಆಯ್ತು ಅಂತ ಭಾವಿಸಿ, ನೀರೇನು ನಿಮ್ಮದಾಗುತ್ತದೆ ಏನು?" ಅಂದನು.
ಈ ಮಾತನ್ನು ಕೇಳಿ ಯುದ್ಧ ನಿಂತಿತು. ಸೈನಿಕರಿಗೆ ಬಹಳ ಸಂತೋಷವಾಯಿತು. ಏಕೆಂದರೆ ಸಾಯುವವರಿದ್ದರು. ಯುದ್ಧ ಅಂದರೆ ಆರಾಮ ಏನು?. ಹೋದವರು ವಾಪಸ್ ಬರುತ್ತಾರೆ ಅಂತ ಭಾವನೆ ಇಲ್ಲ. ಕಳುಹಿಸುವಾಗ ಮನೆಯವರು ಕಣ್ಣೀರು ಸುರಿಸಿ ಕಳಿಸುತ್ತಾರೆ. ಅವನು ಬರುತ್ತಾನೆ ಅಂತ ಇಲ್ಲ. ಸುರಕ್ಷಿತವಾಗಿ ಇರ್ತಾನೆ ಅಂತಾನೂ ಇಲ್ಲ. ಯುದ್ಧ ಯಾವುದಕ್ಕೆ?. ಹರಿದು ಹೋಗುವ ನೀರಿಗಾಗಿ.
ಜೀವನ ಬಳಸಬೇಕು. ಯಾವುದಕ್ಕೆ ಬಳಸಬೇಕು? ಅನ್ನುವುದನ್ನು ತಿಳಿದು ಬಳಸಬೇಕು. ಬುದ್ಧ ಹೇಳಿದ್ದು "ಸರ್ವಂಕ್ಷಣಿಕಂ". ಎಲ್ಲವೂ ಒಂದು ಕ್ಷಣ ಇರುತ್ತದೆ, ಹೋಗುತ್ತದೆ. ಕ್ಷಣವರ್ತಿಯಾದ ವಸ್ತುಗಳಿಗಾಗಿ ಅಮೂಲ್ಯವಾದ ಜೀವನವನ್ನು ಏಕೆ ಹಾಳು ಮಾಡಬೇಕು?. ಯಾವುದು ಜೀವನ ಸಿಂಗರಿಸುತ್ತದೆ?. ಯಾವುದು ಜೀವನ ಶ್ರೀಮಂತ ಮಾಡುತ್ತದೆ? ಅದಕ್ಕಾಗಿ ಜೀವನ ಬಳಸಬೇಕು. ಹಾಗೆ ಬದುಕಿದವರು ಇದ್ದಾರೆ. ಜೀವನ ಕೆಡಿಸಿಕೊಂಡವರು ಇದ್ದಾರೆ. ಇಬ್ಬರನ್ನು ನೋಡಿ ಕಲಿಯಬೇಕು. ಜೀವನವನ್ನು ಚೆನ್ನಾಗಿ ಬಳಸಬೇಕು. ಜೀವನದ ಮೌಲ್ಯ ಗೊತ್ತಿರಬೇಕು. ಜೀವನದ ಪ್ರತಿಯೊಂದು ಕ್ಷಣ ಅಮೂಲ್ಯ. ನಮ್ಮ ಜೀವನದಲ್ಲಿ ಕೋಟಿ ಕೋಟಿ ಕ್ಷಣಗಳು ಬರುತ್ತವೆ. ಅವುಗಳನ್ನು ಹೇಗೆ ಬಳಸಬೇಕು? ಗೊತ್ತಿರಬೇಕು ಎಂದ ಬುದ್ದನು. ಬದುಕನ್ನು ಚೆಲ್ಲಾಡಬಾರದು. ಬಡತನ ಮಹತ್ವದಲ್ಲ. ಸಿರಿತನ ಮಹತ್ವದಲ್ಲ. ಬದುಕು ಮಹತ್ವದ್ದು. ನಮ್ಮ ದೇಹ, ನಮ್ಮ ಮನಸ್ಸು ಹಾಗೂ ನಮ್ಮ ಬುದ್ಧಿಯನ್ನು ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ನಮ್ಮ ದೇಶದಲ್ಲಿ ವರದಕ್ಷಿಣೆ ಇದೆ. ವರ ಅಂದರೆ ಶ್ರೇಷ್ಠ. ಆತನಿಗೆ ಬೆಲೆಕಟ್ಟಿ ವಿವಾಹ ಮಾಡುತ್ತಾರೆ. ಆದರೆ ಗೊತ್ತಿರಲಿ, ಈ ದೇಹ ಬೆಲೆ ಕಟ್ಟಲಾಗದ ಸಂಪತ್ತು. ಒಂದು ಸುಂದರ ಮನಸ್ಸಿನ ಬೆಲೆ ಎಷ್ಟು?. ಜಗತ್ತನ್ನು ತೋರಿಸುವ ಕಣ್ಣಿನ ಬೆಲೆ ಎಷ್ಟು?. ಒಂದು ಕ್ಷಣದ ಜೀವನದ ಬೆಲೆ ಎಷ್ಟು?. ಜಗತ್ತಿಗೆ, ಜಗತ್ತಿನ ವಸ್ತುಗಳಿಗೆ, ಬೆಲೆ ಬರುವುದು ಈ ಜೀವನದಿಂದ. ಈ ಜೀವನದ ಬೆಲೆ ಎಷ್ಟು?. ವಸ್ತುಗಳಿಗೆ ಬೆಲೆ ಕಟ್ಟುವವರು ನಾವು. ಆ ವಸ್ತುವಿಗೆ ತನ್ನ ಬೆಲೆ ಗೊತ್ತಿಲ್ಲ. ಬೆಲೆ ಕಟ್ಟುವ ನಾವು ಎಷ್ಟು ಬೆಲೆ ಬಾಳುತ್ತೇವೆ? ಅನ್ನೋದನ್ನ ತಿಳಿದುಕೊಂಡಿರಬೇಕು. ಒಂದು ಕ್ಷಣದ ಜೀವನದ ಬೆಲೆ ಕಟ್ಟಲು ಆಗುವುದಿಲ್ಲ. ಉದಾಹರಣೆಗೆ ಗಣಿತದಲ್ಲಿ ಒಂದು ಅಂತ ಇದೆ. ಒಂದರ ಬೆಲೆ ಒಂದು. ಒಂದರ ಪಕ್ಕ ಒಂದು ಶೂನ್ಯ ಇದ್ದರೆ ಅದು 10. ಎರಡು ಶೂನ್ಯ ಇಟ್ಟರೆ ಅದು ನೂರು. ಒಂದು ಒಂದೇ. ಅದರ ಮುಂದೆ ಶೂನ್ಯ ಇಟ್ಟಿದ್ದೀನಿ ಅಂದರೆ ಬೆಲೆ ಇಲ್ಲದ್ದು. ಆ ಶೂನ್ಯ ಇಟ್ಟಹಾಗೆ ಒಂದರ ಬೆಲೆ ಹೆಚ್ಚಾಗುತ್ತದೆ. ನಮ್ಮ ಬದುಕು ಒಂದು. ವಸ್ತುಗಳು ಶೂನ್ಯ ಇದ್ದಂತೆ. ವಸ್ತುಗಳು ನಮ್ಮ ಬಳಿ ಬಂದಂತೆ ನಮ್ಮ ಬೆಲೆ ಹೆಚ್ಚಾಗುತ್ತದೆ. ಬದುಕು 'ಒಂದು' ಇದ್ದ ಹಾಗೆ. ಗಳಿಸಿದ್ದು 'ಶೂನ್ಯ' ಇದ್ದ ಹಾಗೆ ಆ ವಸ್ತುಗಳು ಬಂದಂತೆ ನಮಗೆ ಬೆಲೆ ಹೆಚ್ಚಾಗುತ್ತದೆ. ಆ ಬೆಲೆ ನಮ್ಮದು ಅಂತ ಭಾವಿಸುತ್ತೇವೆ. ಆದರೆ ಅದು ನಮ್ಮ ಬೆಲೆಯಲ್ಲ. ಅದು ಬಂದಿದ್ದರ ಸಾಮೀಪ್ಯ ಅಷ್ಟೇ. ಅದನ್ನು ತೆಗೆದರೆ ನಾವು ನಾವೇ.
