ಸ್ಫೂರ್ತಿಯ ಮಾತುಗಳು : ಸಂಚಿಕೆ - 189
Monday, November 3, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 189
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಮಾನವನ ಬದುಕು ಸುಖ ಮತ್ತು ಕಷ್ಟಗಳ ಸರಮಾಲೆ. ಕಷ್ಟಗಳನ್ನು ಅನುಭವಿಸಿದವನಿಗೆ ಸುಖ, ಸುಖವನ್ನು ಉಂಡವನಿಗೆ ಕಷ್ಟಪರಂಪರೆಗಳು ವಿಧಿ ಲಿಖಿತ. ಪಾಲಿಗೊದಗಿದುದನ್ನು ಪಂಚಾಮೃತ ಎಂದು ಗೌರವಿಸುವುದೇ ಜೀವನಧರ್ಮ. ಮನುಷ್ಯ ಆಶಾಜೀವಿ. ನಾವು ಬೃಹತ್ತಾದ ಕನಸಿನೊಂದಿಗೆ ಮನಸ್ಸಿನ ಕಸುವನ್ನು ಬಲಗೊಳಿಸಬೇಕು. ಎಲ್ಲವನ್ನೂ ಭಗವಂತನ ಮೇಲೆ “ಭಾರ” ಹಾಕಿ ವಿರಮಿಸಿದರೆ, ಅವಸಾನವೇ ಹೊರತು ಉತ್ಥಾನವಾಗದು. ಬೆವರಿಳಿಸಿ ದುಡಿಯಬೇಕು, ಪ್ರಗತಿಯ ಬೆನ್ನನ್ನೇರಬೇಕು. ಸಾಧಕನು ಮಾತ್ರ ಸಾಧನೆಯ ಮುಕುಟಧಾರಣೆಗೆ ಅರ್ಹ. ಅವನವನ ಏಳಿಗೆಗೆ ಅವನವನೇ ಕಾರಣನೆಂದು ಭಗವದ್ಗೀತೆ ಹೇಳಿದೆ...
ಉದ್ಧರೇದಾತ್ಮನಾತ್ಮಾನಂ
ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುಃ
ಆತ್ಮೈವ ರಿಪುರಾತ್ಮನಃ ||
ಗೀತೆಯ ಈ ಸಾಲುಗಳ ವಿಚಾರ ಎಲ್ಲರಿಗೂ ಅನ್ವಯವಾಗುತ್ತದೆ. ಶ್ಲೋಕವು, ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು, ತನ್ನನ್ನು ತಾನೇ ಬೀಳಿಸಬಾರದು, ನಮಗೆ ನಮ್ಮ ಆತ್ಮನೇ ಬಂಧು ಮತ್ತು ಶತ್ರು ಎಂದು ಹೇಳಿದೆ. ಬೀಳಲೇಬಾರದು ಎಂದರೆ ಸೋಲಲೇಬಾರದು, ಕಷ್ಟಗಳಿಗೆ ಸಿಲುಕಬಾರದು, ಪಾಪದ ಕೂಪಕ್ಕೆ ತಳ್ಳಲ್ಪಡಬಾರದು, ಬಿದ್ದರೆ ಅಥವಾ ಸೋತರೆ, ಏಳುವ ಅಥವಾ ಗೆಲ್ಲುವ ಪ್ರಯತ್ನವನ್ನು ಮಾಡುವ ಛಲದಂಕಮಲ್ಲರು ನಾವಾಗಬೇಕು. ಬಿದ್ದಾಗ ಇತರರ ಸಹಾಯದ ಅಪೇಕ್ಷೆ- ನಿರೀಕ್ಷೆಗಳೆರಡೂ ಸಲ್ಲದು. ಎದ್ದು ನಿಲ್ಲುವ ಸ್ವ-ಪ್ರಯತ್ನವೇ ಯಶಸ್ಸನ್ನು ತರುತ್ತದೆ. ನಾವು ಮನಸಾ ಪ್ರಯತ್ನರಾಹಿತ್ಯರಾದರೆ ಕಷ್ಟದ ಆಥವಾ ನಷ್ಟದ ಕೂಪದಲ್ಲೇ ಉಳಿಯುತ್ತೇವೆ.
