ಜೀವನ ಸಂಭ್ರಮ : ಸಂಚಿಕೆ - 217
Monday, November 24, 2025
Edit
ಜೀವನ ಸಂಭ್ರಮ : ಸಂಚಿಕೆ - 217
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಅಪರೂಪದ ದಂಪತಿಗಳ ಕಥೆ ನೋಡೋಣ. ಗ್ರೀಕ್ ದೇಶದ ಅಥೆನ್ಸ್ ನಗರದಲ್ಲಿ ಸುಮಾರು 2500 ವರ್ಷಗಳ ಹಿಂದೆ (ಸುಖರಾತ) ಸಾಕ್ರೆಟಿಸ್ ಎನ್ನುವ ಶ್ರೇಷ್ಠ ತತ್ವಜ್ಞಾನಿ ಇದ್ದನು. ಮುಖ ಅಷ್ಟು ಸುಂದರವಾಗಿರಲಿಲ್ಲ. ಒರಟು ದೇಹ. ಕೆತ್ತನೆ ಮರಗೆಲಸ ಮಾಡಿಕೊಂಡಿದ್ದನು. ಆದರೆ ಈತನ ಮಾತು ಕೇಳಲು ಅಥೆನ್ಸ್ ನಗರದ ಯುವಕರೆಲ್ಲ ದಾವಿಸುತ್ತಿದ್ದರು. ಸಾಕ್ರೆಟಿಸ್ ಈ ಯುವಕರನ್ನು ಸಣ್ಣ ಸಣ್ಣ ಪ್ರಶ್ನೆಗಳನ್ನು ಕೇಳುವ ಮೂಲಕ ಸತ್ಯದ ಜ್ಞಾನ ಮೂಡಿಸುತ್ತಿದ್ದನು. ಸಾಕ್ರೆಟಿಸ್ ಅನುಭವಿ, ಸತ್ಯ ದರ್ಶಕ. ಆದುದರಿಂದ ಆತನ ಮಾತು ಮಧುರ ಹಾಗೂ ಸತ್ಯದಿಂದ ಕೂಡಿತ್ತು. ಆತನ ಮಾತು ಕೇಳಿದವರ ಮನಸ್ಸಿನಲ್ಲಿ ಸತ್ಯದ ಜ್ಞಾನ ಮೂಡುತಿತ್ತು. ಮನಸ್ಸು ಹಗುರ, ಮಧುರ ಹಾಗೂ ವಿಶಾಲವಾಗುತ್ತಿತ್ತು. ಸಾಕ್ರೆಟಿಸ್ ನ ಹೆಂಡತಿ ಝಾಂತಪಿ. ಝಾಂತಪಿ ಎಂದರೆ ಜಗಳಗಂಟಿ ಎಂದರ್ಥ. ಹೆಸರಿಗೆ ತಕ್ಕಂತೆ ಝಾಂತಪಿ ಜಗಳಗಂಟಿಯಾಗಿದ್ದಳು. ಆದರೆ ಸೌಂದರ್ಯ ವತಿಯಾಗಿದ್ದಳು. ಸಾಕ್ರೆಟಿಸ್ ಶ್ರೇಷ್ಠ ತತ್ವಜ್ಞಾನಿಯಾದರು ಮನೆಗೆ ಏನು ತರುತ್ತಿರಲಿಲ್ಲ. ಊಟಕ್ಕೆ ಮಾತ್ರ ಬರುತ್ತಿದ್ದನು. ಇದರಿಂದ ಝಾಂತಪಿ ರೋಸಿ ಹೋಗಿದ್ದಳು. ಆಗಾಗ್ಗೆ ಜಗಳ ಮಾಡುತ್ತಿದ್ದಳು. ಒಮ್ಮೆ ಸಾಕ್ರೆಟಿಸ್ ಯುವಕರೊಂದಿಗೆ ಮಾತನಾಡುತ್ತಾ ಕುಳಿತಿದ್ದನು. ಆಗ ಝಾಂತಪಿ ಮನೆ ನಿರ್ವಹಣೆ ಸಂಕಟದಿಂದ ರೋಸಿ ಹೋಗಿ ಪಾತ್ರೆ ತೊಳೆದ ನೀರನ್ನು ತಂದು ಯುವಕರ ಮುಂದೆ ಕುಳಿತು ಮಾತನಾಡುತ್ತಿದ್ದಾಗ ಬೈಯುತ್ತ ಸಾಕ್ರೆಟಿಸ್ ಮೈ ಮೇಲೆ ಸುರಿದಳು. ಆಗ ಸಾಕ್ರೆಟಿಸ್ ಏನು ಮಾತನಾಡದೆ ನಕ್ಕ. ಮೈ ಕೈ ಜಾಡಿಸಿ ಮಾತು ಮುಂದುವರಿಸಿದನು. ಆಗ ಮುಂದೆ ಕುಳಿತಿದ್ದ ಅನೇಕ ಯುವಕರಲ್ಲಿ ಒಬ್ಬ ಹೇಳಿದ "ಏನು ಗುರುಗಳೇ ನಮ್ಮ ಮುಂದೆ ಮುಸುರೆ ತಿಕ್ಕಿದ ನೀರನ್ನು ನಿಮ್ಮ ಮೇಲೆ ಹಾಕಿ ನಿಮ್ಮನ್ನು ಅವಮಾನಿಸಿದಳಲ್ಲ ನಿಮ್ಮ ಪತ್ನಿ, ಇದು ಸರಿಯೇ" ಎಂದನು. ಆಗ ಸಾಕ್ರೆಟಿಸ್ ಹೇಳಿದನು ಇದೇ ಸತ್ಯ ಸಾಕ್ಷತ್ಕಾರದ ಮಾರ್ಗ. ನಾನು ಶ್ರೇಷ್ಠ ತತ್ವಜ್ಞಾನಿಯಾಗಲು ಆಕೆಯೇ ಕಾರಣ. ಏಕೆಂದರೆ ಪದೇ ಪದೇ ಬೈದು ಹೀಗೆ ಮಾಡಿದರಿಂದ ನಾನು ಅದರ ಕಡೆ ಲಕ್ಷ್ಯ ಕೊಡುವುದನ್ನು ಬಿಟ್ಟೆ. ನನ್ನ ಲಕ್ಷ್ಯ ಸತ್ಯ ದರ್ಶನದ ಕಡೆಗೆ ಇದೆ. ನೀನ್ಯಾಕೆ ಈ ವಿಷಯವನ್ನು ಮನಸ್ಸಿಗೆ ಹಾಕಿಕೊಂಡೆ. ಇಂತಹ ವಿಷಯ ಮನಸ್ಸು ತುಂಬಿದರೆ ಸತ್ಯದರ್ಶನ ಸಾಧ್ಯವೇ?. ಇದರಿಂದ ಯಾವುದಕ್ಕೆ ಮಹತ್ವ ಕೊಡಬೇಕೆಂಬುದನ್ನು ಕಲಿಯಿರಿ. ಯಾವುದನ್ನು ಮನಸ್ಸಿನಲ್ಲಿ ಹಾಕಿಕೊಂಡರೆ ಸತ್ಯದರ್ಶನಕ್ಕೆ ಅಡ್ಡಿಯಾಗುತ್ತದೆ ಅದನ್ನು ಮನಸ್ಸಿನಿಂದ ತೆಗೆಯಬೇಕು. ಅಂತಹ ಘಟನೆ ಕಡೆ ಲಕ್ಷ್ಯ ಕೊಡದಿದ್ದರೆ ಸತ್ಯದರ್ಶನವಾಗುತ್ತದೆ. ಈಗ ಹೇಳಿ ಆಕೆಯೇ ನನ್ನನ್ನು ತತ್ವಜ್ಞಾನಿಯನ್ನಾಗಿ ಮಾಡಿದ್ದು ಎಂದನು.
