ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 104
Tuesday, November 11, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 104
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕೃಷಿ ಕೆಲಸಗಳ ನಡುವೆ ನನ್ನ ಬರವಣಿಗೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಆಗಲಿಲ್ಲ ಎನ್ನುವುದಕ್ಕಿಂತ ನನಗೆ ಈ ಜೀವ ಮಂಡಲದ ವಿಚಿತ್ರವೇ ಅರ್ಥವಾಗಲಿಲ್ಲ ಎಂಬುದು ಹೆಚ್ಚುವರಿ. ನನ್ನ ಕಲಿಕೆ ಎಂದರೆ ಮಗುವಿನ ಬೆಲ್ಲ ತಿನ್ನುವುದನ್ನು ಬಿಡಿಸುವ ಚಟದ ಹಾಗೆ. ನಾನು ಬೆಲ್ಲ ತಿನ್ನುವ ಚಟವನ್ನು ಬಿಟ್ಟ ಮೇಲಷ್ಟೇ ಮಗುವಿಗೆ ಬೆಲ್ಲ ತಿನ್ನುವುದನ್ನು ಬಿಡು ಎನ್ನಬಹುದು. ಆದ್ದರಿಂದ ನನಗೇ ಸ್ಪಷ್ಟವಾಗದ ವಿಷಯದ ಬಗ್ಗೆ ಮಾತನಾಡುವುದು ಕಷ್ಟವಾದ್ದರಿಂದ ಬರೆಯಲಾಗಲಿಲ್ಲ. ನಿಮ್ಮ ಸರ್ ಲೇಖನ ಕಳುಹಿಸುವಂತೆ ಒತ್ತಾಯಿಸಿದರು. ನನ್ನ ಅನೇಕ ವಿದ್ಯಾರ್ಥಿಗಳು ಲೇಖನ ಪ್ರಕಟವಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಾನು ಅಸಹಾಯಕನಾಗಿದ್ದೆ. ನನ್ನ ಶಿಷ್ಯನೊಬ್ಬನೊಡನೆ ಮಾತನಾಡುವಾಗ ನನಗೆ ಉತ್ತರ ದೊರೆಯಿತು. ಆದ್ದರಿಂದ ಇವತ್ತು ಬೆಲ್ಲ ತಿನ್ನುವುದನ್ನು ಬಿಡಿಸುವ ಕೆಲಸ ಮಾಡುತ್ತೇನೆ.
ಸಾಬೂನಿನಲ್ಲಿರುವ ಕೊಬ್ಬಿನಾಮ್ಲಗಳ ಸೋಡಿಯಮ್ ಲವಣಗಳು (sodium salts of fatty acids) ಮತ್ತು ಫಾಸ್ಫೋಲಿಪಿಡ್ ಗಳು ರಚನೆಯಲ್ಲಿ ಹೆಚ್ಚು ಕಡಿಮೆ ಒಂದೇ ಮತ್ತು ದ್ವಿ ಆಕರ್ಷಣ ಗುಣದಲ್ಲಿಯೂ (amphihilic properties) ಒಂದೇ. ಆದರೆ ಸಾಬೂನು ಕಾಲ್ಚೆಂಡಾಟದ ಚೆಂಡಿನಂತಹ ಮೈಸೆಲ್ಲೆಗಳನ್ನು ರಚಿಸಿದರೆ ಈ ಫಾಸ್ಫೋಲಿಪಿಡ್ ಗಳು ದ್ವಿಪದರದ ಪೊರೆಯನ್ನು ರಚಿಸುತ್ತವೆ ಯಾಕೆ ಎಂಬುದು ಪ್ರಶ್ನೆಯಾಗಿತ್ತಲ್ಲವೇ? ಸಾಬೂನಿನ ಮೈಸೆಲ್ಲೆಗಳು ಲೋಕದ ಕೊಳೆಯನ್ನು ನಿವಾರಿಸಿದರೆ ಫಾಸ್ಫೋಲಿಪಿಡ್ ಗಳ ದ್ವಿ ಪದರ ಪೊರೆಗಳು ಲೋಕ ಸೃಷ್ಟಿಗೆ ಕಾರಣವಾಗಿವೆ. ಇವೆರಡೂ ಒಂದೇ ತರಹ ಅನ್ನಿಸಿದರೂ ಅವುಗಳ ಅಣು ರಚನೆಯಲ್ಲಿರುವ ಭಿನ್ನತೆ ಈ ಪವಾಡವನ್ನು ಸಾಧ್ಯವಾಗಿಸಿದೆ. ಸಾಬೂನಿನ ಅಣು ಸೋಡಿಯಂ ರಯಾಡಿಕಲ್ (radical) ನ ಜಲಾಕರ್ಷಕ ತಲೆಗೆ ಅನೇಕ 'v' ಗಳನ್ನು ಸಾಲಾಗಿ ಜೋಡಿಸಿರುವ ಜಲಾಪಕರ್ಷಕ ಬಾಲವನ್ನು ಹೊಂದಿವೆ ಇದನ್ನು ವಿಜೆಟ್ (widget) ಆಕೃತಿ ಎನ್ನುವುದು. ಈ ವಿಜೆಟ್ ಆಕೃತಿಯ ಅಣುಗಳು ಮೈಸೆಲ್ಲೆಗಳನ್ನು ರಚಿಸಬಹುದೇ ಹೊರತು ದ್ವಿ ಪದರವನ್ನುಂಟು ಮಾಡಲಾರವು. ಫಾಸ್ಫೋಲಿಪಿಡ್ ಗಳಲ್ಲಿ ಜಲಾಕರ್ಷಕ ಫಾಸ್ಫಾಟಿಕ್ ಗುಂಪು (phoshatic group) ಇದ್ದರೆ ಸಿಲಿಂಡರ್ ಆಕಾರದ ಕೊಬ್ಬಿನ ಅಣುಗಳಿವೆ. ಈ ಸಿಲಿಂಡರ್ ಆಕಾರದ ಅಣುಗಳು ಮೈಸೆಲ್ಲೆಗಳನ್ನು ರಚಿಸಲಾರವು ಇವು ಹಾಳೆಗಳನ್ನು ಮಾತ್ರ ರಚಿಸುತ್ತವೆ. ಜೀವಕೋಶದ ಒಳಭಾಗದಲ್ಲಿರುವ ನೀರಿನ ಕಡೆಗೆ ಒಂದು ಕಡೆಯ ಪಾಸ್ಫಾಟಿಕ್ ಗುಂಪುಗಳು ಸಾಲಾಗಿ ಜೋಡಿಸಲ್ಪಟ್ಟರೆ ಲಿಪಿಡ್ ಬಾಲ ಹೊರಗಡೆಗಿರುತ್ತವೆ. ಕೋಶದ ಹೊರಗಡೆ ಇರುವ ಅಂತರ ಕೋಶರಸದಲ್ಲಿರುವ (intracellular fluid) ನೀರಿಗೆ ಇನ್ನೊಂದು ಫಾಸ್ಫಾಟಿಕ್ ಗುಂಪು ಅಂಟಿಕೊಂಡು ಬಾಲ ಒಳಗಡೆಗೆ ಬಂದು ದ್ವಿ ಪದರದ ಪೊರೆ ರಚನೆಯಾಗುತ್ತದೆ. ಈ ಪೊರೆ ಅತ್ಯಂತ ಅಸ್ಥಿರವಾದುದು.
ಮಕ್ಕಳೇ ನಿಮ್ಮ ಮನೆಯ ಪಂಚಾಂಗದ ಕಲ್ಲುಗಳನ್ನು ಕಟ್ಟುವುದನ್ನು ನೀವು ನೋಡಿದ್ದೀರಲ್ಲವೇ? ಎರಡು ಸಾಲು ಕಲ್ಲುಗಳನ್ನು ಕಟ್ಟುತ್ತಾ ಹೋಗುತ್ತಾರೆ. ಹೀಗೆ ಕಟ್ಟಿದರೆ ಈ ಎರಡು ಸಾಲುಗಳ ನಡುವೆ ಯಾವುದೇ ಬಂಧ ಇರುವುವುದಿಲ್ಲ. ಭೂಕಂಪ ಅಥವಾ ಇನ್ನಿತರ ಆಘಾತಗಳಿಂದ ಈ ಸಾಲುಗಳು ಬೇರ್ಪಟ್ಟರೆ ಕಟ್ಟಡ ಕುಸಿಯಬಹುದು. ಅದಕ್ಕೆ ಈ ಎರಡು ಸಾಲುಗಳನ್ನು ಒಂದು ಮಾಡಲು ಸ್ವಲ್ಪ ದೊಡ್ಡದಾದ ಬಂಧ/ ಬಾಂಡ್ ((bond) ಕಲ್ಲುಗಳನ್ನು ಹಾಕುತ್ತಾರೆ. ಈ ಕಲ್ಲುಗಳು ಈ ಎರಡು ಸಾಲು ಬೇರ್ಪಡದಂತೆ ಮಾಡಿ ಪಂಚಾಂಗಕ್ಕೆ ಸ್ಥಿರತೆಯನ್ನು ಒದಗಿಸುತ್ತಾನೆ. ಕೋಶಪೊರೆ ರಚನೆ ಮಾಡುವಾಗಲೂ ಇಂತಹ ಬಾಂಡ್ ಕಲ್ಲುಗಳನ್ನು ಬಳಸಲಾಗುತ್ತದೆ. ಇಲ್ಲಿ ಬಳಸುವ ಬಾಂಡ್ ಕಲ್ಲುಗಳೆಂದರೆ ಕೊಲೆಸ್ಟರಾಲ್ ಅಣುಗಳು. ಕೊಲೆಸ್ಟರಾಲ್ ಅಣುಗಳೆಂದರೆ ಕೊಬ್ಬಿನ ಕಣಗಳೇ. ಪೊರೆಯ ಒಳಭಾಗದಲ್ಲಿರುವ ಲಿಪಿಡ್ಗಳು ಕೊಬ್ಬು ಪ್ರೇಮಿಗಳು. ದ್ವಿ ಪದರದಲ್ಲಿ ವಿರುದ್ಧವಾಗಿ ನಿಂತಿರುವ ಈ ಲಿಪಿಡ್ ಬಾಲಗಳನ್ನು ಪರಸ್ಪರ ಹಿಡಿಯುವ ಕೆಲಸ ಈ ಕೊಲೆಸ್ಟರಾಲ್ ಅಣುಗಳದ್ದು. ಆ ಮೂಲಕ ಅಸ್ಥಿರವಾದ ದ್ವಿಪದರ ಸ್ಥಿರತೆಯನ್ನು ಪಡೆಯುತ್ತದೆ.
ನೋಡಿದಿರಾ ನಮ್ಮ ನಿರ್ದೇಶಕ ಅಥವಾ ನಮ್ಮ ಮೇಸ್ತ್ರಿಯ ಚಮತ್ಕಾರ. ಕಣ್ಣಿಗೆ ಕಾಣದ ಗೋಡೆಗೆ ಬಾಂಡ್ ಕಲ್ಲುಗಳನ್ನು ಜೋಡಿಸಿ ಹೇಗೆ ಮನೆ ಕಟ್ಟಿದ್ದಾನೆ ಎಂದು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************