ಪೊಲಿಯೋಗೆ ತುತ್ತಾದ ಮಾಲತಿ ಹೊಳ್ಳ ಅವರ ಸಾಧನೆಗೆ ನಾವೇ ಸಾಕ್ಷಿಗಳಿದ್ದೇವೆ. ಪೊಲಿಯೋದಿಂದ ಉಂಟಾದ ದೈಹಿಕ ನ್ಯೂನತೆಯಿಂದ ಅವರು ನಿರಾಶರಾಗಲಿಲ್ಲ. ಬದುಕಿನಲ್ಲಿ ಬೃಹತ್ ಗುರಿಗಳನ್ನಿರಿಸಿದರು. ಗುರಿಗಳ ಬೆನ್ನು ಹತ್ತಿದರು. ಪಾರಾ ಒಲಂಪಿಕ್ಸ್‌ನಲ್ಲಿ ಭಾಗವಹಿಸಿ 397 ಸುವರ್ಣ, 25 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಪಡೆದು ಅಸಾಮಾನ್ಯ ಸಾಧಕಿಯಾದರು. ಬ್ಯಾಂಕ್ ಉದ್ಯೋಗಿಯಾಗಿ ಜನಸೇವೆ ಮಾಡಿದರು. ಭಾರತ ಸರಕಾರದಿಂದ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದರು. ಪೊಲಿಯೋ ಕುಗ್ಗಿಸಿದರೂ ಜಗ್ಗದೆ ಸೆಟೆದು ನಿಂತರು ಶ್ರೀಮತಿ ಮಾಲತಿ ಹೊಳ್ಳ . ಅವರು ನಮಗೆ ಸ್ಫೂರ್ತಿ.
ಪೊಲಿಯೋಗೆ ತುತ್ತಾದ ಇನ್ನೋರ್ವ ವ್ಯಕ್ತಿ ಶ್ರೀಯುತ ಕೆ.ಎಸ್. ರಾಜಣ್ಣ. ಈಗ ಅವರ ವಯಸ್ಸು ಅರುವತ್ತಮೂರು. ಪೊಲಿಯೋ ಅವರ ದೇಹಬಲವನ್ನು ಕುಗ್ಗಿಸಿತಾದರೂ ಅವರ ಆತ್ಮಬಲವನ್ನು ಕುಗ್ಗಿಸಲಿಲ್ಲ. ರಾಜಣ್ಣ ತನ್ನ ಅಂಗವಿಕಲತೆಯನ್ನೇ ವರವನ್ನಾಗಿ ಪರಿವರ್ತಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವೀಧರರಾದರು. ಇತರೆಡೆ ಉದ್ಯೋಗ ಅರಸದೇ ಸ್ವ-ಉದ್ಯಮಿಯಾದರು. ಪರಿಶ್ರಮ ಪಟ್ಟು ಉದ್ದಿಮೆಯಲ್ಲಿ ಬೆಳೆದರು. ನೂರಾರು ಅಂಗವಿಕಲ ಕಾರ್ಮಿಕರಿಗೆ ಉದ್ಯೋಗ ನೀಡಿ ಅನ್ನದಾತರಾದರು. ಪಾರಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಸ್ವರ್ಣ ಪದಕ ತಂದರು. ಕರ್ನಾಟಕ ರಾಜ್ಯಸರಕಾರವು ರಾಜಣ್ಣನವರನ್ನು ಅಂಗವಿಕಲ ಕ್ಷೇಮಾಭಿವೃದ್ಧಿ ನಿಗಮದ ಆಯುಕ್ತರನ್ನಾಗಿ ನೇಮಿಸಿ, ಸಮಾಜದ ಸೇವೆ ಮಾಡುವ ಮಹೋನ್ನತ ಅವಕಾಶವನ್ನು ಒದಗಿಸಿತು. 2024ರ ಪದ್ಮಶ್ರೀ ಪುರಸ್ಕಾರವನ್ನು ರಾಜಣ್ಣನವರು ರಾಷ್ಟ್ರಪತಿಗಳಿಂದ ಪಡೆದರು. ಮನೋಸ್ಥೈರ್ಯ ತೋರದೆ, ತಾನು ವಿಕಲಾಂಗನೆಂದು ಮನೆಯ ಮೂಲೆ ಸೇರಿದ್ದರೆ ಬಹು ಎತ್ತರದ ಕೀರ್ತಿಶಿಖರವನ್ನೇರಲು ರಾಜಣ್ಣನವರಿಗೆ ಸಾಧ್ಯವಿತ್ತೇ?
