ಜೀವನ ಸಂಭ್ರಮ : ಸಂಚಿಕೆ - 215
Monday, November 10, 2025
Edit
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ.. ಇಂದು ಕಾಮಾಧಿ ಬಯಕೆಗಳ ಬಗ್ಗೆ ತಿಳಿದುಕೊಳ್ಳೋಣ. ಕಾಮಾಧಿ ಬಯಕೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಇವಕ್ಕೆ ಅರಿಷಡ್ವರ್ಗ ಎನ್ನುವರು. ಅವು ಯಾವುವು ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ. ಇವು ಮಿತವಾಗಿದ್ದರೆ ವೈರಿಗಳಲ್ಲ. ಅತಿಯಾದರೆ ವೈರಿ. ಇವು ಬದುಕನ್ನು ಕೆಡಿಸುತ್ತವೆ. ಇವುಗಳನ್ನು ಬಳಸುವ ಕಲೆ ಗೊತ್ತಿದ್ದರೆ, ಇವುಗಳನ್ನು ಬಳಸಿಕೊಂಡು ಸುಂದರ ಜೀವನ ಕಟ್ಟಬಹುದು. ಆದ್ದರಿಂದ ಇವು ಸಾಧನ ಎಂದು ತಿಳಿಯಬೇಕು.
ಕಾಮ ಅಂದರೆ ಬೇಕು ಅನ್ನುವುದು. ಕಾಮ ತೆಗೆದುಹಾಕಿ ಬದುಕಲು ಸಾಧ್ಯವಿಲ್ಲ. ಇದನ್ನು ನೋಡಬೇಕು. ಇದನ್ನು ಕೇಳಬೇಕು. ಇದನ್ನು ಮೂಡಿಸಬೇಕು. ಇದನ್ನು ಮುಟ್ಟಬೇಕು ಅನಿಸುತ್ತದೆ. ಏಕೆಂದರೆ ಅವುಗಳಿಂದ ಸುಖ ಅನಿಸುತ್ತದೆ ಅದಕ್ಕೆ. ಹೀಗೆ ಅನಿಸುವುದೇ ಕಾಮ. ಇದು ಹಾದಿ ಬಿಟ್ಟರೆ ಜೀವನ ಹೊಲಸು. ಏನನ್ನು ನೋಡಬೇಕು?. ಏನನ್ನ ಕೇಳಬೇಕು?. ಏನನ್ನ ಮುಟ್ಟಬೇಕು?. ಏನನ್ನ ಅನುಭವಿಸಬೇಕು?. ಗೊತ್ತಿರಬೇಕು. ನನ್ನದಲ್ಲದನ್ನು ನನ್ನ ಹತ್ತಿರ ಇಟ್ಟುಕೊಳ್ಳಬೇಕು ಅನ್ನುವುದೇ ಹೊಲಸು. ಇದರಿಂದ ಜಗಳ. ಬೇಕೇ ಬೇಕು ಅನಿಸಿದರೆ ಜಗತ್ತಿನಲ್ಲಿ ಯಾರದು ತಕರಾರು ಇಲ್ಲದ ವಸ್ತುಗಳಿವೆ. ಅಂತಹವುಗಳನ್ನು ಪಡೆಯಬೇಕು. ಅಂತಹವುಗಳನ್ನು ಮುಟ್ಟಿ, ನೋಡಿ, ಕೇಳಿ ಸಂತೋಷ ಪಡುವಂತಾದರೆ ಅದೇ ಕಾಮ ಹಿತವುಂಟುಮಾಡುತ್ತದೆ. ಬಳಸುವ ಕಲೆ ಇದ್ದರೆ ಜೀವನ ಶ್ರೀಮಂತವಾಗುತ್ತದೆ.
