ಸ್ಫೂರ್ತಿಯ ಮಾತುಗಳು : ಸಂಚಿಕೆ - 190
Tuesday, November 11, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 190
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ದೇವರಿಗೆ ಪೂಜೆ ಮಾಡುವ ಸಂಪ್ರದಾಯ ಭಾರತೀಯರಲ್ಲಿ ಹಾಸು ಹೊಕ್ಕಾಗಿದೆ. ಫೂಜೆ ಎಂದರೇನು? ಪೂಜೆ ಯಾಕೆ ಮಾಡಬೇಕು? ಪೂಜೆ ಮಾಡದೇ ಇದ್ದರೆ ಏನಾದೀತು? ಇಂತಹ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದರೆ ಅದು ತಪ್ಪಲ್ಲ.
ಪೂಯ್ ಧಾತುವಿನಿಂದ ಪೂಜೆ ಹುಟ್ಟಿತು. ಪೂಯತೇ ಆನಯಾ ಇತಿ ಪೂಜಾ ಎಂದು ಬಲ್ಲವರು ಹೇಳಿದ್ದಾರೆ. ಪರಿಶುದ್ಧಿಯನ್ನುಂಟು ಮಾಡುವುದೆಂದು ಇದರ ಅರ್ಥ. ಪೂಜೆ ಮಾಡುವುದೆಂದರೆ ಒಟ್ಟಿನಲ್ಲಿ ಮಾಲಿನ್ಯ ಕಳೆಯುವುದು, ಸ್ವಚ್ಛಗೊಳಿಸುವುದು ಎಂದರಿವಾಗುತ್ತದೆ. ಈಗ ಪುನಹ ನಮಗೆ ಸಂಶಯವೇಳುತ್ತದೆ. ಯಾರನ್ನು ಶುದ್ಧಿಗೊಳಿಸುವುದು? ದೇವರನ್ನೇ? ಪೂಜಾ ಕರ್ತೃವನ್ನೇ? ಪೂಜೆ ಮಾಡುವುದೆಂದರೆ ನಾವು ನಮ್ಮನ್ನು ಪವಿತ್ರಗೊಳಿಸುವುದೇ ಆಗಿದೆ.
ಅವನಿಗೆ ಪೋಲಿಸರು ಸರಿಯಾಗಿ ಪೂಜೆ ಮಾಡಿದರು ಎಂದಾಗ, “ಪೂಜೆ”ಗೆ ವಿಪರೀತ ಅರ್ಥ ಬರುತ್ತದೆ. ಇಲ್ಲಿ ವ್ಯಂಗ್ಯವಿರುತ್ತದೆ. ದುರ್ಜನರ ತಪ್ಪುಗಳನ್ನು ಕಳಚಿ ಅವರು ಒಪ್ಪವಾಗಲು ನಡೆಸುವ ಪೋಲೀಸರ ಪ್ರಕ್ರಿಯೆ (ಶಿಕ್ಷೆ) ಗಳಿಂದ ವ್ಯಕ್ತಿ ಪರಿಶುದ್ಧನಾಗುತ್ತಾನೆಯೆಂಬ ಭಾವದಿಂದ ನೋಡಿದರೆ, ಪೋಲೀಸರು…. ಪೂಜೆ ಮಾಡಿದರು ಎಂಬ ಮಾತಿನಲ್ಲಿ ಸಕಾರಾತ್ಮಕ ಧ್ವನಿಯಿದೆ.
ಮಾತಿನಲ್ಲಿ ಎಡವಿದವರಿಗೆ ಯಾರಾದರೂ ಬೈದರೆ ಅಥವಾ ಗದರಿದರೆ ಚೆನ್ನಾಗಿ “ಮಂಗಳಾರತಿ” ಆಯಿತು ಎನ್ನುವುದೂ ಇದೆ. ಆರತಿ ಅಥವಾ ಮಂಗಳಾರತಿಯು ಧಾರ್ಮಿಕವಾಗಿ ನಡೆಸುವ ದೇವಪೂಜೆಯ ಹಂತಗಳಲ್ಲಿ ಒಂದು ಭಾಗ. ಮಾತಿನಲ್ಲಿ ಎಡವಿದವನ ಸ್ವಭಾವ ಪರಿಶುದ್ಧಿಯಾದರೆ ಮಂಗಳಾರತಿ ಶುದ್ಧಗೊಳಿಸುವುದರ ದ್ಯೋತಕವಾಗುತ್ತದೆ. ಪೂಜೆಗೆ ಮೊದಲು, ಸ್ನಾನದೊಂದಿಗೆ ದೇಹವನ್ನು ಬಾಹ್ಯವಾಗಿ ಶುದ್ಧಿಗೊಳಿಸಲಾಗುತ್ತದೆ. ಮಡಿ ವಸ್ತ್ರವನ್ನು ಧರಿಸಲಾಗುತ್ತದೆ. ಹಣೆಗೆ ತಿಲಕಧಾರಣೆ ನಡೆಯುತ್ತದೆ. ದೇವರ ಕೋಣೆಗೆ ಬಂದು ಶರೀರ ಶುದ್ಧಿಗಾಗಿ ತಲೆಯ ಭಾಗದಿಂದ ಶರೀರಕ್ಕೆ ಜಲ ಪ್ರೋಕ್ಷಣೆ ನಡೆಯುತ್ತದೆ. ಭಗವಂತನನ್ನು ಸ್ಮರಿಸುತ್ತಾ ದೇಹದ ಒಳಹೊರಗುಗಳನ್ನು ಶುದ್ಧಿಗೊಳಿಸು ಎಂದು ಪ್ರಾರ್ಥನೆ ಮಂತ್ರವನ್ನು ಹೇಳುವರು. ಪೂಜೆಯ ಪ್ರಧಾನ ಉದ್ದೇಶ ಸ್ವ- ಶುದ್ಧಿ.
ಪರಬ್ರಹ್ಮನನ್ನು, ಶ್ರೀ ಗಣೇಶನನ್ನು ಸ್ತುತಿಸಲಾಗುತ್ತದೆ. ದೀಪ ಜ್ವಲಿಸಿ ಜ್ಞಾನ. ಆರೋಗ್ಯ, ಸಂಪತ್ತು, ಉತ್ತಮ ಬುದ್ಧಿಯನ್ನು ಪ್ರಾರ್ಥಿಸಲಾಗುತ್ತದೆ. ಈ ಪ್ರಾರ್ಥನೆಯಿಂದ ಅಂತರಂಗವು ಶುದ್ಧಗೊಳ್ಳುತ್ತಿರುತ್ತದೆ. ಪೂಜಾರಂಭದ ಮುನ್ನ ಭಗವನ್ನಾಮವನ್ನು ಹೇಳುತ್ತಾ ಗಾಯತ್ರಿ ಮಂತ್ರದೊಂದಿಗೆ ಪ್ರಾಣಾಯಾಮ ಮಾಡಲಾಗುತ್ತದೆ. ಭಗವಂತನ ಆಗಮನ, ರಕ್ಕಸರ ಪಲಾಯನಕ್ಕಾಗಿ ಘಂಟಾ ವಾದನ ಮಾಡುವರು. ಇದೆಲ್ಲವೂ ಒಳಿತನ್ನು ಬಯಸಿ ಅನುಸರಿಸುವ ವಿವಿಧ ಹಂತಗಳು. ಪಿಶಾಷಿಗಳ (ಭೂತಗಳು) ಉತ್ಸಾರಣ ಮಂತ್ರ, ಭೂದೇವಿಗೆ ಕೃಜ್ಞತೆ ಸಲ್ಲಿಸುವ ಮಂತ್ರ, ಪೂಜಾ ಸಂಕಲ್ಪದಲ್ಲಿ ಕೆಡುಕುಗಳನ್ನು ದೂರೀಕರಿಸಿ ದೇಹ, ಮನೆ, ಸಂಸಾರ, ದೇಶ, ವಿಶ್ವಗಳನ್ನು ಕ್ಷೇಮವಾಗಿಡಲು ಹಲವಾರು ಅಭೀಷ್ಟಗಳನ್ನು ನೆರವೇರಿಸಲು ಭಗವಂತನನ್ನು ಪ್ರಾರ್ಥಿಸಲಾಗುತ್ತದೆ. ಈ ವಿಧಾನಗಳು ಶುದ್ಧೀಕರಣ ಉದ್ದೇಶಿತವಾಗಿವೆ. ಭಗವಂತನ ಒಳಿತಿಗೆಂದು ಯಾರೂ ಸಂಕಲ್ಪ ಮಾಡುವುದಿಲ್ಲ. ಹಾಗಾಗಿ ಪೂಜೆಯು ದೇವರಿಗೆಂದು ಹೇಳುತ್ತೇವಾದರೂ ಅದರ ಹಿಂದೆ ನಮ್ಮ ಶುದ್ಧಿ ಮತ್ತು ಪ್ರಗತಿಯ ಆಶಯವೇ ಹೆಚ್ಚಾಗಿದೆ. ದೇವರನ್ನು ವಿವಿಧ ಉಪಚಾರಗಳೊಂದಿಗೆ ಆರಾಧಿಸುತ್ತೇವೆ.
ದೇವರ ಸಮರ್ಪಣೆಗೆ ಹೂವು ಮತ್ತು ಹಣ್ಣುಗಳು ಆಯುವಾಗ, ದೇವರ ನೈವೇದ್ಯ ತಯಾರಿಸುವಾಗ ಬಹಳ ಶ್ರದ್ಧೆವಹಿಸುತ್ತೇವೆ, ಶುಚಿತ್ವ, ಗುಣಮಟ್ಟ, ರುಚಿ, ಸಾತ್ವಿಕತೆ ಮುಂತಾದವುಗಳ ಬಗ್ಗೆ ಗಮನ ಕೊಡುತ್ತೇವೆ. ಸಮರ್ಪಣೆಯ ನಂತರ ನಾವು ಪಡೆಯುವ ಪ್ರಸಾದ ರೂಪದ ನೈವೇದ್ಯಾದಿಗಳು ನಮ್ಮ ಆರೋಗ್ಯದ ಮೇಲೂ ಸತ್ಪರಿಣಾಮಗಳನ್ನುಂಟು ಮಾಡುವುದರಿಂದ ನಾವು ಸಜ್ಜನರಾಗುತ್ತೇವೆ. ಸಜ್ಜನಿಕೆಯೇ ಪರಿಶುದ್ಧಿ.
