-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 19

ಮಕ್ಕಳಿಗೆ ರಜೆಯ ಓದು : ಸಂಚಿಕೆ - 19

ಮಕ್ಕಳಿಗೆ ರಜೆಯ ಓದು
ಸಂಚಿಕೆ - 19
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815


ಕಳೆದ ವಾರದಂತೆ ಈ ವಾರವೂ ಎರಡು ಮಕ್ಕಳ ಕಥೆಯ ಪುಸ್ತಕದ ಮಾಹಿತಿ ನೀಡಲಾಗಿದೆ.

‘ದಿ ಗಿವಿಂಗ್ ಟ್ರೀ’ ಇದರ ಕಥಾ ವಸ್ತು ನಮಗೆ ಸ್ವಾರ್ಥ ರಹಿತವಾಗಿ, ಪರೋಪಕಾರಿಯಾಗಿ ಸಮಾಜದಲ್ಲಿ ಹೇಗೆ ಬದುಕಬಹುದು ಎನ್ನುವುದನ್ನು ಹೇಳಿಕೊಡುತ್ತದೆ. ದಿ ಗಿವಿಂಗ್ ಟ್ರೀ ಎಂಬ ಕಾದಂಬರಿಯನ್ನು ಶೆಲ್ ಸಿಲ್ವರ್‌ಸ್ಟೀನ್ ಬರೆದು ಪ್ರಕಟ ಮಾಡಿದ್ದಾರೆ. ೧೯೬೪ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿದ್ದು, ಈ ಕಥೆಯಲ್ಲಿ ಆಳವಾದ ಅರ್ಥವಿದೆ. ಕಾದಂಬರಿಯ ಭಾಷೆ ಸರಳವಾಗಿದ್ದು ಮಕ್ಕಳಿಗೆ ಸುಲಭದಲ್ಲಿ ಅರ್ಥವಾಗುವಂತಿದೆ. 

ಇದರಲ್ಲಿ ಒಬ್ಬ ಸಣ್ಣ ಬಾಲಕ ಮತ್ತು ಒಂದು ಸೇಬಿನ ಮರದ ನಡುವಿನ ಬಂಧವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ತನ್ನ ಬಾಲ್ಯದ ದಿನಗಳಲ್ಲಿ ಬಾಲಕ ಆ ಸೇಬಿನ ಮರದೊಂದಿಗೆ ಆಟವಾಡಿ, ಅದರ ಹಣ್ಣು ತಿನ್ನುತ್ತಾನೆ. ಪ್ರತೀ ದಿನ ಆತ ಸೇಬಿನ ಮರದ ಜೊತೆ ಆಟವಾಡುತ್ತಾನೆ. ಹೀಗೆ ಮರಕ್ಕೂ ಆತನಿಗೂ ಒಂದು ಅಪೂರ್ವ ಬಾಂಧವ್ಯ ಬೆಳೆದು ಬಿಡುತ್ತದೆ. ಕಾಲಕ್ರಮೇಣ ಆತ ಬೆಳೆದು ದೊಡ್ಡವನಾಗುತ್ತಾನೆ. ಆ ಸಮಯ ಆತನ ಆಸೆಗಳೂ ಬೆಳೆದು ದೊಡ್ಡದಾಗಿರುತ್ತದೆ. ಆತ ಮರದ ಗೆಲ್ಲುಗಳನ್ನು ಬಳಸಿ ತನ್ನ ಮನೆಯನ್ನು ಕಟ್ಟಿಕೊಳ್ಳುತ್ತಾನೆ ಮತ್ತು ಕಾಂಡವನ್ನು ನೌಕೆ ತಯಾರಿಸಲು ಬಳಸುತ್ತಾನೆ. ಪ್ರತಿ ಬಾರಿಯೂ ಮರ ಏನನ್ನೂ ಬಯಸದೇ ನಿಸ್ವಾರ್ಥದಿಂದ ತನ್ನ ಭಾಗಗಳನ್ನು ಆತನಿಗೆ ನೀಡುತ್ತದೆ.

