ಸ್ಫೂರ್ತಿಯ ಮಾತುಗಳು : ಸಂಚಿಕೆ - 191
Tuesday, November 18, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 191
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಆಹಾ! ಎಂತಹ ಶ್ರೇಷ್ಠ ಗುಣ ಎಂದು ಹೊಗಳುವುದನ್ನು ಕೇಳಿದ್ದೇವೆ. “ಗುಣ” ಕ್ಕೆ “ಶ್ರೇಷ್ಠ” ವಿಶೇಷಣ ಸೇರಿಸುವಂತೆ ಮಾತು, ಕೆಲಸ, ವ್ಯಕ್ತಿ, ವಿಚಾರಗಳಿಗೂ ಶ್ರೇಷ್ಠ ವಿಶೇಷಣವನ್ನು ಹಾಕುತ್ತಾರೆ. ಶ್ರೇಷ್ಠ ಅಡುಗೆಯವರು, ಶ್ರೇಷ್ಠ ಕಲಾವಿದರು, ಶ್ರೇಷ್ಠ ದಾನಿಗಳು, ಶ್ರೇಷ್ಠ ಶಿಲ್ಪ ಮುಂತಾದ ಕಡೆ ನಾವು ಕಾಣುವ ಶ್ರೇಷ್ಠ ಎಂಬ ಪದಕ್ಕೆ ಅತ್ಯಂತ ಉತ್ತಮವಾದುದೆಂದು ಅರ್ಥ.
ಶ್ರೇಷ್ಠತೆಯನ್ನು ಅರಸುವ ಅಳತೆಗೋಲು ಯಾವುದು? ಕಾರ್ಯಶೈಲಿ, ಮಾತಿನ ವೈಖರಿ ಮತ್ತು ಮಾತಿನಲ್ಲಿರುವ ವಿನಯ ಸಂಪನ್ನತೆ, ವಿಶಾಲ ಮನೋಗುಣ, ಸೇವಾ ಭಾವನೆ, ಶಿಶ್ತು ಮತ್ತು ಸಮಯಪಾಲನೆ… ಹೀಗೆ ಹಲವಾರು ಬಾಹ್ಯ ಗೋಚರಿತ ಅಂಶಗಳನ್ನು ಗಮನಿಸಿ ಶ್ರೇಷ್ಠತೆಯ ಪಟ್ಟ ಕೊಡುತ್ತಾರೆ. ಅಂತರಂಗವನ್ನು ಯಾರಿಂದಲೂ ಇಣುಕಿ ನೋಡಲಾಗುವುದಿಲ್ಲವಲ್ಲ! ಬಹಿರಂಗದಲ್ಲಿ ಗಮನಕ್ಕೆ ಬರುವ ಗುಣಗಳ ಆಧಾರದಿಂದ ಶ್ರೇಷ್ಠವೆಂದು ಹೊಗಳಲ್ಪಡುವ ಗುಣವರ್ಣನೆಯು ಭವಿಷ್ಯದಲ್ಲಿ ತದ್ವಿರುದ್ಧಗೊಂಡು ಅವಮಾನಕ್ಕೊಳಗಾಗಬಹುದೆಂಬ ಎಚ್ಚರಿಕೆಯೂ ಅಗತ್ಯ.
ಮಾತಿನಿಂದ ಒಬ್ಬನ ಶ್ರೇ಼ಷ್ಠತೆ ಅರಿವಾಗುತ್ತದೆ ಎನ್ನುವರು. ವಿನಯದ ಮಾತು, ಗೌರವ ಪೂರ್ಣ ಮಾತು, ಪ್ರಸನ್ನತೆ ಬೆರೆತ ಮಾತು, ಮೃದು ಮಾತು.. ಇವೆಲ್ಲ ಸುಂದರ ಮಾತಿನ ಲಕ್ಷಣಗಳು. ಇತರರನ್ನು ಹಂಗಿಸುವ ಅಥವಾ ಮಾತಿನಲ್ಲಿ ಉಡಾಫೆ ತೋರುವ, ನಿರುತ್ಸಾಹ ತೋರುವ, ಬೂಟಾಟಿಕೆ ತುಂಬಿರುವ ಮಾತುಗಳು, ಸ್ವಪ್ರತಿಷ್ಠೆ ಮೆರೆಯುವ ಮಾತುಗಳು, ಅಹಂ ಭರಿತ ಮಾತುಗಳು ಮನದೊಳಗಿನ ಕುರೂಪಕ್ಕೆ ಕನ್ನಡಿಯಾಗುತ್ತವೆ. ಅಂತರಂಗದ ಸ್ವರೂಪವು ಮಾತಿನಲ್ಲಿ ಪ್ರತಿಬಂಬಿಸಲ್ಪಡುತ್ತದೆಂಬುದನ್ನು ಎಲ್ಲರೂ ಒಪ್ಪುತ್ತಾರೆ.
