ಜೀವನ ಸಂಭ್ರಮ : ಸಂಚಿಕೆ - 214
Sunday, November 2, 2025
Edit
ಜೀವನ ಸಂಭ್ರಮ : ಸಂಚಿಕೆ - 214
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ನಮ್ಮ ಬದುಕಿನ ಸಂಪತ್ತಿನ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಬದುಕಿನ ಸಂಪತ್ತೆ ಮನಸ್ಸು. ಮನಸ್ಸಿನ ಬಗ್ಗೆ ಚರ್ಚಿಸೋಣ. ಮನಸ್ಸು ಬಹಳ ಸೂಕ್ಷ್ಮವಾದ ಇಂದ್ರಿಯ. ಮನಸ್ಸಿನಲ್ಲಿ ಅನೇಕ ಶಕ್ತಿಗಳು ಇವೆ. ಬದುಕಿಗೆ ಬೇಕಾದ ಎಲ್ಲಾ ಶಕ್ತಿಗಳು ಮನಸ್ಸಿನಲ್ಲಿದೆ. ಮನಸ್ಸು ಎಷ್ಟು ಸೂಕ್ಷ್ಮ? ಅಂದರೆ ಇದನ್ನು ಗುರುತಿಸಲು ಅಸಾಧ್ಯ. ಮನಸ್ಸಿಗೆ ನಿಶ್ಚಿತ ರೂಪವಿಲ್ಲ, ಬಣ್ಣವಿಲ್ಲ ಅಂತಹದು. ಆದರೆ ಈ ಮನಸ್ಸು ಎಲ್ಲರಲ್ಲೂ ಇದೆ. ಬದುಕಿನ ಪ್ರತಿಯೊಂದು ವ್ಯವಹಾರ ನಡೆಯಬೇಕಾದರೆ ಮನಸ್ಸು ತುಂಬಾ ಅಗತ್ಯ. ಮನಸ್ಸು ಇಲ್ಲ, ಅನುಭವವಿಲ್ಲ. ಮನಸ್ಸು ಇಲ್ಲ, ಜ್ಞಾನ ಇಲ್ಲ. ಜ್ಞಾನ ಮತ್ತು ಅನುಭವದಿಂದ ಬದುಕು ಕಟ್ಟುತ್ತದೆ. ಯೋಚಿಸಿ, ಮನಸ್ಸಿನ ಮಹತ್ವ ಎಷ್ಟು ?.ಮನಸ್ಸನ್ನು ನಮ್ಮಿಂದ ತೆಗೆದು ಇಟ್ಟರೆ, ಬದುಕೆ ಶೂನ್ಯವಾಗುತ್ತದೆ.
ಕಣ್ಣು ನೋಡುತ್ತದೆ ಅಂತ ನಾವು ಅನ್ನುತ್ತೇವೆ. ನಿಜವಾಗಿ ನೋಡುವುದು ನಮ್ಮ ಮನಸ್ಸೆ, ಕೇಳುವುದು ಮನಸ್ಸೆ, ಮುಟ್ಟುವುದು ಮನಸ್ಸೆ. ಇಂದ್ರಿಯಗಳು ಹೊರಗೆ ಇವುಗಳು ದ್ವಾರಗಳು ಇದ್ದಹಾಗೆ. ಮನಸ್ಸು ಎನ್ನುವುದು ಇಂತಹ ಒಂದು ಸುಂದರ ಆಂತರಿಕ ಸಾಧನ. ಆದ್ದರಿಂದ ಈ ಮನಸ್ಸನ್ನು ಚೆನ್ನಾಗಿ ಬಳಸಿದರೆ ಜೀವನ ಅಪ್ಯಾಯಮಾನವಾಗುತ್ತದೆ. ಇಂತಹ ಮನಸ್ಸಿನ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ವರ್ಷದಿಂದ ಮನುಷ್ಯ ಕಷ್ಟ ಪಡುತ್ತಲೇ ಇದ್ದಾನೆ. ಇನ್ನೂ ಪಕ್ಕ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ನಮ್ಮಲ್ಲೇ ಇದೆ. ಚೆಂದವಾಗಿ ಕೆಲಸ ಮಾಡುತ್ತ ಇದೆ. ಆದರೆ ನಮಗೆ ಅದರ ಬಗ್ಗೆ ಪೂರ್ಣ ಗೊತ್ತಿಲ್ಲ. ನಿಸರ್ಗ ಮನಸ್ಸನ್ನ ರೂಪಿಸಿ ರಹಸ್ಯವಾಗಿ ಇಟ್ಟಿದೆ. ನಿಸರ್ಗ ಅಂತಹ ಸುಂದರ ಸಾಧನ ತಯಾರಿಸಿದೆ. ಮನುಷ್ಯ ಅಂತ ಕರೆದಿದ್ದು ಮನಸ್ಸು ಇದ್ದದರಿಂದ. ಯಂತ್ರ, ಮನುಷ್ಯ ಆಗುವುದಿಲ್ಲ. ಕಂಪ್ಯೂಟರ್ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ಯಾಮರಗಳು ನೋಡುತ್ತವೆ. ಆದರೆ ಅವ್ಯಾವು ಅನುಭವಿಸುವುದಿಲ್ಲ. ಅನುಭವಿಸಲು ಮನಸ್ಸು ಬೇಕಾಗುತ್ತದೆ.
