ಸ್ಫೂರ್ತಿಯ ಮಾತುಗಳು : ಸಂಚಿಕೆ - 192
Monday, November 24, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 192
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಮಾನವನು ಸೃಷ್ಟಿಯ ವಿಶಿಷ್ಟ ಜೀವಿ. ಸಂತೃಪ್ತಿಯ ಜೀವನ ನಡೆಸಲು ಮನುಷ್ಯ ಸಕಲಾಂಗಗಳನ್ನು ಹೊಂದಿದ್ದಾನೆ. ಜೊತೆಗೆ ಮಾತನಾಡುವ ಶಕ್ತಿಯನ್ನು ಭಗವಂತನು ಮನುಷ್ಯನಿಗೆ ಅನುಗ್ರಹಿಸಿದ್ದಾನೆ. ಬೇರಾವ ಜೀವಿಗಳೂ ಮಾತನಾಡಲು ಶಕ್ತವಲ್ಲ. ಆದರೆ ಮನುಷ್ಯನ ಸುಂದರ ಬದುಕಿಗೆ ಸುಸ್ಥಿತಿಯ ಅಂಗಾಂಗಗಳು ಮಾತ್ರವೇ ಸಾಲದು. ಭಗವಂತನು ಅದಕ್ಕೆಂದೇ ಮಾತನಾಡುವ ಶಕ್ತಿಯಂತೆ ವಿಶೇಷವಾದ ಇನ್ನೊಂದು ಸಾಮರ್ಥ್ಯವನ್ನೂ ಮನುಷ್ಯನಿಗೆ ಜೋಡಿಸಿ ಹಾಯಾಗಿರಲು ಅವಕಾಶ ಒದಗಿಸಿದ್ದಾನೆ. ಆ ಶಕ್ತಿಯೇ ಚಿತ್ತ.
ಸಂಸ್ಕೃತದಲ್ಲಿ ಮನಸ್ಸನ್ನು ‘ಚಿತ್ತ’ ಎನ್ನುವರು ಇದು ವ್ಯಾಪಕವಾದ ಅರ್ಥವನ್ನು ಹೊಂದಿರುತ್ತದೆ. ಇಂದ್ರಿಯ ಗ್ರಹಿಕೆ, ಮೌಖಿಕ ಮತ್ತು ಅಮೂರ್ತ ಚಿಂತನೆ, ಭಾವನೆಗಳು, ಸಂತೋಷ ಮತ್ತು ಅಸಂತೋಷದ ಭಾವನೆಗಳು, ಗಮನ, ಏಕಾಗ್ರತೆ, ಬುದ್ಧಿವಂತಿಕೆ ಮತ್ತು ಇನ್ನೂ ಹೆಚ್ಚಿನ ಅರ್ಥದಲ್ಲಿ ಚಿತ್ತ ಪದವು ಬಳಕೆಯಾಗುತ್ತದೆ. ಚಿತ್ತವು ಡೋಲಾಯಮಾನವಾಗುತ್ತಿರುತ್ತದೆ. ಅದನ್ನೇ ಚಿತ್ತ ಚಾಂಚಲ್ಯ ಎನ್ನುವರು. ಮರ್ಕಟ ಮನಸ್ಸೆಂದೂ ಲೇವಡಿ ಮಾಡುವುದಿದೆ. ಚಿತ್ತವು ಸ್ಥಿರವಾಗಿದ್ದರೆ ಚಿತ್ತಸ್ಥೈರ್ಯವೆನಿಸಲ್ಪಡುತ್ತದೆ. ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಲ್ಲಿ ಚಿತ್ತಸ್ಥೈರ್ಯವೂ ಒಂದು. ನಮಗೆ ಅನೇಕ ಸಂಗತಿಗಳ ಚಿತ್ತಾಕರ್ಷಣೆಯಿರುತ್ತದೆ. ಅವುಗಳಲ್ಲಿ ಪ್ರಧಾನವಾದುದೇ ವಿತ್ತ ಅಥವಾ ಸಂಪತ್ತು.