ಈಗ ಒಂದು ನೌಕರಿ ಮಾಡ್ತಾ ಇದ್ದೀವಿ ಅನ್ನಿ. ಸಂಬಳ 25000. ನಮ್ಮ ಬೆಲೆ 25000 ಇದೆ ಏನು?. ಇದೇ ಮನುಷ್ಯ ಅಮೆರಿಕಕ್ಕೆ ಹೋಗುತ್ತಾನೆ. ಆತನ ವೇತನ ಐದು ಲಕ್ಷ. ಈತ ಏನು ಬದಲಾಗಿಲ್ಲ. ಸ್ಥಳ ಬದಲಾಗಿದೆ ಅಷ್ಟೇ. ಅದು ಆತನ ಬೆಲೆಯಲ್ಲ, ಸ್ಥಳದ ಬೆಲೆ ಅಷ್ಟೇ. ನಮ್ಮ ಬೆಲೆ ಅಮೂಲ್ಯ. ನಮ್ಮ ಬಳಿ ಬಂದದ್ದೆಲ್ಲ ಬೆಲೆ ಬಾಳಲಿಕ್ಕೆ ಶುರುಮಾಡುತ್ತದೆ. ಒಂದು ದೀಪ ಇದೆ, ಪಣತಿಗೆ ಬೆಲೆ ಕಟ್ಟಬಹುದು. ಎಣ್ಣೆ, ಬತ್ತಿಗೆ ಬೆಲೆ ಕಟ್ಟಬಹುದು. ಆದರೆ ಬೆಳಕಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಬೆಳಕೆ ಇಲ್ಲ ಅಂದರೆ ಹಣತೆಗೆ, ಬತ್ತಿಗೆ ಮತ್ತು ಎಣ್ಣೆಗೆ ಎಲ್ಲಿದೆ ಬೆಲೆ?. ನಾವು ಯಾವುದನ್ನು ಕೊಂಡು ತಂದಿದ್ದೇವೆ ಅದಕ್ಕೆ ಬೆಲೆ. ನಾವು ಕೊಂಡು ತರದೆ ಇರುವುದು ಬೆಲೆ ಕಟ್ಟಲು ಆಗುವುದಿಲ್ಲ. ಅದು ಅಮೂಲ್ಯ. ನಾವು ಅನ್ನುತ್ತೇವೆ, ಬಂಗಾರದ ಹಣತೆ ನಮ್ಮದು ಅಂತ. ಬೆಳಕು ಇದೆ ಅಂತ ಹಣತೆಗೆ ಬೆಲೆ. ಹಾಗೆ ನಾನು ಇದ್ದೇನೆ ಅಂತ ಪ್ರಪಂಚಕ್ಕೆ ಬೆಲೆ. ಪ್ರಪಂಚ ಇದೆ ಅಂತ ನನಗೆ ಬೆಲೆ ಇಲ್ಲ. ಒಂದು ದೊಡ್ಡ ಮನೆಯಲ್ಲಿ ವಾಸವಾಗಿದ್ದೇವೆ. ನಾನು ಇದ್ದೀನಿ ಅಂತ ಮನೆಗೆ ಬೆಲೆ. ದೊಡ್ಡ ಮನೆಯಲ್ಲಿ ಇದ್ದಾನೆ ಅಂತ ನನಗೆ ಬೆಲೆ ಇಲ್ಲ. ನಾನು ಇದ್ದೇನೆ ಅಂತ ಹೊಲಕ್ಕೆ ಬೆಲೆ. ನಾನು ಅನ್ನುವುದು ಮಹತ್ವದ್ದು. ಆದ್ದರಿಂದ ಜೀವನ ಹಾಳು ಮಾಡಬಾರದು. ಅಲ್ಲವೇ ಮಕ್ಕಳೇ....
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************