ಹಾಲು ಶುದ್ಧವಾಗಿದ್ದು ಪಾತ್ರೆ ಶುದ್ಧವಾಗದೇ ಇದ್ದರೆ ಹಾಲು ಕೆಡುತ್ತದೆ. ಮಾತು ಹಾಲಿನಂತೆ. ಸ್ವಲ್ಪ ಹುಳಿಯ ಲೇಪನವಿದ್ದದರೂ ʼಹಾಳುʼ ಎನಿಸಿಕೊಳ್ಳುತ್ತದೆ. ಮಾತಿನ ಶುದ್ಧತೆಯನ್ನುಳಿಸಿ ಕೊಳ್ಳುವುದಕ್ಕಾಗಿ ಮನಸ್ಸೆಂಬ ಪಾತ್ರೆಯ ಶುಧ್ಧತೆಯೂ ಅಗತ್ಯ. ನುಡಿದಂತೆ ನಡೆಯುವ, ನಡೆದಂತೆ ನುಡಿಯುವ ಗುಣವೇ ಶ್ರೇಷ್ಠತೆಯ ಲಕ್ಷಣ. ಆದರೆ ನುಡಿ ನಡೆಗಳೆರಡರ ನಡುವೆ ಸಾಮ್ಯತೆ ಮಾನವನಲ್ಲಿ ಸಹಜವಾಗಿರುವುದಿಲ್ಲ. ಏರುಪೇರುಗಳು ಹೆಚ್ಚಿದಂತೆ ಶ್ರೇಷ್ಠತೆಯ ಮಟ್ಟ ಕುಸಿಯಲಾರಂಭಿಸುತ್ತದೆ. ಮಿಥ್ಯ, ಸತ್ಯ, ಪಥ್ಯ ಮತ್ತು ಮಿತ ಮಾತುಗಳೆಂದು ವಿವಿಧ ವರಸೆಯ ಮಾತುಗಳಿವೆ. ಪಥ್ಯವೆಂದರೆ ಹಿತಕರವಾಗಿರುವ ಮಾತುಗಳು. ಕೆಲವೊಮ್ಮೆ ಹಿತವಾಗಲೆಂದು ನೈಜತೆಗೆ ಹತ್ತಿರವೆನಿಸುವ ಸಂಪೂರ್ಣ ಅಸತ್ಯವೂ ಅಲ್ಲದ ಮಾತುಗಳಿಂದ ಓಲೈಸುವವರಿದ್ದಾರೆ. ಅಂತಹವರೂ ಶ್ರೇಷ್ಠತೆಗಿಂತ ದೂರವಿರುವವರೆಂದೇ ತಿಳಿಯಬೇಕು. ಮಿಥ್ಯ ಮಾತುಗಾರರಂತೂ ಎಂದಿಗೂ ಶ್ರೇಷ್ಠರಾಗುವುದೇ ಇಲ್ಲ. ಕಹಿಯಾಗಿರಲಿ, ಸಿಹಿಯಾಗಿರಲಿ ತಾನು ಸತ್ಯವನ್ನೇ ಹೇಳುವೆ ಎಂಬುವನನ್ನು ಶ್ರೇಷ್ಠ ಎನ್ನಬಹುದು. ಕೆಲವೊಮ್ಮೆ ಸಂಪೂರ್ಣ ಸತ್ಯವಾದ ಮಾತು ಇತರರನ್ನು ಅವಮಾನಿಸುತ್ತದೆ, ಘಾಸಿಗೊಳಿಸುತ್ತದೆ ಅಥವಾ ಪ್ರಾಣಾಪಯಕ್ಕೆ ಕಾರಣವಾಗುತ್ತದೆ ಎಂದಿದ್ದರೆ ಸತ್ಯವನ್ನು ಮರೆ ಮಾಚುವುದರಿಂದ ಶ್ರೇಷ್ಠತೆ ಉಳಿಯುತ್ತದೆ, ಆದರೆ ಇದು ಮೆಚ್ಚಿಸಲೆಂದು ಹೇಳುವ ಮಿಥ್ಯವಾಗಬಾರದು.