ಉದಾಹರಣೆಗೆ ದೀಪ ಬೆಳಗಲು ಇರುತ್ತೆ. ಯಾರೋ ಒಬ್ಬ ಚಂದಾಗಿ ಬೆಳಕು ಬರುತ್ತದೆ ಅದನ್ನು ಹಿಡಿಯಬೇಕು ಅಂತ ಜ್ಯೋತಿ ಹಿಡಿದರೆ ಅದು ಸುಟ್ಟಿತು, ಕೆಡಿಸಿದ್ದ. ನಮ್ಮ ಬದುಕು ಹೀಗೆ ಆಗಿದೆ. ಯಾವುದನ್ನು ಹೇಗೆ ಬಳಸಬೇಕು ಅಂತ ಗೊತ್ತಿಲ್ಲದಕ್ಕಾಗಿ ಹೀಗಾಗುತ್ತದೆ. ಸುಡುತ್ತದೆ ಅಂತ ಸಿಟ್ಟಿಗೆದ್ದ (ಕ್ರೋಧ) ಕೆಡಿಸಿದ. ಇದರಿಂದ ಕತ್ತಲೆಯಾಯಿತು ಕ್ರೋಧ ಎಲ್ಲಿರಬೇಕು?. ಎಲ್ಲಿ ಕಸ ಇದೆ ? ಅದನ್ನು ತೆಗೆದು ಹೊರಹಾಕಬೇಕು ಅನ್ನುವ ಸಿಟ್ಟು ಇರಬೇಕು. ಕಸ ಹೊರ ಹಾಕಿದ ಮೇಲೆ ಮನೆ ಆರಾಮಾಗುತ್ತದೆ. ಕಸದ ಮೇಲೆ ಕಾಮ, ಜ್ಯೋತಿಯ ಮೇಲೆ ಸಿಟ್ಟು, ಇದರಿಂದ ಜೀವನ ಹಾಳಾಗುತ್ತದೆ. ಯಾವುದನ್ನು ಒಳಗೆ ತರಬಾರದು? ತಂದಿದ್ದೀವಿ, ಯಾವುದನ್ನು ಹೊರ ಹಾಕಬೇಕು? ಒಳಗೆ ಇಟ್ಟುಕೊಂಡಿದ್ದೇವೆ. ಯಾವುದನ್ನು ಪ್ರೀತಿಸಬೇಕು?. ಯಾವುದನ್ನ ದ್ವೇಷಿಸಬೇಕು? ಗೊತ್ತಿರಬೇಕು. ಅರಿಷಡ್ವರ್ಗಗಳು ಬೇಕು ಜೀವನದಲ್ಲಿ. ಹೊಲಸನ್ನು ತೆಗೆಯುವ ಸಿಟ್ಟು ಇಲ್ಲದಿದ್ದರೆ ಮನೆ ಸ್ವಚ್ಛವಾಗುತ್ತದೆಯೇ?. ಯಾವ್ಯಾವುದು ಬೇಡವಾಗಿರುತ್ತದೆಯೋ? ಅದನ್ನು ಹೊರಗೆ ಹಾಕುವುದೇ ಕ್ರೋಧ. ಯಾವ ಯಾವುದು ಬೇಕಾಗಿದ್ಯ? ಅದನ್ನು ಪ್ರೀತಿಸುವುದು ಕಾಮ.
ಲೋಭ ಎಂದರೆ ನನ್ನದನ್ನು ಬೇರೆಯವರಿಗೆ ನೀಡಬಾರದು, ಬೇರೆಯವರದು ನನ್ನದಾಗಬೇಕು. ಇದು ಭಾವ ಅಂದರೆ ರಕ್ಷಿಸುತ್ತಾನೆ. ಮೋಹ ಎಂದರೆ ಅಂಟಿಕೊಳ್ಳುವುದು. ವಸ್ತುಗಳು ಹೆಚ್ಚಿದಂತೆ ನಮ್ಮಲ್ಲಿ ಅಹಂಕಾರ ಹೆಚ್ಚಾಗುತ್ತದೆ. ಇದಕ್ಕೆ ಮದ ಎನ್ನುತ್ತೇವೆ. ನನ್ನಲ್ಲಿ ಇಲ್ಲದ್ದು ಬೇರೆಯವರಲ್ಲಿ ಇದ್ದರೆ ಅದನ್ನು ಕಂಡು ಹೊಟ್ಟೆಕಿಚ್ಚು ಪಡುವುದೇ ಮತ್ಸರ. ಇವುಗಳನ್ನು ಬಳಸುವ ಕಲೆ ಇದ್ದರೆ ಜೀವನಕ್ಕೆ ಪೋಷಕವಾಗುತ್ತದೆ. ಉದಾಹರಣೆಗೆ ರೈತ ಗಿಡಕ್ಕೆ ನೀರು ಹಾಕಿ ಚೆನ್ನಾಗಿ ಬೆಳೆಸುತ್ತಾನೆ. ಆ ಗಿಡವನ್ನು