ಮನಸ್ಸಿನಲ್ಲಿ ಅನೇಕ ಭಾಗಗಳಿವೆ. ಅದರಲ್ಲಿ ಕೆಲವೊಂದನ್ನು ನೋಡೋಣ. ಅದರಲ್ಲಿ ಮೊದಲನೆಯದು ಅರಿಯುವ ಭಾಗ. ಎರಡನೆಯದು ಅನುಭವಿಸುವುದು, ಭಾವಿಸುವುದು. ಮೂರನೆಯದು ಬಯಸುವುದು. ಎಲ್ಲರ ಮನಸಿನಲ್ಲೂ ಈ ಮೂರು ಕಂಡು ಬರುತ್ತದೆ. ಪ್ರಪಂಚ ಎಂದರೆ ತಿಳಿದುಕೊಳ್ಳುವುದು, ಅನುಭವಿಸುವುದು ಮತ್ತು ಬಯಸುವುದು. ಇದಕ್ಕೆ ಜೀವನ. ಎಲ್ಲರೂ ಅಂದರೆ ಶ್ರೀಮಂತರು, ತೀರಾ ಬಡವರು ಮಾಡುವುದು ಇದೇ ಮೂರು ಕಾರ್ಯಗಳು. ಉದಾಹರಣೆಗೆ ಸೂರ್ಯನನ್ನು ನೋಡುವುದು (ತಿಳಿಯುವುದು). ಬಿಸಿಲನ್ನು ಅನುಭವಿಸುವುದು. ಚಳಿಗಾಲದಲ್ಲಿ ಶಾಖ ಬಯಸುವುದು. ಪ್ರತಿಯೊಂದು ಇಷ್ಟೇ. ಪ್ರತಿಯೊಂದರಲ್ಲೂ ಎರಡೆರಡು ಕಂಡುಬರುತ್ತದೆ. ಒಮ್ಮೆ ಸರಿಯಾಗಿ ತಿಳಿಯುವುದು, ಒಮ್ಮೆ ತಪ್ಪಾಗಿ ತಿಳಿಯುವುದು. ಒಮ್ಮೆ ಸುಖ ಅನುಭವಿಸುವುದು, ಒಮ್ಮೆ ದುಃಖ ಅನುಭವಿಸುವುದು. ಒಮ್ಮೆ ಬೇಕು ಅಂತ ಬಯಸುವುದು ಅಥವಾ ಒಮ್ಮೆ ಬೇಡ ಅಂತ ಬಯಸುವುದು. ಈ ಆರು ಕಾರ್ಯಗಳನ್ನು ಎಲ್ಲರೂ ಮಾಡುತ್ತಾರೆ. ಯಾವುದೇ ಸಂದರ್ಭದಲ್ಲೂ ಈ ಆರು ಕಾರ್ಯ ನಡೆಯುತ್ತಲೇ ಇರುತ್ತದೆ. ನಮ್ಮ ಋಷಿಮುನಿಗಳು ಇದನ್ನು ಕಂಡುಹಿಡಿದವರು. ಆಶ್ರಮದಲ್ಲಿ ಕುಳಿತು ಆಕಾಶ ನೋಡಿದರು. ಜಗತ್ತಿನ ಎಲ್ಲ ಕಡೆ ಕಣ್ಣು ಬಿಟ್ಟು ನೋಡಿದರು. ಕೊನೆಗೆ ಮನಸ್ಸಿನಲ್ಲಿ ಇಳಿದು, ಮನಸನ್ನು ಅರಿತರು. ಇದನ್ನೆಲ್ಲ ಕಂಡವರು. ಆದುದರಿಂದ ಇವರಿಗೆ ಋಷಿ ಎನ್ನುವರು. ಋಷಿ ಎಂದರೆ ಕಂಡವರು.