ಚಿತ್ತವು ವಿತ್ತದ ಸೆಳೆತಕ್ಕೊಳಗಾದಾಗ ವ್ಯಕ್ತಿತ್ವವು ಅಪಾಯಕ್ಕೊಳಗಾಗುತ್ತದೆ. ವ್ಯಕ್ತಿ ನಾಶದ ಸಾಧ್ಯತೆಯೂ ಅಸಂಭವವಲ್ಲ. ಚಿತ್ತವಿಕಾರ ಅಥವಾ ಚಿತ್ತಭ್ರಾಂತಿಗಳಾಗಲು ನಮಗಿರುವ ಹತ್ತು ಹಲವು ಚಿತ್ತಾಕರ್ಷಣೆಗಳೇ ಕಾರಣ. ಪ್ರಸಿದ್ಧಿ, ಪದವಿ, ಬಿರುದು, ಪ್ರಶಸ್ತಿ, ಸನ್ಮಾನಗಳ ಬಯಕೆಯೂ ವಿತ್ತಾಕರ್ಷಣೆಯಷ್ಠೇ ಅಪಾಯಕಾರಿ. ಇವುಗಳು ತಾವಾಗಿಯೇ ನಮ್ಮ ಅರ್ಹತೆಗನುಗುಣವಾಗಿ ದಕ್ಕಿದರೆ ಧನ್ಯತೆಯಿರುತ್ತದೆ. ಆದರೆ ಇಂದು ಪಿ.ಎಚ್.ಡಿ ಗಳಂತಹ ಪದವಿಗಳೂ ಡಾಕ್ಟರೇಟ್‌ನಂತಹ ಬಿರುದುಗಳು ಹಣವನ್ನು ನೀಡಿಯೋ ಇನ್ನೇನನ್ನೋ ನೀಡಿ ಗಳಿಸುವ ಬುದ್ಧಿವಂತರಿದ್ದಾರೆ. ಇದು ಚಿತ್ತವಿಕಾರದ ತುತ್ತ ತುದಿ. ಭ್ರಮೆಯ ಪ್ರಪಂಚದಲ್ಲಿ ಚಿತ್ತಭ್ರಮೆಯೂ ಅಗತ್ಯವೆಂದು ವಾದಿಸುವವರೂ ಇದ್ದಾರೆ. ಎಲ್ಲವನ್ನೂ ಪಡೆಯುವುದೇ ಜೀವನ ಧರ್ಮ. ಪಡೆಯುವ ವಿಧಾನಕ್ಕಿಂತಲೂ ಪಡೆಯುವ ಹರಸಾಹಸವೇ- ಅನೃತ ಮಾರ್ಗ- ಮುಖ್ಯವೆಂದು ಬೊಗಳೆ ಹೊಡೆಯುವವರ ನಡುವೆ ನಮ್ಮದು ಅರಣ್ಯ ರೋದನ ಅಷ್ಟೇ.
ಚಿತ್ತವು ವಿತ್ತಾಕರ್ಷಣೆಗೊಳಗಾದರೆ ಅದು ಮಲಿನ ಮನಸ್ಸಾಗುತ್ತದೆ. ಮಲಿನ ಮನಸ್ಸು ಮಾಲಾಪರ್ಷಕ ಸ್ನಾನ ಮಾಡಿಸಿದರೆ ಅಥವಾ ಶುದ್ಧೋದಕದಲ್ಲಿ ಮುಳುಗಿಸಿದರೂ ಶುಚಿಯಾಗದು. ಈಗ ಇದ್ದವನು ಸ್ವಲ್ಪ ಸಮಯದಲ್ಲಿ ಸತ್ತ ವಾರ್ತೆ ಬರುತ್ತದೆ. ಸಾಯುವ ತನಕ ಅವನು ಮಾಡಿದ ಅಥವಾ ಗಳಿಸಿದ ವಿತ್ತ ಯಾ ಸಂಪತ್ತು ಅಗಣಿತ. ಏನು ಪ್ರಯೋಜನ! ಅವನೊಂದಿಗೆ ಅವು ಯಾವುವೂ ಹೋಗದೆ ಅನ್ಯರ ಪಾಲಾಗುತ್ತವೆ!!. ಆದುದರಿಂದ ನಮ್ಮ ಚಿತ್ತ ವಿತ್ತದಿಂದ ಹೊರಗಡೆ ಬರಬೇಕು.