ಪ್ರೀತಿಸುತ್ತಾನೆ. ಇದು ಕಾಮ. ನಂತರ ಸಿಟ್ಟಿಗೆದ್ದು ಗಿಡದ ಬಳಿ ಇರುವ ಗರಿಕೆ, ಕಳೆ ಕಿತ್ತು ಹೊರಗೆ ಬಿಸಾಡುತ್ತಾನೆ, ಇದು ಕ್ರೋಧ. ಪ್ರಾಣಿಗಳು ನಾಶ ಮಾಡದಂತೆ ರಕ್ಷಿಸುತ್ತಾನೆ, ಇದು ಲೋಭ. ಇದರಿಂದ ಫಲ ದೊರಕುತ್ತೆ ಅಂತ ಅದಕ್ಕೆ ಅಂಟಿಕೊಂಡಿರುತ್ತಾನೆ, ಇದು ಮೋಹ. ಈ ಗಿಡ ಎಷ್ಟು ಚಂದಾಗಿ ಬೆಳೆಸಿದ್ದಾನೆ ಅಂತ ಅಹಂ ಪಡುತ್ತಾನೆ, ಇದು ಮದ. ಬೇರೆಯವರಿಗಿಂತ ಚೆನ್ನಾಗಿ ಬೆಳೆಯಬೇಕೆಂದು ಇಚ್ಛಿಸುತ್ತಾನೆ ,ಇದು ಮತ್ಸರ. ಈ ರೀತಿ ಕಾಮಾಧಿ ಬಯಕೆಗಳನ್ನು ಬಳಸಿಕೊಂಡಾಗ ಸುಂದರ ತೋಟವಾಗುತ್ತದೆ. ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇಲ್ಲಿ ಗಿಡ ಪ್ರೀತಿಸಿದ್ದಾನೆ. ಕಳೆ ಮೇಲೆ ಸಿಟ್ಟು ತೋರಿಸಿದ್ದಾನೆ. ಆದರೆ ತಾಪ ಆಗಿಲ್ಲ. ನಾವು ಹೀಗೆ ಪ್ರಯೋಗ ಮಾಡುವುದು ನಮ್ಮಲ್ಲಿರುವ ಕಾಮಾಧಿ ಬಯಕೆಗಳು ಹೂತೋಟ ಮಾಡಿಲ್ಲ. ಮುಳ್ಳಿನ ತೋಟ ಮಾಡಿದೆ. ನಾವು ಹೇಗೆ ಬಳಸಬೇಕು ಹಾಗೆ ಬಳಸದೆ ಇರುವುದರಿಂದ ಅವು ನಮಗೆ ವೈರಿಯಾಗಿದೆ.
ಏನು ಪ್ರೀತಿಸಬೇಕು? ಅದನ್ನು ಪ್ರೀತಿಸಬೇಕು. ಏನನ್ನು ದ್ವೇಷಿಸಬೇಕು? ಅದನ್ನು ದ್ವೇಷಿಸಬೇಕು. ಯಾವುದನ್ನು ರಕ್ಷಿಸಬೇಕು? ಅದನ್ನು ರಕ್ಷಿಸಬೇಕು. ಯಾವುದಕ್ಕೆ ಎಷ್ಟು ಅಂಟಿಕೊಳ್ಳಬೇಕು? ಅಷ್ಟು ಅಂಟಿಕೊಳ್ಳಬೇಕು. ಪೋಷಕ ವಸ್ತುಗಳ ಮೇಲೆ ಅಭಿಮಾನ ಇರಬೇಕು. ಹಾಗೂ ಚಂದಾಗಿ ಮಾಡುವ ಬಯಕೆ ಇರಬೇಕು. ಉದಾಹರಣೆಗೆ, ಮನೆಗೆ ಮದ್ಯಪಾನದ ಬಾಟಲು ತಂದ. ಅದು ಕಾಮ. ಇದು ಕಾಮವಲ್ಲ ಹಾಳು ಮಾಡುವ ವಸ್ತು. ಎಂದು ಬಂತು ಅಂದಿನಿಂದ ಮನೆ ಅವಸಾನದತ್ತ ತೆರಳಲು ಶುರುವಾಯಿತು. ಜಗಳ ಶುರುವಾಯಿತು. ಯಾರೋ ಮಾಟ ಮಾಡುತ್ತಿದ್ದಾರೆ ಅದಕ್ಕೆ ಜಗಳ ಆಗುತ್ತಿದೆ ಅಂದ. ಯಾರೂ ಮಾಟ ಮಾಡಿಸಿಲ್ಲ. ಮದ್ಯ ಎನ್ನುವ ಭೂತ ಹೊಕ್ಕಿದೆ. ಅದೇ ಮಾಟ. ತಾನೇ ಭೂತ ಕೊಂಡು ತಂದ. ಅದರ ಬದಲು