ಕಥೆಯ ಕೊನೆಯಲ್ಲಿ ಬಾಲಕ ವೃದ್ಧನಾಗಿ ಬಿಡುತ್ತಾನೆ. ಆಗ ಆ ಮರಕ್ಕೂ ಆತನಿಗೆ ನೀಡಲು ಏನೂ ಉಳಿದಿರುವುದಿಲ್ಲ. ಕಾಂಡದ ಒಂದು ಸಣ್ಣ ಭಾಗ ಮಾತ್ರ ಆತನಿಗೆ ಶಾಂತವಾಗಿ ವಿಶ್ರಾಂತಿ ಪಡೆಯುವ ಸಲುವಾಗಿ ಉಳಿದಿರುತ್ತದೆ. ತನ್ನ ಎಲ್ಲಾ ಭಾಗಗಳನ್ನು ಆ ಹುಡುಗನ ಏಳಿಗೆಗೆ ಸವೆಸಿದರೂ ಆ ಮರ ಏನೂ ಬೇಸರಿಸುವುದಿಲ್ಲ. ಅವರ ಅನುಬಂಧ ಇನ್ನಷ್ಟು ಬಲಿಷ್ಠವಾಗಿ ಉಳಿಯುತ್ತದೆ. ಈ ಹೃದಯಸ್ಪರ್ಶಿ ಕಥೆಯು ಮರದ ನಿಸ್ವಾರ್ಥ ಮನಸ್ಥಿತಿಯ ಬಗ್ಗೆ ಹೇಳುತ್ತದೆ. ಜೊತೆಗೆ ಈ ಸ್ವಾರ್ಥದ ಸಮಾಜದಲ್ಲಿ ಬೇರೆಯವರ ಏಳಿಗೆಗಾಗಿಯೂ ನಾವು ಬದುಕಬೇಕು ಎನ್ನುವ ಉತ್ತಮ ಸಂದೇಶವನ್ನು ನೀಡುತ್ತದೆ. ಪ್ರತಿಯೊಬ್ಬ ಮಕ್ಕಳು ಅವಶ್ಯವಾಗಿ ಓದಬೇಕಾದ ಕೃತಿ ಇದು.

ಎರಡನೆಯ ಕೃತಿ : ಎ ರಿಂಕಲ್ ಇನ್ ಟೈಮ್ (A Wrinkle In Time)
ಈ ಕಥೆ ಪುಸ್ತಕದಲ್ಲಿ ಮೆಗ್ ಮುರಿ, ಅವಳ ಸಹೋದರ ಚಾರ್ಲ್ಸ್ ವಾಲೇಸ್ ಮತ್ತು ಅವರ ಸ್ನೇಹಿತ ಕಾಲ್ವಿನ್ ಓ'ಕೀಫ್ ಅವರು, ಮೆಗ್‌ನ ಕಾಣೆಯಾದ ತಂದೆಯನ್ನು ಹುಡುಕಲು ಪ್ರಯಾಣಕ್ಕೆ ಹೊರಡುತ್ತಾರೆ. ಮೆಗ್ ಮುರಿಯ ತಂದೆ ಓರ್ವ ಪ್ರಯೋಗಶೀಲ ಅಧ್ಯಯನ ನಿಮಿತ್ತ ಅಂತರಿಕ್ಷಕ್ಕೆ ಹೋಗಿ ಕಾಣೆಯಾಗಿದ್ದ ಒಬ್ಬ ವಿಜ್ಞಾನಿಯಾಗಿದ್ದರು. ಮಾರ್ಗದಲ್ಲಿ ಅವರು ಮೂರು ರಹಸ್ಯಮಯ ಮಹಿಳೆಯರಾದ – ಮಿಸೆಸ್ ವಾಟ್ಸಿಟ್, ಮಿಸೆಸ್ ಹೂ ಮತ್ತು ಮಿಸೆಸ್ ವಿಚ್ – ಭೇಟಿಯಾಗುತ್ತಾರೆ. ಅವರು ಬ್ರಹ್ಮಾಂಡದಲ್ಲಿ ಕಂಡು ಬರುವ ವಿಷಯಗಳ ಮೂಲಕ ಅವರನ್ನು ಮಾರ್ಗದರ್ಶನ ಮಾಡುತ್ತಾರೆ. ಅವರ ಸಾಹಸ ಅವರನ್ನು ಕಮಾಜೋಟ್ಜ್ ಎಂಬ ದೂರದ ಗ್ರಹಕ್ಕೆ ಕರೆತಂದರೆ, ಅಲ್ಲಿ ಅವರು ಐಟಿ ಎಂಬ ಶಕ್ತಿಶಾಲಿ, ದುರಾಸೆಯ ಶಕ್ತಿಯನ್ನು ಎದುರಿಸುತ್ತಾರೆ. ಕಥೆಯು ರಹಸ್ಯ, ವಿಜ್ಞಾನ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಮಿಶ್ರಣಗೊಳಿಸುತ್ತದೆ. ಮಕ್ಕಳು ತಮ್ಮ ಗುರಿ ಪೂರ್ಣಗೊಳಿಸಲು ಹೋರಾಡುತ್ತಾರೆ.
ಈ ಕಾದಂಬರಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧ, ಅಂಧಕಾರವನ್ನು ಜಯಿಸುವ ಪ್ರೀತಿಯ ಶಕ್ತಿ ಎಂಬ ಆಳವಾದ ವಿಷಯಗಳನ್ನು ಹೊರ ಜಗತ್ತಿಗೆ ಬಿಚ್ಚಿಡುತ್ತದೆ. ಇದು ನೈತಿಕತೆ ಇಲ್ಲದ ವಿಜ್ಞಾನದ ಅಪಾಯಗಳು ಮತ್ತು ಎಲ್ಲರನ್ನೂ ಒಂದೇ ರೀತಿಯಾಗಿ ಮಾಡುವ ಸಮಾಜದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಮೆಗ್‌ ನ ಪ್ರಯಾಣವು ಒಂದು ಸಾಹಸಮಯ ಯಾತ್ರೆಯಾಗಿದ್ದು ಆಕೆಯ ಸ್ವತಂತ್ರ ಚಿಂತನೆಯನ್ನು ಬಿಂಬಿಸುತ್ತದೆ. 