ಮಾಡುವ ಕಾರ್ಯ ಮತ್ತು ಕರ್ತವ್ಯಗಳನ್ನು ಆಧರಿಸಿಯೂ ಶ್ರೇಷ್ಠತೆಯನ್ನು ಗುರುತಿಸಲಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಅಥವಾ ಶೈಕ್ಷಣಿಕ ನೆರವು, ಬಡವರಿಗೆ ಸಹಾಯ, ರೋಗಿಗಳಿಗೆ ನೆರವು, ಆಕಸ್ಮಿಕ ದುರಂತಗಳಿಗೀಡಾದಾಗ ನೀಡುವ ಸಹಾಯ ಹೀಗೆ ಹಲವಾರು ಸೇವಾಕಾರ್ಯಗಳಿರುತ್ತವೆ. ಇವೆಲ್ಲವೂ ಉದಾರ ಮನಸ್ಸಿನ ಸೇವೆಗಳಾಗಿದ್ದು ವ್ಯಕ್ತಿಗೆ ಭೂಷಣಕಾರಕವಾಗುತ್ತವೆ. ಹಾಗೆಯೇ ಪ್ರಾರ್ಥನಾ ಮಂದಿರಗಳಿಗೆ, ಶಾಲೆಗಳಿಗೆ, ಸಾರ್ವಜನಿಕ ಉದ್ದೇಶದ ಕೆಲಸಗಳಿಗೆ ಧನ ಸಹಾಯ ಮಾಡುವವರೂ ಇರುತ್ತಾರೆ. ಇವರೆಲ್ಲರೂ ಶ್ರೇಷ್ಠರ ಸಾಲಿಗೆ ಸೇರುತ್ತಾರೆ. ಧನಸಹಾಯ ಮಾಡುವವರು ಪ್ರಸಿದ್ಧಿಯನ್ನು ಹಂಬಲಿಸಿದರೆ ಶ್ರೇಷ್ಠತೆಯ ಮೆರುಗು ಕಡಿಮೆಯಾಗುತ್ತದೆ.
ಇತ್ತೀಚೆಗೆ ನಿಧನರಾದ ಸಾಲು ಮರದ ತಿಮ್ಮಕ್ಕ ಶ್ರೇಷ್ಠ ವ್ಯಕ್ತಿ. ಅವರು ಸಮಾಜದ ಹಿತಕ್ಕಾಗಿ ಗಿಡ ಮರಗಳನ್ನು ನೆಟ್ಟು ಸಾಕಿ ಬೆಳೆಸಿದರು. ಇದು ಸಮಾಜಕ್ಕೆ ನೀರುಣಿಸಿದ, ಆಮ್ಲಜನಕ ಪೂರೈಸಿದ, ಉರುವಲು ಒದಗಿಸಿದ, ಪ್ರಾಣಿ ಪಕ್ಷಿಗಳೂ ಸೇರಿದಂತೆ ಜೀವಿಗಳಿಗೆ ಹಣ್ಣು ಹಂಪಲು ತಿನಿಸಿದ ಪುಣ್ಯದಾಯಕವಾದ ಸೇವಾ ಕೆಲಸವಾಗಿದೆ. ಅಂತಹ ಶ್ರೇಷ್ಠ ಕೆಲಸ ಮಾಡುವ ಅಸಂಖ್ಯ ಶ್ರೇಷ್ಠರೂ ನಮ್ಮ ನಡುವೆ ಇದ್ದಾರೆ.
ಶ್ರೇಷ್ಥತೆಯು ಸಂಪತ್ತು, ರೂಪ, ಜಾತಿ, ಮತ, ಪಕ್ಷ ಅಥವಾ ಬಲ ಮತ್ತು ಅಧಿಕಾರಗಳಿಂದ ಬಾರದು. ಇವು ಕೆಲವೊಮ್ಮೆ ಸಣ್ಣದಾದ ಪೂರಕ ಅಂಶಗಳಾಗಬಹುದಷ್ಟೇ. ಅಷ್ಟ್ರಾವಕ್ರನು ಶ್ರೇಷ್ಠನಾದ. ಅವನು ಸುರೂಪಿಯಲ್ಲ, ಆದರೆ ಜ್ಞಾನಿ. ಅಬ್ದುಲ್ ಕಲಾಂ ನೋಡಲು ಬಹಳ ಅಂದಗಾರನಲ್ಲ. ಆದರೆ ವಿಶ್ವಶ್ರೇಷ್ಠರಾದರು. ನಾವೂ ಅತ್ಯುತ್ತಮ ಕೆಲಸ ಮಾಡಿ ಶ್ರೇಷ್ಠ ವ್ಯಕ್ತಿತ್ವನ್ನು ನಮ್ಮಲ್ಲಿ ಬೆಳೆಸೋಣ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************