-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 106

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 106

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 106
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
          
ಪ್ರೀತಿಯ ಮಕ್ಕಳೇ... ಹೀಮೋಗ್ಲೋಬಿನ್ ನಲ್ಲಿ ಒಂದು ಕಬ್ಬಿಣದ ಅಯಾನಿಗೆ ನಾಲ್ಕು ಪ್ರೋಟೀನ್ ಸರಪಣಿ ಜೋಡಿಸಲ್ಪಟ್ಟಿರುತ್ತವೆ. ಇವುಗಳಲ್ಲಿ ಎರಡು ಆಲ್ಫಾ ಸರಪಣಿಗಳು ಎರಡು ಬೀಟಾ ಸರಪಣಿಗಳು. ಆಲ್ಪಾ ಸರಪಣಿಯಲ್ಲಿ 141 ಅಮೈನೋ ಆಮ್ಲಗಳಿದ್ದರೆ ಬೀಟಾ ಸಪಣಿಯಲ್ಲಿರುವುದು ತಲಾ 146. ಈ ಬೀಟಾ ಸರಪಣಿಯ ಆರನೆಯ ಸ್ಥಾನದಲ್ಲಿ ಗ್ಲುಟಮಿಕ್ ಆಮ್ಲದ (glutamic acid) ಬದಲಾಗಿ ವೇಲಿನ್ ಅನ್ನು ತಂದಿಟ್ಟರೆ ಹೀಮೋಗ್ಲೋಬಿನ್ ಅಣು ಕತ್ತಿಯ ಆಕಾರದಲ್ಲಿ ಬಾಗಿಕೊಳ್ಳುತ್ತದೆ. ಇದನ್ನು ಕತ್ತಿ ಅಲಗಿನ ರಕ್ತಹೀನತೆ (sicke celled anaemia) ಅಂತ ಕರೆಯುತ್ತೇವೆ. ಈ ಹೀಮೋಗ್ಲೋಬಿನ್ ಗೆ ಆಮ್ಲಜನಕ ಸಾಗಿಸುವ ಸಾಮರ್ಥ್ಯ ಕಡಿಮೆ. ಇದೊಂದು ಅನುವಂಶೀಯ ರೋಗ.‌ ಇದು ಸಾಮಾನ್ಯವಾಗಿ ನೀಲಗಿರಿ ಪರ್ವತ ಪ್ರದೇಶಗಳಲ್ಲಿ ವಾಸಿಸುವ ಕೆಲವೊಂದು ಬುಡಕಟ್ಟು ಜನಾಂಗದಲ್ಲಿ ಸಾಮಾನ್ಯ. ಏಕೆ ಪ್ರಕೃತಿ ಅವರಿಗೆ ಈ ಖಾಯಿಲೆ ಕೊಟ್ಟಿದೆ ಎಂದು ಪಾಪ ಅನ್ನಿಸುತ್ತದೆ ಅಲ್ಲವೇ. ನೀಲಗಿರಿಯ ಕಾಡುಗಳಲ್ಲಿ ವಿಪರೀತ ಸೊಳ್ಳೆಗಳು. ಆದ್ದರಿಂದ ಅಲ್ಲಿ ಮಲೇರಿಯಾ ಒಂದು ಸಾಮಾನ್ಯ ಖಾಯಿಲೆ. ಈ ಕತ್ತಿ ಅಲಗಿನ ರಕ್ತಹೀನತೆ ಇರುವವರಿಗೆ ಮಲೇರಿಯಾ ಕಾಡುವುದಿಲ್ಲ. ನೋಡಿದಿರಾ Blessings in disguise ಎನ್ನುತ್ತೇವಲ್ಲ ಹಾಗೆ. ನಿಮ್ಮ ಅಡಿಕೆ ತೋಟಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಳದಿ ಹೂ ಬಿಡುವ ಧನಲಕ್ಷ್ಮಿ ಕಳೆ ವ್ಯಾಪಕವಾಗಿದೆ. ಇದರ ನಿಯಂತ್ರಣ ಸುಲಭದ ಕೆಲಸವಲ್ಲ. ಯಾವ ಕಳೆನಾಶಕಕ್ಕೂ ಬಗ್ಗದ ಈ ಕಳೆಗೆ ರೈತ ಹೈರಾಣಾಗಿದ್ದೇನೆ. ಆದರೆ ಈ ಕಳೆ ಇರುವ ಕಡೆ ಅಡಿಕೆಗೆ ಬೇರು ಹುಳದ ಬಾಧೆ ಇಲ್ಲ. ಇದೊಂದು ನೈಸರ್ಗಿಕ ನಿಯಂತ್ರಣ.
 
ಹೀಮೋಗ್ಲೋಬಿನ್ ನಲ್ಲಿ ಆಮ್ಲಜನಕವನ್ನು ಸಾಗಿಸುವುದು ಪ್ರೋಟೀನ್ ಸರಪಣಿಗಳಲ್ಲ ಬದಲಾಗಿ ಕಬ್ಬಿಣದ ಅಯಾನ್. ವಿಶಿಷ್ಟ ಸನ್ನಿವೇಶಗಳಲ್ಲಿ ಈ ಆಮ್ಲಜನಕದ ಪರಮಾಣು ಕಬ್ಬಿಣದ ಅಯಾನ್ ನೊಂದಿಗೆ ಒಂದು ದುರ್ಬಲ ಮತ್ತು ಹಿಮ್ಮರಳಬಹುದಾದ (reversible) ಕೋವೆಲೆಂಟ್ ಬಂಧದೊಂದಿಗೆ ಬಂಧಿಯಾಗುತ್ತದೆ. ಈ ಬಂಧವೇರ್ಪಡಲು ಐದು ಅನುಕೂಲತೆಗಳಿರಬೇಕು.

1. ಆಮ್ಲಜನಕದ ಆಂಶಿಕ ಒತ್ತಡ (partial pressure) (pO2) 100 mm ಪಾದರಸಕ್ಕಿಂತ ಹೆಚ್ಚಿಸಬೇಕು.

2. ಇಂಗಾಲದ ಡೈಆಕ್ಸೈಡ್ ನ ಆಂಶಿಕ ಒತ್ತಡ (pCO2).

3. ಕಡಿಮೆ ತಾಪಮಾನ (lower temperature).

4. ಕಡಿಮೆ ಆಮ್ಲೀಯತೆ ಅಂದರೆ ಅಧಿಕ ಕ್ಷಾರೀಯತೆ.

5. 2-3 BPG (2-3 dip his highly create) ಕಡಿಮೆ ಲಭ್ಯತೆ.

ಈ ಎಲ್ಲಾ ಅನುಕೂಲತೆಗಳಿರುವುದು ಉಸಿರಾಟದ ಅಂಗಗಳಲ್ಲಿ. ಅಲ್ಲಿ ಆಮ್ಲಜನಕ ಹೆಚ್ಚಿರುತ್ತದೆ, ಇಂಗಾಲದ ಡೈಆಕ್ಸೈಡ್ ಕಡಿಮೆ, ಉಳಿದ ಅಂಗಾಂಶಗಳಿಗಿಂತ ಉಷ್ಣತೆ ಕಡಿಮೆ, pH ಕೂಡಾ ಹೆಚ್ಚು. ಆದ್ದರಿಂದ ಅಮ್ಲಜನಕ ಹೋಗಿ ತಾತ್ಕಾಲಿಕವಾಗಿ ಕಬ್ಬಿಣಕ್ಕೆ ಅಂಟಿಕೊಂಡು ಉಜ್ವಲ ಕೆಂಪಿನ ಆಕ್ಸಿ ಹಿಮೋಗ್ಲೋಬಿನ್ ರೂಪುಗೊಳ್ಳುತ್ತದೆ. ಈಗ ರಕ್ತ ಶ್ವಾಸಕೋಶದಿಂದ ತನ್ನ ಪಯಣವನ್ನು ಮುಂದುವರಿಸುತ್ತಾ ದೇಹದ ಆಳವಾದ ಅಂಗಾಂಶದ ಕಡೆಗೆ ಸಾಗುತ್ತಿದ್ದ ಹಾಗೆ ತದ್ವಿರುದ್ಧವಾದ ಸನ್ನಿವೇಶ ರೂಪುಗೊಳ್ಳುತ್ತಾ ಹೋಗುತ್ತದೆ.

1. ಆಮ್ಲಜನಕದ ಆಂಶಿಕ ಒತ್ತಡ ಕುಸಿಯುತ್ತದೆ.

2. ಇಂಗಾಲದ ಡೈಆಕ್ಸೈಡ್ ನ ಆಂಶಿಕ ಒತ್ತಡ ಏರುತ್ತಾ ಸಾಗುತ್ತದೆ.

3. ಅಂಗಾಂಶದ ಉಷ್ಣತೆ ಏರುತ್ತದೆ.

4. ನೀರಿನಲ್ಲಿ ಕರಗಿದ ಇಂಗಾಲದ ಡೈಆಕ್ಸೈಡ್ ನ ಕಾರಣದಿಂದ ಉಂಟಾಗುವ ಕಾರ್ಬಾನಿಕ್ ಆಮ್ಲ ರಕ್ತದ pH ಕುಸಿಯತ್ತದೆ.

5. 2-3 BPG ಪ್ರಬಲತೆ ಅಧಿಕವಿರುತ್ತದೆ. ಆಗ ಆಕ್ಸಿಹೀಮೋಗ್ಲೋಬಿನ್ ನಿಂದ ಆಮ್ಲಜನಕ ಕಳಚಿಕೊಳ್ಳುತ್ತಾ ಸಾಗಿ ಪ್ರತಿ ಕೋಶಗಳಿಗೂ ಅಮ್ಲಜನಕ ತಲುಪುವ ಹಾಗೆ ಆಗುತ್ತದೆ.

ಹೀಗೆ ಅಸ್ಥಿರವಾದ ಬಂಧವೇ ಜೀವಕ್ಕೆ ಸ್ಥಿರತೆ ಒದಗಿಸುತ್ತದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************


Ads on article

Advertise in articles 1

advertising articles 2

Advertise under the article