ಮಧ್ಯಪ್ರದೇಶದ, ಚಿತ್ರಕೂಟ ತುಳಸಿ ಪೀಠದ, ಸಂಸ್ಥಾಪಕರೂ ಮುಖ್ಯಸ್ಥರೂ ಆದ, ಜಗದ್ಗುರು ಶ್ರೀ ಶ್ರೀ ರಾಮಭದ್ರಾಚಾರ್ಯರು ಜನ್ಮತಃ ಅಂಧರು. ತನ್ನನ್ನು ತಾನೇ ಬೆಳೆಸಲು ಅವರ ಕುರುಡುತನ ಅಡ್ಡಗೋಡೆಯಾಗಲಿಲ್ಲ. ಚರ್ಮಚಕ್ಷು ಇಲ್ಲವಾದರೆ ಏನಂತೆ ? ನನ್ನ ಒಳಗಣ್ಣು ಬಲವಾಗಿದೆಯಲ್ಲ ! ಎಂದು ತನ್ನ ಮೇಲೇಯೇ ವಿಶ್ವಾಸವಿರಿಸಿ ಸಂಸ್ಕೃತ ಭಾಷಾಧ್ಯಯನ ಮಾಡಿದರು. ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿ ಸಾಹಿತ್ಯದಲ್ಲಿ ಕೃಷಿಮಾಡಿದರು. ಸಂಸ್ಕೃತ ಸಾಹಿತ್ಯಕ್ಕೆ ಮಹೋನ್ನತ ಸೇವೆ ಸಲ್ಲಿಸಿರುವುದಕ್ಕಾಗಿ 2023ರ ಜ್ಞಾನಪೀಠ ಪ್ರಶಸ್ತಿ ಪಡೆದರು. ಕಣ್ಣಿಲ್ಲದೇ ಇದ್ದರೂ ಆತ್ಮಬಲದಿಂದ ಸಾಧಕರಾಗಲು ಸಾಧ್ಯ ಎಂಬುದನ್ನು ಜಗತ್ತಿಗೇ ತೋರಿಸಿದರು. ಮನಸ್ಸಿದ್ದರೆ ಮಾರ್ಗ ಅಲ್ಲವೇ?
ನಮ್ಮ ಪ್ರಗತಿಗೆ ನಮ್ಮ ಅವಿರತ ಪರಿಶ್ರಮ, ಜ್ಞಾನ ಹಾಗೂ ಅನುಭವಗಳೇ ಪೂರಕ. ಜೊತೆಗೆ ನಮ್ಮ ಪಂಚೇಂದ್ರಿಯಗಳು ಮತ್ತು ಮನಸ್ಸೂ ಕಾರಣವಾಗುತ್ತವೆ. ಅತ್ಯಾಸೆಗಳಿಗೆ ಮತ್ತು ಅರಿಷಡ್ವರ್ಗಗಳಿಗೆ ಮನಸ್ಸಿನ ದಾಸ್ಯವಿದ್ದರೆ ನಮ್ಮ ಅಧಃಪತನ ನಿಶ್ಚಿತ. ಮನಸ್ಸಿನ ಕಸುವು ನಮ್ಮಲ್ಲೇ ಕಸಿವಿಸಿಯಾಗದಂತೆ ಹೆಜ್ಜೆಯಿಡೋಣ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************