ತನ್ನಲ್ಲಿರುವ ವಿತ್ತದ ಅಗಾಧ ಪ್ರಮಾಣದಿಂದಾಗಿ ಸಮಾಜ ನನ್ನ ಚಿತ್ತವನ್ನು ಗೌರವಿಸುವುದೆಂಬ ತಿಳುವಳಿಕೆ ಅಜ್ಞಾನ. ಗಳಿಸಿದ ವಿತ್ತವನ್ನು ಸಮಾಜಕ್ಕೆ ಹಂಚುವುದರಿಂದ ಸಮಾಜವು ನನ್ನನ್ನು ಹೆಚ್ಚು ಗೌರವಿಸುವುದು ಎಂಬ ಅರಿವೇ ವ್ಯಕ್ತಿತ್ವ. ಸಮಾಜಕ್ಕೆ ಹಂಚುವ ವಿತ್ತವೆಂದರೆ ದಾನಗುಣ ಮಾತ್ರವಲ್ಲ. ಸಮಾಜವನ್ನು ಎಲ್ಲ ಮೂಲಗಳಲ್ಲೂ ಸಂಪದ್ಭರಿತಗೊಳಿಸುವ ಪ್ರಯತ್ನವೆಂಬುದನು ಮರೆಯಬಾರದು. ಪರಮ ಪೂಜ್ಯ ಡಾಕ್ಟರ್‌ಜೀಯವರು ಹೇಳುವ ಮಾತೊಂದು ಹೀಗಿದೆ. “ಜನರು ನಮ್ಮನ್ನು ಗಮನಿಸುವುದಿಲ್ಲ ಎಂಬ ಭ್ರಮೆಯಲ್ಲಿ ಎಂದಿಗೂ ಇರಬೇಡಿ. ಅವರು ನಮ್ಮ ಕಾರ್ಯದ ಕಡೆಗೆ ಹಾಗೂ ನಮ್ಮ ನಡತೆಯ ಬಗ್ಗೆ ಸೂಕ್ಷ್ಮವಾಗಿ ವಿಮರ್ಶಕ ದೃಷ್ಟಿಯಿಂದ ನೋಡುತ್ತಲೇ ಇರುತ್ತಾರೆ. ಆದ್ದರಿಂದ ಕೇವಲ ವ್ಯಕ್ತಿಗತ ನಡೆನುಡಿಗಳಲ್ಲಿ ಮಾತ್ರ ಎಚ್ಚರವಲ್ಲ, ಸಾಮೂಹಿಕ ಮತ್ತು ಸಾರ್ವಜನಿಕ ಜೀವನದಲ್ಲೂ ನಮ್ಮ ನಡತೆಯು ಉದಾತ್ತವಾಗಿಯೇ ಇರಬೇಕು.” ಹಾಗೆಯೇ ವಿತ್ತದ ಬಗೆಗಿನ ನಮ್ಮ ಚಿತ್ತಪ್ರವೃತ್ತಿಯನ್ನೂ ಜನರು ಗಮನಿಸಿ, “ಹುಚ್ಚ” ಪಟ್ಟ ಕಟ್ಟುವರು. ಹುಚ್ಚನೆಂದರೆ ಹಣದ ಹುಚ್ಚ, ಅಧಿಕಾರದ ಹುಚ್ಚ, ಪ್ರಸಿದ್ಧಿಯ ಹುಚ್ಚ… ಎಂಬ ಪಟ್ಟ. ಆದುದರಿಂದ ನಮ್ಮ ಚಿತ್ತವನ್ನು ಶುಭ್ರವಾಗಿರಿಸಿ ಎಲ್ಲಾ ಹುಚ್ಚುಗಳಿಂದ ಮುಕ್ತರಾಗೋಣ. ಚಿತ್ತವು ವಿತ್ತಮಯವಾಗದೆ ಚಿನ್ಮಯವಾಗಲಿ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************