ನಾವು ವಸ್ತುಗಳನ್ನು ನೋಡುತ್ತೇವೆ. ಹಾಗಾಗಿ ನಾವು ಕಂಡವರೇ. ಆದರೆ ನಮಗೆ ಋಷಿ ಎನ್ನುವುದಿಲ್ಲ. ಅವರು ಕಾಣುವುದರ ಆಚೆ ಕಂಡವರು. ವಸ್ತುವಿನ ಹಿಂದೆ ಆಧಾರವಾಗಿರುವುದು ಅವರಿಗೆ ಕಾಣಿಸುತ್ತದೆ. ಋಷಿ ಎಂದರೆ ಸೂಕ್ಷ್ಮಜ್ಞಾನಿಗಳು. ಜೀವನದ ಅತ್ಯಂತ ದೊಡ್ಡ ಸಂಪತ್ತು ಮನಸ್ಸು. ಜೀವನದ ಅಂಗಳ ಮನಸೇ. ಈ ಮನಸ್ಸನ್ನು ಅನುಭವದಿಂದ ತುಂಬಿಕೊಳ್ಳುತ್ತೇವೆ. ಜೀವನ ಶ್ರೀಮಂತವಾಗುವುದು, ಶ್ರೀಮಂತ ಅನುಭವದಿಂದ. ಜೀವನ ಬಡವಾಗುವುದು, ಬಡ ಅನುಭವದಿಂದ. ಯಾವ ಮನಸ್ಸು ಹೆಚ್ಚು ಅನುಭವಿಸುತ್ತದೆಯೊ ಆ ಜೀವನ ಹೆಚ್ಚು ಶ್ರೀಮಂತವಾಗುತ್ತದೆ. ಯಾವ ಮನಸ್ಸು ಕಡಿಮೆ ಅನುಭವಿಸುತ್ತದೆಯೊ ಆ ಜೀವನ ಬಡವಾಗುತ್ತದೆ. ನಮ್ಮ ಜೀವನ ಶ್ರೀಮಂತವಾಗುವುದು, ನಮ್ಮ ಜೀವನ ಬಡವಾಗುವುದು, ಅನುಭವದಿಂದ.