ಪೂಜೆಯಲ್ಲಿ ಆವಾಹನೆಯಿಂದ ತೊಡಗಿ ಮಂಗಳಾರತಿ ಬೆಳಗಿ ಆರತಿ ನಮನಾನಂತರ ಪ್ರದಕ್ಷಿಣೆ ಮುಗಿಸಿ ತಪ್ಪುಗಳ ಮನ್ನಣೆಗಾಗಿ ಕ್ಷಮೆಕೋರಿ ಲೋಪ ದೋಷ ಪ್ರಾಯಶ್ಚಿತ್ತ ಮಹಾ ಮಂತ್ರವನ್ನೂ ಹೇಳುತ್ತೇವೆ. ತೀರ್ಥ ಪ್ರಸಾದ ಸ್ವೀಕರಿಸುತ್ತೇವೆ. ದೇವರಿಗೆ ಅರ್ಪಿಸಿದ ಪುಷ್ಪವನ್ನು ಧಾರಣೆ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸು ಭಗವಂತನಲ್ಲೇ ನೆಲೆಸಿರುತ್ತದೆ. ನಮ್ಮ ಮನಸ್ಸು ಭಕ್ತಿ ಸಂಪನ್ನವಾಗಿರುತ್ತದೆ. ಏಕಾಗ್ರತೆ ಬಲಗೊಳ್ಳುತ್ತದೆ. ಮನಸ್ಸಿನಲ್ಲಿ ಭಕ್ತಿ ಏಕಾಗ್ರತೆ ತುಂಬಿದರೆ ಅದುವೇ ಪರಿಶುದ್ಧಿ. ಉಪಚಾರ ಪೂಜೆಯು ಮನೆಗೆ ಬರುವ ಅತಿಥಿಯನ್ನು ಆದರಿಸುವ ಸಂಸ್ಕಾರ ಗುಣವನ್ನು ನಮ್ಮಲ್ಲಿ ಬೆಳೆಸುತ್ತದೆ. ಆದರಾತಿಥ್ಯದ ಗುಣವು ವ್ಯಕ್ತಿಯ ಮನೋಶುದ್ಧಿಯ ದ್ಯೋತಕ. ಪೂಜೆ ಮಾಡದೇ ಇದ್ದರೆ ಏನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆಯೆಂದನಿಸುತ್ತದೆ.
ಪೂಜೆಯನ್ನು ಮಾಡಲು ಯಾರು ಅರ್ಹರು? ಪೂಜೆಯೆನ್ನುವುದು ಭಗವಂತನಿಗೆ ನಮ್ಮ ಕೃತಜ್ಞತೆ. ನಮಗೆ ಎಲ್ಲವನ್ನೂ ಕೊಟ್ಟವರಿಗೆ ಕೃತಜ್ಞತೆ ಹೇಳುವುದು ಕರ್ತವ್ಯ. ಆದುದರಿಂದ ಪ್ರತಿಯಬ್ಬರೂ ಪೂಜೆ ಮಾಡಬೇಕು. ಲಿಂಗ ಭೇದವೂ ಅಗತ್ಯವಿಲ್ಲ. ಪೂಜೆ ಮಾಡುವವರಿಗೆ ಸಹಕರಿಸುವುದೂ ಪೂಜೆಯೇ ಆಗುತ್ತದೆ. ಭಗವಂತನ ಪೂಜೆಯೆಂದರೆ ಆತ್ಮ ಶುದ್ಧಿಯಾದುದರಿಂದ ನಾವು ಆತ್ಮ ಶುದ್ಧಿಯಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳೂ ಪೂಜೆಯೇ ಆಗಿರುತ್ತವೆ. ಜೀವನದ ಎಲ್ಲಾ ವ್ಯವಹಾರಗಳು ಪೂಜೆಯಂತೆ ನಡೆಯುತ್ತಿರಬೇಕು.
ಶ್ರದ್ಧಾ ಭಕ್ತಿಯಿರೆ ಸರ್ವ ಕೆಲಸವೂ ಪೂಜೆಯೇ ಆಗುತ್ತದೆ. ಆತ್ಮಶುದ್ಧಿಯೇ ಪೂಜೆಯಾದುದರಿಂದ ಆತ್ಮಾವಲೋಕನ ಮಾಡುತ್ತಾ, ಮನವನ್ನು ಸ್ವಚ್ಛವಾಗಿಡಲು ಬದ್ಧರಾಗಿರೋಣ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
******************************************