ಯೋಚಿಸಿ ಈಗಿನ ಕಾಲದಲ್ಲಿ ಯಾರಾದರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಆತನ ಪತ್ನಿ ಬಂದು ಮುಸುರೆ ತೊಳೆದ ನೀರು ಹಾಕಿದರೆ ಏನಾಗುತ್ತಿತ್ತು ಅಂತ. ಇದರಿಂದ ದೊಡ್ಡ ಜಗಳವಾಗಿ ಕೊನೆಗೆ ವಿಚ್ಛೇದನವಾಗುತ್ತಿತ್ತು. ಬಲ್ಲವರು ಹೇಗೆ ಆಲೋಚಿಸುತ್ತಾರೆನ್ನುವುದನ್ನು ಇದರಿಂದ ತಿಳಿದುಕೊಳ್ಳಬೇಕು. ಕೊನೆಗೆ ಮನೆಗೆ ನಾನು ಏನು ತರದಿದ್ದರೂ ಆಕೆ ಮನೆ ನಿರ್ವಹಿಸುತ್ತಾಳೆ. ಆಕೆ ನನ್ನನ್ನು ಪ್ರೀತಿಸದಿದ್ದರೆ ಮನೆ ಬಿಟ್ಟು ಹೋಗುತ್ತಿದ್ದಳು. ಆಕೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಹಾಗೆ ನಾನು ಕೂಡ ಆಕೆಯನ್ನು ಪ್ರೀತಿಸುತ್ತೇನೆ ಎಂದನು.
ಝಾಂತಪಿ ಹೀಗೆ ಮುಸುರೆ ತೊಳೆದ ನೀರು ಹಾಕಿ ಬೈಯುತ್ತಾ ಮನೆಗೆ ಬರುವಾಗ ಮನೆಯ ಅಕ್ಕ-ಪಕ್ಕದ ಗೆಳತಿಯರು ಝಾಂತಪಿಗೆ ಹೇಳಿದರು. ಏನು ದುಡಿಯದ ಗಂಡನನ್ನು ಕಟ್ಟಿಕೊಂಡು ಏನು ಮಾಡುತ್ತಿ?. ಈಗಲಾದರೂ ಬಿಟ್ಟುಬಿಡಬಾರದೇ ಎಂದರು. ಆಗ ಝಾಂತಪಿ ಹೇಳಿದಳು "ದುಡಿದು ತಂದು ಹಾಕುವ ಗಂಡ ಸಿಗಬಹುದು. ಆದರೆ ಅವಮಾನ ಸಹಿಸಿಕೊಳ್ಳುವ ಗಂಡ ಸಿಗುತ್ತಾನೇನು. ನಿಮ್ಮ ಗಂಡಂದಿರು ತಂದು ಹಾಕುತ್ತಾರೆ. ಅವರಿಗೆ ಹೀಗೆ ಮುಸುರೆ ತೊಳೆದು ನೀರು ಹಾಕಿ. ಆಗ ನಿಮ್ಮ ಗಂಡಂದಿರು ಏನು ಮಾಡುತ್ತಾರೆ ನೋಡಿ" ಎಂದಳು. "ನನ್ನ ಗಂಡ ಹೊರಗೆ ಬಡವ, ಒಳಗೆ ಶ್ರೀಮಂತ. ಆತನ ಅಂತರಂಗ ಎಷ್ಟು ಶ್ರೀಮಂತ ಅಂದರೆ ಆತ ಮಾತನಾಡಿದರೆ ಇಡೀ ಅಥೆನ್ಸ್ ಪಟ್ಟಣದ ಯುವಕರೇ ಸೇರುತ್ತಾರೆ. ಅಂತಹ ಶ್ರೀಮಂತ ನನ್ನ ಪತಿ. ಅದಕ್ಕೆ ನಾನು ಆತನನ್ನು ಪ್ರೀತಿಸುತ್ತಿದ್ದೇನೆ" ಎಂದಳು. ಆಗ ಗೆಳತಿಯರು ಕೇಳಿದರು ಹಾಗಾದರೆ ಹೀಗೆ ಏಕೆ ಮಾಡುತ್ತೀ?. ಆಗ ಝಾಂತಪಿ ಹೇಳಿದಳು "ಮನೆ ನಿರ್ವಹಣೆ ತಾಪ ತಡೆಯಲಾಗದೆ."