ಹಾಲು ತಂದಿದ್ದರೆ, ಮನೆಯಲ್ಲಿ ಸಂತೋಷ ಶುರುವಾಗುತ್ತಿತ್ತು. ತಾಯಿ ಹಾಲನ್ನು ಕಾಯಿಸಿ, ಸುಗಂಧ ಆಗುವಂತೆ ಕಸ್ತೂರಿ ಹಾಕಿ, ತಂದು ತಾಯಿ ಹಾಲು ಕೊಟ್ಟಿದ್ದಾಳೆ. ಇದೇನು ಅಂತ ಚೆಲ್ಲಿದ. ಇದು ಕ್ರೋಧ. ಎಲ್ಲಿಂದ ಭೂತ ಶುರುವಾಯಿತು?. ಮದ್ಯದ ಭೂತ ಕಾಮವಾಗಿ ಮನೆ ಹಾಳು ಮಾಡಲು ಬಂತು. ದೇಶ, ಸಮಾಜ ಹಾಳು ಮಾಡಿತು. ಹೀಗೆ ಮಾಡಿದರೆ ಕಾಮ ವೈರಿ. ಮದ್ಯ ಪ್ರೀತಿಸುವ ಬದಲು ಹಾಲನ್ನು ಪ್ರೀತಿಸಬೇಕು. ಬದುಕು ಪೋಷಕ ವಾಗುತ್ತದೆ. ಕಾಮಾಧಿಗಳು ಕೆಟ್ಟವಲ್ಲ ಕಾಮಾಧಿಗಳನ್ನು ಬಳಸುವ ರೀತಿ ಕೆಡಬಾರದು. ಕೆಲವನ್ನು ತರುವ ಪದಾರ್ಥಗಳು ಇರುತ್ತವೆ. ಕೆಲವನ್ನು ಹೊರಹಾಕಲು ಇರುತ್ತದೆ. ಕೆಲವನ್ನು ರಕ್ಷಿಸಬೇಕಾಗುತ್ತದೆ. ಯಾವುದನ್ನು ಪ್ರೀತಿಸಬೇಕು?. ಯಾವುದನ್ನ ದ್ವೇಷಿಸಬೇಕು?. ಯಾವುದನ್ನ ರಕ್ಷಿಸಬೇಕು?. ಅನ್ನುವ ತಿಳುವಳಿಕೆ ಇದ್ದರೆ ಕಾಮಾದಿಗಳು ವೈರಿಗಳಾಗದೆ, ಸುಂದರ ಬದುಕಿನ ಸಾಧನಗಳಾಗುತ್ತವೆ. ಮನಸ್ಸನ್ನು ಅರಳಿಸುವಂತಹ, ದೇಹ ಪೋಷಿಸುವಂತಹವು ಒಳಗೆ ಬರಬೇಕು (ಕಾಮ). ವಿನಾಶವಾದವುಗಳನ್ನು ಹೊರ ಹಾಕಬೇಕು (ದ್ವೇಷ). ಪೋಷಕವಾದವುಗಳನ್ನ ರಕ್ಷಿಸಬೇಕು (ಲೋಭ).
ಒಬ್ಬ ಸಂಶೋಧಕ 10 ವರ್ಷ ಶೋಧನೆ ಮಾಡಿ, ದಾಖಲೆ ಕಾಗದ ಪತ್ರ ಎಲ್ಲವನ್ನು ಟೇಬಲ್ ಮೇಲೆ ಇಟ್ಟಿದ್ದ. ಮನೆ ಸೇವಕಿಗೆ ಸ್ವಚ್ಛ ಮಾಡಲು ಹೇಳಿ ಹೊರಗೆ ಹೋದನು. ಆಕೆಗೆ ಕಾಗದ ಪತ್ರದ ಮಹತ್ವ ಗೊತ್ತಿರಲಿಲ್ಲ. ಇದೇನು ಮಸಿ ಎಂದು ತಿಳಿದು ಎಲ್ಲಾ ಕಾಗದ ಪತ್ರ ಹೊರ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದಳು. ಬಂದಾಗ ಹೇಳಿದಳು ಎಲ್ಲ ಸ್ವಚ್ಛ ಮಾಡಿದ್ದೇನೆ ಎಂದಳು. ಎಲ್ಲಾ ಅನಾಹುತವಾಗಿತ್ತು. ಹೀಗಾಗಬಾರದು.. ಮಹತ್ವ ತಿಳಿದಿರಬೇಕು ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************