ಅನುಭವಿಸುವುದು ಮನಸ್ಸೆ. ಆದ್ದರಿಂದ ಮನಸ್ಸಿಗೆ ಅಷ್ಟು ಮಹತ್ವ. ಆದುದರಿಂದಲೇ ನಮ್ಮ ಮನಸ್ಸು ಸಂಪತ್ತು. ಈಗ ನಾವು ಯಾವುದನ್ನು ಸಂಪತ್ತು ಅಂತ ಹೇಳುತ್ತೇವೆಯೊ ಅದು ಅಲ್ಲ. ಉದಾಹರಣೆಗೆ. ಬಂಗಾರದ ಹೂವು. ಇದರ ಜೊತೆಗೆ ಸಾಮಾನ್ಯ ಹೂ ಇಟ್ಟು, ಆಯ್ಕೆಮಾಡಿಕೊಳ್ಳಿ ಎಂದರೆ, ಜನ ಬಂಗಾರದ ಹೂ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆ ಅಂದರೆ ಬಂಗಾರ ಸಂಪತ್ತು ಅಂತ ತಿಳಿದುಕೊಂಡಿದ್ದೇವೆ. ಇದು ಸಂಪತ್ತು ಅಂತ ಹೇಳಿದ್ದು ನಮ್ಮ ಮನಸ್ಸು. ನಮ್ಮ ಮನಸ್ಸು ವಸ್ತುವಿಗೆ ಬೆಲೆ ಕಟ್ಟುತ್ತದೆ. ಆ ಬಳಿಕ ಹೇಳುತ್ತದೆ, ಇದರ ಬೆಲೆ ಹೆಚ್ಚು, ಇದರ ಬೆಲೆ ಕಡಿಮೆ ಎಂದು ಹೇಳುತ್ತದೆ. ಇವು ಮನಸ್ಸು ಕಟ್ಟಿದ ಬೆಲೆಯೆ ವಿನಹ, ವಸ್ತುವಿಗೆ ನಿಜವಾದ ಬೆಲೆ ಇಲ್ಲ. ಮನಸ್ಸು ತನಗೆ ಬೇಕಾದಂತೆ ಬೆಲೆ ಕಟ್ಟುತ್ತದೆ. ಒಂದೇ ರೀತಿ ಕಟ್ಟುವುದಿಲ್ಲ. ಒಮ್ಮೊಮ್ಮೆ ಹೂವಿಗೆ ಬೆಲೆ ಕಟ್ಟುತ್ತದೆ. ಒಮ್ಮೊಮ್ಮೆ ಚಿನ್ನಕ್ಕೆ ಬೆಲೆಕಟ್ಟುತ್ತದೆ. ಯಾವುದಕ್ಕೆ ಬೆಲೆ ಕಟ್ಟಬೇಕು ಅನ್ನುವುದು ಮನಸ್ಸಿನ ಕೈಯಲ್ಲಿದೆ.
ಒಂದು ಸಣ್ಣ ಮಗುವಿನ ಮುಂದೆ ಹಣ, ಗೊಂಬೆ ಇಟ್ಟರೆ, ಅದು ಗೊಂಬೆಯನ್ನೇ ಆಯ್ದುಕೊಳ್ಳುತ್ತದೆ. ಅದರ ದೃಷ್ಟಿಯಲ್ಲಿ ಹಣ ಬೆಲೆಯಲ್ಲ. ಗೊಂಬೆ ಬೆಲೆ. ಇಂತಹ ಮನಸ್ಸನ್ನು ಚೆಂದವಾಗಿ ಬಳಸಿಕೊಂಡರೆ ಎಲ್ಲವೂ ಸಂಪತ್ತು ಆಗುತ್ತದೆ. ಬದುಕು ಸಂಪತ್ ಭರಿತ ಆಗಬೇಕಾದರೆ ಮನಸ್ಸು ಶ್ರೀಮಂತ ವಾಗಬೇಕು. ಅಂತಹ ದೃಷ್ಟಿ ನಾವು ಪಡೆಯಬೇಕಾಗುತ್ತದೆ. ಅನುಭವಗಳನ್ನು ಶ್ರೀಮಂತ ಗೊಳಿಸುತ್ತಿರಬೇಕು. ಎಂತೆಂತಹದೊ ಅನುಭವ ಆಗಬಾರದು. ಬೇಡದ ಅನುಭವವಾದರೆ, ಮನಸ್ಸು ಹೊಲಸಾಗುತ್ತದೆ. ಅನುಭವ ಕೆಟ್ಟದಾದರೆ, ಜೀವನ ಕೆಡುತ್ತದೆ. ಮನಸ್ಸು ಬದುಕಿನ ಅಂಗಳ. ಈ ಅಂಗಳದಲ್ಲಿ ಹೊಲಸು ಬೀಳುತ್ತದೆ. ಈ ಅಂಗಳದಲ್ಲಿ ಮುಳ್ಳು, ಕಲ್ಲಿನಂತಹ ಕಸ ಬೀಳುತ್ತದೆ. ಆಗ ಜೀವನ ಚಂದ ಆಗುವುದಿಲ್ಲ. ಜೀವನದ ಅಂಗಳದಲ್ಲಿ ಸಂತೋಷವಾಗಿರುವುದನ್ನು ಬೆಳೆಯಬೇಕು.