ಎ ರಿಂಕಲ್ ಇನ್ ಟೈಮ್ ಎಂಬುದು ಮ್ಯಾಡೆಲೈನ್ ಎಲ್‌ ಎಂಗಲ್ ಬರೆದ ವೈಜ್ಞಾನಿಕ ಫಿಕ್ಷನ್ ಸಾಹಸ ಕಾದಂಬರಿಯಾಗಿದ್ದು, ೧೯೬೨ರಲ್ಲಿ ಪ್ರಕಟಗೊಂಡಿದೆ. ಇದನ್ನು ಹದಿಹರೆಯದ ಯುವಕರನ್ನು ಬಹುವಾಗಿ ಆಕರ್ಷಿಸಿದ ಕಾದಂಬರಿ ಎನ್ನಲಾಗಿದೆ. ಈ ಕಾದಂಬರಿಗೆ ೧೯೬೩ರಲ್ಲಿ ನ್ಯೂಬೆರಿ ಪದಕ ದೊರೆತಿದೆ. ಈ ಪುಸ್ತಕದ ಖ್ಯಾತಿ ಬಳಿಕ ಅನೇಕ ಮಾಲಿಕೆಗಳು ಹೊರಬಂದವು. ಅದರಲ್ಲಿ ಎ ವಿಂಡ್ ಇನ್ ದ ಡೋರ್ (೧೯೭೩), ಎ ಸ್ವಿಫ್ಟ್ಲಿ ಟಿಲ್ಟಿಂಗ್ ಪ್ಲ್ಯಾನೆಟ್ (೧೯೭೮) ಮತ್ತು ಮೆನಿ ವಾಟರ್ಸ್ (೧೯೮೬) ಸೇರಿವೆ. ಕಲ್ಪನೆ, ವಿಜ್ಞಾನ ಮತ್ತು ಆಳವಾದ ಜೀವನ ಪಾಠಗಳ ಅದ್ಭುತ ರೋಮಾಂಚಕ ಮಿಶ್ರಣವು ಎಲ್ಲ ವಯಸ್ಸಿನ ಓದುಗರನ್ನು ಇನ್ನಷ್ಟು ಓದಲು ಪ್ರೇರೇಪಿಸುತ್ತದೆ.

(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************






Ads on article

Advertise in articles 1

advertising articles 2

Advertise under the article