ಈಗಿನ ಕಾಲದಲ್ಲಿ ಸಣ್ಣಪುಟ್ಟ ತಪ್ಪುಗಳಿಗೆ ವಿಚ್ಛೇದನ ಮಾಡು ಅಂತ ಸಲಹೆ ನೀಡುವರು ಇದ್ದಾರೆ. ಅವರ ಮಾತು ಕೇಳಿ ವಿಚ್ಛೇದನ ಆಗುವ ಪ್ರಮಾಣ ಹೆಚ್ಚಾಗಿದೆ. ಆದರ್ಶ ದಂಪತಿ ಎಂದರೇನು?, ಜಗಳ ಮಾಡದೆ ಇರುವುದಲ್ಲ. ಜಗಳವಿಲ್ಲದ ಕುಟುಂಬಗಳೇ ಇಲ್ಲ. ಆದರ್ಶ ದಂಪತಿಗಳಲ್ಲೂ ಜಗಳವಾಗುತ್ತದೆ. ಆದರೆ ಅವರು ಮಾತಿಗೆ ಮಹತ್ವ ಕೊಡುವುದಿಲ್ಲ, ಬದುಕಿಗೆ ಮಹತ್ವ ಕೊಡುತ್ತಾರೆ. ಆದರೆ ಈಗಿನವರು ಬದುಕಿಗೆ ಮಹತ್ವ ನೀಡುವುದಿಲ್ಲ, ಮಾತಿಗೆ ಮಹತ್ವ ನೀಡುತ್ತಾರೆ. ಆದರ್ಶ ದಂಪತಿಗಳಲ್ಲಿ ಯಾರಿಗಾದರೂ ಕೋಪ ಬಂದರೆ ಮತ್ತೊಬ್ಬರು ಮೌನವಾಗಿದ್ದು, ಮಾತಿನ ಸರಿ ತಪ್ಪು ನೋಡದೆ ತಾಪಕ್ಕೆ ಕಾರಣ ಏನು? ಎಂದು ತಿಳಿದು ಮನಸ್ಸನ್ನು ಸಂತೈಸಿ ಕೊಳ್ಳುತ್ತಾರೆ. ಉಳಿದವರು ಕೋಪದ ಕಾರಣಕ್ಕೆ ಮಹತ್ವ ಕೊಡದೆ, ಮಾತಿಗೆ ಹೆಚ್ಚು ಮಹತ್ವ ನೀಡುವುದರಿಂದ ಮನಸ್ಸು ಸಮಾಧಾನಗೊಳ್ಳುವ ಬದಲು ಮನಸ್ತಾಪ ಉಂಟಾಗಿ ದೂರವಾಗುತ್ತಾರೆ. ಆ ಮಾತಿನಿಂದ ಬದುಕಿಗೆ ಅಪಾಯ ತಂದುಕೊಳ್ಳುತ್ತಾರೆ. ಇದರಿಂದ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿ ಏನೆಂದರೆ, ಬದುಕು ಮಹತ್ವವೇ ವಿನಹ, ಮಾತಲ್ಲ. ಮಾತಿನ ಸರಿ ತಪ್ಪು ಬದಲು ಕೋಪಕ್ಕೆ ಕಾರಣ ಕಂಡುಕೊಂಡು, ಮಾತಿಗೆ ಅಷ್ಟು ಮಹತ್ವ ನೀಡದೆ ಇದ್ದರೆ ಬದುಕು ಸುಂದರವಾಗುತ್ತದೆ. ಅಲ್ಲವೇ ಮಕ್ಕಳೆ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************