ಮನಸ್ಸು ಸಾಧನವು ಹೌದು. ಅನುಭವದ ತಾಣವೂ ಹೌದು. ಮನಸ್ಸನ್ನು ಅನುಭವದಿಂದ ತುಂಬಲು ಮನಸನ್ನೇ ಬಳಸಬೇಕು. ಇಂತಹ ಮನಸ್ಸನ್ನು ಪಡೆದ ನಾವು ಬಡವರಲ್ಲ. ಮನಸು ಮಾಡಿದರೆ ಇದೇ ಕ್ಷಣ ಸಿರಿವಂತರು. ಮನಸ್ಸು ಮಾಡಿದರೆ ಏನೊಂದು ಅಸಾಧ್ಯವಿಲ್ಲ. ಮನಸ್ಸು ಮಾಡಿದರೆ ತತ್ತಕ್ಷಣ ಬಡವ, ಶ್ರೀಮಂತನಾಗುತ್ತಾನೆ. ಇದರ ಅರ್ಥ ಹಣ ಸಂಗ್ರಹಿಸುವುದಲ್ಲ. ಯಾವುದು ಸಂಪತ್ತು ? ಅದನ್ನು ತಿಳಿದುಕೊಳ್ಳುವುದು. ಅಷ್ಟೇ ಅಲ್ಲ ಯಾವುದನ್ನು ಸಂಪತ್ತು ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳುವುದು. ವಸ್ತುಗಳನ್ನು ಅದ್ಭುತ ಅಂತ ನೋಡಿದರೆ, ಅದೇ ಸಂಪತ್ತು. ಇದೇನು ಮಹಾ ಅಂತ ನೋಡಿದರೆ ಬಡವ. ಇರುವ ಗುಡಿಸಲನ್ನು ಅದ್ಭುತ ಅಂತ ನೋಡಿದರೆ ಅದೇ ಅರಮನೆ. ಇದೇನಿದು ಅಂದರೆ ಗುಡಿಸಲು. ಇದು ನಮ್ಮ ಮನಸ್ಸಿನ ಹಾಗೆ ಇದೆ .ನಮ್ಮ ಮನೆಯವರಿಗೆ ಎಷ್ಟು ಚಂದ ಇದ್ದಾರೆ ಎಂದರೆ ಅದೇ ಸ್ವರ್ಗ. ಅದು ಬಿಟ್ಟು ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲ ಅಂದರೆ ಅದೇ ನರಕ. ಅಂದರೆ ಯೋಚಿಸಿ ಮನೆ ಕಟ್ಟುವುದು ಯಾವುದು?.
ವಿದೇಶದ ತತ್ವಜ್ಞಾನಿ ಹೇಳುತ್ತಾನೆ "ಕಟ್ಟಡಗಳನ್ನು ಇಟ್ಟಿಗೆ ಮತ್ತು ಸಿಮೆಂಟಿನಿಂದ ಕಟ್ಟುತ್ತಾರೆ. ಮನೆಯನ್ನು ಮಧುರ, ಪ್ರೇಮದ ಮನದಿಂದ ಕಟ್ಟಬೇಕಾಗುತ್ತದೆ". ದೊಡ್ಡ ಬಂಗಲೆಯಲ್ಲಿದ್ದರೆ ಮನೆ ಕಟ್ಟಿದಂತೆ ಆಗುವುದಿಲ್ಲ. ಅದನ್ನು ಯಾರಾದರೂ ಕಟ್ಟಬಹುದು. ಯಾರಿಂದಲಾದರೂ ಕಟ್ಟಿಸಬಹುದು. ಎಲ್ಲಾದರೂ ಸಿಗುತ್ತದೆ. ಕಟ್ಟಡ ಕಟ್ಟುವುದು ದೊಡ್ಡದಲ್ಲ. ಮನೆ ಕಟ್ಟುವುದು ದೊಡ್ಡದು. ಮಧುರ, ಸವಿಯಾದ ಪ್ರೇಮದ ಮನಸ್ಸಿನಿಂದ ಕಟ್ಟಿದ ಮನೆ, ಮನೆಯಾಗುತ್ತದೆ. ಕಟ್ಟಡಕ್ಕೆ ಬೆಲೆ ಕಟ್ಟಬಹುದು. ಮನೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಯಾಕೆಂದರೆ ಅದು ಪ್ರೇಮ ಭಾವದಿಂದ ಕಟ್ಟಿರುತ್ತೇವೆ. ಭಾವಕ್ಕೆ ಬೆಲೆಕಟ್ಟಲು ಆಗುವುದಿಲ್ಲ. ಮಧುರ ಭಾವದಿಂದ ಮನೆ ಕಟ್ಟದಿದ್ದರೆ ಅವರು ಕಟ್ಟಡದಲ್ಲಿ ವಾಸವಿದ್ದಾರೆ ಅನ್ನಬೇಕು. ನಾವೆಲ್ಲ ಬಿಲ್ಡಿಂಗ್ ಕಟ್ಟುತ್ತೇವೆ. ಮನೆ ತೋರಿಸಲು ಸ್ನೇಹಿತರನ್ನು ಕರೆಯುತೇವೆ. ಆಗ ಮನೆಯವರು ಇವರನ್ನು ಯಾಕೆ ಕರೆತಂದೆ ?ಅಂದರೆ, ಕರೆ ತಂದವರ ಬಗ್ಗೆ ಅಸಹನೆ ತೋರಿದರೆ, ಅದು ಮನೆ ಹೇಗಾಗುತ್ತದೆ?. ಅದು ಕಟ್ಟಡವಾಗುತ್ತದೆ. ಆತ ಬಂದವರಿಗೆ ಕಟ್ಟಡ ತೋರಿಸುತ್ತಾನೆ ವಿನಃ ಮನೆಯವರನ್ನು ತೋರಿಸುವುದಿಲ್ಲ. ಯಾಕೆಂದರೆ ಆತ ಮನೆ ಕಟ್ಟಿಲ್ಲ. ಜನ ವಾಸವಿದ್ದರೆ ಮನೆಯಲ್ಲ. ಮಂದಿಯಲ್ಲಿ ಆತ್ಮೀಯತೆ ಇದ್ದರೆ ಮನೆ. ಆತ್ಮೀಯತೆ ಇಲ್ಲದ ಭಾರಿ ಮನೆ ಕಟ್ಟಿದರು ಅವರು ಅಸಮಾಧಾನಗಳಾಗಿರುತ್ತಾರೆ. ಇದನ್ನೆಲ್ಲ ಮಾಡುವುದು ಮನಸ್ಸು. ಇದು ಭಾರತೀಯ ಋಷಿಗಳ ಮನಶಾಸ್ತ್ರದ ದೃಷ್ಟಿಕೋನ.
ಮನಸ್ಸನ್ನು ಬಳಸಿ ಚೆಂದಾಗಿರಬೇಕು. ನಮ್ಮನ್ನು ಶ್ರೀಮಂತ ಮಾಡಿಕೊಳ್ಳುವುದು ನಾವೇ, ಬಡವ ಮಾಡಿಕೊಳ್ಳುವವರು ನಾವೇ. ಬಡವ, ಶ್ರೀಮಂತ ಮಾಡುವುದು ನಮ್ಮ ಮನಸ್ಸೆ. ಅದಕ್ಕೆ ನಾವು ಎಲ್ಲವನ್ನು ಅದ್ಭುತ ಅಂತ ನೋಡುವ ದೃಷ್ಟಿ ಬೆಳೆಸಿಕೊಳ್ಳಬೇಕು. ಒಳ್ಳೆಯದು ಅಂತ ನೋಡಬೇಕು. ಪ್ರೀತಿಯಿಂದ ನೋಡಬೇಕು. ಆ ಪ್ರೀತಿಯೇ ಸಂತೋಷಕ್ಕೆ ಕಾರಣ. ಆ ಸಂತೋಷವೇ ಅನುಭವ. ಆ ಸಂತೋಷ ಮೂಡುವುದು ಮನಸ್ಸಿನಲ್ಲಿ. ಹಾಗಾಗಿ ತಿಳಿಯುತ್ತೆ ಮಕ್ಕಳೇ ಮನಸ್ಸು ಹೇಗೆ ಸಂಪತ್ತು? ಎಂದು.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************